ಲಿಂಗ ಬದಲಾವಣೆಗೆ ಅನುಮತಿ ಕೋರಿದ ಇಬ್ಬರು ಮಹಿಳಾ ಕಾನ್‌ಸ್ಟೆಬಲ್; ಇಕ್ಕಟ್ಟಿನಲ್ಲಿ ಯುಪಿ ಪೊಲೀಸ್
ಪುರುಷರಾಗಲು ಬಯಸಿ ಇಬ್ಬರು ಮಹಿಳಾ ಕಾನ್‌ಸ್ಟೆಬಲ್‌ಗಳು ಶಸ್ತ್ರಚಿಕಿತ್ಸೆಯ ಮೂಲಕ ಲಿಂಗ ಬದಲಾವಣೆ ಪ್ರಕ್ರಿಯೆಗೆ ಒಳಗಾಗಲು ಅನುಮತಿ ಕೋರಿ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಇದು ಉತ್ತರ ಪ್ರದೇಶ ಪೊಲೀಸ್...
Published: 25th September 2023 09:20 PM | Last Updated: 25th September 2023 09:20 PM | A+A A-

ಸಾಂದರ್ಭಿಕ ಚಿತ್ರ
ಲಖನೌ: ಪುರುಷರಾಗಲು ಬಯಸಿ ಇಬ್ಬರು ಮಹಿಳಾ ಕಾನ್‌ಸ್ಟೆಬಲ್‌ಗಳು ಶಸ್ತ್ರಚಿಕಿತ್ಸೆಯ ಮೂಲಕ ಲಿಂಗ ಬದಲಾವಣೆ ಪ್ರಕ್ರಿಯೆಗೆ ಒಳಗಾಗಲು ಅನುಮತಿ ಕೋರಿ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಇದು ಉತ್ತರ ಪ್ರದೇಶ ಪೊಲೀಸ್ ಇಲಾಖೆಯನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿದೆ.
ಗೋರಖ್‌ಪುರ ಮತ್ತು ಗೊಂಡಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಇಬ್ಬರು ಮಹಿಳಾ ಪೊಲೀಸ್ ಪೇದೆಗಳು ಇಂತಹದೊಂದು ಮನವಿ ಮಾಡಿದ್ದು, ಈ ಇಬ್ಬರು ಕಾನ್ಸ್‌ಟೇಬಲ್‌ಗಳಿಗೆ ತಮ್ಮ ಲಿಂಗ ಬದಲಾಯಿಸಿಕೊಳ್ಳಲು ಅನುಮತಿ ನೀಡುವುದು ಹೇಗೆ ಎಂಬುದು ಪೊಲೀಸ್ ಅಧಿಕಾರಿಗಳ ಮಧ್ಯೆ ತಲೆನೋವು ತಂದಿಟ್ಟಿದೆ.
ಇದನ್ನು ಓದಿ: ಪುರುಷನಾಗಿ ಬದಲಾಗಲು ಬಯಸಿದ ಮಹಿಳಾ ಪೇದೆ: ಲಿಂಗ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಸರ್ಕಾರದ ಗ್ರೀನ್ ಸಿಗ್ನಲ್!
ಶಸ್ತ್ರಚಿಕಿತ್ಸಾ ವಿಧಾನದ ಮೂಲಕ ಲಿಂಗ ಬದಲಾವಣೆ ಹೊಸ ವಿದ್ಯಮಾನವಲ್ಲವಾದರೂ, ರಾಜ್ಯ ಪೊಲೀಸ್ ಅಧಿಕಾರಿಗಳು ಮೊದಲ ಬಾರಿಗೆ ಇಂತಹ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಕಾನ್ಸ್‌ಟೇಬಲ್‌ಗಳನ್ನು ಮಹಿಳಾ ಪೊಲೀಸರಾಗಿ ನೇಮಕ ಮಾಡಿಕೊಂಡ ನಂತರ ಅವರ ಪುರುಷರಾಗಿ ಲಿಂಗ ಬದಲಾಯಿಸಿಕೊಳ್ಳಲು ಹೇಗೆ ಅನುಮತಿ ನೀಡುತ್ತಾರೆ ಎಂಬ ವಿಚಿತ್ರ ಪ್ರಶ್ನೆಯನ್ನು ಇಲಾಖೆ ಎದುರಿಸುತ್ತಿದೆ.
ಪೊಲೀಸ್ ಇಲಾಖೆಯ ಉನ್ನತ ಮೂಲಗಳ ಪ್ರಕಾರ, ಇಬ್ಬರು ಕಾನ್‌ಸ್ಟೆಬಲ್‌ಗಳು ಲಿಂಗ ಬದಲಾವಣೆ ಅನುಮತಿಗಾಗಿ ಅರ್ಜಿ ಸಲ್ಲಿಸಿದ್ದಾರೆ ಮತ್ತು ವಿಭಿನ್ನ ಕಾರಣಗಳನ್ನು ಉಲ್ಲೇಖಿಸಿದ್ದಾರೆ. ಇಬ್ಬರು ಮಹಿಳಾ ಪೊಲೀಸರಿಗೆ ಲಿಂಗ ಬದಲಾವಣೆಗೆ ಅನುಮತಿ ನೀಡಿದರೆ, ಶಸ್ತ್ರಚಿಕಿತ್ಸೆಯ ನಂತರ ಪುರುಷ ಕಾನ್‌ಸ್ಟೆಬಲ್‌ಗಳೆಂದು ಪರಿಗಣಿಸಿದರೆ ಪುರುಷ ಕಾನ್‌ಸ್ಟೆಬಲ್‌ಗಳಿಗೆ ಅಗತ್ಯವಿರುವ ಇತರ ದೈಹಿಕ ಮಾನದಂಡಗಳು ಹೇಗೆ ಹೊಂದಾಣಿಕೆಯಾಗುತ್ತವೆ ಎಂಬುದು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ಎತ್ತರ, ಓಡುವ ಸಾಮರ್ಥ್ಯ ಮತ್ತು ಭುಜ ಬಲದಂತಹ ವಿಭಿನ್ನ ದೈಹಿಕ ಮಾನದಂಡಗಳಿವೆ. ಉತ್ತರ ಪ್ರದೇಶ ಪೊಲೀಸ್ ಇಲಾಖೆಯಲ್ಲಿ ಪುರುಷ ಮತ್ತು ಮಹಿಳೆಯರ ನೇಮಕಾತಿ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತಿದೆ. ಮಹಿಳಾ ಮಾನದಂಡಗಳ ಅಡಿಯಲ್ಲಿ ಉದ್ಯೋಗ ಪಡೆದ ನಂತರ ಲಿಂಗವನ್ನು ಬದಲಾಯಿಸುವ ಮಹಿಳಾ ಸಿಬ್ಬಂದಿಯು ಮಾನದಂಡಗಳನ್ನು ಉಲ್ಲಂಘನೆ ಮಾಡಿದಂತೆ ಆಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.