ಕೇಜ್ರಿವಾಲ್ ಬಂಗಲೆ ನಿರ್ಮಾಣದಲ್ಲಿ ಅಕ್ರಮ ನಡೆದಿದೆ ಎಂದ ಸಿಬಿಐ; ಬಿಜೆಪಿಯ ಸೇಡು ಎಂದ ಎಎಪಿ
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನೂತನ ಅಧಿಕೃತ ನಿವಾಸ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಡೆದಿರುವ ಅಕ್ರಮಗಳು ಮತ್ತು ಅವ್ಯವಹಾರಗಳ ಕುರಿತು ಸಿಬಿಐ ಪ್ರಾಥಮಿಕ ತನಿಖೆ ಆರಂಭಿಸಿದೆ ಎಂದು ಅಧಿಕಾರಿಗಳು ಬುಧವಾರ...
Published: 27th September 2023 07:21 PM | Last Updated: 27th September 2023 07:21 PM | A+A A-

ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್
ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನೂತನ ಅಧಿಕೃತ ನಿವಾಸ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಡೆದಿರುವ ಅಕ್ರಮಗಳು ಮತ್ತು ಅವ್ಯವಹಾರಗಳ ಕುರಿತು ಸಿಬಿಐ ಪ್ರಾಥಮಿಕ ತನಿಖೆ ಆರಂಭಿಸಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಆದರೆ ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷ, ಈ ಆರೋಪವನ್ನು ತಿರಸ್ಕರಿಸಿದ್ದು, "ಎಎಪಿಯನ್ನು ಮುಗಿಸಲು ಬಿಜೆಪಿ ತನ್ನ ಎಲ್ಲಾ ಶಕ್ತಿಯನ್ನು ಬಳಸುತ್ತಿದೆ" ಎಂದು ವಾಗ್ದಾಳಿ ನಡೆಸಿದೆ.
ಇದನ್ನು ಓದಿ: ದೆಹಲಿ ಮೆಟ್ರೋ ಕಾರ್ಯಕ್ರಮಕ್ಕೆ ಕೇಜ್ರಿವಾಲ್ ಗೆ ಆಹ್ವಾನಿಸದಿರುವುದು ಕೀಳು ಮನಸ್ಥಿತಿ ಪ್ರತಿಬಿಂಬಿಸುತ್ತದೆ: ಎಎಪಿ
ದೆಹಲಿ ಸರ್ಕಾರದ ಅಪರಿಚಿತ ಅಧಿಕಾರಿಗಳ ವಿರುದ್ಧ ಸಿಬಿಐ ಪ್ರಾಥಮಿಕ ತನಿಖೆ ದಾಖಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಬಿಐನ ಭ್ರಷ್ಟಾಚಾರ ನಿಗ್ರಹ ಶಾಖೆಯು ಟೆಂಡರ್ ದಾಖಲೆಗಳು, ಗುತ್ತಿಗೆದಾರರು ಸಲ್ಲಿಸಿದ ಬಿಡ್‌ಗಳು, ಕಟ್ಟಡ ಯೋಜನೆಗಳ ಅನುಮೋದನೆ ಮತ್ತು ಮಾಡ್ಯುಲರ್ ಕಿಚನ್‌ನಂತಹ ಉನ್ನತ ವಿಶೇಷಣಗಳಿಗಾಗಿ ಕ್ಲೈಂಟ್‌ನಿಂದ ಪಡೆದ ವಿನಂತಿಗಳು, ಅಧಿಕಾರಿಗಳ ಅನುಮೋದನೆ ಮತ್ತು ಶಿಫಾರಸುಗಳಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸಲ್ಲಿಸುವಂತೆ ಪಿಡಬ್ಲ್ಯೂಡಿಗೆ ಕೇಳಿದೆ.
ಇದು ಅರವಿಂದ್ ಕೇಜ್ರಿವಾಲ್ ನೇತೃತ್ವದ ಪಕ್ಷ ಜನರಿಗಾಗಿ ಕೆಲಸ ಮಾಡುವುದನ್ನು ತಡೆಯುವ ಬಿಜೆಪಿಯ ಪ್ರಯತ್ನಗಳ ಭಾಗವಾಗಿದೆ ಎಂದು ಎಎಪಿ ಆರೋಪಿಸಿದೆ.
"ದೇಶದ ಅತ್ಯುತ್ತಮ ಆರೋಗ್ಯ ಮತ್ತು ಶಿಕ್ಷಣ ಸಚಿವರಾದ ಸತ್ಯೇಂದ್ರ ಜೈನ್ ಮತ್ತು ಮನೀಶ್ ಸಿಸೋಡಿಯಾ ಅವರನ್ನು ಕಂಬಿ ಹಿಂದೆ ಹಾಕಲು ಸಹ ಇದೇ ಕಾರಣ" ಎಂದು ಆಪ್ ಆರೋಪಿಸಿದೆ.