ನವದೆಹಲಿ: ಖಲಿಸ್ತಾನಿ ಪ್ರತ್ಯೇಕತಾವಾದಿ ಹತ್ಯೆಗೆ ಸಂಬಂಧಿಸಿದಂತೆ ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಗದ್ದಲದ ನಡುವೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಇಂದು ಗುರುವಾರ ವಾಷಿಂಗ್ಟನ್ ಡಿಸಿಯಲ್ಲಿ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕನ್ ಅವರನ್ನು ಭೇಟಿಯಾಗಲಿದ್ದಾರೆ.
ಸಭೆಯ ಕಾರ್ಯಸೂಚಿಯ ಬಗ್ಗೆ ಎರಡೂ ಕಡೆಯ ಅಧಿಕಾರಿಗಳು ಮಾಹಿತಿ ಬಿಟ್ಟುಕೊಟ್ಟಿಲ್ಲವಾದರೂ, ಅಮೆರಿಕದ ಇಬ್ಬರು ಸಾಂಪ್ರದಾಯಿಕ ಸ್ನೇಹಿತರಾದ ಕೆನಡಾ ಮತ್ತು ಭಾರತದ ನಡುವಿನ ಇತ್ತೀಚಿನ ರಾಜತಾಂತ್ರಿಕ ಬಿಕ್ಕಟ್ಟು ಮಾತುಕತೆಯ ಸಮಯದಲ್ಲಿ ಪ್ರಮುಖವಾಗಿ ಬರುವ ನಿರೀಕ್ಷೆಯಿದೆ.
ಸಭೆಯಲ್ಲಿ ಜೈಶಂಕರ್ ಅವರು ಬ್ಲಿಂಕೆನ್ ಜೊತೆ ನಡೆಸುವ ಸಂಭಾಷಣೆಗಳನ್ನು ತಿಳಿದುಕೊಳ್ಳಲು ನಾನು ಬಯಸುವುದಿಲ್ಲ. ಆದರೆ ನಾವು ಸ್ಪಷ್ಟಪಡಿಸಿದಂತೆ, ನಾವು ಕೆನಡಾ ಜೊತೆಗಿನ ರಾಜತಾಂತ್ರಿಕ ಸಮಸ್ಯೆಯನ್ನು ಪ್ರಸ್ತಾಪಿಸಿದ್ದೇವೆ. ನಾವು ನಮ್ಮ ಭಾರತೀಯ ಸಹವರ್ತಿಗಳೊಂದಿಗೆ ಈ ಕುರಿತು ಮಾತುಕತೆ ತೊಡಗಿಸಿಕೊಂಡಿದ್ದೇವೆ. ಕೆನಡಾದ ತನಿಖೆಯೊಂದಿಗೆ ಸಹಕರಿಸಲು ಅವರನ್ನು ಪ್ರೋತ್ಸಾಹಿಸುವುದನ್ನು ಮುಂದುವರಿಸುತ್ತೇವೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲ್ಲರ್ ಸುದ್ದಿಗಾರರಿಗೆ ತಿಳಿಸಿದರು.
ಇಂದು ಮಧ್ಯಾಹ್ನ ವಾಷಿಂಗ್ಟನ್ ಡಿಸಿಯಲ್ಲಿರುವ ವಿದೇಶಾಂಗ ಇಲಾಖೆಯ ಫಾಗ್ಗಿ ಬಾಟಮ್ ಪ್ರಧಾನ ಕಚೇರಿಯಲ್ಲಿ ಜೈಶಂಕರ್ ಮತ್ತು ಬ್ಲಿಂಕೆನ್ ನಡುವಿನ ಭೇಟಿಯ ಕುರಿತು ಪ್ರಶ್ನೆಗಳಿಗೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಕೆನಡಾದ ಬಿಕ್ಕಟ್ಟು ಭುಗಿಲೆದ್ದಿರುವ ಮುಂಚೆಯೇ ಇಬ್ಬರು ಉನ್ನತ ರಾಜತಾಂತ್ರಿಕರ ನಡುವಿನ ಸಭೆಯನ್ನು ನಿಗದಿಪಡಿಸಲಾಗಿದ್ದರೂ, ಈ ವರ್ಷದ ಆರಂಭದಲ್ಲಿ ಬ್ರಿಟಿಷ್ ಕೊಲಂಬಿಯಾದಲ್ಲಿ ಸಿಖ್ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಕೆನಡಾದ ತನಿಖೆಗೆ ಸಹಕರಿಸುವಂತೆ ಭಾರತವನ್ನು ಯುಎಸ್ ಒತ್ತಾಯಿಸುತ್ತಿದೆ.
ಜೂನ್ 18 ರಂದು ಬ್ರಿಟಿಷ್ ಕೊಲಂಬಿಯಾದ ಸರ್ರೆಯ ಗುರುದ್ವಾರದ ಹೊರಗೆ 45 ವರ್ಷದ ನಿಜ್ಜರ್ ಹತ್ಯೆಯ ಹಿಂದೆ ಭಾರತ ಸರ್ಕಾರ ಪಾತ್ರವಿದ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪಿಸಿದ್ದಾರೆ. ಭಾರತವು 2020 ರಲ್ಲಿ ನಿಜ್ಜರ್ ನನ್ನು ಭಯೋತ್ಪಾದಕ ಎಂದು ಹೆಸರಿಸಿತ್ತು.
ಭಾರತವು ಈ ಆರೋಪಗಳನ್ನು 'ಅಸಂಬದ್ಧ' ಮತ್ತು 'ಪ್ರೇರಣೆಯಿಂದ ಕೂಡಿದ್ದಾಗಿದೆ ಎಂದು ತಿರಸ್ಕರಿಸಿದೆ. ಯುಎಸ್, ಭಾರತ, ಜಪಾನ್ ಮತ್ತು ಆಸ್ಟ್ರೇಲಿಯಾದ ವಿದೇಶಾಂಗ ಮಂತ್ರಿಗಳನ್ನು ಒಳಗೊಂಡಿರುವ ಕ್ವಾಡ್ ಮಂತ್ರಿಯ ಸಮಯದಲ್ಲಿ ನ್ಯೂಯಾರ್ಕ್‌ನಲ್ಲಿ ಈ ವಿಷಯವು ಚರ್ಚೆಗೆ ಬರಲಿಲ್ಲ ಎಂದು ಮಿಲ್ಲರ್ ಹೇಳಿದರು.
Advertisement