ಲಿಪ್‌ಸ್ಟಿಕ್ ಹಚ್ಚುವವರಿಗೆ ಮಾತ್ರ ಮಹಿಳಾ ಮೀಸಲಾತಿ ಮಸೂದೆ: ಆರ್‌ಜೆಡಿ ನಾಯಕ ಸಿದ್ದಿಕಿ ವಿವಾದಾತ್ಮಕ ಹೇಳಿಕೆ

ಮಹಿಳಾ ಮೀಸಲಾತಿ ಮಸೂದೆಯು 'ಲಿಪ್‌ಸ್ಟಿಕ್ ಹಚ್ಚುವವರಿಗೆ ಮತ್ತು ಬಾಬ್ ಕಟ್ ಹೇರ್ ಸ್ಟೈಲ್' ಹೊಂದಿರುವ ಮಹಿಳೆಯರಿಗೆ ಮಾತ್ರ  ಅನುಕೂಲವಾಗಲಿದೆಯೇ ಹೊರತು ಸಾಮಾನ್ಯ ಮಹಿಳೆಯರಿಗಲ್ಲ ಎಂದು ಆರ್‌ಜೆಡಿ ಹಿರಿಯ ನಾಯಕ...
ಬಿಹಾರ ಸಿಎಂ ಜತೆ ಸಿದ್ದಿಕಿ
ಬಿಹಾರ ಸಿಎಂ ಜತೆ ಸಿದ್ದಿಕಿ

ಪಾಟ್ನಾ: ಮಹಿಳಾ ಮೀಸಲಾತಿ ಮಸೂದೆಯು 'ಲಿಪ್‌ಸ್ಟಿಕ್ ಹಚ್ಚುವವರಿಗೆ ಮತ್ತು ಬಾಬ್ ಕಟ್ ಹೇರ್ ಸ್ಟೈಲ್' ಹೊಂದಿರುವ ಮಹಿಳೆಯರಿಗೆ ಮಾತ್ರ  ಅನುಕೂಲವಾಗಲಿದೆಯೇ ಹೊರತು ಸಾಮಾನ್ಯ ಮಹಿಳೆಯರಿಗಲ್ಲ ಎಂದು ಆರ್‌ಜೆಡಿ ಹಿರಿಯ ನಾಯಕ ಮತ್ತು ಮಾಜಿ ಸಚಿವ ಅಬ್ದುಲ್ ಬಾರಿ ಸಿದ್ದಿಕಿ ಅವರು ಶನಿವಾರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

ಸಿದ್ದಿಕಿಯ ಈ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದು, ಮಿತ್ರಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಯು ಸಹ ಆರ್ ಜೆಡಿ ನಾಯಕನ ಹೇಳಿಕೆ ಖಂಡಿಸಿವೆ.

ಇಂದು ಮುಜಾಫರ್‌ಪುರ ಜಿಲ್ಲೆಯಲ್ಲಿ ನಡೆದ ಆರ್‌ಜೆಡಿಯ ಹಿಂದುಳಿದ ಘಟಕ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಿದ್ದಿಕಿ, ಮಹಿಳಾ ಮೀಸಲಾತಿ ಮಸೂದೆಯಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಬೇಕು. ಬಾಬ್ ಕಟ್ ಹಾಗೂ ಲಿಪ್ ಸ್ಟಿಕ್ ಹಚ್ಚುವವರು ಲೋಕಸಭೆ ಮತ್ತು ವಿಧಾನಸಭೆಗೆ ಬಂದರೆ ಗ್ರಾಮೀಣ ಭಾಗದಲ್ಲಿ ವಾಸಿಸುವ ಜನ ಅಭಿವೃದ್ಧಿ ಕಾಣಲು ಸಾಧ್ಯವಿಲ್ಲ ಎಂದಿದ್ದರು.

ನಂತರ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾದ ಸಿದ್ದಿಕಿ, ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಅಲ್ಲೆ ಬಹಳಷ್ಟು ಗ್ರಾಮೀಣ ಮಹಿಳೆಯರು ಇದ್ದ ಕಾರಣ ನಾನು ಅಂತಹ ಹೇಳಿಕೆಯನ್ನು ನೀಡಿದ್ದೇನೆ. 'ವಿಶಿಷ್ಟ ಹಳ್ಳಿ ಭಾಷೆ' ಬಳಸಿದರೆ ಮಹಿಳೆಯರು ಸುಲಭವಾಗಿ ಅರ್ಥಮಾಡಿಕೊಳ್ಳುತ್ತಾರೆ ಎಂದು ತಮ್ಮ ಹೇಳಿಯನ್ನು ಸಮರ್ಥಿಸಿಕೊಂಡಿದ್ದಾರೆ.

ಸಿದ್ದಿಕಿ ಅವರ ಸಮರ್ಥನೆ ಒಪ್ಪಿಕೊಳ್ಳದ ಜೆಡಿ(ಯು) ಎಂಎಲ್‌ಸಿ ಖಾಲಿದ್ ಅನ್ವರ್ ಅವರು, ಲಿಪ್‌ಸ್ಟಿಕ್ ಹಚ್ಚುವುದು ಅಥವಾ ಹಚ್ಚದಿರುವುದು ಅಥವಾ ಬಾಬ್ ಕಟ್ ಮಾಡಿಸುವುದು ಅಥವಾ ಮಾಡಿಸದೆ ಇರುವುದು ಮಹಿಳೆಯರ ಹಕ್ಕು. ಮಹಿಳೆಯರ ಮೂಲಭೂತ ಹಕ್ಕುಗಳನ್ನು ಪ್ರಶ್ನಿಸುವುದು ಖಂಡನೀಯ. ಇದು ಜೆಡಿಯುನ ಕಲ್ಪನೆ ಮತ್ತು ಸಂಸ್ಕೃತಿಯಲ್ಲ. ಅವರು ಅತ್ಯಂತ ಹಿಂದುಳಿದ ಮಹಿಳೆಯರ ಹಕ್ಕುಗಳ ಬಗ್ಗೆ ಮಾತನಾಡಬೇಕು. ಆದರೆ ಅಂತಹ ಹೇಳಿಕೆ ನೀಡಬಾರದು ಎಂದಿದ್ದಾರೆ.

ಕೇಂದ್ರ ಸರ್ಕಾರ ಎಲ್ಲಾ ವಂಚಿತ ವರ್ಗಗಳ ಮಹಿಳೆಯರಿಗೆ ಮೀಸಲಾತಿಯ ಲಾಭ ಸಿಗುವಂತೆ ನೋಡಿಕೊಳ್ಳಬೇಕು. ಆದರೆ ಮಹಿಳೆಯರು ಹೇಗೆ ಬಟ್ಟೆ ಧರಿಸುತ್ತಾರೆ ಮತ್ತು ಅವರ ಸ್ಟೈಲ್ ಬಗ್ಗೆ ಮಾತನಾಡುವುದು ಸರಿಯಲ್ಲ. ಸಿದ್ದಿಕಿ ಹೇಳಿಕೆಯನ್ನು ಬೆಂಬಲಿಸುವುದಿಲ್ಲ ಎಂದು ಕಾಂಗ್ರೆಸ್ ವಕ್ತಾರ ಅಸಿತ್ನಾಥ್ ತಿವಾರಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com