
ಚಂಡೀಗಡ: ಮೂರು ವರ್ಷದ ಹಿಂದೆ ಇನ್‌ಸ್ಟಾಗ್ರಾಂನಲ್ಲಿ ಪರಿಚಿತಳಾಗಿದ್ದ ಮನ್‌ಪ್ರೀತ್ ಕೌರ್ ಎಂಬಾಕೆಯನ್ನು ವರಿಸಲು ಜಲಂಧರ್ ಮೂಲದ ದೀಪಕ್ ಕುಮಾರ್ (24) ದುಬೈನಿಂದ ಕಳೆದ ತಿಂಗಳು ವಾಪಸಾಗಿದ್ದ. ಆದರೆ ಮದುವೆಯ ದಿನ ವಧು ನಾಪತ್ತೆಯಾಗಿದ್ದು, ಆಕೆ ವಿವಾಹಕ್ಕಾಗಿ ಬುಕ್ ಮಾಡಿದ ಸ್ಥಳವೇ ಇಲ್ಲವೆಂದು ತಿಳಿದು ಬಂದಿದೆ.
ದುರಂತವೆಂದರೆ ಅವರಿಬ್ಬರೂ ಇಷ್ಟು ಸಮಯದಿಂದ ಹರಟುತ್ತಿದ್ದರೂ, ಒಮ್ಮೆಯೂ ಭೇಟಿ ಮಾಡಿರಲಿಲ್ಲ. ಸಾಮಾಜಿಕ ಜಾಲತಾಣದ ಮೂಲಕವೇ ಆಕೆಯ ಜತೆ ಮದುವೆ ಮಾತುಕತೆಯನ್ನೆಲ್ಲ ಮುಗಿಸಿಬಿಟ್ಟಿದ್ದ. ತನ್ನ ಕುಟುಂಬ ಮದುವೆಗೆ ಒಪ್ಪಿಕೊಂಡಿದೆ ಎಂದು ಆಕೆಯೂ ತಿಳಿಸಿದ್ದಳು. ಇನ್ನೇಕೆ ತಡ ಎಂದು ಆತನೂ ಮನೆಯವರಿಗೆ ಹೇಳಿ, ಮದುವೆ ತಯಾರಿ ನಡೆಸುವಂತೆ ಸೂಚಿಸಿದ್ದ.
ಜಲಂಧರ್‌ನ ಮಂಡಿಯಾಲಿ ಗ್ರಾಮದಿಂದ ಮೋಗಾದಲ್ಲಿನ ಮದುಮಗಳು ಹೇಳಿದ ವಿವಾಹ ಸ್ಥಳಕ್ಕೆ ಕುಟುಂಬದ ಸಮೇತ ಆತ ತೆರಳಿದ್ದ. ಮೋಗಾ ತಲುಪಿದ ಬಳಿಕ ತಮ್ಮ ಕಡೆಯ ಕೆಲವು ಜನರು ಅಲ್ಲಿಗೆ ಬರುತ್ತಾರೆ. ಅಲ್ಲಿಂದ ಮದುವೆ ಹಾಲ್‌ಗೆ ಕರೆದುಕೊಂಡು ಬರುತ್ತಾರೆ ಎಂದು ಮದುಮಗಳ ಕುಟುಂಬ ತಿಳಿಸಿತ್ತು. ಬೆಳಿಗ್ಗೆ ಅಲ್ಲಿಗೆ ಹೋದವರು ಸಂಜೆ 5 ಗಂಟೆ ಕಳೆದರೂ ಹುಡುಗಿ ಕಡೆಯವರು ಪತ್ತೆ ಇರಲಿಲ್ಲ. ಫೋನ್ ಮಾಡಿದರೂ ಸಂಪರ್ಕ ಸಿಗುತ್ತಿರಲಿಲ್ಲ.
ಕಾದು ಕಾದು ಕಂಗೆಟ್ಟ ಅವರು, ತಾವೇ ಕಲ್ಯಾಣ ಮಂಟಪಕ್ಕೆ ಹೋಗೋಣ ಎಂದು ತೀರ್ಮಾನಿಸಿ 'ರೋಸ್ ಗಾರ್ಡನ್ ಪ್ಯಾಲೇಸ್' ಎಲ್ಲಿದೆ ಎಂದು ಸ್ಥಳೀಯರಲ್ಲಿ ವಿಚಾರಿಸಿದರು. ಆದರೆ ಮೋಗಾದಲ್ಲಿ ಅಂತಹ ಜಾಗವೇ ಇಲ್ಲ ಎಂದು ತಿಳಿದಾಗ ಬೇಸ್ತುಬಿದ್ದರು. ತಾನು ಮೋಸ ಹೋಗಿರುವುದು ಅರಿವಾದ ಬಳಿಕ ಮದುಮಗ ಪೊಲೀಸ್ ಠಾಣೆಗೆ ತೆರಳಿ ವಧು ಹಾಗೂ ಆಕೆಯ ಕುಟುಂಬದವರ ವಿರುದ್ಧ ದೂರು ನೀಡಿದ್ದಾನೆ.
ತಾನು ದುಬೈನಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದು, ಇನ್‌ಸ್ಟಾಗ್ರಾಂನಲ್ಲಿ ಕಳೆದ ಮೂರು ವರ್ಷದಿಂದ ಕೌರ್ ಜತೆಗೆ ಸಂಪರ್ಕದಲ್ಲಿದ್ದೆ ಎಂದು ದೀಪಕ್ ತಿಳಿಸಿದ್ದಾನೆ. ಆಕೆ ಆತನೊಂದಿಗೆ ತನ್ನ ಫೋಟೋಗಳನ್ನು ಹಂಚಿಕೊಂಡಿದ್ದಳು. ಆದರೆ ಎಂದಿಗೂ ಪರಸ್ಪರ ಭೇಟಿ ಮಾಡಿರಲಿಲ್ಲ. ಇಬ್ಬರೂ ಮದುವೆಯಾಗುವುದಾಗಿ ತೀರ್ಮಾನಿಸಿದ ನಂತರ ಫೋನ್ ಮೂಲಕವೇ ಎರಡೂ ಕುಟುಂಬದ ಹಿರಿಯರು ಮಾತುಕತೆಗಳನ್ನು ನಡೆಸಿದ್ದರು. ಮದುವೆ ಸಿದ್ಧತೆಗಾಗಿ ಆಕೆಗೆ ದಿನೇಶ್ 50 ಸಾವಿರ ರೂ ಹಣ ಸಹ ಕಳುಹಿಸಿದ್ದ.
ಮದುವೆ ಸ್ಥಳಕ್ಕೆ 150 ಬರಾತಿಗಳ ಜತೆ ತೆರಳಿದ್ದಲ್ಲದೆ, ಟ್ಯಾಕ್ಸಿಗಳನ್ನು ಬಾಡಿಗೆಗೆ ಪಡೆದುಕೊಂಡಿದ್ದೆವು. ಕ್ಯಾಟರಿಂಗ್ ಮತ್ತು ವಿಡಿಯೋಗ್ರಾಫರ್‌ಗೆ ಮುಂಗಡ ಹಣ ಕೂಡ ಪಾವತಿಸಿದ್ದೆವು ಎಂದು ದೀಪಕ್‌ನ ತಂದೆ ಪ್ರೇಮ್ ಚಂದ್ ತಿಳಿಸಿದ್ದಾರೆ. ತಾನು ಮೋಗಾದವಳಾಗಿದ್ದು, ಫಿರೋಜ್‌ಪುರದಲ್ಲಿ ಕೆಲಸ ಮಾಡುತ್ತಿರುವುದಾಗಿ ಮನ್‌ಪ್ರೀತ್ ಕೌರ್ ಹೇಳಿಕೊಂಡಿದ್ದಳು. ಮದುಮಗಳ ಫೋನ್ ಸ್ವಿಚ್ ಆಫ್ ಆಗಿದ್ದು, ಆಕೆಯನ್ನು ಸಂಪರ್ಕಿಸುವುದು ವರನ ಕಡೆಯವರಿಗೆ ಸಾಧ್ಯವಾಗುತ್ತಿಲ್ಲ ಎಂದು ದೀಪಕ್ ಕುಮಾರ್ ಕಡೆಯಿಂದ ದೂರು ದಾಖಲಿಸಲಾಗಿದೆ ಎಂಬುದಾಗಿ ಮೋಗಾದ ಸಹಾಯಕ ಸಬ್ ಇನ್‌ಸ್ಪೆಕ್ಟರ್ ಹರ್ಜಿಂದರ್ ಸಿಂಗ್ ತಿಳಿಸಿದ್ದಾರೆ.
Advertisement