Explainer: ಮಿತವ್ಯಯಕ್ಕೆ ಮೋದಿ ಕರೆ; ಕಷ್ಟದ ದಿನಗಳೋ? Forex ಉಳಿಕೆಯ ಮರ್ಮವೋ..? 72 ಬಿಲಿಯನ್ ಡಾಲರ್ ಹಿಂದಿನ ರಹಸ್ಯ..

ಮೋದಿ ಅವರ ಹೇಳಿಕೆಯನ್ನು ವಿಶ್ಲೇಷಿಸುವುದಾದರೆ ಅವರ ಮನವಿಯ ಸಂದೇಶ ಸರಳ ಹಾಗೂ ಸ್ಪಷ್ಟವಾಗಿದೆ: ಡಾಲರ್‌ಗಳನ್ನು ಉಳಿಸಿ, ಭಾರತದ ವಿದೇಶಿ ವಿನಿಮಯ ನಿಕ್ಷೇಪಗಳನ್ನು ರಕ್ಷಿಸಿ ಎಂಬುದಾಗಿದೆ.
Narendra Modi (AI generated photo)
ನರೇಂದ್ರ ಮೋದಿ (ಎಐ ಆಧಾರಿತ ಸಾಂಕೇತಿಕ ಚಿತ್ರ)online desk
Updated on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಕರೆ ಬಗ್ಗೆ ಇಡೀ ದೇಶದಲ್ಲಿ ಚರ್ಚೆಯಾಗುತ್ತಿದೆ.

ಪಶ್ಚಿಮ ಏಷ್ಯಾ ಯುದ್ಧಗ್ರಸ್ತವಾಗಿರುವ ಹಿನ್ನೆಲೆಯಲ್ಲಿ ತೈಲ ಕೊರತೆ ಉಂಟಾಗುವುದು ಸ್ಪಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ "ಒಂದು ವರ್ಷದವರೆಗೆ ಚಿನ್ನ ಖರೀದಿಸಬೇಡಿ; ವಿದೇಶಿ ಪ್ರಯಾಣವನ್ನು ಮುಂದೂಡಿ; ಸಾಧ್ಯವಾದಲ್ಲೆಲ್ಲಾ ಮನೆಯಿಂದಲೇ ಕೆಲಸ ಮಾಡಿ." ಎಂದು ಮೋದಿ ಕರೆ ನೀಡಿದ್ದಾರೆ.

ಯುದ್ಧದ ಪರಿಣಾಮ ತೈಲ ಕೊರತೆ ಉಂಟಾಗಿದ್ದು, ಆಮದು ಮತ್ತು ಡಾಲರ್ ನಲ್ಲಿ ಪಾವತಿಸುವ ವಲಯಗಳ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಇದರಿಂದಾಗಿ ಸದ್ಯದ ಪರಿಸ್ಥಿತಿಯಲ್ಲಿ ಭಾರತದ ವಿದೇಶಿ ವಿನಿಮಯ ಮೀಸಲಿನ ಮೇಲೆ ಹೆಚ್ಚಿನ ಒತ್ತಡ ಬೀಳುತ್ತಿದ್ದು, ಫಾರೆಕ್ಸ್ ಕುಸಿತ ತಡೆಯುವುದು ಪ್ರಧಾನಿ ಮೋದಿ ಸಲಹೆಯ ಹಿಂದಿನ ಉದ್ದೇಶ.

ನಾವು ಇಲ್ಲೆಲ್ಲೋ ಚಿನ್ನ ಖರೀದಿ ಬಿಡುವುದಕ್ಕೂ, ಮನೆಯಿಂದಲೇ ಕೆಲಸ ಮಾಡೋದಕ್ಕೂ ಇರಾನ್ ಯುದ್ಧಕ್ಕೂ, ಭಾರತದ ವಿದೇಶೀ ವಿನಿಮಯ ಹೊರಹೋಗುವುದನ್ನು ತಡೆಯುವುದಕ್ಕೂ ಏನು ಸಂಬಂಧ ಅಂತ ಕೇಳ್ತೀರಾ? ಉತ್ತರ ಬಹಳ ಸರಳ. ಚಿನ್ನದ ಖರೀದಿ ಹೆಚ್ಚಾದಂತೆಲ್ಲಾ ಸಹಜವಾಗಿ ಡಾಲರ್ ಗೆ ಬೇಡಿಕೆ ಹೆಚ್ಚಾಗುತ್ತೆ. ಭಾರತದಲ್ಲಿ ಚಿನ್ನದ ಬಹುಪಾಲು ಬೇಡಿಕೆಯ ಪೂರೈಕೆ ನಿಂತಿರೋದೇ ಆಮದಿನ ಮೇಲೆ.

ಭಾರತ ಹೆಚ್ಚಿನ ಪ್ರಮಾಣದಲ್ಲಿ ಚಿನ್ನ ಆಮದು ಮಾಡಿಕೊಂಡಂತೆಲ್ಲ ಹೆಚ್ಚು ಡಾಲರ್ ಪಾವತಿಸಬೇಕಾಗುತ್ತದೆ. ಪರಿಣಾಮ ವಿದೇಶಿ ಮೀಸಲು ನಿಧಿಯನ್ನು ಹೊರತೆಗೆಯಬೇಕಾಗುತ್ತದೆ. ಈ ರೀತಿ ವಿದೇಶಿ ವಿನಿಮಯ ಮೀಸಲು ಹೊರಹೋಗುವುದು ದೇಶದ ಆರ್ಥಿಕ ದೃಷ್ಟಿಯಿಂದ ಒಳಿತಲ್ಲ.

ಭಾರತದ ವಿದೇಶೀ ವಿನಿಮಯ ಲೆಕ್ಕಾಚಾರ ನೋಡುವುದಾದರೆ, ಟ್ರೇಡಿಂಗ್ ಎಕನಾಮಿಕ್ಸ್ ಸಂಗ್ರಹಿಸಿದ ಮಾಹಿತಿಯ ಪ್ರಕಾರ ಭಾರತದ ಬಳಿ ಈಗ ಸುಮಾರು 690.69 ಬಿಲಿಯನ್ ಡಾಲರ್ ಮೌಲ್ಯದ ವಿದೇಶೀ ವಿನಿಮಯ ನಿಕ್ಷೇಪಗಳಿವೆ. ಫೆಬ್ರವರಿಯಲ್ಲಿ 728 ಬಿಲಿಯನ್‌ ಡಾಲರ್ ಸನಿಹದಲ್ಲಿದ್ದ ಫಾರೆಕ್ಸ್, ಜಾಗತಿಕ ಅನಿಶ್ಚಿತತೆ ತೀವ್ರಗೊಂಡಂತೆ ಏಪ್ರಿಲ್‌ನಲ್ಲಿ 691 ಬಿಲಿಯನ್‌ಗೆ ಕುಸಿದಿದೆ.

ಇನ್ನು ಭಾರತದ ಚಾಲ್ತಿ ಖಾತೆ ಕೊರತೆ ಅಥವಾ Current Account Deficit 2026 ರಲ್ಲಿ 84.5 ಬಿಲಿಯನ್‌ ಡಾಲರ್ ಗೆ ವಿಸ್ತರಿಸಬಹುದು ಅಂತ ಐಎಂಎಫ್ ಅಂದಾಜಿಸಿದೆ. ಇದು ಜಿಡಿಪಿಯ ಶೇ.2 ರಷ್ಟಾಗುತ್ತೆ. CAD ಹೆಚ್ಚಾಗುತ್ತಿದೆ ಅಂದರೆ ಡಾಲರ್ ಒಳಬರುವುದಕ್ಕಿಂತ ಹೆಚ್ಚು ಹೊರಗೆ ಹೋಗ್ತಿದೆ ಅನ್ನೋದು ಇದರ ಅರ್ಥ. ಈ ರೀತಿಯ ಡಾಲರ್ ಹೊರ ಹರಿವಿಗೆ ಚಿನ್ನದ ಖರೀದಿಯೇ ಪ್ರಮುಖ ಕಾರಣ.

ಈ ರೀತಿ ಡಾಲರ್ ಒಳಬರುವುದಕ್ಕಿಂತ ಹೊರ ಹೋಗುವುದಕ್ಕೆ ಇರುವ ಕಾರಣಗಳಲ್ಲಿ ಚಿನ್ನದ ಖರೀದಿಯದ್ದೇ ದೊಡ್ಡ ಪಾಲು. ಭಾರತದ ಚಿನ್ನ ಆಮದಿನ ಅಂಕಿ-ಅಂಶಗಳನ್ನ ನೋಡೋದಾದ್ರೆ, 2026ನೇ ಅರ್ಥಿಕ ವರ್ಷದಲ್ಲಿ ಭಾರತ ಸುಮಾರು 72 ಶತಕೋಟಿ ಡಾಲರ್ ಮೌಲ್ಯದ ಚಿನ್ನ ಆಮದು ಮಾಡಿಕೊಂಡಿದೆ. ಇದು ಹಿಂದಿನ ವರ್ಷಕ್ಕಿಂತ ಶೇ.24 ರಷ್ಟು ಹೆಚ್ಚು. ನಾವು ಖರೀದಿಸುವ ಪ್ರತಿ ಔನ್ಸ್‌ ಚಿನ್ನಕ್ಕೂ ಡಾಲರ್‌ಗಳಲ್ಲಿ ಪಾವತಿಸಲಾಗುತ್ತದೆ. ಅಂದರೆ ಹೆಚ್ಚು ಚಿನ್ನದ ಬೆಡಿಕೆ ಅಂದರೆ ಅದು ಹೆಚ್ಚಿನ ಡಾಲರ್ ವಿದೇಶಿ ವಿನಿಮಯದಿಂದ ಹೊರಹೋಗುವುದಾಗಿದೆ.

FY26 ರಲ್ಲಿ ಒಟ್ಟು ಆಮದು ಬಿಲ್: 775 ಬಿಲಿಯನ್ ಡಾಲರ್

ನಾಲ್ಕು ಸರಕುಗಳ ಬೆಲೆ: 240 ಬಿಲಿಯನ್ ಡಾಲರ್

ಕಚ್ಚಾ ತೈಲ: 134.7 ಬಿಲಿಯನ್ ಡಾಲರ್

ಚಿನ್ನ: 72 ಬಿಲಿಯನ್ ಡಾಲರ್

ಸಸ್ಯಜನ್ಯ ಎಣ್ಣೆ: 19.5 ಬಿಲಿಯನ್ ಡಾಲರ್

ರಸಗೊಬ್ಬರಗಳು: 14.5 ಬಿಲಿಯನ್ ಡಾಲರ್

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಭಾರತದ ಒಟ್ಟು ಆಮದು ಬಿಲ್ 775 ಬಿಲಿಯನ್ ಡಾಲರ್. ಕಚ್ಚಾ ತೈಲ, ಚಿನ್ನ, ಸಸ್ಯಜನ್ಯ ಎಣ್ಣೆಗಳು ರಸಗೊಬ್ಬರಗಳ ಆಮದು ಮೌಲ್ಯ 240 ಬಿಲಿಯನ್ ಡಾಲರ್ ನ್ನೂ ದಾಟುತ್ತೆ. ಈ ನಾಲ್ಕು ವಸ್ತುಗಳು ಭಾರತದ ಒಟ್ಟು ಆಮದಿನ ಶೇಕಡಾ 31.1 ರಷ್ಟಿದ್ದರೆ, ಚಿನ್ನದ ಆಮದಿನ ಬಿಲ್ ಒಟ್ಟು ಆಮದಿನ ಶೇ10 ರಷ್ಟಿದೆ. ಅದಕ್ಕಾಗಿಯೇ ಪ್ರಧಾನಿ ಮೋದಿ ನಾಗರಿಕರು ಈ ಸರಕುಗಳ ಬಳಕೆಯನ್ನು ಕಡಿಮೆ ಮಾಡಲು ಒತ್ತಾಯಿಸಿದ್ದಾರೆ.

ಚಿನ್ನದ ಬೇಡಿಕೆ ಕಡಿಮೆಯಾದರೆ ಏನಾಗುತ್ತದೆ?

ಭಾರತೀಯರು ಒಂದು ವರ್ಷ ಚಿನ್ನದ ಖರೀದಿಯನ್ನು ತೀವ್ರವಾಗಿ ಕಡಿಮೆ ಮಾಡಿದರೆ:

ಭಾರತೀಯರು ಒಂದು ವರ್ಷ ಚಿನ್ನದ ಖರೀದಿಯನ್ನು ತೀವ್ರವಾಗಿ ಕಡಿಮೆ ಮಾಡಿದರೆ, ಚಿನ್ನದ ಆಮದು ಶೇ. 30-40 ರಷ್ಟು ಕುಸಿದು, 20-25 ಬಿಲಿಯನ್ ಡಾಲರ್‌ಗಳನ್ನು ಭಾರತ ಉಳಿಸಬಹುದಾಗಿದೆ.

ಖರೀದಿ 50% ಕುಸಿದರೆ, ಸಿಎಡಿಯ ಅರ್ಧದಷ್ಟು ಅಂದರೆ 36 ಬಿಲಿಯನ್ ಡಾಲರ್‌ಗಳು ಭಾರತದ ಬಳಿಯೇ ಇರುತ್ತೆ, ಫಾರೆಕ್ಸ್ ಸ್ಥಿರವಾಗಿರಲಿದೆ. ಸರಳವಾಗಿ ಹೇಳುವುದಾದರೆ ಒಂದು ವರ್ಷ ಚಿನ್ನವನ್ನು ಖರೀದಿಸದಿರುವುದರಿಂದ ಭಾರತದ ಡಾಲರ್ ಹೊರಹರಿವನ್ನು ನೇರವಾಗಿ ಹತ್ತಾರು ಶತಕೋಟಿಗಳಷ್ಟು ಕಡಿಮೆ ಮಾಡಬಹುದಾಗಿದೆ.

ಇನ್ನು ಕಚ್ಚಾ ತೈಲ ಬ್ಯಾರೆಲ್‌ಗೆ 100 ಡಾಲರ್ ಗಿಂತ ಹೆಚ್ಚಾಗಿದೆ. ಭಾರತ ತನ್ನ ತೈಲ ಅಗತ್ಯಗಳಲ್ಲಿ ಶೇ. 88 ರಷ್ಟು ಆಮದು ಮಾಡಿಳ್ತಿದೆ. ಇಂತಹ ಸಮಯದಲ್ಲಿ, ಚಿನ್ನದ ಆಮದು ಕಡಿಮೆ ಮಾಡಿದ್ದರಿಂದ ಉಳಿಸಿದ ಡಾಲರ್‌ ದೇಶಕ್ಕೆ ಮುಖ್ಯವಾಗುತ್ತೆ. ಇದನ್ನು ಅಗತ್ಯ ಇಂಧನ ಆಮದುಗಳಿಗೆ ಪಾವತಿಸಲು ಬಳಸಬಹುದಾಗಿದೆ.

ಯುಎಸ್-ಇರಾನ್ ಯುದ್ಧದ ಸಮಯದಲ್ಲಿ ವಿದೇಶಿ ವಿನಿಮಯ ಮೀಸಲು ಬಹಳ ಮುಖ್ಯ!

ಇನ್ನು ಯುಎಸ್-ಇರಾನ್ ಸಂಘರ್ಷದಿಂದ ಹಾರ್ಮುಜ್ ಜಲಸಂಧಿ ಬಂದ್ ಆಗಿರೋದು ತೈಲ ಸಾಗಣೆಗೆ ಅಡ್ಡಿಯಾಗ್ತಿರೋದು ನಿಮಗೆ ಗೊತ್ತೇ ಇದೆ. ತೈಲ ಬೆಲೆಗಳು ಏರಿವೆ. ಇವೆಲ್ಲದರ ಮಧ್ಯೆ ರೂಪಾಯಿ ದುರ್ಬಲಗೊಂಡಿದೆ. ಜಾಗತಿಕ ಆರ್ಥಿಕ ಪರಿಸ್ಥಿತಿ ಅನಿಶ್ಚಿತವಾದಾಗೆಲೆಲ್ಲಾ ಹೂಡಿಕೆದಾರರಿಗೆ ಸೇಫ್ ಹೆವನ್ ಎಂಬಂತೆ ಕಾಣೋದು ಚಿನ್ನ ಯುದ್ಧಗಳು ನಡೆದಾಗ, ಜನರು ಸಹಜವಾಗಿ ಚಿನ್ನ ಖರೀದಿಸಲು ಧಾವಿಸುತ್ತಾರೆ. ಬೆಲೆಗಳು ಹೆಚ್ಚಾಗುತ್ತವೆ. ಆಮದುಗಳೂ ಹೆಚ್ಚಾಗುತ್ತವೆ. ಡಾಲರ್ ಹೊರಹರಿವು ಹೆಚ್ಚಾಗುತ್ತದೆ. ಆದ್ದರಿಂದ, ಭಾರತ ತೈಲ ಹಾಗೂ ಚಿನ್ನ ಎರಡೂ ವಿಷಯಗಳಲ್ಲಿ ಅಗಾಧ ಒತ್ತಡವನ್ನು ಎದುರಿಸುತ್ತಿದೆ.

ದುಬಾರಿ ತೈಲ ಆಮದು

ಹೆಚ್ಚಿನ ಬೆಲೆಯಲ್ಲಿ ಚಿನ್ನದ ಆಮದು ಹೆಚ್ಚಾಗುವುದು ವಿದೇಶೀ ವಿನಿಮಯ ಮೀಸಲು ಮತ್ತು ರೂಪಾಯಿಗೆ ಹಾನಿ ಮಾಡುತ್ತದೆ. ಪ್ರತಿ ಚಿನ್ನದ ಖರೀದಿ ಎಂದರೆ ಆಮದುದಾರರು ಮಾರುಕಟ್ಟೆಯಿಂದ ಡಾಲರ್‌ಗಳನ್ನು ಖರೀದಿಸುವುದಾಗಿದೆ. ಡಾಲರ್‌ಗಳಿಗೆ ಬೇಡಿಕೆ ಹೆಚ್ಚಿದಷ್ಟೂ ರೂಪಾಯಿ ದುರ್ಬಲವಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಚಿನ್ನದ ಖರೀದಿಯ ಬೇಡಿಕೆ ಬಿದ್ದರೆ, ಡಾಲರ್ ಬೇಡಿಕೆಗೂ ಕಡಿವಾಣ ಬೀಳುತ್ತದೆ. ಸಹಜವಾಗಿ ರೂಪಾಯಿ ಮೇಲಿನ ಒತ್ತಡ ಕಡಿಮೆಯಾಗುತ್ತದೆ.

ಆರ್‌ಬಿಐ ಮೀಸಲುಗಳ ಮೇಲೆ ಕಡಿಮೆ ಒತ್ತಡ

ವಿಭವಂಗಲ್ ಅನುಕುಲಕರ ಪ್ರೈವೆಟ್ ಲಿಮಿಟೆಡ್ ನ ಸಿದ್ಧಾರ್ಥ ಮೌರ್ಯ ಹೇಳುವಂತೆ ಪ್ರಧಾನಿ ಮೋದಿ ನೀಡಿರುವ ಕರೆಯನ್ನು panic ಬದಲಾಗಿ ರಕ್ಷಣಾತ್ಮಕ ಆರ್ಥಿಕ ತಂತ್ರವಾಗಿ ನೋಡಬೇಕು. ಭಾರತ ಅತಿದೊಡ್ಡ ಚಿನ್ನದ ಖರೀದಿದಾರರಲ್ಲಿ ಒಂದಾಗಿದೆ ಮತ್ತು ಬಿಕ್ಕಟ್ಟಿನ ಸಮಯದಲ್ಲಿ ಚಿನ್ನದ ಆಮದುಗಳು ನೇರವಾಗಿ ವಿದೇಶೀ ವಿನಿಮಯ ಮೀಸಲುಗಳು ಹೆಚ್ಚು ಖರ್ಚಾಗುವಂತೆ ಮಾಡುತ್ತವೆ.

ಹಾಗಾದರೆ ಚಿನ್ನದ ಬದಲಾಗಿ ಹೂಡಿಕೆ ಮಾಡಲು ನಾಗರಿಕರಿಗೆ ಪರ್ಯಾಯ ಯಾವುದು?

ಭೌತಿಕ ಚಿನ್ನದಿಂದ ಹಣಕಾಸಿನ ಆಯ್ಕೆಗಳಿಗೆ ಬದಲಾಯಿಸಲು ತಜ್ಞರು ಸೂಚಿಸುತ್ತಾರೆ. ಆಭರಣ ಅಥವಾ ಬೆಳ್ಳಿಯಲ್ಲಿ ಹಣವನ್ನು ಲಾಕ್ ಮಾಡುವ ಬದಲು:

  • SIP ಗಳ ಮೂಲಕ ಹೂಡಿಕೆ ಮಾಡಬಹುದಾಗಿದೆ.

  • ಬೆಲೆಗಳನ್ನು ಡಿಜಿಟಲ್ ಆಗಿ ಟ್ರ್ಯಾಕ್ ಮಾಡಲು ಚಿನ್ನದ ETF ಗಳನ್ನು ಬಳಸಬಹುದಾಗಿದೆ.

  • ಭಾರತೀಯ ಹಣಕಾಸು ವ್ಯವಸ್ಥೆಯೊಳಗೆ ಹಣವನ್ನು ಇರಿಸುವುದೂ ಒಂದು ಸೂಕ್ತ ಹೂಡಿಕೆಯಾಗಿದೆ.

  • ಈ ರೀತಿ ಮಾಡುವುದರಿಂದ ಡಾಲರ್ ಹೊರಹರಿವನ್ನು ಸೃಷ್ಟಿಸದೆ ಬಂಡವಾಳವನ್ನು ಉತ್ಪಾದಕವಾಗಿಸುತ್ತದೆ.

ತೈಲ ಏರಿಕೆಯಾದರೂ ಚಿನ್ನದ ಬೆಲೆ ಇತ್ತೀಚೆಗೆ ಕುಸಿದಿದೆ ಎಂದು ಲೆಮನ್ ಮಾರ್ಕೆಟ್ಸ್ ಡೆಸ್ಕ್‌ನ ಗೌರವ್ ಗರ್ಗ್ ಹೇಳುತ್ತಾರೆ, ಇದು ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳ ಹೊರತಾಗಿಯೂ ಹಣದುಬ್ಬರದ ಭಯ ಮತ್ತು ಬಡ್ಡಿದರದ ನಿರೀಕ್ಷೆಗಳು ಚಿನ್ನದ ಬೆಲೆ ಏರಿಕೆ ಓಟವನ್ನು ಹೇಗೆ ಮಿತಿಗೊಳಿಸುತ್ತಿವೆ ಎಂಬುದನ್ನು ತೋರಿಸುತ್ತದೆ. ಇರಾನ್‌ನ ಪ್ರಸ್ತಾಪವನ್ನು ಅಮೆರಿಕ ತಿರಸ್ಕರಿಸಿದ ನಂತರ, ಹಣದುಬ್ಬರ ಮತ್ತು ಇಂಧನ ಭದ್ರತಾ ಭಯ ಹೆಚ್ಚಾದ ನಂತರ ಕಚ್ಚಾ ತೈಲ ತೀವ್ರವಾಗಿ ಏರಿದೆ.

Narendra Modi (AI generated photo)
Watch | ಚಿನ್ನ ಖರೀದಿಸಬೇಡಿ, ವರ್ಕ್ ಫ್ರಮ್ ಹೋಮ್ ಮಾಡಿ; ಪ್ರಧಾನಿ ಸಲಹೆಗೆ ರಾಹುಲ್ ಟೀಕೆ

ಯಾವ ವಲಯಗಳಿಗೆ ಪ್ರಧಾನಿ ಮೋದಿಯವರ ಭಾಷಣದ ಪರಿಣಾಮ?

ವೆಚ್ಚವನ್ನು ಕಡಿಮೆ ಮಾಡುವ ಪ್ರಧಾನಿ ಮೋದಿಯವರ ಮನವಿಯು ಚಿನ್ನದ ಬಗ್ಗೆ ಮಾತ್ರವಲ್ಲ. ಇದು ಆರ್ಥಿಕತೆಯ ಹಲವಾರು ಪ್ರಮುಖ ವಲಯಗಳಲ್ಲಿ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ.

ಪ್ರಯಾಣ ಮತ್ತು ವಿಮಾನಯಾನ ಸಂಸ್ಥೆಗಳು: ಮೋದಿ ಭಾಷಣದ ಬೆನ್ನಲ್ಲೇ ವಿಮಾನಯಾನ ಸಂಸ್ಥೆಗಳು ಮತ್ತು ಪ್ರಯಾಣ-ಸಂಬಂಧಿತ ಷೇರುಗಳು ಕುಸಿದಿವೆ. ವಿದೇಶ ಪ್ರಯಾಣ ಮತ್ತು Destination wedding ಮುಂದೂಡುವ ಸಾಧ್ಯತೆಗಳಿವೆ. ಟಿಕೆಟ್‌ಗಳು ಮತ್ತು ರಜೆ ಪ್ಯಾಕೇಜ್‌ಗಳ ಬೇಡಿಕೆಯು ಕುಗ್ಗುವ ಸಾಧ್ಯತೆಯಿದೆ. ಇದು ವಿಮಾನಯಾನ ಸಂಸ್ಥೆಗಳು, ಪ್ರಯಾಣ ಏಜೆನ್ಸಿಗಳು ಮತ್ತು ಆತಿಥ್ಯ ಸರಪಳಿಗಳ ಮೇಲೆ ಪರಿಣಾಮ ಬೀರುತ್ತದೆ.

ಹೋಟೆಲ್‌ಗಳು ಮತ್ತು ಆತಿಥ್ಯ ವಲಯ: ಐಷಾರಾಮಿ ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳು, ವಿಶೇಷವಾಗಿ ವಿದೇಶಿ ಪ್ರವಾಸಿಗರು ಮತ್ತು destination wedding ಪ್ರಯೋಜನ ಪಡೆಯುವ ವಲಯದಲ್ಲಿರುವವರೂ ಮೋದಿ ಹೇಳಿಕೆಯ ಬೆನ್ನಲ್ಲೇ ಒತ್ತಡವನ್ನು ಎದುರಿಸಿದ್ದಾರೆ. ಕಡಿಮೆಯಾದ ವಿದೇಶಿ ಪ್ರಯಾಣ ಎಂದರೆ ಕಡಿಮೆ ಆಕ್ಯುಪೆನ್ಸಿ ಮತ್ತು ಸಂಬಂಧಿತ ಸೇವೆಗಳಿಗೆ ದುರ್ಬಲ ಬೇಡಿಕೆಯಾಗಿದೆ.

ಪೆಟ್ರೋಲಿಯಂ ಮತ್ತು ಇಂಧನ ಸಂಬಂಧಿತ ವಲಯಗಳು: ಇಂಧನ ಬಳಕೆ ಕಡಿಮೆ ಮಾಡುವುದು, ಸಾರ್ವಜನಿಕ ಸಾರಿಗೆ ಹೆಚ್ಚಾಗುವುದು ಮತ್ತು ಮನೆಯಿಂದ ಕೆಲಸ ಮಾಡುವ ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸುವುದು ತೈಲ ಉತ್ಪನ್ನಗಳಿಗೆ ಬೇಡಿಕೆ ಕಡಿಮೆಯಾಗುವುದನ್ನು ಸೂಚಿಸುತ್ತದೆ. ಪೆಟ್ರೋಲಿಯಂ ಕಂಪನಿಗಳ ಷೇರುಗಳ ಕುಸಿತದಲ್ಲಿ ಇದು ಪ್ರತಿಧ್ವನಿಸಿದೆ. ಹೂಡಿಕೆದಾರರು ನಿಧಾನಗತಿಯ ಬೆಳವಣಿಗೆಯ ನಿರೀಕ್ಷೆಯಿಂದಾಗಿ ಮಾರುಕಟ್ಟೆ ವಹಿವಾಟಿನಲ್ಲಿ ಕುಸಿತ ಕಂಡುಬಂದಿದೆ.

ರಸಗೊಬ್ಬರ ಮತ್ತು ಖಾದ್ಯ ಅಗತ್ಯ ವಸ್ತುಗಳು: ಆಮದುಗಳನ್ನು ಕಡಿಮೆ ಮಾಡುವ ಭಾಗವಾಗಿ ಖಾದ್ಯ ತೈಲ ಮತ್ತು ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಕಡಿತಗೊಳಿಸುವ ಬಗ್ಗೆಯೂ ಪ್ರಧಾನಿ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ. ಮೋದಿ ಸಲಹೆಗಳು ನಿಯಂತ್ರಣಕ್ಕಿಂತ ಹೆಚ್ಚಾಗಿ, ನೀತಿ ಮಾರ್ಗದರ್ಶನವಾಗಿದ್ದರೂ, ಈ ಆಮದುಗಳಲ್ಲಿ ಒಳಗೊಂಡಿರುವ ವಲಯಗಳಲ್ಲಿ ಎಚ್ಚರಿಕೆಯ ವ್ಯಾಪಾರ ಯೋಜನೆ ಮತ್ತು ನಿಧಾನಗತಿಯ ಬೆಳವಣಿಗೆಯ ನಿರೀಕ್ಷೆಗಳನ್ನು ನೋಡಬಹುದಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com