ಹಗಲು ಹೊತ್ತು ಟೈಲರ್, ರಾತ್ರಿ ಹೊತ್ತು ಮರ್ಡರ್: 33 ಕೊಲೆ ಮಾಡಿರೋ ರೀತಿ ಕೇಳಿದ್ರೆ ಎದೆ ನಡುಗುತ್ತೆ!

Published: 12 Sep 2018 06:02 PM IST | Updated: 12 Sep 2018 06:16 PM IST
ಸಂಗ್ರಹ ಚಿತ್ರ
ಭೋಪಾಲ್: ಈತ ನೋಡೋಕೆ ಸಾಮಾನ್ಯ ಟೈಲರ್ ಆದರೆ ಈತ ಮಾಡಿದ ಹತ್ಯೆಗಳನ್ನು ಕಂಡರೆ ಬೆಚ್ಚಿ ಬೀಳುತ್ತೀರಾ. 

ಹೌದು, ಕಳೆದ ವಾರ ಮಧ್ಯಪ್ರದೇಶದ ಪೊಲೀಸರು ಭೋಪಾಲ್ ನಲ್ಲಿ ಟೈಲರ್ ವೃತ್ತಿ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಸಣ್ಣ ಕ್ರಿಮಿನಲ್ ಕೇಸ್ ಆರೋಪದಡಿ ಬಂಧಿಸಿದ್ದು ವಿಚಾರಣೆ ವೇಳೆ ಆತ ಹೇಳಿದ ಮಾತುಗಳನ್ನು ಕೇಳಿ ತನಿಖಾಧಿಕಾರಿಗಳೇ ಬೆಚ್ಚಿ ಬಿದ್ದಿದ್ದಾರೆ. 

48 ವರ್ಷದ ಆದೇಶ್ ಖುಮ್ರಾ ಹಗಲು ಹೊತ್ತು ಟೈಲರ್ ಕೆಲಸ ಮಾಡುತ್ತಿದ್ದ. ರಾತ್ರಿ ಈತ ಸೀರಿಯಲ್ ಕಿಲ್ಲರ್, ಕಳೆದ 8 ವರ್ಷಗಳಲ್ಲಿ ಸುಮಾರು 33 ಕೊಲೆಗಳನ್ನು ಮಾಡಿದ್ದಾನೆ. ಆದೇಶ್ ಕಾಂಟ್ರಾಕ್ಟ್ ಮೇಲೂ ಕೊಲೆ ಮಾಡುತ್ತಿದ್ದನಂತೆ. ಈತ ಅಂತರಾಜ್ಯ ಗ್ಯಾಂಗ್ ಜೊತೆ ಕಾರ್ಯನಿರ್ವಹಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. 

ಹಣ ಮಾಡಬೇಕು ಎಂಬ ದುರಾಸೆಗೆ ಬಿದ್ದ ಆದೇಶ್ ರಸ್ತೆ ಬದಿ ವಿಶ್ರಾಂತಿಗಾಗಿ ನಿಲ್ಲಿಸುತ್ತಿದ್ದ ಲಾರಿ ಚಾಲಕರನ್ನು ಪರಿಚಯ ಮಾಡಿಕೊಂಡು, ಉಟದಲ್ಲಿ ನಿದ್ದೆ ಮಾತ್ರೆ ಹಾಕಿಕೊಡುತ್ತಿದ್ದ. ಚಾಲಕರು ನಿದ್ರೆಗೆ ಜಾರಿದ ಮೇಲೆ ನಿರ್ಜನ ಪ್ರದೇಶಕ್ಕೆ ಲಾರಿಯನ್ನು ತಂದು ತನ್ನ ಸಂಗಡಿಗರ ಜೊತೆ ಚಾಲಕರನ್ನು ಹತ್ಯೆಗೈದು, ಶವವನ್ನು ಕಾಡುಗಳಲ್ಲಿ ಎಸೆಯುತ್ತಿದ್ದರು. 

ಹೀಗೆ ಕಳೆದ 8 ವರ್ಷಗಳಲ್ಲಿ 33 ಕೊಲೆಗಳನ್ನು ಮಾಡಿದ್ದಾರೆ. ಕಳೆದ ಆಗಸ್ಟ್ 12ರಂದು 50 ಟನ್ ಕಬ್ಬಿಣದ ಸರಳು ತುಂಬಿದ್ದ ಲಾರಿಯೊಂದು ಭೋಪಾಲ್ ನ ಮಂದೀಪ್ ಕೈಗಾರಿಕಾ ಪ್ರದೇಶದತ್ತ ಹೊರಟಿತ್ತು. ಆದರೆ ಈ ಲಾರಿ ನಾಪತ್ತೆಯಾಗಿರುವುದಾಗಿ ಮಾಲೀಕರು ದೂರು ದಾಖಲಿಸಿದ್ದರು. ತನಿಖೆ ಆರಂಭಿಸಿದ್ದ ಪೊಲೀಸರಿಗೆ ಲಾರಿ ಚಾಲಕ ಮುಖಾನ್ ಸಿಂಗ್ ಶವ ಬಿಲ್ಖರಿಯಾ ಪ್ರದೇಶದಲ್ಲಿ ಸಿಕ್ಕಿತ್ತು. ಅಲ್ಲದೆ ಆಗಸ್ಟ್ 15ರಂದು ಭೋಪಾಲ್ ನ ಅಯೋಧ್ಯಾ ನಗರ್ ಸಮೀಪ ಲಾರಿ ಪತ್ತೆಯಾಗಿದ್ದು ಅದರಲ್ಲಿದ್ದ ಕಬ್ಬಿಣದ ಸರಳು ನಾಪತ್ತೆಯಾಗಿತ್ತು. 

ಇದೇ ವೇಳೆ ಪೊಲೀಸರು ಕಬ್ಬಿಣದ ಸರಕುಗಳನ್ನು ಮಾರಾಟ ಮಾಡುತ್ತಿದ್ದ ಏಳು ಜನರ ಗುಂಪನ್ನು ಬಂಧಿಸಿತ್ತು. ನಂತರ ವಿಚಾರಣೆ ನಡೆಸಿದಾಗ ಕೊಲೆ ಪ್ರಕರಗಳು ಬಯಲಿಗೆ ಬಂದಿವೆ.
Posted by: VS | Source: The New Indian Express

ಈ ವಿಭಾಗದ ಇತರ ಸುದ್ದಿ