ವಂಚನೆಯ ಹಣ 3,250 ಕೋಟಿ ರು. ವಿದೇಶಿ ಡಮ್ಮಿ ಕಂಪನಿಗಳಿಗೆ ವರ್ಗಾಯಿಸಿದ ಚೋಕ್ಸಿ

Published: 12 Sep 2018 12:58 AM IST | Updated: 12 Sep 2018 01:01 AM IST
ಮೆಹುಲ್ ಚೋಕ್ಸಿ
ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್ ಬಿ)ಗೆ ಸಾವಿರಾರು ಕೋಟಿ ವಂಚನೆ ಮಾಡಿ ಆ್ಯಂಟಿಗುವಾ ಹಾಗೂ ಬರ್ಬುಡದಲ್ಲಿ ತಲೆ ಮರೆಸಿಕೊಂಡಿರುವ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ, ಬ್ಯಾಂಕ್ ಗೆ ವಂಚಿಸಿದ್ದ ಹಣದಲ್ಲಿ 3,250 ಕೋಟಿ ರುಪಾಯಿಯನ್ನು ವಿದೇಶದಲ್ಲಿ ಹೂಡಿಕೆ ಮಾಡಿರುವುದನ್ನು ಜಾರಿ ನಿರ್ದೇಶನಾಲಯ(ಇಡಿ) ಪತ್ತೆ ಹಚ್ಚಿದೆ.

ಮೆಹುಲ್ ಚೋಕ್ಸಿ ವಂಚನೆಯ ಹಣವನ್ನು ಅಮೆರಿಕ, ಥಾಯ್ಲೆಂಡ್, ಬೆಲ್ಜಿಯಂ, ಯುಎಇ, ಇಟಲಿ, ಜಪಾನ್ ಮತ್ತು ಹಾಂಕಾಂಗ್ ನಲ್ಲಿರುವ ಡಮ್ಮಿ ಕಂಪನಿಗಳಿಗೆ ವರ್ಗಾಯಿಸಿದ್ದಾರೆ ಎಂದು ಇಡಿ ತಿಳಿಸಿದೆ.

ಚೋಕ್ಸಿ ವೈಯಕ್ತಿಕವಾಗಿ ಹಣ ಬಳಕೆ ಮತ್ತು ವರ್ಗಾವಣೆಗಾಗಿ ನಕಲಿ ಕಂಪನಿಗಳ ಹೆಸರುಗಳನ್ನು ಬಳಸುತ್ತಿದ್ದರು. ಈ ಕಂಪನಿಗಳ ಹೆಸರಿನಲ್ಲಿ ಮಾರಾಟ ಮತ್ತು ಖರೀದಿ ಬಿಲ್ ಗಳನ್ನು ಸೃಷ್ಟಿಸಲಾಗುತ್ತಿತ್ತು. ಆದರೆ ಭೌತಿಕವಾಗಿ ಯಾವುದೇ ಉತ್ಪನ್ನಗಳ ವಹಿವಾಟು ನಡೆಯುತ್ತಿರಲಿಲ್ಲ. ಬ್ಯಾಂಕ್ ಗಳಿಂದ ಹೆಚ್ಚಿನ ಸಾಲ ಸೌಲಭ್ಯ ಪಡೆಯಲು ಚೋಕ್ಸಿ ಈ ರೀತಿಯ ಕುತಂತ್ರಗಳನ್ನು ಉಪಯೋಗಿಸುತ್ತಿದ್ದರು ಎಂದು ಇಡಿ ಆರೋಪಿಸಿದೆ.

ಪಿಎನ್ ಬಿಯಿಂದ ಪಡೆದ ಸಾಲದ ಪೌಕಿ 400 ಕೋಟಿ ರುಪಾಯಿಯನ್ನು ತನ್ನ ಸಂಬಂಧಿ ನೀರವ್ ಮೋದಿಗೆ ಹಾಗೂ 360 ಕೋಟಿ ರುಪಾಯಿಯನ್ನು ನೀರವ್ ಮೋದಿ ಅವರ ತಂದೆ ದೀಪಕ್ ಮೋದಿಗೆ ವರ್ಗಾಯಿಸಿದ್ದಾರೆ ಎಂದು ಇಡಿ ದಾಖಲಿಸಿರುವ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿದೆ.

ಚೋಕ್ಸಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 13 ಸಾವಿರ ಕೋಟಿ ರುಪಾಯಿ ವಂಚನೆ ಮಾಡಿರುವ ಆರೋಪ ಎದುರಿಸುತ್ತಿದ್ದು, ಇದೇ ಪ್ರಕರಣದಲ್ಲಿ ಉದ್ಯಮಿ ನೀರವ್ ಮೋದಿ ಪ್ರಮುಖ ಆರೋಪಿಯಾಗಿದ್ದಾರೆ.

ಇಡಿ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ಚೋಕ್ಸಿ, ನನ್ನ ವಿರುದ್ಧದ ಎಲ್ಲಾ ಆರೋಪ ಆಧಾರ ರಹಿತವಾಗಿದ್ದು, ಕಾನೂನು ಬಾಹಿರವಾಗಿ ನನ್ನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

Posted by: LSB | Source: PTI

ಈ ವಿಭಾಗದ ಇತರ ಸುದ್ದಿ