ಭಾರತ ಬಿಡುವ ಮುನ್ನ ಹಣಕಾಸು ಸಚಿವರ ಭೇಟಿ ಮಾಡಿದ್ದೆ: ವಿಜಯ್ ಮಲ್ಯ, ಹೇಳಿಕೆ ತಳ್ಳಿಹಾಕಿದ ಜೇಟ್ಲಿ

Published: 12 Sep 2018 07:36 PM IST | Updated: 12 Sep 2018 10:58 PM IST
ವಿಜಯ್ ಮಲ್ಯ
ನವದೆಹಲಿ: ನಾನು ಭಾರತ ಬಿಡುವ ಮುನ್ನ ಸಾಲದ ವಿಚಾರವಾಗಿ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೆ ಎಂದು ರಾಷ್ಟ್ರೀಯ ಬ್ಯಾಂಕ್ ಗಳಿಗೆ ಸಾವಿರಾರು ಕೋಟಿ ರುಪಾಯಿ ವಂಚಿಸಿ ಲಂಡನ್ ನಲ್ಲಿ ತಲೆ ಮರೆಸಿಕೊಂಡಿರುವ ಮದ್ಯದ ದೊರೆ ವಿಜಯ್‌ ಮಲ್ಯ ಅವರು ಬುಧವಾರ ಹೇಳಿದ್ದಾರೆ.

ಗಡಿಪಾರು ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಲಂಡನ್ ವೆಸ್ಟ್ ಮಿನಿಸ್ಟರ್ ಕೋರ್ಟ್ ಗೆ ವಿಚಾರಣೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮಲ್ಯ, ನಾನು ಭಾರತದಿಂದ ಲಂಡನ್‌ಗೆ ಹೊರಡುವ ಮುನ್ನ ಹಣಕಾಸು ಸಚಿವರನ್ನು ಭೇಟಿ ಮಾಡಿ, ಪ್ರಕರಣ ಇತ್ಯರ್ಥ ಪಡಿಸಲು ಇಚ್ಛೆ ವ್ಯಕ್ತಪಡಿಸಿದ್ದೆ. ಅಲ್ಲದೆ ಬ್ಯಾಂಕ್‌ಗಳಿಗೆ ಸಲ್ಲಿಸಿದ್ದ ಮನವಿಗಳನ್ನು ತಿರಸ್ಕರಿಸಲಾಗಿತ್ತು ಎಂದಿದ್ದಾರೆ.

ಸಾಲ ಪಡೆದ ಎಲ್ಲ ಬ್ಯಾಂಕ್‌ ಜತೆ ಮಾತುಕತೆ ನಡೆಸಿ, ಸಾಲದ ವಿಚಾರದಲ್ಲಿ ಆಗಿರುವ ಸಮಸ್ಯೆಗಳನ್ನು ಇತ್ಯರ್ಥ ಪಡಿಸಲು ಮುಂದಾಗಿದ್ದೆ. ಕರ್ನಾಟಕ ಹೈಕೋರ್ಟ್‌ಗೂ ಈ ಬಗ್ಗೆ ಮಾಹಿತಿ ನೀಡಿದ್ದಾಗಿ ವಿಜಯ್ ಮಲ್ಯ ಹೇಳಿದ್ದಾರೆ. 

ವಿಜಯ್ ಮಲ್ಯ ಅವರು ನೇರವಾಗಿ ಅರುಣ್ ಜೇಟ್ಲಿ ಅವರ ಹೆಸರು ಹೇಳಿಲ್ಲ. ಆದರೆ ಮಲ್ಯ 2016ರಲ್ಲಿ ದೇಶ ತೊರೆದಿದ್ದು, ಈ ವೇಳೆ ಅರುಣ್ ಜೇಟ್ಲಿ ಅವರೇ ಹಣಕಾಸು ಸಚಿವರಾಗಿದ್ದರು. 

ಮಲ್ಯ ಹೇಳಿಕೆ ತಳ್ಳಿಹಾಕಿದ ಜೇಟ್ಲಿ
ವಿಜಯ್ ಮಲ್ಯ ಅವರ ಹೇಳಿಕೆಯನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.

ನಾನು 2014ರಿಂದ ವಿಜಯ್ ಮಲ್ಯ ಅವರ ಭೇಟಿಗೆ ಯಾವುದೇ ಸಮಯ ಕೊಟ್ಟಿಲ್ಲ. ಹೀಗಾಗಿ ಭೇಟಿ ಮಾಡುವ ಪ್ರಶ್ನೆಯೇ ಬರುವುದಿಲ್ಲ. ಮಲ್ಯ ಹೇಳಿಕೆ ಸುಳ್ಳು. ಇದರಿಂದ ಸತ್ಯ ಮರೆಮಾಚಲು ಸಾಧ್ಯವಿಲ್ಲ ಎಂದು ಜೇಟ್ಲಿ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ಆದಾಗ್ಯೂ, ರಾಜ್ಯಸಭಾ ಸದಸ್ಯರಾಗಿದ್ದ ವಿಜಯ್ ಮಲ್ಯ ಅವರು ಒಂದು ದಿನ ಕಲಾಪ ಮುಗಿದ ಬಳಿಕ ನಾನು ನನ್ನ ಕೋಣೆ ಹೋಗುತ್ತಿದ್ದಾಗ ಅವರು ನನ್ನನ್ನು ತಡೆದು ಸೆಟ್ಲಮೆಂಟ್ ಪ್ರಸ್ತಾಪ ಮಾಡಿದ್ದರು. ಆದರೆ ನಾನು ಅವರೊಂದಿಗೆ ಮಾತುಕತೆ ಮುಂದುವರೆಸದೆ, ಬ್ಯಾಂಕ್ ಗಳೊಂದಿಗೆ ಇತ್ಯರ್ಥ ಮಾಡಿಕೊಳ್ಳಿ ಎಂದು ಹೇಳಿದ್ದೆ. ಅಲ್ಲದೆ ಅವರ ಬಳಿ ಇದ್ದ ಪೇಪರ್ ಗಳನ್ನು ಸಹ ನಾನು ಸ್ವೀಕರಿಸಲಿಲ್ಲ ಎಂದು ಜೇಟ್ಲಿ ಹೇಳಿದ್ದಾರೆ.
Posted by: LSB | Source: PTI

ಈ ವಿಭಾಗದ ಇತರ ಸುದ್ದಿ