ಬೆಂಗಳೂರು: ಕೊಪ್ಪಳ ಜಿಲ್ಲಾಧಿಕಾರಿ ಮೇಲೆ ಪ್ರಭಾವ ಬೀರಿದ್ದಲ್ಲದೆ, ಅವರ ವರ್ಗಾವಣೆಗೆ ಕಾರಣರಾದ ಆರೋಪ ಎದುರಿಸುತ್ತಿರುವ ಸಚಿವ ಶಿವರಾಜ್ ತಂಗಡಗಿ ಅವರನ್ನು ಸಂಪುಟದಿಂದ ಕೈಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ತಂಗಡಗಿ ವಿರುದ್ಧದ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಕೊಪ್ಪಳ ಜಿಲ್ಲಾಧಿಕಾರಿ ತುಳಸಿ ವರ್ಗಾವಣೆಗೆ ಯಾರ ಒತ್ತಡವೂ ಇರಲಿಲ್ಲ. ಅವರು ಅಲ್ಲಿ ಎರಡು ವರ್ಷ ಅವಧಿ ಪೂರೈಸಿದ್ದರು. ಹೀಗಾಗಿ ಸಾಮಾನ್ಯ ವರ್ಗಾವಣೆಯಂತೆ ಅವರನ್ನು ಅಲ್ಲಿಂದ ತೆರವುಗೊಳಿಸಲಾಗಿದೆ ಎಂದರು. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಶಿವರಾಜ್ ತಂಗಡಗಿ ಅವರ ಸಹೋದರ ಕಾನೂನು ಉಲ್ಲಂಘಿಸಿ ಮನೆ ನಿರ್ಮಿಸಿದ್ದರೆ ಮತ್ತು ಈ ವಿಚಾರದಲ್ಲಿ ತಂಗಡಗಿ ತಪ್ಪು ಮಾಡಿದ್ದರೆ ಈಗಿನ ಜಿಲ್ಲಾಧಿಕಾರಿಗಳು ಕಾನೂನು ರೀತಿ ಕ್ರಮ ಕೈಗೊಳ್ಳುತ್ತಾರೆ. ಇದರಲ್ಲಿ ಸರ್ಕಾರ ಮಧ್ಯೆ ಪ್ರವೇಶಿಸುವುದಿಲ್ಲ ಎಂದು ತಿಳಿಸಿದರು. ಅಗ್ಗದ ಮದ್ಯ ಆರಂಭಿಸುವ ವಿಚಾರದಲ್ಲಿ ಸರ್ಕಾರ ಮದ್ಯದ ಲಾಬಿಗೆ ಮಣಿದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಲಾಬಿಗೆ ಮಣಿದು ತೀರ್ಮಾನ ಕೈಗೊಂಡಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಎಚ್.ಡಿ. ಕುಮಾರಸ್ವಾಮಿ ಮಾಡಿದ ಆರೋಪದ ಕುರಿತು ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು.
ಸಾಲ ಮನ್ನಾಗೆ ಆಗ್ರಹ: ಈ ಮಧ್ಯೆ 50ಕ್ಕೂ ಹೆಚ್ಚು ರೈತರನ್ನೊಳಗೊಂಡ ರೈತರ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ, ರೈತರ ಕೃಷಿ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿತು. ಸುಮಾರು 25 ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಮುಂದಿಟ್ಟಿರುವ ನಿಯೋಗ, ಬೆಳೆ ವಿಮೆ ಯೋಜನೆಯ ನ್ಯೂನತೆ ಸರಿಪಡಿಸಬೇಕು ಎಂದು ಒತ್ತಾಯಿಸಿತು.