ಸಚಿವ ಸ್ಥಾನಕ್ಕೆ ಎಂಟಿಬಿ ನಾಗರಾಜ್, ಶಿವಳ್ಳಿ ಲಾಬಿ: ಆರ್.ಶಂಕರ್, ಜಯಮಾಲಾಗೆ ಸಂಪುಟದಿಂದ ಕೊಕ್?

ಬಹುನಿರೀಕ್ಷೆಯ ಸಂಪುಟ ವಿಸ್ತರಣೆ ಡಿಸೆಂಬರ್ 22ರಂದು ನಡೆಯಲಿದ್ದು, ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ...
ಜಯಮಾಲಾ ಮತ್ತು ಆರ್ ಶಂಕರ್
ಜಯಮಾಲಾ ಮತ್ತು ಆರ್ ಶಂಕರ್
ಬೆಂಗಳೂರು: ಬಹುನಿರೀಕ್ಷೆಯ ಸಂಪುಟ ವಿಸ್ತರಣೆ ಡಿಸೆಂಬರ್ 22ರಂದು ನಡೆಯಲಿದ್ದು, ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಸಂಪುಟ ವಿಸ್ತರಣೆ ಮೇಲಿಂದ ಮೇಲೆ ಮುಂದೂಡಿಕೆ ಆಗುತ್ತಿರುವುದರಿಂದ ಶಾಸಕರಲ್ಲಿ ಅತೃಪ್ತಿ ಇತ್ತು. ಸಿಎಲ್‌ಪಿ ಸಭೆಯಲ್ಲಿ ಈ ಅಸಮಾಧಾನ ಸ್ಫೋಟಗೊಳ್ಳಬಹುದು ಎಂಬ ಆತಂಕವಿತ್ತು. ಆದರೆ, ಸಭೆಯ ಪ್ರಾರಂಭದಲ್ಲೇ ಮಾತನಾಡಿದ ಸಿಎಲ್‌ಪಿ ನಾಯಕರೂ ಆಗಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಸಂಪುಟ ವಿಸ್ತರಣೆ ಬಗ್ಗೆ ಖಚಿತಪಡಿಸಿದರು. ಜತೆಗೆ ಪುನಾರಚನೆಯ ಕುರಿತೂ ಪ್ರಸ್ತಾಪಿಸಿದ್ದಾರೆ. ಹಾಗಾಗಿ ಶಾಸಕರ ಕೋಪ ತಣ್ಣಗಾಗುವಂತಾಯಿತು ಎನ್ನಲಾಗಿದೆ. 
ಮಾಜಿ ಸಚಿವ ಎಂ ಬಿ ಪಾಟೀಲ್ ಸೇರಿದಂತೆ ಉತ್ತರ ಕರ್ನಾಟಕದ ಹಲವು ಮಂದಿ ಸಚಿವಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದಾರೆ.  ಕಾಂಗ್ರೆಸ್ ತನ್ನ ಬಳಿ ಉಳಿಸಿಕೊಂಡಿರುವ 6 ಸ್ಥಾನಕ್ಕೂ ಸಚಿವರನ್ನು ಆಯ್ಕೆ ಮಾಡಲಿದೆ. ಆದರೆ ಜೆಡಿಎಸ್ ಮಾತ್ರ ತನ್ನ ಪಾಲಿನ ಎರಡು ಸ್ಥಾನಗಳಲ್ಲಿ ಒಂದನ್ನು ಹಾಗೆ ಇರಿಸಿಕೊಂಡು ಒಂದು ಸ್ಥಾನವನ್ನು ಭರ್ತಿ ಮಾಡುವ ಸಾಧ್ಯತೆ ಇದೆ. 
ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ,  ರಮೇಶ್ವರ್‌, ದಿನೇಶ್‌ ಗುಂಡೂರಾವ್‌ ಸೇರಿದಂತೆ ರಾಜ್ಯ ಕಾಂಗ್ರೆಸ್‌ನ ಪ್ರಮುಖರು ಡಿ.20ರಂದೇ ದಿಲ್ಲಿಗೆ ಹೊರಡಲಿದ್ದಾರೆ. ಜಿಲ್ಲೆ, ಜಾತಿ ಪ್ರಾತಿನಿಧ್ಯ ಆಧರಿಸಿ ಸಂಭಾವ್ಯ ಸಚಿವರ ಪಟ್ಟಿಯನ್ನು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ನೇತೃತ್ವದಲ್ಲಿ ತಯಾರಿಸಲಾಗುತ್ತದೆ. ಆ ಬಳಿಕ ಹೈಕಮಾಂಡ್‌ನೊಂದಿಗೆ ಚರ್ಚಿಸಲಾಗುತ್ತದೆ. ನಂತರ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಜತೆಗೆ ಚರ್ಚಿಸಿ ಅಂತಿಮ ತೀರ್ಮಾನಕ್ಕೆ ಬರಲಾಗುತ್ತದೆ. 
ಜೊತೆಗೆ ಸಂಪುಟದಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾ, ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಸಚಿವ ಆರ್.ಶಂಕರ್, ಅವರನ್ನು ಕೈ ಬಿಡುವ ಸಾಧ್ಯತೆಯಿದ್ದು, ಆ ಸ್ಥಾನಗಳಿಗೆ ಕುರುಬ ಸಮುದಾಯದವರಾದ ಎಂಟಿಬಿ ನಾಗರಾಜ್ ಮತ್ತು ಶಿವಳ್ಳಿ ಅವರನ್ನು ಸೇರ್ಪಡೆ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com