ಸುಭಾಷ್ ರಾಠೋಡ್ ಪರ ಖರ್ಗೆ ಒಲವು: ಸಿದ್ದರಾಮಯ್ಯ ಮೊರೆ ಹೋದ ಇತರೆ ಆಕಾಂಕ್ಷಿಗಳು

ಚಿಂಚೋಳಿ ಉಪಚುನಾವಣೆಗೆ ಕಾಂಗ್ರೆಸ್‍ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿದೆ. ಮಾಜಿ ಸಚಿವ ಸುಭಾಷ್ ರಾಠೋಡ್ ಪರ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ...
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ
ಬೆಂಗಳೂರು: ಚಿಂಚೋಳಿ ಉಪಚುನಾವಣೆಗೆ ಕಾಂಗ್ರೆಸ್‍ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿದೆ. ಮಾಜಿ ಸಚಿವ ಸುಭಾಷ್ ರಾಠೋಡ್ ಪರ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಒಲವು ವ್ಯಕ್ತಪಡಿಸಿದ್ದು, ರಾಠೋಡ್‍ಗೆ ಟಿಕೆಟ್ ನೀಡದಂತೆ ಅಪಸ್ವರ ಕೇಳಿಬಂದಿವೆ. ಸಮಸ್ಯೆ ಪರಿಹರಿಸುವಂತೆ ಇತರೆ ಆಕಾಂಕ್ಷಿಗಳು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮೊರೆ ಹೋಗಿದ್ದಾರೆ.
ಗುರುವಾರ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಚಿಂಚೋಳಿ ಕ್ಷೇತ್ರದ ನಾಯಕರು, ಪಕ್ಷದ ಮುಖಂಡರ ಜೊತೆ ಚುನಾವಣೆ ಸಂಬಂಧ ಸಭೆ ನಡೆಸಿದ್ದರು. ಬಾಬುರಾವ್ ಚವ್ಹಾಣ್, ಸುಭಾಷ್ ರಾಠೋಡ್ ಇಬ್ಬರ ಹೆಸರನ್ನು ಅಂತಿಮಗೊಳಿಸಿದ್ದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಅಭ್ಯರ್ಥಿ ಆಯ್ಕೆ ವಿಚಾರವನ್ನು ಕಲಬುರಗಿ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರ ವಿವೇಚನೆಗೆ ಬಿಟ್ಟಿದ್ದರು.
ಬಾಬುರಾವ್ ಚವ್ಹಾಣ್, ಸುಭಾಷ್ ರಾಠೋಡ್, ಜಯಸಿಂಗ್ ಧರ್ಮಸಿಂಗ್ ರಾಠೋಡ್ , ಬಾಬುಹೊನ್ನಾ ನಾಯಕ್ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಈ ಆಕಾಂಕ್ಷಿಗಳೆಲ್ಲ ಇಂದು ಮಲ್ಲಿಕಾರ್ಜುನ ಖರ್ಗೆ ಪುತ್ರ ಸಚಿವ ಪ್ರಿಯಾಂಕ್ ಖರ್ಗೆ ನಿವಾಸಕ್ಕೆ ಭೇಟಿ ಕೊಟ್ಟು ತಮ್ಮನ್ನೇ ಅಭ್ಯರ್ಥಿಯನ್ನಾಗಿ ಪರಿಗಣಿಸುವಂತೆ ಮನವಿ ಮಾಡಿದರು.
ಆಕಾಂಕ್ಷಿಗಳ ಜೊತೆ ಸಭೆ ನಡೆಸಿದ ಪ್ರಿಯಾಂಕ್ ಖರ್ಗೆ, ಸುಭಾಷ್ ರಾಠೋಡ್ ಪರ ಮಲ್ಲಿಕಾರ್ಜುನ ಖರ್ಗೆ ಒಲವು ತೋರಿರುವುದನ್ನು ಬಹಿರಂಗಪಡಿಸಿದರು.
ಸುಭಾಷ್ ರಾಠೋಡ್ ಹೆಸರಿಗೆ ಖರ್ಗೆ ಮುದ್ರೆ ಒತ್ತುತ್ತಿದ್ದಂತೆಯೇ ಇತರೆ ಆಕಾಂಕ್ಷಿಗಳು ಸಿಡಿಮಿಡಿಗೊಂಡಿದ್ದಾರೆ. ಮೂಲ ಕಾಂಗ್ರೆಸಿಗರನ್ನು ಬಿಟ್ಟು ಅನ್ಯ ಪಕ್ಷದಿಂದ ಬಂದವರಿಗೆ ಮಣೆ ಹಾಕಲಾಗುತ್ತಿದೆ ಎಂದು ಅಪಸ್ವರ ವ್ಯಕ್ತಪಡಿಸಿ, ಸಿದ್ದರಾಮಯ್ಯ ಅವರ ಮೊರೆ ಹೋಗಲು ತೀರ್ಮಾನಿಸಿದ್ದಾರೆ. 
ಉಮೇಶ್ ಜಾಧವ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡ ಬೆನ್ನಲ್ಲೇ ಸುಭಾಷ್ ರಾಠೋಡ್, ಬಾಬುರಾವ್ ಚವ್ಹಾಣ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರು. ಬಂಜಾರ ಸಮುದಾಯದ ನಾಯಕರಾದ ಇಬ್ಬರೂ ಲೋಕಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಪರ ಬಿರುಸಿನ ಪ್ರಚಾರ ನಡೆಸಿದ್ದರು. ಬಿಜೆಪಿಯಿಂದ ಕಲಬುರುಗಿ ಲೋಕಸಭೆಗೆ ಟಿಕೆಟ್ ಆಕಾಂಕ್ಷಿಯಾಗಿದ್ದ ಸುಭಾಷ್ ರಾಠೋಡ್ ಅವರನ್ನು ಕಾಂಗ್ರೆಸ್‍ನಿಂದ ಟಿಕೆಟ್ ನೀಡುವ ಭರವಸೆ ನೀಡಿ ಮಲ್ಲಿಕಾರ್ಜುನ ಖರ್ಗೆ ಪಕ್ಷಕ್ಕೆ ಕರೆತಂದಿದ್ದರು. ಹೀಗಾಗಿ ಸುಭಾಷ್ ರಾಠೋಡ್ ಅವರಿಗೆ ಟಿಕೆಟ್ ನೀಡುವಂತೆ ಹೈಕಮಾಂಡ್‍ಗೆ ಮಲ್ಲಿಕಾರ್ಜುನ ಖರ್ಗೆ ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಚಿಂಚೋಳಿ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷಕ್ಕಷ್ಟೇ ಅಲ್ಲದೇ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಪ್ರತಿಷ್ಠೆಯ ಸವಾಲಾಗಿದೆ. ಶನಿವಾರ ಅಭ್ಯರ್ಥಿ ಹೆಸರು ಅಂತಿಮಗೊಳ್ಳಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com