ದೇವರ ದಯೆಯಿಂದ ಅಧಿಕಾರಕ್ಕೆ ಬಂದಿದ್ದೇನೆ, ಸಮಯ ವ್ಯರ್ಥ ಮಾಡದೆ ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತೇನೆ: ಬಿ ಎಸ್ ಯಡಿಯೂರಪ್ಪ

ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಬೆಂಗಳೂರಿನಲ್ಲಿ ಶನಿವಾರ ಬಿಜೆಪಿ ಕಾರ್ಯಾಲಯದ ....
ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದ ಎದುರು ರಾಜ್ಯ ಬಿಜೆಪಿ ಯುವ ಮೋರ್ಚಾ ವತಿಯಿಂದ ನಡೆದ ಬಿಜೆಪಿ ಸದಸ್ಯತಾ ಅಭಿಯಾನಕ್ಕೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಚಾಲನೆ ನೀಡಿದರು.
ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದ ಎದುರು ರಾಜ್ಯ ಬಿಜೆಪಿ ಯುವ ಮೋರ್ಚಾ ವತಿಯಿಂದ ನಡೆದ ಬಿಜೆಪಿ ಸದಸ್ಯತಾ ಅಭಿಯಾನಕ್ಕೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಚಾಲನೆ ನೀಡಿದರು.
ಬೆಂಗಳೂರು: ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಬೆಂಗಳೂರಿನಲ್ಲಿ ಶನಿವಾರ ಬಿಜೆಪಿ ಕಾರ್ಯಾಲಯದ ಮುಂಭಾಗ ಬ್ಯಾನರ್‌ಗೆ ಬಣ್ಣ ಹಚ್ಚುವ ಮೂಲಕ ಚಾಲನೆ ನೀಡಿದರು. ಬಳಿಕ ನೂತನ ಸದಸ್ಯರಿಗೆ ಪಕ್ಷದ ಸದಸ್ಯತ್ವ ಪತ್ರವನ್ನು ವಿತರಿಸಿದರು.
ನಂತರ ಮಾತನಾಡಿದ ಅವರು, ಆಗಸ್ಟ್ 11ರವರೆಗೆ ಸದಸ್ಯತಾ ಅಭಿಯಾನ ನಡೆಯುತ್ತಿದೆ. ಕಳೆದ ಬಾರಿ 80 ಲಕ್ಷ ಸದಸ್ಯರಾಗಿದ್ದರು. ಈ ಬಾರಿ 50 ಲಕ್ಷ ಮಂದಿಯನ್ನು ಹೊಸ ಸದಸ್ಯರನ್ನಾಗಿಸುವ ಗುರಿ ಹೊಂದಲಾಗಿದೆ. ಈಗಾಗಲೇ 12 ಲಕ್ಷ ಸದಸ್ಯರ ನೋಂದಣೆಯಾಗಿದೆ. ಆಗಸ್ಟ್ 10 ಮತ್ತು 11ರಂದು ನಮ್ಮ ಎಲ್ಲಾ ಶಾಸಕರು ಮತ್ತು ಪಕ್ಷದ ಎಲ್ಲಾ ಪದಾಧಿಕಾರಿಗಳು ಪೂರ್ಣ ಪ್ರಮಾಣದಲ್ಲಿ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಆಗಸ್ಟ್ 6ರಂದು ತಾವು ದೆಹಲಿಗೆ ತೆರಳುತ್ತಿದ್ದು, ಅಲ್ಲಿ ರಾಜ್ಯದ ಸಂಸದರನ್ನು ಭೇಟಿ ಮಾಡಿ ರಾಜ್ಯದಲ್ಲಿ ಬಾಕಿ ಇರುವ ಎಲ್ಲಾ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸುತ್ತೇವೆ. ಆಗಸ್ಟ್ 5ರಿಂದ 8ರವರೆಗೆ ದೆಹಲಿಯಲ್ಲೇ ಇದ್ದು ಪಕ್ಷದ ಎಲ್ಲಾ ಪ್ರಮುಖರನ್ನು ಭೇಟಿ ಮಾಡುತ್ತೇನೆ ಎಂದು ಹೇಳಿದರು.
ಬಿಬಿಎಂಪಿ ಚುನಾವಣೆಗೆ ನಾವು ಈಗಿನಿಂದಲೇ ಸಿದ್ಧತೆ ನಡೆಸಬೇಕಾಗಿದೆ ಎಂದು ಹೇಳಿದ ಅವರು, ರಾಜ್ಯದ ಕೆಲವು ಭಾಗಗಳಲ್ಲಿ ಮಳೆಯಾಗಿಲ್ಲ. ಆದ್ದರಿಂದ ಕೆ.ಎಆರ್‌.ಎಸ್- ಕೊಡಗು ಪ್ರಾಂತ್ಯದಲ್ಲಿ ಮೋಡ ಬಿತ್ತನೆ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.
ದೇವರ ದಯೆಯಿಂದ ಅಧಿಕಾರಕ್ಕೆ ಬಂದಿದ್ದೇನೆ. ಒಂದು ಕ್ಷಣವೂ ವ್ಯರ್ಥ ಮಾಡದೆ ರಾಜ್ಯದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇನೆ. ಮಾಧ್ಯಮಗಳಲ್ಲಿ ಬರುವ ಜನರ ಸಮಸ್ಯೆಗಳನ್ನು ಪ್ರತಿನಿತ್ಯ ಅವಲೋಕಿಸುತ್ತೇನೆ. ಅದಕ್ಕೆ ಸ್ಪಂದಿಸಿ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ. ರಾಘವೇಂದ್ರ, ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದು, ಯಾವ ಚುನಾವಣೆಯಲ್ಲಿ ಯಾರು ಸ್ಪರ್ಧಿಸಬೇಕು ಎಂಬುದನ್ನು ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ. ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ನಾನು ಸ್ಪರ್ಧಿಸುವ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಆದರೆ ಪಕ್ಷ ಯಾವುದೇ ಆದೇಶ ನೀಡಿದರೂ ನಾವು ಅದನ್ನು ಪಾಲಿಸಬೇಕಾಗುತ್ತದೆ. ಅನರ್ಹ ಶಾಸಕರು ಯಾರು ಇದುವರೆಗೆ ಬಿಜೆಪಿ ಸೇರ್ಪಡೆಯಾಗುವುದಾಗಿ ಹೇಳಿಲ್ಲ. ಅವರ ಸೇರ್ಪಡೆ ಆಗಬೇಕೋ ಬೇಡವೋ ಎಂಬುದನ್ನು ಈಗಲೇ ಚರ್ಚಿಸುವುದು ಅಪ್ರಬುದ್ಧತೆಯಾಗುತ್ತದೆ. ಅನರ್ಹ ಶಾಸಕರನ್ನು ಬಿಜೆಪಿಗೆ ಸೇರಿಸಿಕೊಳ್ಳಬಾರದು ಎಂದು ಯಾರೂ ಒತ್ತಾಯ ಮಾಡಿಲ್ಲ. ಅನರ್ಹ ಶಾಸಕರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುವ ಮೊದಲು ಕಾರ್ಯಕರ್ತರು ಮತ್ತು ಪ್ರಮುಖರು ಅಭಿಪ್ರಾಯ ಪಡೆಯುವುದು ನಿಶ್ಚಿತ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್, ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ. ರಾಘವೇಂದ್ರ, ಶಾಸಕರಾದ ಎಸ್‌.ಆರ್. ವಿಶ್ವನಾಥ್, ಡಾ.ಅಶ್ವತ್ಥ್ ನಾರಾಯಣ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ತಮ್ಮೇಶ್ ಗೌಡ, ನಗರ ಯುವ ಮೋರ್ಚಾ ಅಧ್ಯಕ್ಷ ಸಪ್ತಗಿರಿ ಗೌಡ ಮುಂತಾದವರು ಭಾಗವಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com