370ನೇ ವಿಧಿ ರದ್ದಾಯ್ತು, ಇನ್ನಾದ್ರೂ ದೇಶದ ಆರ್ಥಿಕತೆಯತ್ತ ನೋಡಿ: ಮೋದಿ ವಿರುದ್ಧ ಸಿದ್ದರಾಮಯ್ಯ ಕಿಡಿ

ಜಮ್ಮು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ, 370ನೇ ವಿಧಿ ರದ್ದಾಯಿತು, ಇನ್ನಾದರೂ ದೇಶದ ಆರ್ಥಿಕತೆಯತ್ತ ಗಮನ ಹರಿಸಿ ಪ್ರಧಾನಿಗಳೇ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಳಿದ್ದಾರೆ.

Published: 06th August 2019 12:00 PM  |   Last Updated: 06th August 2019 09:55 AM   |  A+A-


ಸಿದ್ದರಾಮಯ್ಯ

Posted By : RHN RHN
Source : Online Desk
ಬೆಂಗಳೂರು: ಜಮ್ಮು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ, 370ನೇ ವಿಧಿ ರದ್ದಾಯಿತು, ಇನ್ನಾದರೂ ದೇಶದ ಆರ್ಥಿಕತೆಯತ್ತ ಗಮನ ಹರಿಸಿ ಪ್ರಧಾನಿಗಳೇ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಕ್ರಮವನ್ನು ಟೀಕಿಸಿ ಅವರು ಸರಣಿ ಟ್ವೀಟ್ ಮಾಡಿದ್ದು ಕಾಶ್ಮೀರ ವಿಚಾರ ಬಿಟ್ಟು ಕುಸಿಯುತ್ತಿರುವ ದೇಶದ ಆರ್ಥಿಕತೆಯತ್ತ ಗಮನಿಸಿ ಎಂದು ವಾಗ್ದಾಳಿ ನಡೆಸಿದ್ದಾರೆ.

"ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ‍್ಥಾನಮಾನ ರದ್ದಾಯಿತಲ್ಲಾ, ಈಗಲಾದರೂ ದೇಶದ ಕುಸಿಯುತ್ತಿರುವ ಆರ್ಥಿಕ ಸ್ಥಿತಿಯ ಬಗ್ಗೆ, ಕರ್ನಾಟಕದಲ್ಲಿ ಅತೀವೃಷ್ಟಿ ಮತ್ತು ಅನಾವೃಷ್ಟಿಯಿಂದ ನರಳುತ್ತಿರುವ ಜನರ ಬಗ್ಗೆ ಸ್ವಲ್ಪ ಗಮನಹರಿಸುತ್ತೀರಾ ಪ್ರಧಾನಿ ಮೋದಿಯವರೆ?

"ಪ್ರಣಾಳಿಕೆಯಲ್ಲಿನ ಆಶ್ವಾಸನೆಯಂತೆ ಕಾಶ್ಮೀರಕ್ಕೆ‌ ನೀಡಿದ್ದ ವಿಶೇಷ ಸ್ಥಾನಮಾನ ರದ್ದು ಪಡಿಸಿದ್ದೀರಿ ಎನ್ನುತ್ತೀರಲ್ಲಾ‌ ಪ್ರಧಾನಿಗಳೇ ವಿಧಾನಸಭೆಯನ್ನು ಅಮಾನತಿನಲ್ಲಿಟ್ಟು, ರಾಜಕೀಯ ನಾಯಕರನ್ನು ಗೃಹಬಂಧನದಲ್ಲಿಟ್ಟು, ಸೈನಿಕರ ಕಾವಲು ಹಾಕಿ ಇದನ್ನು ಮಾಡ್ತೀರಿ ಎಂದು ಪ್ರಣಾಳಿಕೆಯಲ್ಲಿ ಹೇಳಿದ್ದೀರಾ?

"ಕೇಂದ್ರದಲ್ಲಿ ಬಿಜೆಪಿ ಧಿಕಾರಕ್ಕೆ ಬಂದ ನಂತರವೇ  ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಭದ್ರತಾ ಸಿಬ್ಬಂದಿ ಮತ್ತು ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗಿದ್ದಾರೆ ಎನ್ನುತ್ತಿವೆ ದಾಖಲೆಗಳು.ಇದಕ್ಕೆ ಕಾರಣ ಸಂವಿಧಾನದ 370ನೇ ವಿಧಿಯೇ? ಇಲ್ಲವೇ ಪರಿಸ‍್ಥಿತಿಯನ್ನು ನಿಯಂತ್ರಣ ಮಾಡಲಿಕ್ಕಾಗದ ನಿಮ್ಮ ಅಸಾಮರ್ಥ್ಯವೇ?

"ಪಾಕಿಸ್ತಾನದ ವಿರುದ್ಧ ಯುದ್ಧ  ಗೆದ್ದಾಗ,  ಸ್ವರ್ಣಮಂದಿರದಲ್ಲಿದ್ದ ಉಗ್ರಗಾಮಿಗಳನ್ನು ಖಾಲಿ ಮಾಡಿಸಿದಾಗ..ಶ್ರೀಮತಿ ಇಂದಿರಾಗಾಂಧಿಯವರು ರಾಜಕೀಯವಾಗಿ ಬಳಸಿಕೊಳ್ಳಲಿಲ್ಲ,ಅದು ತಮ್ಮ ಕರ್ತವ್ಯ ಎಂದು ತಿಳಿದಿದ್ದರು. ನರೇಮ್ದ್ರ ಮೋದಿಯವರೇ ನೀವ್ಯಾಕೆ  ಪ್ರತಿ ಕೆಲಸವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ತಿದ್ದೀರಿ?" ಎಂದು ಸಿದ್ದರಾಮಯ್ಯ ಸರಣಿ ಟ್ವೀಟ್ ಗಳ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
Stay up to date on all the latest ರಾಜಕೀಯ news with The Kannadaprabha App. Download now
facebook twitter whatsapp