ಎಲ್ಲಿದ್ದೀಯಪ್ಪಾ ಯಡಿಯೂರಪ್ಪ ಎಂದು ಯಾರೂ ಏಕೆ ಪ್ರಶ್ನೆ ಮಾಡುತ್ತಿಲ್ಲ?: ಎಚ್ ಡಿಕೆ

ರಾಜ್ಯದೆಲ್ಲೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ, ಜನ, ಜಾನುವಾರುಗಳು ಸಂಕಷ್ಟದಲ್ಲಿದ್ದಾರೆ. ಹಿಂದೆ ಎಲ್ಲಿದ್ದೀಯಪ್ಪ ನಿಖಿಲ್ ಎಂದು ಕೇಳುತ್ತಿದ್ದ ಜನರು ಈಗೆಲ್ಲಿದ್ದಾರೆ?...
ಎಚ್ ಡಿ ಕುಮಾರಸ್ವಾಮಿ
ಎಚ್ ಡಿ ಕುಮಾರಸ್ವಾಮಿ
ಬೆಂಗಳೂರು: ರಾಜ್ಯದೆಲ್ಲೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ, ಜನ, ಜಾನುವಾರುಗಳು ಸಂಕಷ್ಟದಲ್ಲಿದ್ದಾರೆ. ಹಿಂದೆ ಎಲ್ಲಿದ್ದೀಯಪ್ಪ ನಿಖಿಲ್ ಎಂದು ಕೇಳುತ್ತಿದ್ದ ಜನರು ಈಗೆಲ್ಲಿದ್ದಾರೆ? ಇಂತಹ ಸಂದರ್ಭದಲ್ಲಿ ಮೈತ್ರಿ ಸರ್ಕಾರವೇನಾದರೂ ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದರೆ ಮಾಧ್ಯಮಗಳಲ್ಲಿ ಏನೆಲ್ಲಾ ಬಿಂಬಿಸುತ್ತಿದ್ದರೋ ಗೊತ್ತಿಲ್ಲ. ರಾಜ್ಯಾದ್ಯಂತ ಪ್ರವಾಹ ಸ್ಥಿತಿ ಎದುರಾಗಿದೆ. ಆದರೆ ಏಕಚಕ್ರಾಧಿಪತ್ಯ ನಡೆಸುತ್ತಿರುವ ಬಿ.ಎಸ್. ಯಡಿಯೂರಪ್ಪ ಎಲ್ಲಿದ್ದಾರೆ? ಎಲ್ಲಿದ್ದೀಯಪ್ಪಾ ಯಡಿಯೂರಪ್ಪ ಎಂದು ಯಾರೂ ಅವರನ್ನು ಏಕೆ ಪ್ರಶ್ನೆ ಮಾಡುತ್ತಿಲ್ಲ? ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಇಂದು ನಗರದ ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಂಘಟನಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ, ತಾವು ಮುಖ್ಯಮಂತ್ರಿ ಆಗಿದ್ದಾಗ ರೈತರ ಸಾಲಮನ್ನಾ ಮಾಡಲು ಹಣ ತೆಗೆದಿಟ್ಟಿದ್ದೆ. ಪ್ರಧಾನಿ ಮೋದಿ ನೀಡುವ 6 ಸಾವಿರ ರೂ.ಗಳ ಜೊತೆ ತಾವೂ 4 ಸಾವಿರ ರೂ. ಹಣ ನೀಡುತ್ತೇವೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ನಾನು ಸಾಲಮನ್ನಾಕ್ಕಾಗಿ ಮೀಸಲಿಟ್ಟ ಹಣದಲ್ಲಿ ಉಳಿದಿರುವ ಹಣವನ್ನು ಅವರು ರೈತರಿಗೆ ನೀಡುವುದಾಗಿ ಘೋಷಿಸಿದ್ದಾರೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ನಾವು ಯಾವ ಪಕ್ಷದ ಜೊತೆ ಹೋರಾಟ ಮಾಡಿಕೊಂಡು ಬಂದಿದ್ದೆವೋ ಅದೇ ಪಕ್ಷದ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚಿಸಬೇಕಾದ ಅನಿವಾರ್ಯತೆಯನ್ನು ರಾಜ್ಯದ ಮತದಾರರು ತಂದಿಟ್ಟರು. ನಿಗಮ ಮಂಡಳಿಗಳಲ್ಲಿ ಅವಕಾಶ ಸಿಗುತ್ತದೆ ಎಂಬ ನಿರೀಕ್ಷೆ ನಮ್ಮ ಪಕ್ಷದ ಕಾರ್ಯಕರ್ತರಲ್ಲಿತ್ತು. ಆದರೆ, ತಾವು ಮತ್ತೊಬ್ಬರ ಮರ್ಜಿಯಲ್ಲಿ ಇದ್ದುದರಿಂದ ಕಾರ್ಯಕರ್ತರನ್ನು ಕಾಪಾಡಲು ಆಗಿಲ್ಲ ಎಂದು ತಾವು ಎದುರಿಸಿದ ಪರಿಸ್ಥಿತಿಯನ್ನು ವಿವರಿಸಿದರು.
ಅನಿವಾರ್ಯ ಕಾರಣಗಳಿಂದ ನಾನು ನೆಪ ಮಾತ್ರಕ್ಕೆ ಮುಖ್ಯಮಂತ್ರಿ ಆಗಿದ್ದೆ. ಇದರಿಂದ ತಮಗೆ ಅನುಕೂಲವಾಗಲಿದೆ ಎಂದು ಜೆಡಿಎಸ್​ ಕಾರ್ಯಕರ್ತರು ಭಾವಿಸಿದ್ದರು. ಆದರೆ ಕಾರ್ಯಕರ್ತರ ಆಶಯ ಈಡೇರಲಿಲ್ಲ. ನನ್ನನ್ನು ಬೆಳೆಸಿದ ಕಾರ್ಯಕರ್ತರು ನನ್ನಿಂದ ದೂರ ಸರಿಯುತ್ತಾ ಇದ್ದಾರೆ ಎಂದು ನೊಂದುಕೊಂಡು ಅಂದು ಪಕ್ಷದ ಕಚೇರಿಯಲ್ಲಿ ಕಣ್ಣೀರು ಹಾಕಿದ್ದೆ. ಬೇರಾವ ಕಾರಣಕ್ಕೂ ನಾನು ಕಣ್ಣೀರು ಹಾಕಿದ್ದಲ್ಲ ಎಂದು ಕಣ್ಣೀರ ಘಟನೆಯ ಬಗ್ಗೆ ಸ್ಪಷ್ಟೀಕರಣ ನೀಡಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧಿಸಿದ್ದ ನಿಖಿಲ್ ಕುಮಾರಸ್ವಾಮಿ ಗೆದ್ದೇ ಗೆಲ್ಲುತ್ತಾರೆಂದು ಕೆಲವರು ಬೆಟ್ಟಿಂಗ್ ಕಟ್ಟಿದ್ದರು. 100 ಕೋಟಿ ರೂ.ಗೂ ಹೆಚ್ಚು ಹಣ ಬೆಟ್ಟಿಂಗ್ ಕಟ್ಟಿದ್ದರು. ಆದರೆ ಚುನಾವಣೆಯಲ್ಲಿ ನಿಖಿಲ್ ಸೋತಿದ್ದರಿಂದ ಹಲವಾರು ಕುಟುಂಬಗಳು ಹೊಲ, ಮನೆ, ಆಸ್ತಿ, ವಾಹನ, ಜಾನುವಾರುಗಳನ್ನು ಕಳೆದುಕೊಂಡು ಬೀದಿಗೆ ಬಂದಿವೆ. ಇದೆಲ್ಲವನ್ನೂ ನಾನು ಗಮನಿಸಿದ್ದೇನೆ. ರೈತರ ಸಾಲಮನ್ನಾ ಒಂದೇ ಅಲ್ಲದೆ ಋಣಪರಿಹಾರ ಕಾಯ್ದೆ ಜಾರಿಗೆ ತರುವ ಮೂಲಕ ಕೃಷಿ ಕಾರ್ಮಿಕರು ಹಾಗೂ ಬಡವರ ರಕ್ಷಣೆಗೆ ಮುಂದಾಗಿದ್ದೇವೆ ಎಂದರು.
ಜುಲೈ16 ರಂದು ಋಣ ಪರಿಹಾರ ಕಾಯ್ದೆಗೆ ರಾಷ್ಟ್ರಪತಿ ಅವರು ಸಹಿಹಾಕಿದ್ದಾರೆ. ಈ ಬಗ್ಗೆ ಜನರಿಗೆ ಪಕ್ಷದಿಂದ ಜಾಹಿರಾತು ಕೊಟ್ಟು ಪ್ರಚಾರ ನೀಡಿದ್ದೇವೆ. ಸರ್ಕಾರಿ‌ ಆದೇಶ ಸಹ ಹೊರಡಿಸಿದ್ದೇವೆ. ಕಾಯ್ದೆ ಜಾರಿಗೆ ಬಂದ 90 ದಿನಗಳ ಒಳಗಾಗಿ ಉಪ ವಿಭಾಗಾಧಿಕಾರಿ ಕಚೇರಿಗೆ ಸಮಸ್ಯೆಗೆ ಒಳಗಾದವರು ಅರ್ಜಿ ಸಲ್ಲಿಸಬೇಕು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com