ಕಾಶ್ಮೀರ ಜನತೆಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು: ಕೇಂದ್ರಕ್ಕೆ ದೇವೇಗೌಡ ಆಗ್ರಹ

ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ಸಂವಿಧಾನ 370ನೇ ವಿಧಿಯಡಿ ಕಲ್ಪಿಸಲಾಗಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ನಿಷ್ಕ್ರಿಯಗೊಳಿಸಿರುವುದರಿಂದ ರಾಜ್ಯದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಬಿಕ್ಕಟ್ಟು ಉಂಟಾಗಿದೆ.
ದೇವೇಗೌಡ
ದೇವೇಗೌಡ

ಬೆಂಗಳೂರು: ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ಸಂವಿಧಾನ 370ನೇ ವಿಧಿಯಡಿ ಕಲ್ಪಿಸಲಾಗಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ನಿಷ್ಕ್ರಿಯಗೊಳಿಸಿರುವುದರಿಂದ ರಾಜ್ಯದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಬಿಕ್ಕಟ್ಟು ಉಂಟಾಗಿದೆ. ಕೇಂದ್ರ ಸರ್ಕಾರ ಕಾಶ್ಮೀರ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಇಲ್ಲವಾದರೆ ಈ ಬಿಕ್ಕಟ್ಟು ಮುಂದುವರೆಯುತ್ತದೆ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಹೇಳಿದ್ದಾರೆ.

ಇಂದು ಪಕ್ಷದ ಕಚೇರಿ ಜೆಪಿ ಭವನದಲ್ಲಿ 73ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಶ್ಮೀರದಲ್ಲಿ ಸೇನೆಯನ್ನು ದೊಡ್ಡ ಪ್ರಮಾಣದಲ್ಲಿ ನಿಯೋಜಿಸಿ ನಿರ್ಬಂಧದಲ್ಲಿ ಸ್ವಾತಂತ್ರ್ಯ ದಿನಾಚರಣೆ ಮಾಡಲಾಗಿದೆ. ಬಂಧನದಲ್ಲಿವವರನ್ನು ಕೇಂದ್ರ ಸರ್ಕಾರ ತಕ್ಷಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಅಲ್ಲಿನ ಜನರಿಗೆ ಸಹಬಾಳ್ವೆಯಿಂದ ನೆಮ್ಮದಿಯ ಬದುಕನ್ನು ಸಾಗಿಸಲು ಸರ್ಕಾರ ಅನುವು ಮಾಡಿಕೊಡಬೇಕು ಎಂದು ದೇವೇಗೌಡರು ಮನವಿ ಮಾಡಿದರು.

ಜಮ್ಮು ಕಾಶ್ಮೀರದಲ್ಲಿ ಹಿಂದೂ-ಮುಸ್ಲಿಂ ಹೆಸರಿನಲ್ಲಿ ಒಡಕು ಮೂಡದಂತೆ ಸರ್ಕಾರ ಎಚ್ಚರಿಕೆಯ ಕ್ರಮ ಕೈಗೊಳ್ಳಬೇಕಿದೆ. ಒಟ್ಟಾಗಿ, ಸುಮಧುರ ಭಾವನೆ ಮೂಡುವ ವಾತಾವರಣವನ್ನು ಮೊದಲು ಸರ್ಕಾರ ನಿರ್ಮಿಸಬೇಕಿದೆ. ಇಂತಹ ಬಿಕ್ಕಟ್ಟನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಹೆಚ್ಚು ದಿನ ಮುಂದುವರಿಸಬಾರದು. ಒಂದು ವೇಳೆ ಮುಂದುವರಿಸಿದ್ದೇ ಆದಲ್ಲಿ ಅದು ಅಪಾಯಕಾರಿಯಾಗಲಿದೆ ಎಂದು ದೇವೇಗೌಡರು ಎಚ್ಚರಿಕೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com