ದೇಶದಲ್ಲಿ ಸರ್ವಾಧಿಕಾರ ಧೋರಣೆಯ ಆಡಳಿತ: ದಿನೇಶ್ ಗುಂಡೂರಾವ್

ದೇಶದಲ್ಲಿ ಭಯ ಮತ್ತು ವೈಷಮ್ಯದ ವಾತಾವರಣ ಸೃಷ್ಟಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ.ದೇಶದ ಮೂಲ ಬುನಾದಿಯಾದ ಜಾತ್ಯತೀತ ಸಿದ್ಧಾಂತಕ್ಕೆ ಧಕ್ಕೆ ತರುವ ಕೆಲಸವನ್ನು ಕೆಲವು ಶಕ್ತಿಗಳು ಮಾಡುತ್ತಿವೆ. ಇದರ ವಿರುದ್ಧ ...
ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್

ಬೆಂಗಳೂರು: ದೇಶದಲ್ಲಿ ಭಯ ಮತ್ತು ವೈಷಮ್ಯದ ವಾತಾವರಣ ಸೃಷ್ಟಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ.ದೇಶದ ಮೂಲ ಬುನಾದಿಯಾದ ಜಾತ್ಯತೀತ ಸಿದ್ಧಾಂತಕ್ಕೆ ಧಕ್ಕೆ ತರುವ ಕೆಲಸವನ್ನು ಕೆಲವು ಶಕ್ತಿಗಳು ಮಾಡುತ್ತಿವೆ. ಇದರ ವಿರುದ್ಧ ಹೋರಾಡಲು ಮತ್ತು ಎಲ್ಲಾ ತ್ಯಾಗ ಬಲಿದಾನಕ್ಕೂಸಿದ್ಧವಾಗುವ ಸಂಕಲ್ಪವನ್ನು ಕಾಂಗ್ರೆಸ್ ಕಾರ್ಯಕರ್ತರು ಕೈಗೊಳ್ಳಬೇಕಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕರೆ ನೀಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿಂದು ಏರ್ಪಡಿಸಿದ್ದ 73ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಜಾತ್ಯತೀತ ಸಿದ್ಧಾಂತಕ್ಕೆ ಧಕ್ಕೆ ತರುವ ರೀತಿಯಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ನಡೆದುಕೊಳ್ಳುತ್ತಿದೆ. ಭಾವನಾತ್ಮಕ ವಿಷಯಗಳನ್ನು ಕೆದಕಿ, ಸುಳ್ಳು ಮಾಹಿತಿಗಳನ್ನು ಪ್ರಚುರ ಪಡಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಈ ಮೂಲಕ ಪ್ರಜಾಪ್ರಭುತ್ವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಇಲ್ಲವಾಗಿಸಲು ನಿರಂತರ ಪ್ರಯತ್ನಿಸುತ್ತಿದೆ. ಸರ್ಕಾರದ ವಿರುದ್ಧ ಮಾತನಾಡುವವರ ಧ್ವನಿಯನ್ನು ದಮನ ಮಾಡುವ, ಟೀಕೆ-ಟಿಪ್ಪಣೆ ಮಾಡುವವರನ್ನು ಹತ್ತಿಕ್ಕುವ ಪ್ರವೃತ್ತಿ ಬೆಳೆಯುತ್ತಿದೆ. ಸರ್ಕಾರದ ವಿರುದ್ಧ ಮಾತನಾಡುವ ರಾಜಕೀಯ ಪಕ್ಷಗಳನ್ನು ಹಣಿಯಲಾಗುತ್ತಿದೆ. ಆ ಪಕ್ಷಗಳ ಮುಖಂಡರನ್ನು ಮುಗಿಸುವ ಪ್ರಯತ್ನ ನಡೆಯುತ್ತಿದೆ. ಒಂದೇ ಪಕ್ಷ, ಒಂದೇ ಧರ್ಮ, ಒಂದೇ ವ್ಯವಸ್ಥೆ ಇರಬೇಕು ಎಂಬ ಕೋಮುವಾದಿ ಸಿದ್ಧಾಂತದ ಪಕ್ಷ ದೇಶದ ಚುಕ್ಕಾಣಿ ಹಿಡಿದಿರುವುದು ಅತ್ಯಂತ ಗಂಭೀರ ವಿಷಯ. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದೆ ಎಂದು ಹೇಳಿದರು.

ಎಲ್ಲಾರಿಗೂ ಸಮಾನ ಅವಕಾಶ ಸಿಗಬೇಕು, ಪ್ರಜಾಪ್ರಭುತ್ವ ಉಳಿಯಬೇಕು ಎಂಬ ಉದ್ದೇಶಕ್ಕಾಗಿ ಹೋರಾಡಿದ ಕಾಂಗ್ರೆಸ್ ಪಕ್ಷ, ದೇಶದ ಈಗಿನ ಸವಾಲನ್ನು ಬಹಳ ಧೈರ್ಯದಿಂದ ಸ್ವೀಕರಿಸಲಿದೆ. ಪಕ್ಷದ ಕಾರ್ಯಕರ್ತರು ಹೋರಾಟದ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಸ್ವಾರ್ಥದಿಂದ ಹೊರಬಂದು ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಲು ಸನ್ನದ್ಧರಾಗಬೇಕು. ದೇಶದ ಮೂಲಭೂತ ಮೌಲ್ಯಗಳ ರಕ್ಷಣೆಗೆ ಕಟಿಬದ್ಧರಾಗಬೇಕು. ನಮ್ಮ ಪೂರ್ವಜನರು ದೇಶಕ್ಕಾಗಿ ಬ್ರಿಟಿಷರ ವಿರುದ್ಧ ಮಾಡಿದ ತ್ಯಾಗ ಬಲಿದಾನದ ಮಾದರಿಯಲ್ಲಿ ನಾವು ಕೂಡ ಎಲ್ಲಾ ರೀತಿಯ ತ್ಯಾಗ, ಬಲಿದಾನ ಮಾಡುವುದಾಗಿ ಸ್ವಾತಂತ್ರ್ಯದ ಈ ದಿನದಲ್ಲಿ ನಾವು ಸಂಕಲ್ಪ ತೊಡಬೇಕು ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com