ಫೋನ್ ಕದ್ದಾಲಿಕೆ ತನಿಖೆಗೆ ಮಾಜಿ ಸಿಎಂ ಕುಮಾರಸ್ವಾಮಿ ಅಪಸ್ವರವೇಕೆ? ಶ್ರೀರಾಮುಲು ಪ್ರಶ್ನೆ

ಅತೃಪ್ತ ಶಾಸಕರಿಂದ ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರ ಸ್ವಾಮಿ ಅವರು ನಡೆಸಿರುವ ಅನೇಕರ ದೂರವಾಣಿ ಕದ್ದಾಲಿಕೆಯಂತಹ ಗಂಭೀರ ಆರೋಪದ ಬಗ್ಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ....
ಶ್ರೀರಾಮುಲು
ಶ್ರೀರಾಮುಲು

ಬಳ್ಳಾರಿ: ಅತೃಪ್ತ ಶಾಸಕರಿಂದ ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರ ಸ್ವಾಮಿ ಅವರು ನಡೆಸಿರುವ ಅನೇಕರ ದೂರವಾಣಿ ಕದ್ದಾಲಿಕೆಯಂತಹ ಗಂಭೀರ ಆರೋಪದ ಬಗ್ಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸಿಬಿಐ ತನಿಖೆಗೆ ವಹಿಸಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಇದರಿಂದ ಸತ್ಯ ಸಂಗತಿ ಹೊರ ಬರಲಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಶಾಸಕ ಬಿ ಶ್ರೀರಾಮುಲು ಹೇಳಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ಸಿಬಿಐ ತನಿಖೆ ಬಗ್ಗೆ ಕುಮಾರ ಸ್ವಾಮಿ ಅವರು ಅಪಸ್ವರ ಎತ್ತುತ್ತಿರುವುದು ಸರಿಯಲ್ಲ. ದೂರವಾಣಿ ಕದ್ದಾಲಿಕೆ ಮತ್ತು ದುರುಪಯೋಗ ವಿಚಾರದಲ್ಲಿ ಅನೇಕ ಸರ್ಕಾರಗಳು ಬಿದ್ದುಹೋಗಿವೆ. ತಮ್ಮ ಕುರ್ಚಿ ಉಳಿಸಿಕೊಳ್ಳಲು ಕುಮಾರ ಸ್ವಾಮಿ ದೂರವಾಣಿ ಕದ್ದಾಲಿಕೆ ಮಾಡಿದ್ದಾರೆ ಎಂಬ ಆರೋಪವಿದೆ. ರಾಜ್ಯವಷ್ಟೇ ಅಲ್ಲದೇ ರಾಷ್ಟ್ರ ಮಟ್ಟದ ನಾಯಕರ ದೂರವಾಣಿಯನ್ನೂ ಸಹ ಕದ್ದಾಲಿಸಿದ್ದಾರೆ ಎಂದರು.

ದೂರವಾಣಿ ಕದ್ದಾಲಿಕೆ ಯಾರೂ ಮಾಡಬಾರದು. ಇದು ತಪ್ಪು ಎಂದು ಗೊತ್ತಿದ್ದರೂ ಕುಮಾರ ಸ್ವಾಮಿ ಮತ್ತೊಂದು ತಪ್ಪು ಮಾಡಿದ್ದಾರೆ. ಕೆಲ ಅಧಿಕಾರಿಗಳು ಸಹ ಇದರಲ್ಲಿ ಭಾಗಿಯಾಗಿರುವುದು ಮತ್ತಷ್ಟು ಕಳವಳಕ್ಕೆ ಕಾರಣವಾಗಿದೆ. ಆದರೆ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿರುವುದರಲ್ಲಿ ಯಾವುದೇ ರಾಜಕೀಯ ದುರುದ್ದೇಶವಿಲ್ಲ ಎಂದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಂಪುಟದಲ್ಲಿ ತಮಗೆ ಸಚಿವ ಸ್ಥಾನ ನೀಡುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಸಚಿವ ಸ್ಥಾನ ನೀಡುವ ನಿರ್ಧಾರ ಪಕ್ಷದ ವರಿಷ್ಠರಿಗೆ ಬಿಟ್ಟಿದ್ದು ಎಂದರು.

ನರೆಯಿಂದ ಒಂದು ಲಕ್ಷ ಕೋಟಿ ರೂ ಗೂ ಹೆಚ್ಚು ಹಾನಿಯಾಗಿದೆ ಎಂದು ಮಾಜಿ ಮುಖ್ಯ ಸಿದ್ದರಾಮಯ್ಯ ಆರೋಪಿಸಿರುವುದು ಸರಿಯಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ವೈಮಾನಿಕ ಸಮೀಕ್ಷೆ ಮಾಡಿಲ್ಲ ಎಂದು ಆರೋಪಿಸುವ ಅವರು, ತಮ್ಮ ಸ್ವ ಕ್ಷೇತ್ರ ಬಾದಾಮಿಗೆ ಯಾಕೆ ಭೇಟಿ ನೀಡಿ ಪರಿಶೀಲಿಸಿಲ್ಲ. ನಿಮಗೆ ರಾಜಕೀಯ ಪುನರ್ಜನ್ಮ ನೀಡಿದ ಕ್ಷೇತ್ರವವನ್ನು ಮರೆತರೆ ಹೇಗೆ?. ಕ್ಷೇತ್ರದ ಜನ ಸಂಕಷ್ಟಕ್ಕೆ ಸಿಲುಕಿದಾಗ ಕಣ್ಣು ನೋವಾಗಿದೆ ಎಂದು ಅವರನ್ನು ನಿರ್ಲಕ್ಷ ಮಾಡಿರುವ ನೀವು, ದೆಹಲಿಗೆ ಹೋಗಿ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳುತ್ತೀರಿ. ಮತ್ತೊಂದೆಡೆ ಪಕ್ಷದ ಮುಖಂಡರ ಜತೆ ಕುಳಿತು ಬಿರಿಯಾನಿ ತಿನ್ನುತ್ತೀರಿ. ಆಗ ನಿಮ್ಮ ಕಣ್ಣಿಗೆ ಏನೂ ಆಗಿರಲಿಲ್ಲವೆ ಎಂದು ಶ್ರೀರಾಮುಲು ವ್ಯಂಗವಾಗಿ ಪ್ರಶ್ನಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com