ಕಾಂಗ್ರೆಸ್, ಬಿಜೆಪಿ ಹೊಂದಾಣಿಕೆ ರಾಜಕೀಯದಿಂದ ದೂರವಾಣಿ ಕದ್ದಾಲಿಕೆ ಸಿಬಿಐ ತನಿಖೆಗೆ: ರೇವಣ್ಣ

ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ರಾಜಕೀಯ ಹೊಂದಾಣಿಕೆ ಮಾಡಿಕೊಂಡು ದೂರವಾಣಿ ಕದ್ದಾಲಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದ್ದಾರೆ ಎಂದು ಮಾಜಿ ಸಚಿವ ಹಾಗೂ ಜೆಡಿಎಸ್ ಹಿರಿಯ ಮುಖಂಡ ಎಚ್ ಡಿ ರೇವಣ್ಣ ಆರೋಪಿಸಿದ್ದಾರೆ.
ಎಚ್ ಡಿ ರೇವಣ್ಣ
ಎಚ್ ಡಿ ರೇವಣ್ಣ

ಹಾಸನ: ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ರಾಜಕೀಯ ಹೊಂದಾಣಿಕೆ ಮಾಡಿಕೊಂಡು ದೂರವಾಣಿ ಕದ್ದಾಲಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದ್ದಾರೆ ಎಂದು ಮಾಜಿ ಸಚಿವ ಹಾಗೂ ಜೆಡಿಎಸ್ ಹಿರಿಯ ಮುಖಂಡ ಎಚ್ ಡಿ ರೇವಣ್ಣ ಆರೋಪಿಸಿದ್ದಾರೆ.

ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಸಲಹೆ ಮೇರೆಗೆ ದೂರವಾಣಿ ಕದ್ದಾಲಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿರುವುದಾಗಿ ಯಡಿಯೂರಪ್ಪ ಹೇಳಿದ್ದಾರೆ. ಇದನ್ನು ನೋಡಿದರೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಸೇರಿ ದೇವೇಗೌಡರ ಕುಟುಂಬನ್ನು ಗುರಿಯಾಗಿಸಿಕೊಂಡು ರಾಜಕೀಯ ಮಾಡುತ್ತಿರುವುದು ಸ್ಪಷ್ಟವಾಗಿದೆ ಎಂದರು.

ಈ ಹಿಂದೆ ಲೋಕಾಯುಕ್ತ, ಸಿಬಿಐ, ಐಟಿ ಸೇರಿದಂತೆ ಬೇರೆ ಬೇರೆ ಇಲಾಖೆಗಳ ತನಿಖೆ ಎದುರಿಸಿರುವ ದೇವೇಗೌಡರು, ಬಳಿಕ ಪ್ರಧಾನಿಯಾದರು. ಇಂದೂ ಅಂತಹ ತನಿಖೆಗಳನ್ನುಎರಡೂ ಪಕ್ಷದವರೂ ಸೇರಿ ಮಾಡುತ್ತಿದ್ದಾರೆ. ಏನು ಮಾಡುತ್ತಾರೆ ಮಾಡಲಿ ನೋಡೋಣ ಎಂದು ಅವರು ಸವಾಲು ಎಸೆದರು. 

ದೇವರ ಅನುಗ್ರಹದಿಂದ ಕುಮಾರಸ್ವಾಮಿ 14 ತಿಂಗಳು ರಾಜ್ಯದ ಮುಖ್ಯಮಂತ್ರಿ  ಆಗಿದ್ದರು. ಹಾಗೆಂದ ಮಾತ್ರಕ್ಕೆ ನಾವೇನು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ನಮಗೂ ಏನೂ ಮಾಡಬೇಕೆಂಬುದು ಗೊತ್ತಿದೆ. ತಾವು ಇದುವರೆಗೂ ಹಾಸನ ಜಿಲ್ಲೆಯಲ್ಲಿ ರಾಜಕೀಯ ಮಾಡುತ್ತಿದ್ದೆ. ಆದರೆ ಮುಂದಿನ ದಿನಗಳಲ್ಲಿ ಎಚ್ ಡಿ ಕುಮಾರಸ್ವಾಮಿ ಜೊತೆ ಸೇರಿ ರಾಜ್ಯಾದ್ಯಂತ ರಾಜಕೀಯ ಮಾಡುತ್ತೇನೆ. ದೇವೇಗೌಡರ ಮಕ್ಕಳು ಏನು ಎಂಬುದನ್ನು ರಾಜ್ಯದ ಜನರಿಗೆ ತೋರಿಸುತ್ತೇವೆ ಎಂದು ಎದುರಾಳಿಗಳಿಗೆ ಎಚ್ಚರಿಕೆ ನೀಡಿದರು. 
 
ಬಿಜೆಪಿಯವರು ಯಾವುದೇ ತನಿಖೆ ಮಾಡಿದರೂ ಎದುರಿಸಲು ನಾವು ಸಿದ್ದರಿದ್ದೇವೆ. ಕಳೆದ ಲೋಕಸಭಾ ಚುನಾವಣೆ ವೇಳೆ ಕೇಂದ್ರ ಸರ್ಕಾರ ನಮ್ಮ ದೂರವಾಣಿಯನ್ನು ಕದ್ದಾಲಿಕೆ ಮಾಡಿದೆ. ದೂರವಾಣಿ ಕದ್ದಾಲಿಕೆಯಿಂದಲೇ ಚುನಾವಣೆ ವೇಳೆ ನಮ್ಮ  ಬೆಂಬಲಿಗರ ಮನೆಗಳ ಮೇಲೆ ಐಟಿ ದಾಳಿ ಮಾಡಿಸಿದ್ದರು ಎಂದು ರೇವಣ್ಣ ಆರೋಪ ಮಾಡಿದರು.
 
ಹುಣಸೂರು ಮಾಜಿ ಶಾಸಕ ಎಚ್ ವಿಶ್ವನಾಥ್, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಋಣ ತೀರಿಸಬೇಕಾಗಿದೆ. ಅದಕ್ಕಾಗಿ ದೂರವಾಣಿ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ನೀಡುವಂತೆ ಆಗ್ರಹಿಸಿದ್ದರು. ಅವರ ಒತ್ತಾಯದಂತೆ ಪ್ರಕರಣವನ್ನು ಸಿಬಿಐಗೆ ನೀಡಲಾಗಿದೆ. ಎಲ್ಲಿಯೋ ಇದ್ದ ವಿಶ್ವನಾಥ್ ಅವರನ್ನು ಕುಮಾರಸ್ವಾಮಿ ಕರೆತಂದು ಶಾಸಕರನ್ನಾಗಿ  ಮಾಡಿದ್ದರು. ವಿಶ್ವನಾಥ್​ ಅವರ ಅಳಿಯನನ್ನು ಲೋಕೋಪಯೋಗಿ ಇಲಾಖೆ ಮುಖ್ಯ ಎಂಜಿನಿಯರ್ ಆಗಿ ನೇಮಕ ಮಾಡಿ ಯಡಿಯೂರಪ್ಪ ಅವರ ಋಣ ತೀರಿಸುತ್ತಿದ್ದಾರೆ ಎಂದರು. 
 
ದೂರವಾಣಿ ಕದ್ದಾಲಿಕೆ ಪ್ರಕರಣವೇ ಜೆಡಿಎಸ್​ ಪಕ್ಷಕ್ಕೆ ಭದ್ರ ಬುನಾದಿ ಆಗಲಿದೆ. ಹಿಂದಿನ ಕಾಂಗ್ರೆಸ್  ಸರ್ಕಾರ ಮತ್ತು ಬಿಜೆಪಿ ಸರ್ಕಾರ ಅವಧಿಯಲ್ಲಿ ನಡೆದ ಎಲ್ಲಾ ದೂರವಾಣಿ ಕದ್ದಾಲಿಕೆಗಳನ್ನು ತನಿಖೆ ಮಾಡಲಿ ಎಂದು ರೇವಣ್ಣ ಒತ್ತಾಯಿಸಿದರು.
 
ವಿಪಕ್ಷ ನಾಯಕಾರಾಗಿದ್ದ ಯಡಿಯೂರಪ್ಪ ಮೈತ್ರಿ ಸರ್ಕಾರದ ಬಜೆಟ್ ಅನ್ನು ಹಾಸನ, ರಾಮನಗರ ಮತ್ತು ಮಂಡ್ಯಕ್ಕೆ ಸೀಮಿತವಾದ ಆಯವ್ಯಯ ಎಂದು ಆರೋಪಿಸಿದ್ದರು. ಈಗ ಶಿಕಾರಿಪುರ ಒಂದೇ ತಾಲೂಕಿಗೆ 850 ಕೋಟಿ ರೂಪಾಯಿ ಕಾಮಗಾರಿ ಘೋಷಿಸಿದ್ದಾರೆ. ಶಿವಮೊಗ್ಗ ಜಿಲ್ಲೆಗೆ ಒಟ್ಟು 2 ಸಾವಿರ ಕೋಟಿ ಹಣ ಬಿಡುಗಡೆ ಮಾಡಿದ್ದಾರೆ. ಉತ್ತರ ಕರ್ನಾಟಕದ ಪ್ರವಾಹ ಪರಿಹಾರ ಕಾರ್ಯಕ್ಕೆ ಹಣದ ಕೊರತೆ ಇದೆ ಎನ್ನುತ್ತಾರೆ ಎಂದು ಟೀಕಿಸಿದರು. 
 
ಕೆ.ಆರ್.ಪೇಟೆ ನಾರಾಯಣಗೌಡನಿಗೆ ವಿಧಾನಸಭಾ ಚುನಾವಣೆ ವೇಳೆ ಟಿಕೆಟ್ ನೀಡುವುದು ಬೇಡ ಅವನು 420 ಎಂದು ದೇವೇಗೌಡರು ಹೇಳಿದ್ದರು. ಆದರೂ ಕುಮಾರಸ್ವಾಮಿ ವಿಶ್ವಾಸದಿಂದ ನಾರಾಯಣಗೌಡರಿಗೆ ಟಿಕೆಟ್‌ ನೀಡಿದ್ದರು. ಈಗ ದೇವೇಗೌಡರು ಹೇಳಿದ ಮಾತು ಸತ್ಯವಾಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com