ಯಡಿಯೂರಪ್ಪ ಸಂಪುಟಕ್ಕೆ ಹದಿನೇಳು ಸಚಿವರ ಸೇರ್ಪಡೆ: ಹಲವರಿಂದ ಹೊಸ ದಾಖಲೆ

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ನೇತೃತ್ವದ ಏಕ ವ್ಯಕ್ತಿ ಮಂತ್ರಿಮಂಡಲಕ್ಕೆ 25 ದಿನಗಳ ಬಳಿಕ 17 ಸಚಿವರು ಸೇರ್ಪಡೆಯಾಗುವುದರೊಂದಿಗೆ ರಾಜ್ಯ ಸಚಿವ ಸಂಪುಟ ರಚನೆಯಾಗಿದೆ. ಇದರಿಂದಾಗಿ ಸಂಪುಟ ಸದಸ್ಯರ...
ನೂತನ ಸಚಿವರೊಂದಿಗೆ ರಾಜ್ಯಪಾಲರು ಹಾಗೂ ಸಿಎಂ
ನೂತನ ಸಚಿವರೊಂದಿಗೆ ರಾಜ್ಯಪಾಲರು ಹಾಗೂ ಸಿಎಂ

ಬೆಂಗಳೂರು: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ನೇತೃತ್ವದ ಏಕ ವ್ಯಕ್ತಿ ಮಂತ್ರಿಮಂಡಲಕ್ಕೆ 25 ದಿನಗಳ ಬಳಿಕ 17 ಸಚಿವರು ಸೇರ್ಪಡೆಯಾಗುವುದರೊಂದಿಗೆ ರಾಜ್ಯ ಸಚಿವ ಸಂಪುಟ ರಚನೆಯಾಗಿದೆ. ಇದರಿಂದಾಗಿ ಸಂಪುಟ ಸದಸ್ಯರ ಸಂಖ್ಯಾಬಲ 18 ಕ್ಕೆ ಏರಿದೆ.

ಯಡಿಯೂರಪ್ಪ ಅವರ ನೂತನ ಸಂಪುಟ ಹಲವು ವಿಶೇಷತೆಗಳಿಗೆ ಕಾರಣವಾಗಿದೆ. ಜುಲೈ 26 ರಂದು ಅಸ್ತಿತ್ವಕ್ಕೆ ಬಂದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಇದೀಗ ಜೀವಕಳೆ ಬಂದಿದ್ದು, ಜನಪರ ಸಮಸ್ಯೆಗಳ ನಿವಾರಣೆಗೆ ಹಾದಿ ಸುಗಮವಾಗಿದೆ.

ಇಂದು ರಾಜಭವನದ ಗಾಜಿನ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ 17 ಶಾಸಕರು ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಮುಧೋಳ ಕ್ಷೇತ್ರದ ಶಾಸಕ ಗೋವಿಂದ ಮಕ್ತಪ್ಪ ಕಾರಜೋಳ, ಮಲ್ಲೇಶ್ವರಂನ ಡಾ ಸಿ.ಎನ್.ಅಶ್ವಥ ನಾರಾಯಣ್, ಅಥಣಿ ಕ್ಷೇತ್ರದ ಮಾಜಿ ಶಾಸಕ ಲಕ್ಷ್ಮಣ್ ಸಂಗಪ್ಪ ಸವದಿ, ಶಿವಮೊಗ್ಗ ನಗರದ ಕೆ.ಎಸ್.ಈಶ್ವರಪ್ಪ, ಪದ್ಮನಾಭನಗರದ ಆರ್. ಅಶೋಕ್, ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರದ ಜಗದೀಶ್ ಶೆಟ್ಟರ್, ಮೊಳಕಾಲ್ಮೋರು ಕ್ಷೇತ್ರದ ಬಿ. ಶ್ರೀರಾಮುಲು, ರಾಜಾಜಿನಗರದ ಎಸ್. ಸುರೇಶ್ ಕುಮಾರ್, ಗೋವಿಂದರಾಜ ನಗರ ಕ್ಷೇತ್ರದ ವಿ ಸೋಮಣ್ಣ, ಚಿಕ್ಕಮಗಳೂರು ಕ್ಷೇತ್ರದ ಸಿ. ಟಿ. ರವಿ, ಶಿಗ್ಗಾಂವಿ ಕ್ಷೇತ್ರದ ಬಸವರಾಜ ಬೊಮ್ಮಾಯಿ, ರಾಜ್ಯ ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ, ಚಿಕ್ಕನಾಯಕನಹಳ್ಳಿ ಕ್ಷೇತ್ರದ ಶಾಸಕ ಜೆ ಸಿ ಮಾಧುಸ್ವಾಮಿ, ನರಗುಂದ ಕ್ಷೇತ್ರದ ಚಂದ್ರಕಾತ ಗೌಡ ಚನ್ನಪ್ಪಗೌಡ ಪಾಟೀಲ್, ಮುಳಬಾಗಿಲು ಕ್ಷೇತ್ರದ ಹೆಚ್. ನಾಗೇಶ್, ಔರಾದ್ ಕ್ಷೇತ್ರದ ಪ್ರಭು ಚೌಹಾಣ್ ಹಾಗೂ ನಿಪ್ಪಾಣಿ ಕ್ಷೇತ್ರದ ಶಾಸಕಿ ಶಶಿಕಲಾ ಅಣ್ಣಾ ಸಾಹೇಬ್ ಜೊಲ್ಲೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ರಾಜ್ಯಪಾಲ ವಜುಭಾಯಿ ರುಢಾಭಾಯಿ ವಾಲಾ ಅವರು ಎಲ್ಲಾ ಹದಿನೇಳು ಸಚಿವರಿಗೆ ಅಧಿಕಾರ ಪದ ಮತ್ತು ಗೋಪ್ಯತಾ ಪ್ರಮಾಣ ವಚನ ಬೋಧಿಸಿದರು. 

ಬೆಳಿಗ್ಗೆ 10-30 ಗಂಟೆಗೆ ಪ್ರಾರಂಭವಾದ ಸಮಾರಂಭವು ಸುಮಾರು ಐವತ್ತು ನಿಮಿಷಗಳಲ್ಲಿ ಮುಕ್ತಾಯವಾಯಿತು.

ಎಲ್ಲಾ ಹದಿನೇಳು ಸಚಿವರೂ ಕನ್ನಡ ಭಾಷೆಯಲ್ಲಿ ಹಾಗೂ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು ಒಂದು ವಿಶೇಷವಾಗಿತ್ತು. ಅಲ್ಲದೆ ಪ್ರಭು ಚೌಹಾಣ್ ಅವರು ತಮ್ಮ ಸಾಂಪ್ರದಾಯಿಕ ಲಂಬಾಣಿ ಉಡುಗೆ ತೊಡುಗೆಯೊಂದಿಗೆ ಸಾಂಪ್ರದಾಯ ಮೆರೆದರೆ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಉಪ ಮುಖ್ಯಮಂತ್ರಿಗಳಾದ ಕೆ ಎಸ್ ಈಶ್ವರಪ್ಪ ಮತ್ತು ಆರ್ ಅಶೋಕ್ ಹಾಗೂ ವಿಧಾನ ಸಭೆ ಅಥವಾ ವಿಧಾನ ಪರಿಷತ್ ಸದಸ್ಯರೂ ಅಲ್ಲದ ಲಕ್ಷ್ಮಣ ಸವದಿ ಅವರು ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು ಈ ಬಾರಿಯ ವಿಶೇಷ.

ಮಾಜಿ ಮುಖ್ಯಮಂತ್ರಿಯಾದ ಜಗದೀಶ್ ಶೆಟ್ಟರ್ ಅವರು ಐದು ದಶಕಗಳ ದಾಖಲೆಯನ್ನು ಸರಿಗಟ್ಟಿದ್ದಾರೆ. ಬಿ.ಡಿ.ಜತ್ತಿ ಮುಖ್ಯಮಂತ್ರಿಯಾಗಿ ಬಳಿಕ ಹಣಕಾಸು ಸಚಿವರಾಗಿದ್ದರು. ಇದೀಗ ಜತ್ತಿ ಸಾಲಿಗೆ ಶೆಟ್ಟರ್ ಸೇರ್ಪಡೆಯಾಗಿದ್ದಾರೆ.

ಇನ್ನು ಮೂರು ಬಾರಿ ಶಾಸಕಿಯಾಗಿದ್ದ ಶಶಿಕಲಾ ಜೊಲ್ಲೆ ಅವರು ಪ್ರಥಮ ಬಾರಿಗೆ ಸಚಿವರಾದರೆ, 5ನೇ ಬಾರಿ ಶಾಸಕರಾಗಿರುವ ಗೋವಿಂದ ಕಾರಜೋಳ ಅವರು ಎರಡನೆ ಬಾರಿಗೆ ಸಚಿವರಾಗಿದ್ದಾರೆ.

3 ಸಲ ಗೆದ್ದು ಈಗ ಶಾಸನ ಸಭೆಗೆ ಆಯ್ಕೆಯಾಗದಿದ್ದರೂ ಲಕ್ಷ್ಮಣ ಸವದಿ ಸಂಪುಟ ಸೇರಿದ್ದಾರೆ. 

ಕೆ.ಎಸ್. ಈಶ್ವರಪ್ಪ 5 ಬಾರಿ ಶಾಸಕರಾಗಿ ಉಪ ಮುಖ್ಯಮಂತ್ರಿಯಾಗಿ ಕೆಲಸ ನಿರ್ವಹಿಸಿ ಈಗ ಮಂತ್ರಿಯಾಗಿದ್ದಾರೆ. ಮೊದಲ ಬಾರಿಗೆ ಪಕ್ಷೇತರರಾಗಿ ಆಯ್ಕೆಯಾಗಿರುವ ಎಚ್.ನಾಗೇಶ್ ಅವರಿಗೆ ಸಚಿವ ಸ್ಥಾನದ ಅದೃಷ್ಟ ಖುಲಾಯಿಸಿರುವುದು ವಿಶೇಷವಾಗಿದೆ. ಅವರು ಹಿಂದಿನ ಎಚ್.ಡಿ. ಕುಮಾರ ಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದಲ್ಲೂ ಸಚಿವರಾಗಿದ್ದರು.

17 ನೂತವ ಸಚಿವರ ಪೈಕಿ ಏಳು ಸಚಿವರು ಲಿಂಗಾಯಿತರಾಗಿದ್ದು, ಮೂವರು ಒಕ್ಕಲಿಗರು, ಮೂವರು ಎಸ್ಸಿ, ಇಬ್ಬರು ಒಬಿಸಿ ಹಾಗೂ ಎಸ್ ಟಿ ಮತ್ತು ಬ್ರಾಹ್ಮಣ ಸಮುದಾಯಕ್ಕೆ ತಲಾ ಒಂದು ಸಚಿವ ಸ್ಥಾನ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com