ಸುಪ್ರೀಂ ತೀರ್ಪು ವಿಳಂಬ ಹಿನ್ನೆಲೆ: ಅನರ್ಹ ಶಾಸಕರು ದೆಹಲಿಯತ್ತ ದೌಡು

ಅನರ್ಹ ಶಾಸಕರು ಸಲ್ಲಿಸಿರುವ ಮೇಲ್ಮನೆಯನ್ನು ತ್ವರಿತವಾಗಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ನಿರಾಕರಿಸಿರುವುದು 17 ಅನರ್ಹ ಶಾಸಕರಿಗೆ ತಲೆನೋವುಂಟು ಮಾಡಿದೆ
ರಾಜ್ಯದ ಅನರ್ಹ ಶಾಸಕರು (ಸಂಗ್ರಹ ಚಿತ್ರ)
ರಾಜ್ಯದ ಅನರ್ಹ ಶಾಸಕರು (ಸಂಗ್ರಹ ಚಿತ್ರ)

ಬೆಂಗಳೂರು:   ಅನರ್ಹ ಶಾಸಕರು ಸಲ್ಲಿಸಿರುವ ಮೇಲ್ಮನೆಯನ್ನು ತ್ವರಿತವಾಗಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ನಿರಾಕರಿಸಿರುವುದು 17 ಅನರ್ಹ ಶಾಸಕರಿಗೆ ತಲೆನೋವುಂಟು ಮಾಡಿದೆ

ಸದ್ಯಕ್ಕೆ ರಾಜಕೀಯ ಸ್ಥಿತಿ ಅತಂತ್ರವಾಗಿಯೇ ಮುಂದುವರೆಯುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ  ಅನರ್ಹ ಶಾಸಕರು ಎರಡು ತಂಡಗಳಾಗಿ ಬಿಜೆಪಿ ವರಿಷ್ಠರ ಭೇಟಿಗಾಗಿ ದೆಹಲಿಯತ್ತ ಬುಧವಾರ ಪ್ರಯಾಣ ಬೆಳೆಸಿದರು.
ಬೆಳಗಾವಿ ಭಾಗದಿಂದ ಲಕ್ಷ್ಮಣ್ ಸವದಿಗೆ ಸಚಿವ ಸ್ಥಾನ ನೀಡುವ ಮೂಲಕ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿರುವ ಬಿಜೆಪಿ-ಆರ್ ಎಸ್ ಎಸ್ ನೀತಿಗೆ ಬೆಳಗಾವಿ 'ಸಾಹುಕಾರ' ಬಣ ಸಿಡಿಮಿಡಿಗೊಂಡಿದೆ. 

ಇದೇ ಮೊದಲ ಬಾರಿಗೆ ಸಂಪುಟದಲ್ಲಿ ಜಾರಕಿಹೊಳಿ ಕುಟುಂಬಕ್ಕೆ ಸಚಿವ ಸ್ಥಾನ ನೀಡದೇ ಇರುವುದು ಅನರ್ಹ ಶಾಸಕ ನಾಯಕ ರಮೇಶ್ ಜಾರಕಿಹೊಳಿ ಕಸಿವಿಸಿಗೆ ಕಾರಣವಾಗಿದೆ. ಇದೇ ಸ್ಥಿತಿ ಇನ್ನುಳಿದ ಅನರ್ಹರನ್ನೂ ಕಾಡುತ್ತಿದೆ. ಪ್ರಮುಖ ಖಾತೆಗಳನ್ನು ನೀಡುವುದಾಗಿ ಆಪರೇಷನ್ ಕಮಲದ ಸಂದರ್ಭದಲ್ಲಿ ಬಿಜೆಪಿ ನಾಯಕರು ಯಡಿಯೂರಪ್ಪ ಅನರ್ಹ ಶಾಸಕರಿಗೆ ಭರವಸೆ ನೀಡಿದ್ದರು. ಎಲ್ಲವನ್ನೂ ಪಕ್ಕಾಮಾಡಿಕೊಂಡ ಮೇಲೆಯೇ 17 ಶಾಸಕರು ಮೈತ್ರಿ ಸರ್ಕಾರವನ್ನು ಉರುಳಿಸುವ ಕೆಲಸಕ್ಕೆ ಮುಂದಾಗಿದ್ದರು.   

ಆದರೀಗ ಬಿಜೆಪಿಯ ಹಿರಿಯ ಶಾಸಕರಿಗೆ ಸಚಿವ ಸ್ಥಾನ ನೀಡಲಾಗಿದ್ದು, ಪ್ರಮುಖ ಖಾತೆಗಳತ್ತ ಹಿರಿಯ ಸಚಿವರು ಕಣ್ಣಿಟ್ಟಿದ್ದಾರೆ. ಹೀಗಾಗಿ ತಾವು ಬೇಡಿಕೆಯಿಟ್ಟಿದ್ದ ಖಾತೆಗಳು ಕೈತಪ್ಪುವ ಆತಂಕದಲ್ಲಿ ಅನರ್ಹರು ಇದ್ದಾರೆ. ಇದಕ್ಕಾಗಿಯೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸದ್ಯಕ್ಕೆ ಖಾತೆ ಹಂಚಿಕೆಯ ಗೋಜಿಗೆ ಕೈಹಾಕುತ್ತಿಲ್ಲ ಎಂಬ ಮಾತುಗಳು  ಜಗನ್ನಾಥ ಭವನದ ಪಡಸಾಲೆಯಿಂದ ಕೇಳಿಬರುತ್ತಿವೆ.

ಆದಷ್ಟು ಬೇಗ ತಮ್ಮ ರಾಜಕೀಯ ನಡೆಯನ್ನು ಭದ್ರಪಡಿಸಿಕೊಳ್ಳುವ ತರಾತುರಿಯಲ್ಲಿರುವ ಅನರ್ಹರು ಸುಪ್ರೀಂಕೋರ್ಟ್ ತೀರ್ಪಿನತ್ತ ತಮ್ಮೆಲ್ಲ ಗಮನವನ್ನು ಕೇಂದ್ರೀಕರಿಸಿದ್ದಾರೆ. ಇನ್ನೊಂದೆಡೆ ಬಿಜೆಪಿ ಕೇಂದ್ರ ನಾಯಕರನ್ನು ಭೇಟಿ ಮಾಡಿ ಭರವಸೆಯನ್ನು ಪಡೆಯುವ ಉದ್ದೇಶವನ್ನೂ ಹೊಂದಿದ್ದಾರೆ.

ದೆಹಲಿಗೆ ತೆರಳುವ ಮುನ್ನ ರಮೇಶ್ ಜಾರಕಿಹೊಳಿ ನಿವಾಸದಲ್ಲಿ ಅನರ್ಹ ಶಾಸಕರು ಸಭೆ ಸೇರಿ ಮುಂದಿನ ನಡೆಯ ಬಗ್ಗೆ ಸಮಾಲೋಚನೆ ನಡೆಸಿದರು.

ಮತ್ತೊಂದು ಕಡೆ ಬಿಜೆಪಿ ಸಿ.ಪಿ.ಯೋಗೇಶ್ವರ್ ಗೂ ಸಹ ಸಚಿವ ಸ್ಥಾನ ಕೈತಪ್ಪಿದ್ದು, ಯೋಗೇಶ್ವರ್ ಕಾರಿನಲ್ಲಿಯೇ ರಮೇಶ್ ಜಾರಕಿಹೊಳಿ, ಮಹೇಶ್ ಕಮಟಹಳ್ಳಿ ಸೇರಿದಂತೆ ಕೆಲವು ಅನರ್ಹರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನಕ್ಕೆ ಬಂದಿಳಿದರು. ಒಂದು ತಂಡ ಮಧ್ಯಾಹ್ನದ ಹೊತ್ತಿಗೆ ತೆರಳಿದರೆ, ಕೆ.ಸುಧಾಕರ್ ಸಂಜೆಯ ವಿಮಾನದಲ್ಲಿ ದೆಹಲಿಗೆ ತೆರಳುವುದಾಗಿ ಹೇಳಿದರು. ತಿರುಪತಿಗೆ ಹೋಗುತ್ತಿರುವ ಹಿನ್ನೆಲೆಯಲ್ಲಿ ದೆಹಲಿಗೆ ತೆರಳುತ್ತಿಲ್ಲ ಎಂದು ಮುನಿರತ್ನ ಸ್ಪಷ್ಟಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com