ಕುಮಾರಸ್ವಾಮಿ ನಿತ್ಯ ರೋದನೆಯಿಂದ ಸಂಪೂರ್ಣವಾಗಿ ಮುಕ್ತರಾಗಿದ್ದಾರೆ: ಹೆಚ್ ಡಿ ದೇವೇಗೌಡ 

ಕಳೆದ ವರ್ಷ ವಿಧಾನಸಭೆ ಚುನಾವಣೆ ಫಲಿತಾಂಶದ ನಂತರ ತಮ್ಮ ಪುತ್ರ ಹೆಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಬಗ್ಗೆ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಮತ್ತೊಮ್ಮೆ ಪ್ರತಿಕ್ರಿಯೆ ನೀಡಿದ್ದಾರೆ. 
ಹೆಚ್ ಡಿ ದೇವೇಗೌಡ
ಹೆಚ್ ಡಿ ದೇವೇಗೌಡ

ಬೆಂಗಳೂರು:ಕಳೆದ ವರ್ಷ ವಿಧಾನಸಭೆ ಚುನಾವಣೆ ಫಲಿತಾಂಶದ ನಂತರ ತಮ್ಮ ಪುತ್ರ ಹೆಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಬಗ್ಗೆ ಮತ್ತು ಮೈತ್ರಿ ಸರ್ಕಾರ ಪತನಗೊಂಡ ಬಗ್ಗೆ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಮತ್ತೊಮ್ಮೆ ಪ್ರತಿಕ್ರಿಯೆ ನೀಡಿದ್ದಾರೆ.


ನಾವಾಗಲಿ, ನಮ್ಮ ಪಕ್ಷದ ನಾಯಕರಾಗಲಿ ಸರ್ಕಾರ ರಚಿಸುವ ಬಗ್ಗೆ ಮುಂದೆ ಹೋಗಿರಲಿಲ್ಲ, ಕಾಂಗ್ರೆಸ್ ನವರು ಅವರಾಗಿಯೇ ಬಂದು ಮಾತುಕತೆಯಾಯಿತು, ಬೇಡವೆಂದರೂ ಒತ್ತಾಯ ಮಾಡಿ ಅವರೇ ಮುಖ್ಯಮಂತ್ರಿ ಸ್ಥಾನ ನೀಡಿ ಮೈತ್ರಿ ಸರ್ಕಾರ ರಚನೆಯ ಪ್ರಸ್ತಾಪ ಮುಂದಿಟ್ಟರು ಎಂದು ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಪ್ರತಿಕ್ರಿಯೆ ವೇಳೆ ಹೇಳಿದ್ದಾರೆ. 


ನಾನೇ ಕಾಂಗ್ರೆಸ್ ಹೈಕಮಾಂಡ್ ಬಳಿ ಸಿದ್ದರಾಮಯ್ಯನವರಲ್ಲಿ ಮೊದಲು ಈ ವಿಷಯ ಚರ್ಚಿಸಿ ಅವರ ಒಪ್ಪಿಗೆ ಪಡೆಯಬೇಕಾಗಿತ್ತು ಎಂದಿದ್ದೆ. ಆದರೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರು ಇಲ್ಲಿನ ನಾಯಕರ ಮೇಲೆ ನಂಬಿಕೆ ಇಟ್ಟು ಸರ್ಕಾರ ರಚನೆ ಬಗ್ಗೆ ತೀರ್ಮಾನ ಹೊರಡಿಸಿದರು.


ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ನಡುವೆ ಮೊದಲಿನಿಂದಲೂ ತಿಕ್ಕಾಟ ನಡೆಯುತ್ತಿತ್ತು. ಸಿದ್ದರಾಮಯ್ಯನವರಿಗೆ ಮೈತ್ರಿ ಸರ್ಕಾರ ಬರುವುದು ಇಷ್ಟವಿರಲಿಲ್ಲ ಎಂದು ಅವರ ಆಪ್ತರೇ ಹೇಳಿದ್ದರು. ರಾಜ್ಯದ ಪ್ರಮುಖ ನಿಗಮ ಮಂಡಳಿಗಳಲ್ಲಿ ಸಿದ್ದರಾಮಯ್ಯನವರ ಆಪ್ತರಿಗೇ ಸ್ಥಾನ ಸಿಕ್ಕಿತ್ತು. ಆದರೂ ಅವರ ಕಡೆ ಗುರುತಿಸಿಕೊಂಡಿದ್ದ, ಅವರ ಅನುಯಾಯಿ ಶಾಸಕರುಗಳೇ ಕೊನೆಗೆ ರಾಜೀನಾಮೆ ನೀಡಿ ಸರ್ಕಾರ ಬೀಳಿಸಿಬಿಟ್ಟರು. 


ಈಗ ಅವುಗಳನ್ನೆಲ್ಲಾ ಮಾತನಾಡಲು ಹೋಗುವುದಿಲ್ಲ. ಆದರೆ ಒಂದಂತೂ ಸತ್ಯ, ಕುಮಾರಸ್ವಾಮಿಗೆ ಈಗ ಮುಕ್ತಿ ಸಿಕ್ಕಿತು. ಕುಮಾರಸ್ವಾಮಿ ನಿತ್ಯ ರೋದನೆಯಿಂದ ಸಂಪೂರ್ಣವಾಗಿ ವಿಮುಕ್ತರಾಗಿದ್ದಾರೆ. ಮುಂದೆ ಪಕ್ಷ ಬೆಳೆಸಲು ಏನು ಮಾಡಬೇಕೋ ಅದನ್ನು ಮಾಡುತ್ತೇವೆ ಎಂದು ಹೇಳಿದರು.


ಫೋನ್ ಟ್ಯಾಪಿಂಗ್ ವಿವಾದವನ್ನು ಸಿಬಿಐ ತನಿಖೆಗೆ ವಹಿಸಿರುವ ಬಗ್ಗೆ, ಸಚಿವ ಸ್ಥಾನ ವಂಚಿತ ಬಿಜೆಪಿ ನಾಯಕರು ಕುಮಾರಸ್ವಾಮಿಯವರನ್ನು ಸಂಪರ್ಕಿಸಿದ್ದಾರೆ ಎಂಬ ವಿಚಾರವಾಗಿ ಪ್ರಶ್ನಿಸಿದಾಗ ದೇವೇಗೌಡರು ಪ್ರತಿಕ್ರಿಯಿಸಲು ನಿರಾಕರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com