ಸಂಪುಟ ವಿಸ್ತರಣೆ ಬಳಿಕ ಭಿನ್ನಮತ ಸ್ಪೋಟ: ಸಿದ್ದರಾಮಯ್ಯ ಭೇಟಿಗೆ ಮುಂದಾದ ಶಾಸಕ ಉಮೇಶ್ ಕತ್ತಿ
ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಸ್ಥಾನ ದೊರಕದ್ದಕ್ಕೆ ಅಸಮಾಧಾನಗೊಂಡಿರುವ ಬಿಜೆಪಿ ಶಾಸಕ ಉಮೇಶ್ ಕತ್ತಿ ತಾವು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗುವ ಆಲೋಚನೆಯಲ್ಲಿದ್ದಾರೆ.
Published: 22nd August 2019 02:30 PM | Last Updated: 22nd August 2019 02:30 PM | A+A A-

ಉಮೇಶ್ ಕತ್ತಿ
ಕತ್ತಿಯವರೆಂದೂ ಪಕ್ಷ ತೊರೆಯಲ್ಲ ಎಂದ ಈಶ್ವರಪ್ಪ
ಬೆಂಗಳೂರು: ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಸ್ಥಾನ ದೊರಕದ್ದಕ್ಕೆ ಅಸಮಾಧಾನಗೊಂಡಿರುವ ಬಿಜೆಪಿ ಶಾಸಕ ಉಮೇಶ್ ಕತ್ತಿ ತಾವು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗುವ ಆಲೋಚನೆಯಲ್ಲಿದ್ದಾರೆ. ಇದಾಗಲೇ ದೂರವಾಣಿ ಸಂಭಾಷಣೆ ನಡೆಸಿರುವ ಉಮೇಶ್ ಕತ್ತಿ ಇಂದು ಸಂಜೆ ಸಿದ್ದರಾಮಯ್ಯ ಭೇಟಿಯಾಗಲಿದ್ದಾರೆ ಎಂದು ಹೇಳಲಾಗಿದೆ.
ಕಣ್ಣಿನ ಶಸ್ತ್ರಚಿಕಿತ್ಸೆ ಕಾರಣ ದೆಹಲಿ ಭೇಟಿ ರದ್ದುಗೊಳಿಸಿ ಮನೆಯಲ್ಲೇ ಉಳಿದಿರುವ ಸಿದ್ದರಾಮಯ್ಯನವರನ್ನು ಉಮೇಶ್ ಕತ್ತಿ ಭೇಟಿಯಾಗಲಿದ್ದಾರೆ ಎಂದು ಹೇಳಲಾಗಿದೆ.
ಸಚಿವ ಸ್ಥಾನ ದೊರಕದ ಕಾರಣ ಯಡಿಯೂರಪ್ಪ ಜತೆ ಮಾತುಕತೆ ನಡೆಸಿದ ಉಮೇಶ್ ಕತ್ತಿಗೆ ಸಿಎಂ ಯಡಿಯೂರಪ್ಪ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಕತ್ತಿ ಎಂದಿಗೂ ಪಕ್ಷ ಬಿಡುವುದಿಲ್ಲ: ಈಶ್ವರಪ್ಪ
ಇನ್ನೊಂದೆಡೆ ಸಚಿವ ಕೆ.ಎಸ್ ಈಶ್ವರಪ್ಪ ಉಮೇಶ್ ಕತ್ತಿ ಎಂದಿಗೂ ಬಿಜೆಪಿ ತೊರೆದು ಹೋಗುವುದಿಲ್ಲ ಎಂದಿದ್ದಾರೆ.
ಶಾಸಕ ಉಮೇಶ್ ಕತ್ತಿ ಅವರ ಬಳಿ ಬೆಳಗ್ಗೆ ಮಾತನಾಡಿದ್ದೇನೆ. ಅವರು ಬಿಜೆಪಿ ಪಕ್ಷ ಬಿಡಲಿದ್ದರೆಂಬುದು ಕೇವಲ ಊಹಾಪೋಹವಷ್ಟೇ ಎಂದು ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಮೇಶ್ ಕತ್ತಿ ನನ್ನ ಜೊತೆ ಮಾತನಾಡಿದ್ದಾರೆ. ಜಲಪ್ರಳಯದಲ್ಲಿ ಜನರು ಹೇಗೆ ಸಂತ್ರಸ್ತರಾಗಿದ್ದರೋ ಹಾಗೆಯೇ ಕಾಂಗ್ರೆಸ್ಸಿಗರು ರಾಜಕೀಯವಾಗಿ ನಿರಾಶ್ರಿತರಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರೀತಿ ಅನೇಕರು ರಾಜಕೀಯ ನಿರಾಶ್ರಿತರಾಗಿದ್ದಾರೆ. ರಾಜಕೀಯ ನಿರಾಶ್ರಿತರ ಕೇಂದ್ರಕ್ಕೆ ನೆರವು ಕೇಳುವ ಆಪೇಕ್ಷೆಯಿಂದ ಉಮೇಶ್ ಕತ್ತಿ ಅವರನ್ನು ಕರೆದಿರಬಹುದು. ಆದರೆ, ಉಮೇಶ ಕತ್ತಿ ಅವರು ಪಕ್ಷ ಬಿಡುವ ಮಾತೇ ಇಲ್ಲ ಎಂದು ಹೇಳಿದರು.