ಖರ್ಚಾಗದ ಶಾಸಕರ ಪ್ರದೇಶಾಭಿವೃದ್ಧಿ ನಿಧಿ 893.99 ಕೋಟಿ ರೂ: ನೆರೆ ಪರಿಹಾರಕ್ಕೆ ಬಳಸಿಕೊಳ್ಳಲು ಸಿಎಂ ಮನವಿ

ರಾಜ್ಯವನ್ನು ಇನ್ನಿಲ್ಲದಂತೆ ಕಾಡಿದ ಪ್ರವಾಹ, ಭಾರೀ ಮಳೆ ಮತ್ತು ಬರ ನಿರ್ವಹಣೆಯಲ್ಲಿ ಹಿಂದಿನ ಮೈತ್ರಿ ಸರ್ಕಾರ ಹಾಗೂ ಹಾಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಾಸಕರು ದಿವ್ಯ ನಿರ್ಲಕ್ಷ್ಯ ತೋರಿದ್ದು, ಪರಿಣಾಮ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಖರ್ಚಾಗದೇ 893.99 ಕೋಟಿ ರೂ ಉಳಿದಿದೆ.
ಯಡಿಯೂರಪ್ಪ
ಯಡಿಯೂರಪ್ಪ

ಬೆಂಗಳೂರು: ರಾಜ್ಯವನ್ನು ಇನ್ನಿಲ್ಲದಂತೆ ಕಾಡಿದ ಪ್ರವಾಹ, ಭಾರೀ ಮಳೆ ಮತ್ತು ಬರ ನಿರ್ವಹಣೆಯಲ್ಲಿ ಹಿಂದಿನ ಮೈತ್ರಿ ಸರ್ಕಾರ ಹಾಗೂ ಹಾಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಾಸಕರು ದಿವ್ಯ ನಿರ್ಲಕ್ಷ್ಯ ತೋರಿದ್ದು, ಪರಿಣಾಮ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಖರ್ಚಾಗದೇ 893.99 ಕೋಟಿ ರೂ ಉಳಿದಿದೆ. ಬಹುತೇಕ ಶಾಸಕರು ನಿಧಿ ಸದ್ಬಳಕೆಗೆ ಆಸಕ್ತಿಯನ್ನೇ ತೋರಿಲ್ಲ. ಕೆಲವರಂತೂ ತಮ್ಮ ಬಳಿ ಹಣ ಇರುವುದನ್ನೇ ಮರೆತುಬಿಟ್ಟಿದ್ದಾರೆ. 

ರಾಜ್ಯ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಸಂದರ್ಭದಲ್ಲಿ ತಮ್ಮನ್ನು ಚುನಾಯಿಸಿದ ಜನರ ಸಂಕಷ್ಟಕ್ಕೆ ಶಾಸಕರು ಸ್ಪಂದಿಸಬೇಕಿದ್ದು, ಪ್ರದೇಶಾಭಿವೃದ್ಧಿ ನಿಧಿಯ ಮೊತ್ತವನ್ನು ತಾತ್ಕಾಲಿಕವಾಗಿ ನೆರೆ, ಬರ, ಪ್ರಕೃತಿ ವಿಕೋಪದಂತಹ ಸಮಸ್ಯೆಗಳ ನಿವಾರಣೆಗೆ ಸದ್ಬಳಕೆ ಮಾಡಿಕೊಳ್ಳಬೇಕಾದ ಅನಿವಾರ್ಯ ಸಂದರ್ಭ ಎದುರಾಗಿದೆ. ಇಲ್ಲವಾದಲ್ಲಿ ಶಾಸಕರ ನಿಧಿಯನ್ನು ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ವರ್ಗಾಯಿಸುವಂತಹ ತೀರ್ಮಾನವನ್ನಾದರೂ ವಿಧಾನಮಂಡಲದ ಉಭಯ ಸದನಗಳ ಸದಸ್ಯರು ಕೈಗೊಳ್ಳಬೇಕಾಗಿದೆ. ಈ ಬಗ್ಗೆ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶಾಸಕರಿಗೆ ಪತ್ರ ಬರೆದು ತಮ್ಮ ಅನುದಾನವನ್ನು ನೆರೆ ಸಂತ್ರಸ್ತರ ಕಣ್ಣೀರು ಒರೆಸಲು ಬಳಸಿ ಎಂದು ಮನವಿ ಮಾಡಿಕೊಂಡಿದ್ದಾರೆ.  

ಕೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕಾಗಿ ಹುಡುಕಾಡಿದರು ಎನ್ನುವಂತೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಬಳಕೆಯಾಗದೇ ಕೊಳೆಯುತ್ತಾ ಬಿದ್ದಿದೆ. ಇದೀಗ ಕೈಯಲ್ಲಿರುವ ಬೆಣ್ಣೆಯನ್ನು ಸದುದ್ದೇಶಕ್ಕೆ ಬಳಸಿಕೊಳ್ಳಬೇಕಾಗಿದೆ. ತೀವ್ರ ರಾಜಕೀಯ ಚಟುವಟಿಕೆ ನಡುವೆ ತಮ್ಮ ಬಳಿ ಇರುವ ಅನುದಾನ ಬಳಕೆ ಮಾಡಿಕೊಳ್ಳಲು ಶಾಸಕರು ಅತೀವ ನಿಷ್ಕಾಳಜಿ ತೋರಿದ್ದಾರೆ.  ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದ 25 ದಿನಗಳ ಬಳಿಕ ಸಂಪುಟ ರಚನೆಯಾಗಿದ್ದರೂ ನೆರೆ ಸಂತ್ರಸ್ತರ ಸಂಕಷ್ಟ ಸ್ವಲ್ಪವೂ ಕಡಿಮೆಯಾಗಿಲ್ಲ. ಸಚಿವ ಸ್ಥಾನ ಕೈತಪ್ಪಿದ ಬೆನ್ನಲ್ಲೇ ಖಾತೆ ಹಂಚಿಕೆ ಅಸಮಾಧಾನದಲ್ಲಿ ಬಿಜೆಪಿ ಶಾಸಕರು ಮುಳುಗಿದ್ದಾರೆ. 

ಇನ್ನೊಂದೆಡೆ ಅಸಮಾಧಾನಗೊಂಡಿರುವ ಶಾಸಕರ ನಡುವೆ ಜಿದ್ದಾಜಿದ್ದಿ, ತಮ್ಮಲ್ಲೇ ಪರಸ್ಪರ ಪೈಪೋಟಿ, ಕಾಲೆಳೆಯುವ ರಾಜಕೀಯ ಚಟುವಟಿಕೆ ನಡೆಯುತ್ತಿದೆ. ಜೆಡಿಎಸ್ - ಕಾಂಗ್ರೆಸ್ ಶಾಸಕರಿಗೆ ನೆರೆ, ಬರ, ಪ್ರಕೃತಿ ವಿಕೋಪದಂದಹ ಸಂಕಷ್ಟದ ಬಗ್ಗೆ ಗಮನಹರಿಸಲು ಪುರುಸೊತ್ತು ಇಲ್ಲದಂತಾಗಿದೆ. ಇದು ನಮ್ಮ ಕೆಲಸವಲ್ಲ. ಬಿಜೆಪಿ ಸರ್ಕಾರ ಮಾಡಬೇಕಾದ ಕಾರ್ಯ. ಸಮಸ್ಯೆ ಪರಿಹಾರಕ್ಕೆ ಮೋದಿ ಸರ್ಕಾರವೇ ನೆರವು ನೀಡಲಿ ಎಂದು ಹೇಳುತ್ತಿದ್ದಾರೆ. ತಮ್ಮಲ್ಲಿರುವ ಪ್ರದೇಶಾಭಿವೃದ್ಧಿ ನಿಧಿ ಹಣವನ್ನು ಬಳಸಲು ಪ್ರತಿಪಕ್ಷ ಶಾಸಕರು ಮುಂದಾಗಿಲ್ಲ. ಎಲ್ಲದಕ್ಕೂ ಬಿಜೆಪಿ ಸರ್ಕಾರದ ಬೆರಳು ತೋರುತ್ತಿದ್ದಾರೆ.

ನಿರಂತರ ಬರ, ಮಳೆ - ಬೆಳೆ, ಕುಡಿಯಲು ನೀರಿಲ್ಲದೆ ಜನ ಪರಿತಪಿಸುತ್ತಿದ್ದರೂ ಶಾಸಕರು ಮಾತ್ರ ಜನರ ಸಂಕಷ್ಟ ಆಲಿಸುವತ್ತ ಹೆಚ್ಚಿನ ಗಮನ ಹರಿಸಿರಲಿಲ್ಲ. ಈಗ ಪ್ರವಾಹ ಮತ್ತು ಅತಿವೃಷ್ಟಿಯಿಂದ ಮನೆ, ಬೆಳೆ, ಜನ ಜಾನುವಾರು ಎಲ್ಲವನ್ನು ಕಳೆದುಕೊಂಡಿರುವ ಜನರನ್ನು  ರಕ್ಷಿಸುವ ಬಗ್ಗೆ ಬಹುತೇಕ ಶಾಸಕರು ಪರಮ ನಿರ್ಲಕ್ಷ್ಯ ವಹಿಸಿದ್ದಾರೆ. 

ಸರ್ಕಾರ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಡಿ ಪ್ರತಿ ಶಾಸಕರಿಗೆ ವರ್ಷಕ್ಕೆ 2 ಕೋಟಿರೂ ಅನುದಾನ ನೀಡುತ್ತಿದೆ. ದುರಂತವೆಂದರೆ 2018-19ನೇ ಸಾಲಿನಲ್ಲಿ ಬಹುತೇಕ ಶಾಸಕರು ಶಾಸಕರ ನಿಧಿ ಬಳಸಿಕೊಳ್ಳಲು ಮನಸ್ಸು ಮಾಡಿಲ್ಲ. 11 ಜನ ವಿಧಾನ ಸಭೆ ಶಾಸಕರು, 24 ಜನ ವಿಧಾನ ಪರಿಷತ್ ಸದಸ್ಯರು ತಮಗೆ ನೀಡಿದ 2 ಕೋಟಿ ರೂ ಅನುದಾನದಲ್ಲಿ ಒಂದೇ ಒಂದು ರೂಪಾಯಿ ಖರ್ಚು ಮಾಡಿಲ್ಲ. ಚೋದ್ಯವೆಂದರೆ 2019-20ನೇ ಸಾಲಿನಲ್ಲಿ ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸಹ ಶಾಸಕರ ಪ್ರದೇಶಾಭಿವೃದ್ಧಿ ನಿಧಿಗೆ ಎರಡು ಹಂತದಲ್ಲಿ ಹಣ ಬಿಡುಗಡೆ ಮಾಡಿದ್ದಾರೆ. ಅದನ್ನು ಒಬ್ಬೇ ಒಬ್ಬ ಶಾಸಕ ಇದುವರೆಗೂ ಬಳಸಿಕೊಂಡಿಲ್ಲ.

2018-19ನೇ ಸಾಲಿನಲ್ಲಿ ವಿಧಾನ ಸಭೆಯ 225 ಶಾಸಕರಿಗೆ 500 ಕೋಟಿ ರೂ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಅನುದಾನ ಬಿಡುಗಡೆಯಾಗಿದೆ. ಬಿಡುಗಡೆಯಾದ ಅನುದಾನದಲ್ಲಿ 266 ಕೋಟಿರೂಗಳ ಮೊತ್ತದ 6057 ಕಾಮಗಾರಿಗಳಿಗೆ ಕ್ರಿಯಾ ಯೋಜನೆ ಸಲ್ಲಿಸಲಾಗಿದೆ. ಇನ್ನು 183.84 ಕೋಟಿ ರೂ ಯೋಜನೆಗೆ ಕ್ರಿಯಾ ಯೋಜನೆ ನೀಡಿಲ್ಲ, ಅನುದಾನವೂ ಖರ್ಚಾಗಿಲ್ಲ, ಬಿಡುಗಡೆಯಾದ ಅನುದಾನ ಏನಾಗಿದೆ, ಎಷ್ಟು ಕಾಮಗಾರಿ ಪೂರ್ಣಗೊಂಡಿದೆ. ಎಷ್ಟು ಬಾಕಿ ಉಳಿದಿದೆ ಎಂಬ ಮಾಹಿತಿ ಸ್ವತಃ ಶಾಸಕರಿಗೇ ತಿಳಿದಿಲ್ಲ. 

ಇನ್ನು 11 ಜನ ಶಾಸಕರು ಪ್ರದೇಶಾಭಿವೃದ್ದಿ ನಿಧಿಯ ಹಣ ಮುಟ್ಟುವ ಗೊಡವೆಗೆ ಹೋಗಿಲ್ಲ. ಬಹುತೇಕ ಶಾಸಕರು ಅನುದಾನದ ಶೇ 80ರಷ್ಟು ಹಣವನ್ನು ಖರ್ಚು ಮಾಡಲು ಮನಸ್ಸು ಮಾಡಿಲ್ಲ, ಶೇ 35-40% ಶಾಸಕರಷ್ಟೇ ಅನುದಾನ ಬಳಸಿಕೊಂಡು ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. ಅದರಲ್ಲಿ ದಕ್ಷಿಣ ಕನ್ನಡ ಶಾಸಕರು ಮಾದರಿಯಾಗಿದ್ದಾರೆ. ಅಂತೆಯೇ 2018-19ನೇ ಸಾಲಿನಲ್ಲಿ 75 ಜನ ವಿಧಾನ ಪರಿಷತ್ ಸದಸ್ಯರಲ್ಲಿ ಬರೋಬ್ಬರಿ 24 ಜನ ಜನಪ್ರತಿನಿಧಿಗಳು ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಹಣ ಏನಾಗಿದೆ ಎಂಬುದನ್ನು ನೋಡಿಲ್ಲ. ಉಳಿದಂತೆ ಬಹುತೇಕ ಶಾಸಕರು  ಬೆರಳೆಣಿಯಷ್ಟು ಕಾಮಗಾರಿಗಳಿಗೆ ನೀಡಲಾದ ಅನುದಾನದಲ್ಲಿ ಒಪ್ಪಿಗೆ ಪಡೆದುಕೊಂಡಿದ್ದಾರೆ. ಒಬ್ಬರು3, 5,10 ಹೀಗೆ ಕೆಲವೇ ಕೆಲವು ಕಾಮಗಾರಿಗಗಳಿಗೆ ಒಪ್ಪಿಗೆ ಪಡೆದಿದ್ದಾರೆ. 

2018-19ನೇ ಸಾಲಿನಲ್ಲಿ 75 ವಿಧಾನ ಪರಿಷತ್ ಸದಸ್ಯರಿಗೆ ಸರ್ಕಾರ ಸ್ಥಳೀಯ ಪ್ರದೇಶಾಭಿವೃದ್ದಿ ನಿಧಿ ಅಡಿ 150 ಕೋಟಿ ರೂ ಅನುದಾನ  ಬಿಡುಗಡೆ ಮಾಡಿದೆ. ಆದರೆ 24 ಜನ ಶಾಸಕರ ನಿಧಿಯ ಅನುದಾನದಲ್ಲಿ 1 ರೂ ಖರ್ಚು ಮಾಡಿಲ್ಲ. 51 ಶಾಸಕರು ಅಲ್ಪಸ್ವಲ್ಪ ಖರ್ಚು ಮಾಡಿದ್ದಾರೆ, 75ಜನ ಶಾಸಕರು 1125 ಕಾಮಗಾರಿಗಳಿಗೆ 39.84 ಕೋಟಿ ರೂ ಅನುದಾನ ವೆಚ್ಚವಾಗಿದ್ದು 110.15 ಕೋಟಿ ರೂ ಅನುದಾನ ಖರ್ಚಾಗದೆ ಜಿಲ್ಲಾಧಿಕಾರಿಗಳ ಬಳಿ ಉಳಿದಿದೆ.

ನೆರೆ ಮತ್ತು ಅತಿವೃಷ್ಠಿ ಹಿನ್ನೆಲೆಯಲ್ಲಿ ಮನೆ ಕಳೆದುಕೊಂಡವರಿಗೆ ಪರಿಹಾರ, ಸಾರ್ವಜನಿಕ ಶಾಲೆ, ಕಾಲೇಜು, ವಸತಿ ನಿಲಯ, ಆಸ್ಪತ್ರೆ, ವಿದ್ಯುತ್ ಕಂಬ, ಪುನರ್ವಸತಿ, ಸಾರ್ವಜನಿಕ ರಸ್ತೆ ಸಂಪರ್ಕಗಳನ್ನು ಮರು ನಿರ್ಮಾಣ ಮಾಡಲು ಶಾಸಕರು ತಮ್ಮ ನಿಧಿಯ ಅನುದಾನ ಬಳಸಿಕೊಳ್ಳಲು ವಿಪುಲ ಅವಕಾಶಗಳಿವೆ.  2018-19ರಲ್ಲ ಖರ್ಚಾಗದೆ ಉಳಿದ ಹಣ 293.99 ಕೋಟಿ ಮತ್ತು 2019-2020 ಪ್ರದೇಶಾಭಿವೃದ್ದಿ ನಿಧಿಯ ಹಣ 600 ಕೋಟಿ ರೂ ಎರಡೂ ಸೇರಿ ಒಟ್ಟು 893.99 ಕೋಟಿ ಬಳಸಿಕೊಂಡು ಕಾಮಗಾರಿಗಳ ಕ್ರಿಯಾಯೋಜನೆಯನ್ನು ರೂಪಿಸಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿ ಎಂದು ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಎಲ್ಲಾ ಶಾಸಕರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಸರ್ಕಾರದ ಅನುದಾನಕ್ಕೆ ಕಾಯದೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ನಿಧಿಯನ್ನು ಸದ್ಬಳಕೆ ಮಾಡಿಕೊಂಡರೆ ಸರ್ಕಾರಕ್ಕೆ ಆರ್ಥಿಕ ಹೊರೆ ತಪ್ಪಲಿದೆ. ಸಂತ್ರಸ್ತರ ಬವಣೆ ನಿವಾರಣೆಯಾಗಲಿದೆ ಎಂದು ಯಡಿಯೂರಪ್ಪ ಶಾಸಕರಲ್ಲಿ ವಿನಂತಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com