ರಾಜ್ಯ ಬಿಜೆಪಿ ನೂತನ ಅಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲ್ ಪದಗ್ರಹಣ

ರಾಜ್ಯ ಬಿಜೆಪಿ ನೂತನ ಅಧ್ಯಕ್ಷರಾದ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರ ಪದಗ್ರಹಣ ಸಮಾರಂಭ ಮಂಗಳವಾರ ನೆರವೇರಿದೆ.
ನೂತನವಾಗಿ ಅಧ್ಯಕ್ಷ ಪದ ವಹಿಸಿಕೊಂಡ ನಳಿನ್ ಕುಮಾರ್ ಕಟೀಲ್ ಅವರನ್ನು ಸಿಎಂ ಯಡಿಯೂರಪ್ಪ ಸನ್ಮಾನಿಸಿದ್ದಾರೆ
ನೂತನವಾಗಿ ಅಧ್ಯಕ್ಷ ಪದ ವಹಿಸಿಕೊಂಡ ನಳಿನ್ ಕುಮಾರ್ ಕಟೀಲ್ ಅವರನ್ನು ಸಿಎಂ ಯಡಿಯೂರಪ್ಪ ಸನ್ಮಾನಿಸಿದ್ದಾರೆ

ಬೆಂಗಳೂರು: ರಾಜ್ಯ ಬಿಜೆಪಿ ನೂತನ ಅಧ್ಯಕ್ಷರಾದ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರ ಪದಗ್ರಹಣ ಸಮಾರಂಭ ಮಂಗಳವಾರ ನೆರವೇರಿದೆ.

ಬೆಳಗ್ಗೆ 9 ಗಂಟೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಬಂದಿಳಿದ ನೂತನ ಅಧ್ಯಕ್ಷರನ್ನು ಭವ್ಯ ಸ್ವಾಗತದೊಂದಿಗೆ ಬರ ಮಾಡಿಕೊಳ್ಳಲಾಗಿದ್ದು ಮಲ್ಲೇಶ್ವರದಲ್ಲಿನ ಭಾರತೀಯ ಜನತಾ ಪಕ್ಷ ಪ್ರಧಾನ ಕಛೇರಿಯಲ್ಲಿ ಅಧ್ಯಕ್ಷ ಪದವಿ ಸ್ವೀಕರ ನೆರವೇರಿದೆ..

ಬೆಳಗ್ಗೆ 9.30ಕ್ಕೆ ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಂಗಳವಾದ್ಯಗಳೊಂದಿಗೆ ಅದ್ಧೂರಿಯಾಗಿ ರಾಜ್ಯ ಕಚೇರಿಗೆ ಆಗಮಿಸಿದ ಸಂಸದ ಕಟೀಲ್ ಅವರಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೇರಿ ಸಚಿವರು, ಸಂಸದರು, ಪ್ರಮುಖರ ಮುಂದೆ ಪದಗ್ರಹಣ ಮಾಡಿದ್ದಾರೆ. ಈ ವೇಳೆ ನೂತನವಾಗಿ ಅಧ್ಯಕ್ಷ ಪದ ವಹಿಸಿಕೊಂಡ ನಳಿನ್ ಕುಮಾರ್ ಕಟೀಲ್ ಅವರನ್ನು ಸಿಎಂ ಯಡಿಯೂರಪ್ಪ ಸನ್ಮಾನಿಸಿದ್ದಾರೆ

ಪದಗ್ರಹಣದ ನಂತರ ಮಾತನಾದಿದ ಕಟೀಲ್ ನಾನು  ವಿದ್ವಾಂಸನಲ್ಲ, ಜ್ಞಾನಿಯೂ ಅಲ್ಲ, ಆದರೆ ಸಂಘದ ಶಾಖೆಯಲ್ಲಿ ಆಡುತ್ತಾ ಬೆಳೆದವನು. ನಾನು ಈ  ಎತ್ತರಕ್ಕೆ ಬೆಳೆಯಲು ರಾಷ್ಟ್ರೀಯ ಸ್ವಯಂಸೇವಕ ಸಂಘ ಕಾರಣ. ಒಬ್ಬ ಸಾಮಾನ್ಯ ಕಾರ್ಯಕರ್ತನೂ  ರಾಜ್ಯಾಧ್ಯಕ್ಷನಾಗಬಹುದು ಎಂದರೆ ಅದು ಬಿಜೆಪಿಯಲ್ಲಿ ಮಾತ್ರ ಎಂದರು. 

 ಬಿಜೆಪಿ  ಇವತ್ತು ಸ್ವರ್ಣಯುಗದಲ್ಲಿದೆ. ಇಂತಹ ಕಾಲಘಟ್ಟದಲ್ಲಿ ನನಗೆ ಜವಾಬ್ದಾರಿ  ಕೊಟ್ಟಿದ್ದಾರೆ. ಬಹಳ ಎಚ್ಚರಿಕೆಯಿಂದ ಇದನ್ನು ನಿರ್ವಹಿಸುತ್ತೇನೆ‌. ನಾನು  ಒಬ್ಬಂಟಿಯಲ್ಲ. ಯಡಿಯೂರಪ್ಪನವರ ನೇತೃತ್ವದ ಸರ್ಕಾರ ಹಾಗೂ ಒಂದು ದೊಡ್ಡ ತಂಡ, ಸಹಸ್ರಾರು ಕಾರ್ಯಕರ್ತರು ನನ್ನ ಬೆನ್ನಿಗಿದ್ದಾರೆ ಎಂದು ಹೇಳಿದರು.

ಇಂದು ಪಕ್ಷದ ರಾಜ್ಯಾಧ್ಯಕ್ಷನ ಜವಾಬ್ದಾರಿ ಸ್ಥಾನ ಕೊಟ್ಟಿದ್ದಾರೆ. ರಾಜ್ಯಾಧ್ಯಕ್ಷನಾಗುವುದಕ್ಕಿಂತ ದೊಡ್ಡ ಸಂತಸ ಮತ್ತೊಂದಿಲ್ಲ. ಎಚ್ಚರಿಕೆಯಿಂದ ಈ ಜವಾಬ್ದಾರಿ ನಿಭಾಯಿಸುತ್ತೇನೆ. ಭಯವೂ ಇದೆ, ಆತ್ಮವಿಶ್ವಾಸವೂ ಇದೆ, ಯಡಿಯೂರಪ್ಪ ಅವರಂತಹ ನಾಯಕರ ಆಶಿರ್ವಾದ ನನ್ನ ಮೇಲಿದೆ, ಯಡಿಯೂರಪ್ಪ, ಈಶ್ವರಪ್ಪ, ಅನಂತ್ ಕುಮಾರ್ ಅವರಂತಹ ನಾಯಕರ ಪರಿಶ್ರಮದಿಂದ ಪಕ್ಷ ಬೆಳೆದುಬಂದಿದೆ. ಯಡಿಯೂರಪ್ಪ ಪ್ರತಿ  ಜಿಲ್ಲೆಗೂ  ಹೋಗಿ  ಪ್ರವಾಹ ಸಂತ್ರಸ್ತರ ಕಷ್ಟ ಆಲಿಸುತ್ತಿದ್ದಾರೆ, ಯಡಿಯೂರಪ್ಪ ಜೊತೆ ಪಕ್ಷ, ಕಾರ್ಯಕರ್ತರು ಇದ್ದಾರೆ ಎಂದರು.

ಇದು ಪುಣ್ಯ ಕ್ಷೇತ್ರ. ಶಿವಾಜಿ ಮಹಾರಾಜರಿಗೆ ಪ್ರೇರಣೆ  ಕೊಟ್ಟ, ವಿವೇಕಾನಂದರು ನಡೆದಾಡಿದ ಪುಣ್ಯಭೂಮಿ. ಕಾಡು ಮಲ್ಲೇಶ್ವರನ ಸನ್ನಿಧಿಯಲ್ಲಿ  ಪದಗ್ರಹಣ ಮಾಡಿದ ನಾನೇ ಧನ್ಯ ಎಂದು ಹೇಳಿದರು.
ರಾಜ್ಯದಲ್ಲಿ ಬರ ಮತ್ತು  ನೆರೆ ಪರಿಸ್ಥಿತಿಯಲ್ಲಿ ಸಂತ್ರಸ್ತರ ಕಣ್ಣೊರೆಸುವ ಕೆಲಸದಲ್ಲಿ ಯಡಿಯೂರಪ್ಪನವರಿಗೆ  ಬಿಜೆಪಿ ಕೈ ಜೋಡಿಸಲಿದೆ . ಪಕ್ಷದ ಪ್ರಮುಖರು ನನ್ನ ಮೇಲಿಟ್ಟಿರುವ ನಂಬಿಕೆ  ಉಳಿಸಿಕೊಳ್ಳುತ್ತೇನೆ. ಯಡಿಯೂರಪ್ಪ ಮತ್ತು ಅವರ ಇಡೀ ತಂಡದ ಸಲಹೆ ಮಾರ್ಗದರ್ಶನ ಪಡೆದು  ಜವಾಬ್ದಾರಿ ನಿರ್ವಹಣೆ ಮಾಡುತ್ತೇನೆ ಎಂದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಪ್ರವಾಹ ಸಂತ್ರಸ್ತರ ಪುನರ್ವಸತಿ ನಮಗೆ ದೊಡ್ಡ ಸವಾಲು. ಇಂದು  ಚಿಕ್ಕಮಗಳೂರಿಗೆ ತೆರಳಿ ಅತಿವೃಷ್ಟಿ ಹಾನಿ ಪರಿಶೀಲನೆ ಮಾಡುತ್ತೇನೆ. ನಾಳೆ ನಾಡಿದ್ದು ಮತ್ತಷ್ಟು ಪ್ರದೇಶಗಳಿಗೆ ತೆರಳುತ್ತೇನೆ‌. ಸಂತ್ರಸ್ತರಿಗೆ ನೆರವು ನೀಡಬೇಕಾದುದು ನಮ್ಮ ಕರ್ತವ್ಯ. ಮುಖ್ಯಮಂತ್ರಿಯಾಗಿ ಒಂದು ತಿಂಗಳು ಆಗಿದೆ. ಒಂದು ದಿನವೂ ವಿಶ್ರಾಂತಿ ಪಡೆದಿಲ್ಲ. ಈಗ ಒಂದು ಒಳ್ಳೆಯ ಸಚಿವ ಸಂಪುಟ ನನ್ನ ಜತೆಗಿದೆ. ಮೂರು ವರ್ಷ ಹತ್ತು ತಿಂಗಳು ಅವಿರತ ಶ್ರಮಿಸಿ ಪಕ್ಷ ಸಂಘಟಿಸಬೇಕು. ಉತ್ತಮ ಆಡಳಿತ ನಡೆಸುತ್ತೇವೆ. ನಂತರ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 150  ಸ್ಥಾನಗಳನ್ನು ಗೆದ್ದು ಪೂರ್ಣ ಬಹುಮತದೊಡನೆ ಬಿಜೆಪಿ ಅಧಿಕಾರಕ್ಕೆ ಬರಬೇಕು. ಯಾವುದೇ ಒಡಕಿನ ಮಾತುಗಳಿಗೆ ಅವಕಾಶ ನೀಡದಂತೆ ಪಕ್ಷ ಸಂಘಟನೆಗೆ ನಳೀನ್ ಕುಮಾರ ಕಟೀಲ್ ಗೆ ಸಹಕಾರ ಕೊಡುತ್ತೇವೆ ಎಂದು ಭರವಸೆ ನೀಡಿದರು.

ಇಡೀ ದೇಶದಲ್ಲಿ ಕಾಂಗ್ರೆಸ್ ನಾಯಕತ್ವ, ನೆಲೆ ಕಳೆದುಕೊಂಡು ತಬ್ಬಲಿಯಂತಾಗಿದೆ. ಕಾಂಗ್ರೆಸ್ ಮುಕ್ತ ಭಾರತ ಕನಸು ಬಹುತೇಕ ಈಡೇರಿದೆ ಎಂದು ಹೇಳಿದರು.

 ರಾಜ್ಯದ ಪ್ರವಾಹ ಪರಿಸ್ಥಿತಿ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈಗಾಗಲೇ ವೈಮಾನಿಕ ಸಮೀಕ್ಷೆ ಮಾಡಿದ್ದಾರೆ. ಕೇಂದ್ರದ ಅಧಿಕಾರಿಗಳ ತಂಡವೂ ಸಹ ಪರಿಸ್ಥಿತಿ ಪರಿಶೀಲನೆ ಮಾಡುತ್ತಿದೆ. ಕೇಂದ್ರ ಸರ್ಕಾರದ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ಹೆಚ್ಚಿನ ನೆರವು ಸಿಗಲಿದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.  ಸಾರ್ವಜನಿಕರು,ಕೈಗಾರಿಕೋದ್ಯಮಿಗಳು,ಸರ್ಕಾರಿ ನೌಕರರು ದೊಡ್ಡ ಮಟ್ಟದಲ್ಲಿ ಹಣಕಾಸು ಸಹಾಯ ಮಾಡಿದ್ದಾರೆ ಎಂದರು.

ವೇದಿಕೆಯಿಂದ ನಿರ್ಗಮಿಸಿದ ಈಶ್ವರಪ್ಪ

ನಳೀನ್ ಕುಮಾರ್ ಕಟೀಲ್ ಭಾಷಣ ಆರಂಭಿಸುತ್ತಲೇ ವೇದಿಕೆಯಿಂದ ಸಚಿವ ಕೆ.ಎಸ್.ಈಶ್ವರಪ್ಪ ನಿರ್ಗಮಿಸಿದರು.

ಪದಗ್ರಹಣ ಕಾರ್ಯಕ್ರಮಕ್ಕೆ ಕೇಸರಿ ಉಡುಪಿನಲ್ಲಿ‌ ಕಟೀಲ್ ಆಗಮಿಸಿದ್ದರು. ಇದಕ್ಕೂ ಮೊದಲು ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಂಗಳವಾದ್ಯಗಳೊಂದಿಗೆ ಅದ್ಧೂರಿಯಾಗಿ ರಾಜ್ಯ ಕಚೇರಿಗೆ ಕರೆ ತರಲಾಯಿತು. 

ಸಚಿವ ಆರ್. ಅಶೋಕ್ ಸೇರಿದಂತೆ ಹಲವು ನಾಯಕರು ಕಾರ್ಯಕ್ರಮಕ್ಕೆ ಗೈರು ಹಾಜರಿ ಕಂಡುಬಂತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com