ಮೀಸೆ ಮಣ್ಣಾಗಿಸಿಕೊಂಡು ಸೋತವರು ನಗುನಗುತ ಬೀಗುತಿಹರು: ಕಾಂಗ್ರೆಸ್-ಜೆಡಿಎಸ್ ವ್ಯಂಗ್ಯ

ರಾಜ್ಯ ಬಿಜೆಪಿ ಸರ್ಕಾರದಲ್ಲಿ ನಡೆಯುತ್ತಿರುವ ಬೆಳವಣಿಗೆ ಮತ್ತು ಸಚಿವ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಉಂಟಾಗಿರುವ ಅಸಮಾಧಾನವನ್ನು ಮುಂದಿಟ್ಟು ಕಾಂಗ್ರೆಸ್ ಮತ್ತು ಜೆಡಿಎಸ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ...

Published: 27th August 2019 12:57 PM  |   Last Updated: 27th August 2019 06:30 PM   |  A+A-


Siddaramaih

ಸಿದ್ದರಾಮಯ್ಯ

Posted By : Shilpa D
Source : UNI

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದಲ್ಲಿ ನಡೆಯುತ್ತಿರುವ ಬೆಳವಣಿಗೆ ಮತ್ತು ಸಚಿವ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಉಂಟಾಗಿರುವ ಅಸಮಾಧಾನವನ್ನು ಮುಂದಿಟ್ಟು ಕಾಂಗ್ರೆಸ್ ಮತ್ತು ಜೆಡಿಎಸ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ವಿರುದ್ಧ ಸರಣಿ ಟ್ವೀಟ್‍ಗಳಲ್ಲಿ ಟೀಕಾಪ್ರಹಾರ ನಡೆಸಿವೆ.

ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿ, "ಸ‌ನ್ಮಾನ್ಯ ಮುಖ್ಯಮಂತ್ರಿ ಅನುಭವಿಸುತ್ತಿರುವ ಅವಮಾನ, ಅನ್ಯಾಯ, ಅಸಂತೋಷವನ್ನು ನೋಡುತ್ತಿದ್ದರೆ ಅವರ ರಾಜಕೀಯ ಎದುರಾಳಿಯಾದ ನನ್ನಂತಹವನಲ್ಲಿಯೂ ಅವರ ಬಗ್ಗೆ ಅನುಕಂಪ‌ ಮೂಡುವಂತಾಗಿದೆ" ಎಂದು ಟ್ವೀಟ್ ಮಾಡಿದ್ದಾರೆ.

ರಾಜ್ಯದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಂಪುಟ ರಚನೆ, ಖಾತೆ ಹಂಚಿಕೆಯ ಕಸರತ್ತುಗಳನ್ನು ಗಮನಿಸಿದರೆ ಜನಪ್ರತಿನಿಧಿಗಳ ದನಿ ಉಡುಗಿಹೋಗಿ ಸಂವಿಧಾನೇತರ ಶಕ್ತಿಗಳೇ ವಿಜೃಂಭಿಸಿರುತ್ತಿರುವ ಹಾಗೆ ಕಾಣಿಸುತ್ತಿದೆ. ಇದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಮಾರಕ ಎಂದು ಮತ್ತೊಂದು ಟ್ವೀಟ್‍ನಲ್ಲಿ ಹೇಳಿದ್ದಾರೆ.

ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರೇ, ನೀವು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು 3 ದಿನ, ಸಂಪುಟ ರಚನೆಗೆ 26 ದಿನ, ಮತ್ತು ಖಾತೆ ಹಂಚಿಕೆಗೆ 6 ದಿನ ತಗೊಂಡಿರಿ. ಈಗ ಭಿನ್ನಮತ ಶಮನಕ್ಕೆ ಇನ್ನೆಷ್ಟು ದಿನ ಬೇಕು ? ಈ ಎಲ್ಲದರ ನಡುವೆ ನಿಮ್ಮ ಸರ್ಕಾರ ಟೇಕ್ ಆಫ್ ಆಗುವುದು ಯಾವಾಗ? ಎಂದು ಸಿದ್ದರಾಮಯ್ಯ ಕೆಣಕಿದ್ದಾರೆ.

ಕರ್ನಾಟಕ ಕಾಂಗ್ರೆಸ್ ಕೂಡ ಟ್ವೀಟ್ ಮಾಡಿದ್ದು, ಸರಿಯಾದ ಖಾತೆ ಸಿಕ್ಕಿಲ್ಲವೆಂದು ಉಪ ಮುಖ್ಯಮಂತ್ರಿ ಸ್ಥಾನ ಸಿಕ್ಕಿಲ್ಲವೆಂದು ಅತೃಪ್ತಿಯನ್ನು ಅಸಮಾಧಾನವನ್ನು ಸಿಟ್ಟನ್ನು ತೋರಿಸುತ್ತಿರುವ ಬಿಜೆಪಿ ಶಾಸಕರು,  ನೆರೆ ಸಂಕಷ್ಟದಲ್ಲಿ ಸಿಲುಕಿರುವ ಜನತೆಯ ಪರವಾಗಿ ಕಾಳಜಿಯನ್ನು ತೋರಲಿಲ್ಲ. ಪರಿಹಾರ ಕಾರ್ಯದಲ್ಲಿ ತೊಡಗಲಿಲ್ಲ, ಕೇಂದ್ರದಿಂದ ಮಧ್ಯಂತರ ಆರ್ಥಿಕ ನೆರವನ್ನು ಪಡೆಯಲು ಪ್ರಯತ್ನಿಸಲೂ ಇಲ್ಲ ಎಂದು ಟೀಕಿಸಿದೆ.

ಮತ್ತೊಂದು ಟ್ವೀಟ್‍ನಲ್ಲಿ, ಉಪ ಮುಖ್ಯಮಂತ್ರಿ ಸ್ಥಾನ ದೊರಕಿಲ್ಲವೆಂದು ಬಹಳಷ್ಟು ಬಿಜೆಪಿ ನಾಯಕರುಗಳಿಗೆ ಅಸಮಾಧಾನ. ಸರಿಯಾದ ಖಾತೆ ಹಂಚಿಕೆ ಆಗಿಲ್ಲವೆಂದು ಹಲವು ಮಂತ್ರಿಗಳಿಗೆ ಅಸಮಾಧಾನ. ಸಂಪುಟಕ್ಕೆ ನಮ್ಮನ್ನು ಸೇರಿಸಿಕೊಂಡಿಲ್ಲವೆಂದು ಹಲವು ಶಾಸಕರಿಗೆ ಅಸಮಾಧಾನ. ಆರ್ ಎಸ್ ಎಸ್ ಮತ್ತು ಬಿಜೆಪಿ ಅಸಮಾಧನಿತರು ಸೇರಿ ರಚಿಸಿದ್ದಾರೆ, ಅತೃಪ್ತ ಹಾಗೂ ಅನರ್ಹ ಸರ್ಕಾರ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

ಕಾರ್ಯಾರಂಭಕ್ಕೂ ಮುನ್ನವೇ ಮುಗ್ಗರಿಸಿರುವ ಈ ಅಪವಿತ್ರ ಸರ್ಕಾರದ ಸಂಪುಟ, ಪ್ರಾದೇಶಿಕ ಅಸಮತೋಲನದಿಂದ ಕೂಡಿದ್ದು, ಸಾಮಾಜಿಕ ನ್ಯಾಯವನ್ನು ಕೂಡ ಪಾಲಿಸಲಾಗಿಲ್ಲ. ಹಲವು ಗುಂಪುಗಾರಿಕೆಗಳ ಭಿನ್ನಮತಗಳ ಸರ್ಕಾರ ಇದಾಗಿದ್ದು, ನಿರ್ದಿಷ್ಟವಾಗಿ ಭ್ರಷ್ಟಾಚಾರವನಲ್ಲದೆ ರಾಜ್ಯದ ಅಭಿವೃದ್ಧಿ ಮಾಡಲು ಇವರಿಂದ ಸಾಧ್ಯವಿಲ್ಲವೆಂದು ಕಾಣುತ್ತಿದೆ ಎಂದು ಕಾಂಗ್ರೆಸ್ ಹೇಳಿದೆ.

ಜೆಡಿಎಸ್ ಕೂಡ ಬಿಜೆಪಿ ಸಚಿವರ ಭಿನ್ನಮತವನ್ನು ಕಾವ್ಯದ ಮೂಲಕ ಟೀಕಿಸಿದೆ.

ಮೀಸೆ ಮಣ್ಣಾಗಿಸಿಕೊಂಡು ಸೋತವರು
ನಗುನಗುತ ಬೀಗುತಿಹರು...
ಎದೆಯೊಡ್ಡಿ ಜಯಿಸಿದವರು
ತಲೆ ತಗ್ಗಿಸಿ ಕೈ ಚಾಕುತಿಹರು...
ಹಾರುತಿಹ ನ್ಯಾಯ ಧ್ವಜವನ್ ಇಳಿಸಿ
ಮುನ್ನಡೆಯಲು..
ಎಲ್ಲಿಹುದು ನ್ಯಾಯ ಮರ್ಯಾದಾ
ಪುರುಷೋತ್ತಮನ ಆಳ್ವಿಕೆಯೊಳ್ ? ಎಂದು ಬಿಜೆಪಿ ಸಚಿವ ಸಂಪುಟ ರಚನೆಯನ್ನು ವ್ಯಂಗ್ಯವಾಡಿದೆ.

Stay up to date on all the latest ರಾಜಕೀಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
facebook twitter whatsapp