ದೇಶದಲ್ಲಿ ಆರ್ಥಿಕ ಬಿಕ್ಕಟ್ಟು, ಕೇಂದ್ರ ಹಿಂದೆಂದೂ ಆರ್​ಬಿಐನಿಂದ ಇಷ್ಟೊಂದು ಹಣ ತೆಗೆದುಕೊಂಡಿರಲಿಲ್ಲ: ಎಚ್ ಡಿ ದೇವೇಗೌಡ ಕಳವಳ

ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿದ್ದು, ಇದಕ್ಕೆ ಕೇಂದ್ರ ಸರ್ಕಾರ ಅರ್ ಬಿಐ ನಿಂದ ದೊಡ್ಡಪ್ರಮಾಣ ಹಣ ಪಡೆದಿರುವುದೇ ಸಾಕ್ಷಿ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹೇಳಿದ್ದಾರೆ.
ಎಚ್ ಡಿಡಿ
ಎಚ್ ಡಿಡಿ

ಬೆಂಗಳೂರು: ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿದ್ದು, ಇದಕ್ಕೆ ಕೇಂದ್ರ ಸರ್ಕಾರ ಅರ್ ಬಿಐ ನಿಂದ ದೊಡ್ಡಪ್ರಮಾಣ ಹಣ ಪಡೆದಿರುವುದೇ ಸಾಕ್ಷಿ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹೇಳಿದ್ದಾರೆ.

ನಗರದ ಜೆ.ಪಿ.ಭವನದಲ್ಲಿ ನಡೆದ ಜೆಡಿಎಸ್ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ನೇಮಕ ಸಭೆಯಲ್ಲಿ ಮಾತನಾಡಿದ ಅವರು, 'ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿದೆ. ಇನ್ನೊಂದೆಡೆ ಭಾರತೀಯ ರಿಸರ್ವ್​ ಬ್ಯಾಂಕಿನಿಂದ ಇಷ್ಟೊಂದು ಹಣ ತೆಗೆದುಕೊಂಡಿದ್ದಾರೆ. ಕೇಂದ್ರ ಸರ್ಕಾರ ಹಿಂದೆಂದೂ ಈ ಪ್ರಮಾಣದಲ್ಲಿ ಹಣ ತೆಗೆದುಕೊಂಡಿರಲಿಲ್ಲ ಎಂದು ಸರ್ಕಾರದ ನಡೆಯನ್ನು ಟೀಕಿಸಿದ್ದಾರೆ.

'ತಮಗೆ ಲಭಿಸಿರುವ ಮಾಹಿತಿ ಅನ್ವಯ ಹಲವು ಸರ್ಕಾರಿ ಇಲಾಖೆಗಳ ನೌಕರರಿಗೆ ಸಂಬಳ ಆಗಿಲ್ಲ. ಸರ್ಕಾರಿ ಸ್ವಾಮ್ಯದ ಹಲವು ಸಂಸ್ಥೆಗಳನ್ನು ಖಾಸಗೀಕರಣ ಮಾಡುತ್ತಿದ್ದಾರೆ. ಆರ್ಥಿಕ ಸಂಕಷ್ಟದಿಂದಾಗಿ ಹಲವರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಚುನಾವಣೆ ಬಳಿಕ 6 ಲಕ್ಷ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಪೀಣ್ಯಾ ಕೈಗಾರಿಕಾ ಪ್ರದೇಶದಲ್ಲಿ ಯಾವ ಪರಿಸ್ಥಿತಿ ನಿರ್ಮಾಣ ಆಗುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಇನ್ನೂ ಹಲವು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗಿಗೆ ಕೊಡುವ ಸಾಧ್ಯತೆ ಇದೆ. ಈ ಹಿಂದೆ ದಿವಂಗತ ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಅವರ ಕಾಲದಲ್ಲಿ ಅಶೋಕ ಹೋಟೆಲ್ ಮಾರಿದಂತೆ ಈಗಿನ ಸರ್ಕಾರ ಕೆಲವೊಂದು ಸರ್ಕಾರಿ ಕಟ್ಟಡಗಳನ್ನು ಮಾರಾಟ ಮಾಡಿದರೂ ಅಚ್ಚರಿಯಿಲ್ಲ. ಇನ್ನೂ ಏನೇನೂ ಮಾಡ್ತಾರೋ? ನಾನಂತೂ ಸಂಸತ್ತಿನಲ್ಲಿ ಇಲ್ಲ. ನಾನು ಪಕ್ಷ ಸಂಘಟನೆ ಮಾಡುತ್ತೇನೆ ಎಂದು ತಿಳಿಸಿದರು.

ಇದೇ ವೇಳೆ ಪ್ರವಾಹದ ಕುರಿತು ಮಾತನಾಡಿದ ಅವರು, ಉತ್ತರಾಂಚಲ, ಛತ್ತೀಸ್ ಗಡ, ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ಇದೆ. ರಾಜ್ಯದಲ್ಲೂ ಅನೇಕ ಸಾವು-ನೋವು ಸಂಭವಿಸಿವೆ. ಸಿಎಂ ಯಡಿಯೂರಪ್ಪ, ನಿಯೋಗ ಕರೆದೊಯ್ದು ಅನುದಾನ ತರುವುದಾಗಿ ಹೇಳಿದ್ದಾರೆ. ಮೊದಲ ಬಾರಿಗೆ ಮೂವರು ಡಿಸಿಎಂ ಮಾಡಿದ್ದಾರೆ. ಯಾವ ಆಧಾರದಲ್ಲಿ ಮಾಡಿದ್ದಾರೆಂಬುದು ಗೊತ್ತಿಲ್ಲ. ಅವರ ಪಕ್ಷದಲ್ಲೇ ಹಲವು ಗೊಂದಲಗಳಿವೆ ಎಂದರು.

ಅವರು ದೊಡ್ಡವರು, ಅವರ ಬಗ್ಗೆ ಮಾತನಾಡುವುದಿಲ್ಲ
ಇದೆ ವೇಳೆ ಕಾಗಿನೆಲೆ ಶ್ರೀಗಳ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಎಚ್ ಡಿಡಿ,'ಅವರು ದೊಡ್ಡವರಿದ್ದಾರೆ. ಅವರ ಬಗ್ಗೆ ಮಾತನಾಡಲ್ಲ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com