ಐಟಿ ದಾಳಿಯಿಂದಲ್ಲ ಆರೋಗ್ಯ ಸಮಸ್ಯೆಯಿಂದ ರಾಜಕೀಯದಿಂದ ದೂರ ಉಳಿದಿದ್ದೇನೆ: ಪರಮೇಶ್ವರ್

ಐಟಿ ದಾಳಿಗೆ ಹೆದರಿಯಲ್ಲ, ಆರೋಗ್ಯ ಸಮಸ್ಯೆಯಿಂದಾಗಿ ರಾಜಕೀಯದಿಂದ ದೂರ ಉಳಿದಿದ್ದೇನೆಂದು ಮಾಜಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ಹೇಳಿದ್ದಾರೆ. 
ಪರಮೇಶ್ವರ್
ಪರಮೇಶ್ವರ್

ತುಮಕೂರು: ಐಟಿ ದಾಳಿಗೆ ಹೆದರಿಯಲ್ಲ, ಆರೋಗ್ಯ ಸಮಸ್ಯೆಯಿಂದಾಗಿ ರಾಜಕೀಯದಿಂದ ದೂರ ಉಳಿದಿದ್ದೇನೆಂದು ಮಾಜಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ಹೇಳಿದ್ದಾರೆ. 

ನ್ಯೂ ಇಂಡಿಯನ್ ಎಕ್ಸ್'ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಪರಮೇಶ್ವರ್ ಅವರು ಮನಬಿಚ್ಚಿ ಮಾತನಾಡಿದ್ದಾರೆ. 

ಉಪಚುನಾವಣೆಯಲ್ಲಿ ಕಾಂಗ್ರೆಸ್ ಭವಿಶ್ಯದ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಬಹು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಖಚಿತ. ಪ್ರಸ್ತುತ ರಾಜ್ಯದ ಪರಿಸ್ಥಿತಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪರವಾಗಿದೆ. ಏಕೆಂದರೆ, ಬಿಜೆಪಿ ನಮ್ಮ ಜನರನ್ನೇ ಇಟ್ಟುಕೊಂಡು ಸ್ಪರ್ಧೆಗೆ ಬಂದಿದೆ. ನಮ್ಮ ಪಕ್ಷವನ್ನು ಬಿಟ್ಟು ಹೊರಹೋಗಿರುವ ಶಾಸಕರು ಅವರಾಗಿದ್ದಾರೆ. ಇಂತಹ ಬೆಳವಣಿಗೆಗಳಿಂದ ಜನರು ಬೇಸರಗೊಂಡಿದ್ದಾರೆ. ಮಹಾರಾಷ್ಟ್ರ ಹಾಗೂ ಹರಿಯಾಣದಲ್ಲೂ ಇಂತಹದ್ದೇ ಬೆಳವಣಿಗೆಗಳು ನಡೆದಿವೆ. ಕಾಂಗ್ರೆಸ್ ಎಷ್ಟು ಸೀಟುಗಳನ್ನು ಗೆಲ್ಲಲಿದೆ ಎಂದು ನಾನು ಹೇಳುವುದಿಲ್ಲ. ಆದರೆ, ಬಹುತೇಕ ಕ್ಷೇತ್ರಗಳಲ್ಲಿ ಗೆಲುವು ಕಾಂಗ್ರೆಸ್ ಪಾಲಾಗಲಿದ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಉರುಳಿ ಬೀಳಲಿದೆ. 

ಕಾಂಗ್ರೆಸ್ ಪಕ್ಷದಲ್ಲಿ ನೀವು ಸೇರಿದಂತೆ ಬಹುತೇಕ ಹಿರಿಯ ನಾಯಕರು ಪ್ರಚಾರ ಕಾರ್ಯದಿಂದ ದೂರ ಉಳಿದಿದ್ದೀರಿ. ಇದು ಪಕ್ಷದಲ್ಲಿ ಒಗ್ಗಟ್ಟಿನ ಕೊರತೆಯಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯ?
ಈ ಬಾರಿಯ ಚುನಾವಣೆಯಲ್ಲಿ ವಿಭಿನ್ನ ತಂತ್ರವನ್ನು ನಾವು ಅಳವಡಿಸಿಕೊಂಡಿದ್ದೇವೆ. ಪ್ರತೀ ಬಾರಿ ಎಲ್ಲರೂ ಒಗ್ಗಟ್ಟಿನಿಂದ ಹೋಗುತ್ತಿದ್ದೆವು. ಆದರೆ, ಈ ಬಾರಿ ಬೇರೆ ಬೇರೆ ಕ್ಷೇತ್ರಗಳಾಗಿರುವುದರಿಂದ ಒಗ್ಗಟ್ಟಿನಲ್ಲಿ ಪ್ರಚಾರ ನಡೆಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿಯೇ ಸಿದ್ದರಾಮಯ್ಯ, ಡಿಕೆ.ಶಿವಕುಮಾರ್ ಹಾಗೂ ನಾನು ಒಬ್ಬಂಟಿಯಾಗಿ ಪ್ರಚಾರ ನಡೆಸುತ್ತಿರುವುದು. ಇದರಿಂದ ನಾವು ಒಗ್ಗಟ್ಟಿನಿಂದ ಇಲ್ಲ ಎಂದು ಹೇಳುವುದು ಸರಿಯಲ್ಲ. 

ಐಟಿ ದಾಳಿಗೆ ಹೆದರಿ ನೀವು ರಾಜಕೀಯದಿಂದ ದೂರ ಉಳಿದಿದ್ದೀರೀ ಎಂದು ಹೇಳಲಾಗುತ್ತಿದೆ?
ಇದು ಸತ್ಯವಲ್ಲ. ನನ್ನನ್ನು ಕೆಲ ಆರೋಗ್ಯ ಸಮಸ್ಯೆಗಳು ಕಾಡುತ್ತಿದೆ. ಹೀಗಾಗಿ ರಾಜಕೀಯದಲ್ಲಿ ಹೆಚ್ಚು ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ. ನಮ್ಮ ರಾಜಕೀಯದಲ್ಲಿ ಐಟಿ ದಾಳಿ ಏನನ್ನೂ ಮಾಡಲು ಸಾಧ್ಯವಿಲ್ಲ. 

ಭವಿಷ್ಯದಲ್ಲಿ ಪಕ್ಷವನ್ನು ಯಾರು ಮುಂದುವರೆಸಿಕೊಂಡು ಹೋಗುತ್ತಾರೆ?
ಪಕ್ಷದಲ್ಲಿ ಸಾಕಷ್ಟು ನಾಯಕರಿದ್ದಾರೆ. ಯಾರಿಗಾದರೂ ಜವಾಬ್ದಾರಿ ನೀಡಬಹುದು. ಪ್ರಸ್ತುತ ದಿನೇಶ್ ಗುಂಡೂರಾವ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಾಗಿದ್ದಾರೆ. ಅಗತ್ಯ ಬಿದ್ದರೆ ಿತರೆ ನಾಯಕರಿಗೂ ಜವಾಬ್ದಾರಿ ನೀಡಬಹುದು. ಪಕ್ಷದಲ್ಲಿ ನಾಯಕರ ಕೊರತೆಯಿಲ್ಲ. 

ಚುನಾವಣೆಯಲ್ಲಿ ಪಕ್ಷ ಕಳಪೆ ಪ್ರದರ್ಶನ ತೋರಿದ್ದೇ ಆದರೆ, ಅದಕ್ಕೆ ಯಾರು ಜವಾಬ್ದಾರರಾಗುತ್ತಾರೆ? ನಾಯಕರ ಬದಲಾವಣೆ ಬಗ್ಗೆ ಏನಾದರೂ ಯೋಜನೆಯಿಂದೆಯೇ?
ಪ್ರತೀಯೊಬ್ಬರೂ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಯಾರೋ ಒಬ್ಬ ವ್ಯಕ್ತಿಯನ್ನೇ ಜವಾಬ್ದಾರರನ್ನಾಗಿ ಮಾಡಬೇಕು? ನಾಯಕರ ಬದಲಾವಣೆ ಬಗ್ಗೆ ನನಗೆ ತಿಳಿದಿಲ್ಲ. ಅದು ಕೇವಲ ವದಂತಿಯಷ್ಟೇ. ಹೈ ಕಮಾಂಡ್ ಮುಂದೆ ನನಗೆ ಯಾವ ದೊಡ್ಡ ಜವಾಬ್ದಾರಿಯನ್ನು ನೀಡಲಿದೆ ಎಂಬುದೂ ನನಗೆ ತಿಳಿದಿಲ್ಲ. 

ಕಾಂಗ್ರೆಸ್ ನಿಂದ ದಲಿತರೂ ದೂರಾಗುತ್ತಿದ್ದಾರೆ. ಹುಣಸೂರು ಕ್ಷೇತ್ರದಲ್ಲಿ ನೀವು ಪ್ರಚಾರ ನಡೆಸುತ್ತಿದ್ದಾಗ ಪ್ರತಿಭಟನೆ ನಡೆಸುತ್ತಿದ್ದರು?
ದಲಿತರು ಪಕ್ಷ ಬಿಟ್ಟು ದೂರ ಹೋಗುತ್ತಿದ್ದಾರೆನ್ನುವುದು ಸತ್ಯವಲ್ಲ. ಸತ್ಯ ಹೇಳಬೇಕೆಂದರೆ ಬಹುತೇಕ ದಲಿತರು ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದಾರೆ. ಮುಂದೆಯೂ ಪಕ್ಷದೊಂದಿಗಿರುತ್ತಾರೆ. ಹುಣಸೂರು ಘಟನೆ ಪ್ರತ್ಯೇಕ ಪ್ರಕರಣವಾಗಿದ್ದು, ಎಲ್ಲವನ್ನೂ ಸಾಮಾನ್ಯೀಕರಣದಿಂದ ನೋಡಬಾರದು. 

ಚುನಾವಣೆ ಬಳಿಕ ದಲಿತ ಸಿಎಂ ವಿಚಾರ ತಲೆದೋರಲಿದೆಯೇ?
ಹಾಗೆಂದು ಎನಿಸುತ್ತಿಲ್ಲ. ಪಕ್ಷದ ಹೈ ಕಮಾಂಡ್ ಎಲ್ಲಾ ನಿರ್ಧಾರವನ್ನು ತೆಗೆದುಕೊಳ್ಳುತ್ತಿದೆ. ಸಮಯ ಬಂದಾಗ ಅವರೇ ಎಲ್ಲಾ ನಿರ್ಧಾರಗಳನ್ನೂ ತೆಗೆದುಕೊಳ್ಳುತ್ತಾರೆ. 

ಇದೇ ವೇಳೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕುರಿತಂತೆ ಮಾತನಾಡಿರುವ ಅವರು, ಉಪ ಚುನಾವಣೆಯಲ್ಲಿ ಬಿಜೆಪಿ ಬಹು ಕ್ಷೇತ್ರಗಳಲ್ಲಿ ಸೋಲು ಕಂಡಿದ್ದೇ ಆದರೆ, ಮೈತ್ರಿ ಬಗ್ಗೆ ಹೈ ಕಮಾಂಡ್ ನಿರ್ಧಾರ ಕೈಗೊಳ್ಳಲಿದೆ ಎಂದಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com