ಬಿಜೆಪಿಗೆ ಬಹುಮತ ಬಾರದಂತೆ ತಡೆಯಲು ಕಾಂಗ್ರೆಸ್ , ಜೆಡಿಎಸ್ ಕಾರ್ಯಕರ್ತರ ಹುನ್ನಾರ- ಯಡಿಯೂರಪ್ಪ

ಉತ್ತರ ಕರ್ನಾಟಕ ಹಾಗೂ ಮೈಸೂರು ಭಾಗದಲ್ಲಿ ಒಂದು ವಾರ ಪ್ರಚಾರ ನಡೆಸಿದ ಬಳಿಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶನಿವಾರ ಬೆಂಗಳೂರಿನಲ್ಲಿ ಬಿರುಸಿನ ಪ್ರಚಾರ ನಡೆಸಿದರು
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ

ಬೆಂಗಳೂರು: ಉತ್ತರ ಕರ್ನಾಟಕ ಹಾಗೂ ಮೈಸೂರು ಭಾಗದಲ್ಲಿ ಒಂದು ವಾರ ಪ್ರಚಾರ ನಡೆಸಿದ ಬಳಿಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶನಿವಾರ ಬೆಂಗಳೂರಿನಲ್ಲಿ ಬಿರುಸಿನ ಪ್ರಚಾರ ನಡೆಸಿದರು. ಯಶವಂತಪುರ ಹಾಗೂ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರ ವ್ಯಾಪ್ತಿಯಲ್ಲಿ ಬೆಳಗ್ಗೆ 11ರಿಂದ ರಾತ್ರಿ 8 ಗಂಟೆಯವೆರಗೂ ರೋಡ್ ಶೋನಲ್ಲಿ ಪಾಲ್ಗೊಂಡಿದ್ದರು.

ಈ ವೇಳೆ ಜನತೆಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ, ಅಭಿವೃದ್ದಿಯೇ ನಮ್ಮ ಗುರಿಯಾಗಿದ್ದು, ಸುಭದ್ರ ಸರ್ಕಾರದ ಅಗತ್ಯವಿದೆ ಎಂದು ಒತ್ತಿ ಹೇಳಿದರು. ಜೆಡಿಎಸ್  ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಕೂಡಾ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮನವಿ ಮಾಡಿಕೊಂಡರು. 

ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ಮಧ್ಯಂತರ ಚುನಾವಣೆಯ ಜಪ ಮಾಡುತ್ತಿದ್ದಾರೆ. ಅವರಿಗೆ ಅಭಿವೃದ್ಧಿ ಬೇಕಾಗಿಲ್ಲ. ಬಿಜೆಪಿಗೆ ಬಹುಮತ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಡಿಸೆಂಬರ್ 9 ರಂದು ಮತದಾನ ಆರಂಭವಾಗುತ್ತಿದ್ದಂತೆ ಅವರೆಲ್ಲಾ ಮತ ಎಣಿಕೆ ಕೇಂದ್ರ ಬಿಟ್ಟು ಓಡಿ ಹೋಗಲಿದ್ದಾರೆ. ಎಲ್ಲಾ 15 ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು. 

ಕಾಂಗ್ರೆಸ್  ಹಾಗೂ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ಅಭ್ಯರ್ಥಿ ಎಸ್. ಟಿ ಸೋಮಶೇಖರ್, ಮೈತ್ರಿ ಸರ್ಕಾರದ 15 ತಿಂಗಳ ಆಡಳಿತಾವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ ಯಾವುದೇ ಅನುದಾನ ನೀಡಲಿಲ್ಲ. ಕೇವಲ 3 ತಿಂಗಳೊಳಗೆ ಯಡಿಯೂರಪ್ಪ 750 ಕೋಟಿ ರೂ ಬಿಡುಗಡೆ ಮಾಡಿದ್ದಾರೆ ಎಂದು ತಿಳಿಸಿದರು.

ಇಂದು ಶಿವಾಜಿನಗರದಲ್ಲಿ ರೋಡ್ ಶೋ ನಡೆಸಲಿರುವ ಯಡಿಯೂರಪ್ಪ ಸಂಜೆ ಬೆಳಗಾವಿಯ ಗೋಕಾಕ್ ಹಾಗೂ ಕಾಗವಾಡದಲ್ಲಿ ಎರಡನೇ ಹಂತದಲ್ಲಿ ಪ್ರಚಾರ ನಡೆಸಲಿದ್ದಾರೆ. 15 ಕ್ಷೇತ್ರಗಳನ್ನು ಸುತ್ತಿರುವ ಮುಖ್ಯಮಂತ್ರಿ, ಮುಂದಿನ ಮೂರು ದಿನಗಳಲ್ಲಿ ಹೆಚ್ಚಿಗೆ ಪ್ರಾಮುಖ್ಯತೆ ಇರುವಂತಹ ಪ್ರದೇಶಗಳತ್ತ ಗಮನ ನೀಡಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com