ಹೊಸಪೇಟೆ: ಅನರ್ಹ ಶಾಸಕ ಆನಂದ್ ಸಿಂಗ್ ರಿಂದ ನೀತಿ ಸಂಹಿತೆ ಉಲ್ಲಂಘನೆ?

ಕರ್ನಾಟಕದ ಹಾಲಿ ಬಿಜೆಪಿ ಸರ್ಕಾರದ ಅಳಿವು-ಉಳಿವಿನ ಪ್ರಶ್ನೆಯಾಗಿರುವ 15 ಕ್ಷೇತ್ರಗಳಲ್ಲಿನ ಉಪ ಚುನಾವಣೆ ಮತದಾನ ಪ್ರಕ್ರಿಯೆ ಚಾಲ್ತಿಯಲ್ಲಿರುವಂತೆಯೇ ಅತ್ತ ಅನರ್ಹ ಶಾಸಕ ಆನಂದ್ ಸಿಂಗ್ ಅವರ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪ ಕೇಳಿಬಂದಿದೆ.
ಆನಂದ್ ಸಿಂಗ್ ಕೈ ಕಾರ್ಯಕರ್ತರ ವಿರೋಧ
ಆನಂದ್ ಸಿಂಗ್ ಕೈ ಕಾರ್ಯಕರ್ತರ ವಿರೋಧ

ಮತದಾನ ಬಹಿಷ್ಕರಿಸಿದ್ದ ಗ್ರಾಮಸ್ಥರ ಮನವೊಲಿಕೆಗೆ ಖುದ್ಧು ತೆರಳಿದ್ದ ಆನಂದ್ ಸಿಂಗ್

ಹೊಸಪೇಟೆ: ಕರ್ನಾಟಕದ ಹಾಲಿ ಬಿಜೆಪಿ ಸರ್ಕಾರದ ಅಳಿವು-ಉಳಿವಿನ ಪ್ರಶ್ನೆಯಾಗಿರುವ 15 ಕ್ಷೇತ್ರಗಳಲ್ಲಿನ ಉಪ ಚುನಾವಣೆ ಮತದಾನ ಪ್ರಕ್ರಿಯೆ ಚಾಲ್ತಿಯಲ್ಲಿರುವಂತೆಯೇ ಅತ್ತ ಅನರ್ಹ ಶಾಸಕ ಆನಂದ್ ಸಿಂಗ್ ಅವರ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪ ಕೇಳಿಬಂದಿದೆ.

ಹೌದು.. ಹೊಸಪೇಟೆಯ ಮುದ್ಲಾಪುರ ಗ್ರಾಮಸ್ಥರು ಮತದಾನವನ್ನು ಬಹಿಷ್ಕರಿಸಿದ್ದರು. ಈ ವಿಚಾರ ತಿಳಿದ ಅನರ್ಹ ಶಾಸಕ ಆನಂದ್ ಸಿಂಗ್ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಹೊರತಾಗಿಯೂ ಗ್ರಾಮಕ್ಕೆ ಆಗಮಿಸಿ ಗ್ರಾಮಸ್ಥರ ಮನವೊಲಿಕೆಗೆ ಯತ್ನಿಸಿದ್ದಾರೆ. ಈ ವೇಳೆ ಆನಂದ್ ಸಿಂಗ್ ಗ್ರಾಮಕ್ಕೆ ಆಗಮಿಸುತ್ತಿದ್ದಂತೆಯೇ ಅತ್ತ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶಗೊಂಡಿದ್ದು, ಮತದಾನ ಪ್ರಕ್ರಿಯೆ ಚಾಲ್ತಿಯಲ್ಲಿರುವಾಗ ಆನಂದ್ ಸಿಂಗ್ ಮತದಾರನ್ನು ಓಲೈಸುವ ಯತ್ನ ಮಾಡಿದ್ದಾರೆ. ಇದು ನೀತಿ ಸಂಹಿತೆಯ ಉಲ್ಲಂಘನೆ ಎಂದು ಆರೋಪಿಸಿದ್ದಾರೆ.

ಈ ವೇಳೆ ಆನಂದ್ ಸಿಂಗ್ ಬೆಂಬಲಿಗರು ಮತ್ತು ಕಾಂಗ್ರೆಸ್ ಬೆಂಬಲಿಗರು ಪರಸ್ಪರ ವಾಕ್ಸಮರ ನಡೆಸಿದ ಪ್ರಸಂಗವೂ ನಡೆದಿದೆ. ಇತ್ತ ಕಾರ್ಯಕರ್ತರ ವಾಕ್ಸಮರ ತಾರಕಕ್ಕೇರುತ್ತಿದ್ದಂತೆಯೇ ಗ್ರಾಮಕ್ಕೆ ಭೇಟಿ ನೀಡಿದ ಅಧಿಕಾರಿಗಳು ಅನರ್ಹ ಶಾಸಕ ಆನಂದ್ ಸಿಂಗ್ ರನ್ನು ಗ್ರಾಮದಿಂದ ಹೊರಗೆ ಕಳುಹಿಸಿದ್ದಾರೆ. ಇದಕ್ಕೂ ಮುಂಚಿತವಾಗಿ ಹೊಸಪೇಟೆ ತಹಸಿಲ್ದಾರ್ ನೀತಿ ಸಂಹಿತೆ ಉಲ್ಲಂಘನೆ ಆಗುತ್ತದೆ ಎಂದು ಆನಂದ್ ಸಿಂಗ್ ಗೆ ಸೂಕ್ಷ್ಮವಾಗಿ ಹೇಳಿದರೂ ಆನಂದ್ ಸಿಂಗ್ ಅಲ್ಲಿಂದ ತೆರಳಲಿಲ್ಲ ಎನ್ನಲಾಗಿದೆ. 

ಅಲ್ಲದೆ ಏನು ಬೇಕಾದರೂ ಆಗಲಿ ಜನಗಳ ಮನವೊಲಿಸಿ ಮತದಾನ ಮಾಡಿಸುತ್ತೇನೆ. ಇಷ್ಟು ದಿನ ಈ ಗ್ರಾಮದಲ್ಲಿ ಸಮಸ್ಯೆ ಹಾಗೆಯೇ ಉಳಿಯುವುದಕ್ಕೆ ಕಾರಣ ಏನೆಂದು ಮನವರಿಕೆ ಮಾಡುತ್ತೇನೆ ಎಂದು ಆನಂದ್ ಸಿಂಗ್ ಹೇಳಿದ್ದಾರೆ. 

ಪ್ರಸ್ತುತ ಗ್ರಾಮದಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದ್ದು, ಅಧಿಕಾರಿಗಳು ಗ್ರಾಮಸ್ಥರನ್ನು ಮನವೊಲಿಸಿ ಮತಗಟ್ಟೆಗಳತ್ತ ಕಳುಹಿಸಿದ್ದಾರೆ ಎನ್ನಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com