ಈರುಳ್ಳಿ ಲಾಭ ರೈತರ ಪಾಲಾಗದೇ ಏಜೆಂಟ್‌ರ ಜೇಬು ಸೇರಿದೆ- ಸಿದ್ದರಾಮಯ್ಯ 

ಈರುಳ್ಳಿ ಬೆಲೆ ಏರಿಕೆಯ ಲಾಭ ದಲ್ಲಾಳ್ಳಿಗಳ ಪಾಲಾಗಿದ್ದು, ರೈತರಿಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. 
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬಾಗಲಕೋಟೆ: ಈರುಳ್ಳಿ ಬೆಲೆ ಏರಿಕೆಯ ಲಾಭ ದಲ್ಲಾಳ್ಳಿಗಳ ಪಾಲಾಗಿದ್ದು, ರೈತರಿಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. 

ಬಾದಾಮಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಈರುಳ್ಳಿ ಬೆಲೆ ಏರಿಕೆ ಕುರಿತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ನೀಡಿದ ಹೇಳಿಕೆ ಕುರಿತು ತೀವ್ರ ವಾಗ್ದಾಳಿ ನಡೆಸಿದರು.ಹಣಕಾಸು ಸಚಿವರದ್ದು ಬೇಜವಾಬ್ದಾರಿ ಹೇಳಿಕೆಯಾಗಿದೆ. ಕೇಂದ್ರದ ಹಣಕಾಸು ಸಚಿವರಾಗಿ ಬೇಜವಾಬ್ದಾರಿ ಹೇಳಿಕೆ ನೀಡುವ ಮೂಲಕ ಅವರು ಮಂತ್ರಿ ಆಗುವುದಕ್ಕೆ ಎಷ್ಟು ಅರ್ಹರು ಎನ್ನುವ ಕುರಿತು ಜನ ಚರ್ಚೆ ಮಾಡಬೇಕು ಎಂದರು.

ಉಪಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲುವ ಮಾಹಿತಿ ಇದೆ. ಫಲಿತಾಂಶ ಬಳಿಕ ಬಿಎಸ್‌ವೈ ರಾಜೀನಾಮೆ ಕೊಡಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಲಿದೆ ಎಂದು ಸಿದ್ದರಾಮಯ್ಯ ಭವಿಷ್ಯ ನುಡಿದರು. 

ಶಾಶ್ವತವಾಗಿ ವಿರೋಧ ಪಕ್ಷದ ಸ್ಥಾನದಲ್ಲಿ ಕೂಡಬೇಕಾಗುತ್ತದೆ ಎನ್ನುವ ಬಿಎಸ್‌ವೈ ಹೇಳಿಕೆಗೆ ಟಾಂಗ್ ನೀಡಿದ ಸಿದ್ದರಾಮಯ್ಯ ಹಿಂದೆ ಅವ್ರೇನಾಗಿದ್ರು. ಹಿಂಬಾಗಿಲಿನಿಂದ ಬಂದು ಸಿಎಂ ಕುರ್ಚಿ  ಮೇಲೆ  ಕುಳಿತುಕೊಳ್ಳೋ ಮುನ್ನ ಏನಾಗಿದ್ದರು ಎನ್ನುವುದನ್ನು ತಿಳಿದುಕೊಳ್ಳಲಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಶ್ವತವಾಗಿ ಯಾರು ಇರಲಿಕ್ಕೆ ಸಾಧ್ಯವಿಲ್ಲ. ಶಾಶ್ವತವಾಗಿ ವಿಪಕ್ಷ ನಾಯಕನಾಗಿ, ಸಿಎಂ ಆಗಿಯೂ ಇರೋಕೆ ಸಾಧ್ಯ ಇಲ್ಲ. ಯಾರಾದ್ರೂ ಸಾಯುವೆರಗೂ ಇರ್ತಾರಾ ಎಂದು  ಪ್ರಶ್ನಿಸಿದ ಅವರು ಈ ಕುರಿತಂತೆ  ತಿಳಿದುಕೊಳ್ಳಲಿ ಎಂದು ಸಲಹೆ ಮಾಡಿದರು.

ಟಿಪ್ಪು ಸುಲ್ತಾನ್ ಜಯಂತಿ ರದ್ದು ಪಡಿಸಿರುವ ಬಿಎಸ್ ಯಡಿಯೂರಪ್ಪ ಅವರ  ನಿಲುವನ್ನು ತೀವ್ರವಾಗಿ ಖಂಡಿಸಿದ ಅವರು, ಇತರ ರಾಜರಂತೆ ಟಿಪ್ಪು, ಹೈದರಲಿ ಕೂಡ ರಾಜರಾದವರು. ಬ್ರಿಟಿಷರ ವಿರುದ್ಧ ಹೋರಾಡಿದವರು. ಇಂತಹ ವಿಷಯದಲ್ಲಿ ಬಿಜೆಪಿಗರು ರಾಜಕಾರಣ ಮಾಡುತ್ತಾರೆ. ಜನ ಅವರಿಗೆ ಮತ ಹಾಕುತ್ತಾರೆ ಏನು ಮಾಡುವುದು ಎಂದರು. 

ಯಡಿಯೂರಪ್ಪ ಮುಖ್ಯಮಂತ್ರಿ ಆಗಿ ಐದು ತಿಂಗಳಾಯಿತು ಮೂರು ಕಾಸಿನ ಕೆಲಸ ಮಾಡಿಲ್ಲ. ಶಾಸಕರನ್ನು ದುಡ್ಡು ಕೊಟ್ಟು ಖರೀದಿಸುವುದನ್ನು ಬಿಟ್ಟರೆ ಬೇರೆ ಏನೂ ಮಾಡಿಲ್ಲ. ನಾನೇ ಸಿಎಂ ಆಗಿರಬೇಕು ಎನ್ನುತ್ತಾರೆ. ಇವರು ಶಾಶ್ವತವಾಗಿ ಮುಖ್ಯಮಂತ್ರಿಯಾಗಿರಲು  ಸಾಧ್ಯನಾ ಎಂದು ಪ್ರಶ್ನಿಸಿದ ಅವರು, ಜನಗಳು ಬುದ್ದಿವಂತರಾಗಬೇಕು. ಜನ ಬುದ್ದಿವಂತರಾಗದೇ ಹೋದಲ್ಲಿ ಇಂತವರ ಕೈಗೆ ಅಧಿಕಾರ ಸಿಕ್ಕುತ್ತದೆ .ಹುಚ್ಚನ ಮದುವೆಯಲ್ಲಿ ಉಂಡವನೆ ಜಾಣ.ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಯಂತೆ ಅಧಿಕಾರ ನಡೆಸುತ್ತಿದ್ದಾರೆ ಎಂದು ಹರಿಹಾಯ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com