ಉಪ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ದಾಖಲೆ, ಮುಂದಿನ ಗುರಿ‌ 150: ಸಿಎಂ ಯಡಿಯೂರಪ್ಪ

ಉಪಚುನಾವಣೆ ಫಲಿತಾಂಶದಿಂದ ಬಿಜೆಪಿ ರಾಜ್ಯದಲ್ಲಿ ಐತಿಹಾಸಿಕ ದಾಖಲೆ ಬರೆದಿದ್ದು, ಮುಂದಿನ ದಿನಗಳಲ್ಲಿ 150 ಸ್ಥಾನ ಗೆಲ್ಲುವ ಗುರಿಯ ಸಾಕಾರಕ್ಕೆ ಈಗಿನಿಂದಲೇ  ಹೆಜ್ಜೆ ಇಡಬೇಕು...
ಬಿಎಸ್ ಯಡಿಯೂರಪ್ಪ
ಬಿಎಸ್ ಯಡಿಯೂರಪ್ಪ

ಬೆಂಗಳೂರು: ಉಪಚುನಾವಣೆ ಫಲಿತಾಂಶದಿಂದ ಬಿಜೆಪಿ ರಾಜ್ಯದಲ್ಲಿ ಐತಿಹಾಸಿಕ ದಾಖಲೆ ಬರೆದಿದ್ದು, ಮುಂದಿನ ದಿನಗಳಲ್ಲಿ 150 ಸ್ಥಾನ ಗೆಲ್ಲುವ ಗುರಿಯ ಸಾಕಾರಕ್ಕೆ ಈಗಿನಿಂದಲೇ  ಹೆಜ್ಜೆ ಇಡಬೇಕು. ಎಲ್ಲರ ಸಹಾಯದಿಂದ ನಾವು ಮುಂದೆ ಹೋಗಬೇಕು‌ ಎಂದು ಮುಖ್ಯಮಂತ್ರಿ  ಬಿ.ಎಸ್.ಯಡಿಯೂರಪ್ಪ ಅವರು ಸೋಮವಾರ ಕರೆ ನೀಡಿದ್ದಾರೆ.

ಉಪ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ ಬಳಿಕ ಇಂದು ಸಂಜೆ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಯಡಿಯೂರಪ್ಪ, ಚುನಾವಣೆಯಲ್ಲಿ ಪಕ್ಷದ ಮುಖಂಡರು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಗೊತ್ತಿಲ್ಲದ ಊರುಗಳಲ್ಲಿಯು ಸಮರ್ಥವಾಗಿ ಕಾರ್ಯಕರ್ತರು ಕೆಲಸ ನಿರ್ವಹಿಸಿದ್ದಾರೆ. ಲೋಕಸಭೆಯಂತೆಯೇ ವಿಧಾನಸಭೆ ಉಪಚುನಾವಣೆಯಲ್ಲಿಯೂ ನಾವು ದೊಡ್ಡ ಮಟ್ಟದ ಅಂತರದಿಂದ ಗೆಲುವು ಸಾಧಿಸಿದ್ದೇವೆ ಎಂದು ಹರ್ಷವ್ಯಕ್ತಪಡಿಸಿದರು.

ಇನ್ನು ಮೂರುವರೇ ವರ್ಷ ಪಕ್ಷದ ಶಾಸಕರು, ಸಚಿವರು, ಕಾರ್ಯಕರ್ತರು ಜನರ ಅಪೇಕ್ಷೆಯಂತೆ  ಕಾರ್ಯನಿರ್ವಹಿಸಲಿದ್ದಾರೆ. ಬರುವ ಬಜೆಟ್ ನಲ್ಲಿ ಕೃಷಿ, ನೀರಾವರಿ, ರೈತನ ಅಭಿವೃದ್ಧಿಗೆ, ಕೈಗಾರಿಕೆ ಸೇರಿದಂತೆ‌ ಒಟ್ಟಾರೆ ರಾಜ್ಯದ ಅಭಿವೃದ್ಧಿಗೆ ಒತ್ತು ಕೊಡಬೇಕು. ಪ್ರಧಾನಿ ನರೇಂದ್ರ ಮೋದಿ ಕೂಡ ರಾಜ್ಯದ ಅಭಿವೃದ್ಧಿ ಬಗ್ಗೆ ಗಮನ ಕೊಟ್ಟಿದ್ದಾರೆ  ಎಂದರು.

ರಾಜ್ಯದ ಫಲಿತಾಂಶದತ್ತ ಇಡೀ‌ ದೇಶದ‌‌‌ ಗಮನವೇ ಹರಿಸಿತ್ತು. ಕಾಂಗ್ರೆಸ್,  ಜೆಡಿಎಸ್ ಬಗ್ಗೆ ಟೀಕಿಸುವುದರಿಂದ ನಮಗೇನು ಉಪಯೋಗವಿಲ್ಲ. ಈಗಾಗಲೇ ಅವರು ಹೀನಾಯ ಸೋಲು ಅನುಭವಿಸಿದ್ದು, ಉತ್ತರ ಕೊಡದೇ ಇರುವ ಪರಿಸ್ಥಿತಿಗೆ ಬಂದು ತಲುಪಿದ್ದಾರೆ ಎಂದು  ಯಡಿಯೂರಪ್ಪ ಕುಟುಕಿದರು.

ಪಕ್ಷ ಸಂಘಟನೆ ಹಾಗೂ ರಾಜ್ಯದ ಅಭಿವೃದ್ಧಿ ಕಡೆ ಗಮನ ಕೊಡಬೇಕು. ನಿರೀಕ್ಷೆ ಮೀರಿ ಗೆಲುವು ಕೊಟ್ಟ ಜನರ ಋಣ ತೀರಿಸಬೇಕು. ಮಂಡ್ಯದಲ್ಲಿ ಜೆಡಿಎಸ್ ಗೆ ಉಸಿರುಕಟ್ಟುವ ವಾತಾವರಣ ಇರುವುದನ್ನು ನಾವು ಬಳಸಿಕೊಂಡು ಮುಂದೆಯೂ ಅಲ್ಲಿ ಬಿಜೆಪಿ ಗೆಲ್ಲುವ ಕೆಲಸ ಮಾಡಬೇಕು. ಸರ್ಕಾರ ಹಾಗೂ ಪಕ್ಷ ಒಟ್ಟಾಗಿ ಹೋದಾಗ ಮಾತ್ರ ರಾಜ್ಯವನ್ನು ಮಾದರಿ ರಾಜ್ಯವನ್ನಾಗಿ ಮಾಡಬಹುದು ಎಂದು ಕರೆ ನೀಡಿದರು.

ಈ ಗೆಲುವು ಸಾಮೂಹಿಕ  ನೇತೃತ್ವದ ಗೆಲುವು. ನಿರೀಕ್ಷೆಗೂ ಮೀರಿದ ಅಂತರದಲ್ಲಿ ಪಕ್ಷ ಗೆಲುವು ಸಾಧಿಸಿದ್ದು ಬೆಂಗಳೂರನ್ನು ಮಾದರಿ ನಗರವನ್ನಾಗಿ ಮಾಡಬೇಕು. ಇದಕ್ಕಾಗಿ ಪ್ರಾಮಾಣಿಕತೆಯಿಂದ ನಾವು ಕೆಲಸ  ಮಾಡಬೇಕು. ಮೂರು ತಿಂಗಳ ಒಳಗೆ ಬೆಂಗಳೂರು ಸುಧಾರಣೆ ಆಗಬೇಕು. ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಸಚಿವ ಅಶೋಕ್ ಅವರನ್ನು ಉಲ್ಲೇಖಿಸಿ ಕಿವಿ ಮಾತು ಹೇಳಿದರು.

ಬೆಂಗಳೂರು ಕಸದ ಸಮಸ್ಯೆ ಬಗ್ಗೆ ವಿಶೇಷ ಗಮನ ಕೊಡಬೇಕು. ಮಂಗಳವಾರ ಕೇಂದ್ರ ಸಚಿವ ನಿತಿನ್ ಗಡ್ಕರಿ ಬೆಂಗಳೂರಿಗೆ ಆಗಮಿಸುತ್ತಿದ್ದು ಅವರೊಂದಿಗೆ ನಗರದ ಅಭಿವೃದ್ಧಿ ಬಗ್ಗೆ ತಾವು  ಚರ್ಚಿಸುವುದಾಗಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com