ಉತ್ತರ ಕರ್ನಾಟಕದಲ್ಲಿ ಬಿಜೆಪಿ ಕ್ಲೀನ್ ಸ್ವೀಪ್: ಬಿಎಸ್ ವೈ ಗೆ ವರವಾಯ್ತು ಲಿಂಗಾಯತ ಟ್ರಂಪ್ ಕಾರ್ಡ್!

ಉತ್ತರ ಕರ್ನಾಟಕದ ಐದು ಕ್ಷೇತ್ರಗಳಲ್ಲೂ ಬಿಜೆಪಿ ಕ್ಲೀನ್ ಸ್ವೀಪ್ ಮಾಡಿದೆ, ಗೋಕಾಕ್, ಅಥಣಿ, ರಾಣೆ ಬೆನ್ನೂರು, ಕಾಗವಾಡ ಮತ್ತು ಹಿರೆಕೆರೂರು ಐದು ಕ್ಷೇತ್ರಗಳು ಬಿಜೆಪಿ ಪಾಲಾಗಿವೆ. 
ಯಡಿಯೂರಪ್ಪ
ಯಡಿಯೂರಪ್ಪ

ಬೆಳಗಾವಿ: ಉತ್ತರ ಕರ್ನಾಟಕದ ಐದು ಕ್ಷೇತ್ರಗಳಲ್ಲೂ ಬಿಜೆಪಿ ಕ್ಲೀನ್ ಸ್ವೀಪ್ ಮಾಡಿದೆ, ಗೋಕಾಕ್, ಅಥಣಿ, ರಾಣೆ ಬೆನ್ನೂರು, ಕಾಗವಾಡ ಮತ್ತು ಹಿರೆಕೆರೂರು ಐದು ಕ್ಷೇತ್ರಗಳು ಬಿಜೆಪಿ ಪಾಲಾಗಿವೆ. 

ಲಿಂಗಾಯತರೇ ಅತಿ ಹೆಚ್ಚು ಪ್ರಮಾಣದಲ್ಲಿರುವ  ಈ ಭಾಗದಲ್ಲಿ  ಸಿಎಂ ಯಡಿಯೂರಪ್ಪ ಅವರು ರ್ಯಾಲಿ ನಡೆಸಿದ್ದರು.  ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಲಿಂಗಾಯತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ. ಇಲ್ಲಿನ ಲಿಂಗಾಯತರು ಮಾಸ್ ಲೀಡರ್ ಯಡಿಯೂರಪ್ಪ ಬೆಂಬಲಕ್ಕೆ ನಿಂತಿದ್ದಾರೆ.

ಅಥಣಿ, ಕಾಗವಾಡ ಮತ್ತು ಗೋಕಾಕ್ ನಲ್ಲಿ ಕಾಂಗ್ರೆಸ್ ಗೆಲ್ಲುವ ವಿಶ್ವಾಸದಲ್ಲಿತ್ತು.  ಆದರೆ ಜನ ಕಾಂಗ್ರೆಸ್ ಪಕ್ಷಕ್ಕೆ ಮನ್ನಣೆ ನೀಡಿಲ್ಲ,  ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ 39,989 ಮತಗಳು ಹಾಗೂ ಶ್ರೀಮಂತ್ ಪಾಟೀಲ್ 18,532 , ಗೋಕಾಕ್ ನಲ್ಲಿ ರಮೇಶ್ ಜಾರಕಿಹೊಳಿ 29,006 ಹಾಗೂ ಯಲ್ಲಾಪುರದಲ್ಲಿ ಶಿವರಾಮ್ ಹೆಬ್ಬಾರ್ 31,408 , ಬಿಸಿ ಪಾಟೀಲ್ 29,067  ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಕಾಗವಾಡ ಮತ್ತು ಅಥಣಿಯ ಕೆಲ ಭಾಗಗಳಲ್ಲಿ  ಪ್ರವಾಹ ಪರಿಹಾರ ಸಂಬಂಧಿಸಿದಂತೆ ಶ್ರೀಮಂತ್ ಪಾಟೀಲ್ ಮತ್ತು ಮಹೇಶ್ ಕುಮಟಳ್ಳಿ ಅವರು ತಮ್ಮ ಗ್ರಾಮಗಳಿಗೆ ಬರದಂತೆ ವಿರೋಧ ವ್ಯಕ್ತ ಪಡಿಸಿದ್ದರು. 

ಆದರೆ ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಈ 5 ಕ್ಷೇತ್ರಗಳಲ್ಲಿ ನಿರಂತರ ಪ್ರಚಾರ ನಡೆಸಿದರು, ಲಿಂಗಾಯತರು ಹಾಗೂ ವೀರಶೈವರು ತಮ್ಮನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು. ಸಿಎಂ ನಿರ್ಧಾರದಂತೆ  ಶಾಸಕ ಬಾಲಚಂದ್ರ ಜಾರಕಿಹೊಳಿಗೆ ಗೋಕಾಕ್ ಹಾಗೂ ಡಿಸಿಎಂ ಲಕ್ಷ್ಮಣ ಸವದಿ ಗೆ ಅಥಣಿ ಮತ್ತು ಕಾಗವಾಡ ಉಸ್ತುವಾರಿ ನೀಡಿದರು.  ಇಬ್ಬರು ಹಿರಿಯ ನಾಯಕರ ಚುನಾವಣೆ ತಂತ್ರಗಾರಿಕೆ ಉತ್ತಮ ರೀತಿಯಲ್ಲಿ ಫಲ ನೀಡಿತು.

ರಮೇಶ್ ಜಾರಕಿಹೊಳಿ ವಿರುದ್ಧ ಗೋಕಾಕ್ ನಲ್ಲಿ ಅಶೋಕ್ ಪೂಜಾರಿ ಅವರನ್ನು ಕಣಕ್ಕಿಳಿಸುವಂತೆ ಕಾಂಗ್ರೆಸ್ ಮೇಲೆ ಒತ್ತಡವಿತ್ತು, ಆದರೆ ಸತೀಶ್ ಜಾರಕಿಹೊಳಿ ಸಲಹೆಯಂತೆ  ಲಖನ್ ಜಾರಕಿಹೊಳಿಯನ್ನು ಕಣಕ್ಕಿಳಿಸಲು ಪಕ್ಷ ನಿರ್ಧರಿಸಿತ್ತು,  ಹೀಗಾಗಿ ಲಿಂಗಾಯತ ಮತಗಳನ್ನು ಪಡೆಯುವ ಸಲುವಾಗಿ ಜೆಡಿಎಸ್ ಪಕ್ಷ ಅಶೋಕ್ ಪೂಜಾರಿಯನ್ನು ಸ್ಪರ್ಧೆಗೆ ಇಳಿಸಿತು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com