ಶೀಘ್ರ ಸಂಪುಟ ವಿಸ್ತರಣೆಗೆ, ಸೋತವರಿಗೆ ಸಚಿವ ಸ್ಥಾನ ಕೊಡುವ ಬಗ್ಗೆ ಪ್ರತಿಕ್ರಿಯೆ ಇಲ್ಲ: ಯಡಿಯೂರಪ್ಪ

ವಿಧಾನಸಭಾ ಉಪ ಚುನಾವಣೆಯಲ್ಲಿ ಗೆದ್ದವರಿಗೆ ಮಂತ್ರಿ ಸ್ಥಾನ ಕಲ್ಪಿಸಲಿದ್ದು, ಇದಕ್ಕಾಗಿ ಆದಷ್ಟು ಬೇಗ ಮಂತ್ರಿಮಂಡಲ ವಿಸ್ತರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಂಗಳವಾರ ಹೇಳಿದ್ದಾರೆ.
ಬಿಎಸ್ ಯಡಿಯೂರಪ್ಪ
ಬಿಎಸ್ ಯಡಿಯೂರಪ್ಪ

ಬೆಂಗಳೂರು: ವಿಧಾನಸಭಾ ಉಪ ಚುನಾವಣೆಯಲ್ಲಿ ಗೆದ್ದವರಿಗೆ ಮಂತ್ರಿ ಸ್ಥಾನ ಕಲ್ಪಿಸಲಿದ್ದು, ಇದಕ್ಕಾಗಿ ಆದಷ್ಟು ಬೇಗ ಮಂತ್ರಿಮಂಡಲ ವಿಸ್ತರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಂಗಳವಾರ ಹೇಳಿದ್ದಾರೆ.

ಸಚಿವ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ತುರುಸಿನ ಪೈಪೋಟಿ ಆರಂಭವಾಗಿರುವ ಬೆನ್ನಲ್ಲೇ ಸಚಿವ ಸಂಪುಟ ವಿಸ್ತರಣೆಗೆ ಶೀಘ್ರ ಮುಹೂರ್ತ ನಿಗದಿಪಡಿಸುವುದಾಗಿ ತಿಳಿಸಿದ್ದಾರೆ.
 
ನಗರದಲ್ಲಿಂದು ಸುದ್ದಿಗಾರರ ಜತೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಶೀಘ್ರ ನಡೆಯಲಿದೆ. ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ೧೨ ಬಿಜೆಪಿ ಶಾಸಕರಿಗೆ ಕೊಟ್ಟ ಭರವಸೆಯಂತೆ ಸಚಿವ ಸ್ಥಾನ ಕಲ್ಪಿಸಿ ಕೊಡಲಾಗುವುದು ಎಂದು ಪುನರುಚ್ಚರಿಸಿದರು. 

ವಿಧಾನಸಭೆ ಉಪಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳಿಗೆ ಸಚಿವ ಸ್ಥಾನ ಮತ್ತು ಅಧಿಕಾರ ನೀಡುವ ಬಗ್ಗೆ ತಾವು ಯಾವುದೇ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ ಎಂದರು. 

ಉಪ ಚುನಾವಣೆಯಲ್ಲಿ ಬಿಜೆಪಿಗೆ ಮತದಾರರು ಬೆಂಬಲ ನೀಡಿದ್ದು, ಮುಂದಿನ ದಿನಗಳಲ್ಲಿ ಅಭಿವೃದ್ಧಿಯ ಕಡೆಗೆ ಹೆಚ್ಚಿನ ಒತ್ತು ನೀಡಲಾಗುವುದು. ಅದೇ ರೀತಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಲಾಗುವುದು. ಬರುವ ದಿನಗಳಲ್ಲಿ ಚುನಾವಣೆಯಲ್ಲೂ ಪಕ್ಷ ಮರಳಿ ಅಧಿಕಾರಕ್ಕೆ ಬರುವಂತೆ ಈಗಿನಿಂದಲೇ ಪ್ರಯತ್ನ ಚುರುಕುಗೊಳಿಸಲಾಗುವುದು ಎಂದರು. 

ಸಚಿವ ಸ್ಥಾನದ ಆಕಾಂಕ್ಷಿಗಳು ಇಂದು ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಸಚಿವ ಸ್ಥಾನ ನೀಡುವಂತೆ ಒತ್ತಡ ಹೇರುತ್ತಿದ್ದಾರೆ. ಚುನಾವಣೆಯಲ್ಲಿ ಪರಾಭವಗೊಂಡಿರುವ ಎಂ.ಟಿ.ಬಿ. ನಾಗರಾಜ್, ಸಚಿವ ಸ್ಥಾನದ ಆಕಾಂಕ್ಷಿಗಳಾದ ರಾಮದಾಸ್ ಹಾಗೂ ಉಮೇಶ್ ಕತ್ತಿ ಸಹ ಯಡಿಯೂರಪ್ಪ ಅವರನ್ನು ಭೇಟಿಯಾದರು.

ಮೊದಲ ಸಂಪುಟ ರಚನೆಯಲ್ಲಿ ಸಚಿವ ಸ್ಥಾನದ ಮೇಲೆ‌ ಕಣ್ಣಿಟ್ಟಿದ್ದ ರಾಮದಾಸ್ ಹಾಗೂ ಉಮೇಶ್ ಕತ್ತಿಗೆ ಯಡಿಯೂರಪ್ಪ‌ ನಿರಾಸೆಯುಂಟು ಮಾಡಿದ್ದರು. ಆ ಬಳಿಕ ಪಕ್ಷದ ವಿರುದ್ಧ ಉಮೇಶ್ ಕತ್ತಿ‌ ಸಿಡಿದೆದ್ದಿದ್ದರಾದರೂ ಮುಂದಿನ ದಿನಗಳಲ್ಲಿ ಅವರ ಆಸೆ ಈಡೇರಿಸುವುದಾಗಿ ಹೇಳಿ ಸಮಾಧಾನಪಡಿಸಲಾಗಿತ್ತು. ಕತ್ತಿ ಜೊತೆಗೆ ರಾಮದಾಸ್ ಅವರನ್ನು ಸಹ ಸಮಾಧಾನಪಡಿಸಲಾಗಿತ್ತು. 
ಆದರೀಗ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಎಲ್ಲರಿಗೂ ಮಂತ್ರಿ ಭಾಗ್ಯ ನೀಡುವುದಾಗಿ ಯಡಿಯೂರಪ್ಪ ಸ್ಪಷ್ಟಪಡಿಸುತ್ತಿದ್ದಂತೆಯೇ ಮೂಲ ಬಿಜೆಪಿಯವರ ಕಣ್ಣು ಕೆಂಪಾಗಿದೆ. ಹೀಗಾಗಿ ಕೊಟ್ಟ ಮಾತನ್ನು ಉಳಿಸಿಕೊಳ್ಳುವಂತೆ ಇವರು ಮತ್ತೆ ಯಡಿಯೂರಪ್ಪ ಅವರಿಗೆ ದುಂಬಾಲು ಬಿದ್ದಿದ್ದಾರೆ.

ಪುನಃ ಮಂತ್ರಿಗಿರಿಗಾಗಿ ಬೇಡಿಕೆಯಿಟ್ಟಿರುವ ರಾಮದಾಸ್ ಹಾಗೂ ಉಮೇಶ್ ಕತ್ತಿಗೆ ಪರಿಸ್ಥಿತಿ ನೋಡಿಕೊಂಡು ತೀರ್ಮಾನ ಕೈಗೊಳ್ಳುವುದಾಗಿ ಯಡಿಯೂರಪ್ಪ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಇನ್ನು ಯಡಿಯೂರಪ್ಪ ಧವಳಗಿರಿ ನಿವಾಸಕ್ಕೆ ಕೆ.ಆರ್. ಪೇಟೆ ಶಾಸಕ ನಾರಾಯಣ ಗೌಡ ಭೇಟಿ ನೀಡಿ,‌ ತಮ್ಮ ಗೆಲುವಿಗೆ ಸಹಕರಿಸಿದ ಯಡಿಯೂರಪ್ಪ ಹಾಗೂ ಉಸ್ತುವಾರಿ ವಿಜಯೇಂದ್ರ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ವಿರುದ್ಧ ಜೆಡಿಎಸ್ ದೊಡ್ಡ ದೊಡ್ಡ ಅಪವಾದ ಮಾಡಿದ್ದರೂ ಆ ಎಲ್ಲ ಅಪವಾದಗಳಿಂದ ತಾವು ಪಾಸಾಗಿ ಬಂದಿದ್ದೇನೆ.  ಇದೀಗ ಯುದ್ಧ ಮುಗಿದಿದೆ ಎಂದರು.

ಯಾರು ಯಾರಿಗೆ ಟೋಪಿ ಹಾಕಿದರು ಎಂಬುದು ಜನರಿಗೆ ಗೊತ್ತಾಗಿದೆ ಎಂದು ಪರೋಕ್ಷವಾಗಿ ಜೆಡಿಎಸ್ ನಾಯಕರನ್ನು ನಾರಾಯಣಗೌಡ ತಿವಿದರು. ಮುಖ್ಯಮಂತ್ರಿಗಳು ಯಾವುದೇ ಸಚಿವ ಸ್ಥಾನ ಕೊಟ್ಟರೂ ಒಪ್ಪಿಕೊಳ್ಳುವುದಾಗಿ ಹೇಳಿದ ನಾರಾಯಣಗೌಡ, ತಮಗೆ ಇಂತಹದ್ದೇ ಖಾತೆ ಬೇಕು ಎಂದು ಕೇಳುವುದಿಲ್ಲ ಎಂದರು.

ಕಳೆದ ಹದಿನೈದು ವರ್ಷಗಳಿಂದ ನಾನು ಅವರಿಗೆ ಟೋಪಿ ಹಾಕಿರಲಿಲ್ಲ. ಈಗ ಬಿಜೆಪಿ ಸೇರಿದ ನಂತರ ಟೋಪಿ ಹಾಕಿದ್ದೇನೆಯೇ  ಎಂದು ವ್ಯಂಗ್ಯವಾಡಿದ ನಾರಾಯಣ ಗೌಡ, ಕೆ.ಆರ್.ಪೇಟೆ ಜನ ತೀರ್ಪು ನೀಡಿದ್ದಾರೆ. ಎಚ್‌.ಡಿ.ಕುಮಾರಸ್ವಾಮಿ ತಮ್ಮ ಮೇಲೆ ಯುದ್ಧ ಸಾರಿದ್ದರು. ಈಗ ಸೋತ ಮೇಲೆ ಮೌನಕ್ಕೆ ಶರಣಾಗಿದ್ದಾರೆ ಎಂದು ಕುಟುಕಿದರು.

ಹೊಸಕೋಟೆಯಲ್ಲಿ ಕುರುಬ ಮತಗಳ ವಿಭಜನೆ ಹಾಗೂ ಬಿಜೆಪಿ ಬಂಡಾಯದ ಕಾರಣ ಪರಾಜಿತಗೊಂಡಿರುವ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಮಂಗಳವಾರ ಬೆಳ್ಳಂಬೆಳಿಗ್ಗೆಯೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. 

ಡಾಲರ್ಸ್ ಕಾಲೋನಿ ನಿವಾಸದಲ್ಲಿ ಭೇಟಿಯಾದ ಅವರು, ಬಿ.ಎನ್.ಬಚ್ಚೇಗೌಡ ಹಾಗೂ ಬಿಜೆಪಿ ಕಾರ್ಯಕರ್ತರ ಬೆಂಬಲವಿಲ್ಲದಿರುವುದು ತಮ್ಮ‌ ಸೋಲಿಗೆ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೇ ಮಾತು‌ ನೀಡಿದಂತೆ‌ ತಮಗೂ ಸರ್ಕಾರದಲ್ಲಿ ಉನ್ನತ ಹುದ್ದೆ ನೀಡಬೇಕೆಂದು ಆಗ್ರಹಿಸಿದರು ಎನ್ನಲಾಗಿದೆ. ನಿಮ್ಮನ್ನು ಮೇಲ್ಮನೆಗೆ ನಾಮಕರಣ ಮಾಡಿ ಸೂಕ್ತ ರಾಜಕೀಯ ಅಧಿಕಾರ ನೀಡುವುದಾಗಿ ಯಡಿಯೂರಪ್ಪ ಭರವಸೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com