ಹುಣಸೂರಿನಲ್ಲಿ ವಿಶ್ವನಾಥ್ ಸೋಲಿಗೆ ಯೋಗೇಶ್ವರ್ ಕಾರಣ:  ಜಿ.ಟಿ ದೇವೇಗೌಡ

ಹುಣಸೂರು ಉಪ ಚುನಾವಣೆಯಲ್ಲಿ ಎಚ್ ವಿಶ್ವನಾಥ್ ಸೋಲಿಗೆ ಸಿ.ಪಿ. ಯೋಗೇಶ್ವರ್ ಕಾರಣ ಎನ್ನುವ ಮೂಲಕ ಮಾಜಿ ಸಚಿವ ಜಿ.ಟಿ.ದೇವೇಗೌಡ ಹೊಸ ಬಾಂಬ್ ಸಿಡಿಸಿದ್ದಾರೆ.
ಜಿ.ಟಿ ದೇವೇಗೌಡ
ಜಿ.ಟಿ ದೇವೇಗೌಡ

ಮೈಸೂರು: ಹುಣಸೂರು ಉಪ ಚುನಾವಣೆಯಲ್ಲಿ ಎಚ್ ವಿಶ್ವನಾಥ್ ಸೋಲಿಗೆ ಸಿ.ಪಿ. ಯೋಗೇಶ್ವರ್ ಕಾರಣ ಎನ್ನುವ ಮೂಲಕ ಮಾಜಿ ಸಚಿವ ಜಿ.ಟಿ.ದೇವೇಗೌಡ ಹೊಸ ಬಾಂಬ್ ಸಿಡಿಸಿದ್ದಾರೆ.

ರಾಜ್ಯ ರಾಜಕಾರಣವೆ ಬೇರೆ ಮೈಸೂರಿನ ರಾಜಕಾರಣವೇ ಬೇರೆ ಎಂದೂ ಜಿ.ಟಿ.ದೇವೇಗೌಡ ವಿಶ್ಲೇಷಿಸಿದರು. ಸಂಬಂಧವೇ ಇಲ್ಲದ ಕ್ಷೇತ್ರಕ್ಕೆ ಬಂದು ಕುಕ್ಕರ್, ಸೀರೆ  ಆಸೆ ತೋರಿಸಿ ಗೆದ್ದುಬಿಡಬಹುದು ಎಂದು ಯೋಚಿಸುವುದು ಭ್ರಮೆ ಎಂದು ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಇನ್ನಾದರೂ ಮಾತಿನ ಮೇಲೆ ಹಾಗೂ ಟ್ವೀಟ್ ಮೇಲೆ ನಿಗಾ ವಹಿಸಬೇಕು. ಯೋಚಿಸಿ ಮಾತನಾಡಬೇಕು ಎಂದು ಜಿ.ಟಿ ದೇವೇಗೌಡ ಸಲಹೆ ನೀಡಿದ್ದಾರೆ.

ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದವರು. ಅವರಿಗಿದ್ದ ಅಭಿಮಾನಿಗಳು ಬೇರೆ ಯಾವ ಮುಖ್ಯಮಂತ್ರಿಗೂ ಇರಲಿಲ್ಲ. ಅವರ ಮಾತುಗಳಿಂದ ಅಭಿಮಾನಿಗಳಿಗೆ ನೋವಾಗಿದೆ. ಯೋಚಿಸಿ ಮಾತನಾಡುವ ಕಾಲ ಈಗ ಒದಗಿ ಬಂದಿದೆ ಎಂದು ಹೇಳಿದರು.

ಹುಣಸೂರಿನಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ. ಹಾಗಾಗಿ ತಟಸ್ಥನಾಗಿರುತ್ತೇನೆ ಎಂದು ಕುಮಾರಸ್ವಾಮಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಬಳಿ ಜುಲೈ 23ರಂದೇ ಹೇಳಿದ್ದೆ. ಈ ರೀತಿ ನೇರವಾಗಿ ಹೇಳಿರುವಾಗ ಪಕ್ಷಕ್ಕೆ ದ್ರೋಹ ಬಗೆದಿದ್ದೇನೆ ಎಂದು ಆರೋಪಿಸುವುದು ಸರಿ ಅಲ್ಲ ಎಂದು ತಿಳಿಸಿದ್ದಾರೆ.

ನನ್ನ ಪುತ್ರ ಹರೀಶ್ ಗೌಡ ಸ್ವತಂತ್ರ. ಆತ ಯಾವ ಪಕ್ಷಕ್ಕೂ ಸೇರಿಲ್ಲ‌. ಆತ ಕಾಂಗ್ರೆಸ್ ಪರ ಕೆಲಸ ಮಾಡಿರಬಹುದು. ಅದು ತಪ್ಪು ಎಂದು ಹೇಗೆ ಹೇಳುವುದು ಎಂದು ಅವರು ಪ್ರಶ್ನಿಸಿದರು.

ಸಿ‌.ಪಿ‌.ಯೋಗೇಶ್ವರ್ ಪ್ರಚಾರದ ವೇಳೆ ಹೇಳಿದ ಮಾತುಗಳು ಕಾಂಗ್ರೆಸ್ ಗೆಲುವಿಗೆ ಕಾರಣವಾಯಿತು. ಸ್ಥಳೀಯ ಮುಖಂಡರನ್ನು ಅವಹೇಳನ ಮಾಡಿ ಮಾತನಾಡಿದ್ದು ಜನರನ್ನು ಕೆರಳಿಸಿತು. ವಿಶ್ವನಾಥ್ ಈ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com