ರಾಜ್ಯ ಕಾಂಗ್ರೆಸ್ ನ ಸಿಂಹಾಸನ ಖಾಲಿ: ಯಾರಾಗುತ್ತಾರೆ ಮುಂದಿನ ಸಾರಥಿ? 

ಉಪ ಚುನಾವಣೆಯಲ್ಲಿ ಪಕ್ಷದ ಸೋಲಿನ ನೈತಿಕ ಹೊಣೆ ಹೊತ್ತು ಶಾಸಕಾಂಗ ನಾಯಕ ಸ್ಥಾನಕ್ಕೆ ಮತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿದ ಬಳಿಕ ರಾಜ್ಯದ ಕಾಂಗ್ರೆಸ್ ನ ಚುಕ್ಕಾಣಿ ಯಾರು ಹಿಡಿಯುತ್ತಾರೆ ಎಂಬ ಪ್ರಶ್ನೆ ಸಹಜವಾಗಿ ಎಲ್ಲರಲ್ಲಿಯೂ ಬಂದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಉಪ ಚುನಾವಣೆಯಲ್ಲಿ ಪಕ್ಷದ ಸೋಲಿನ ನೈತಿಕ ಹೊಣೆ ಹೊತ್ತು ಶಾಸಕಾಂಗ ನಾಯಕ ಸ್ಥಾನಕ್ಕೆ ಮತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿದ ಬಳಿಕ ರಾಜ್ಯದ ಕಾಂಗ್ರೆಸ್ ನ ಚುಕ್ಕಾಣಿ ಯಾರು ಹಿಡಿಯುತ್ತಾರೆ ಎಂಬ ಪ್ರಶ್ನೆ ಸಹಜವಾಗಿ ಎಲ್ಲರಲ್ಲಿಯೂ ಬಂದಿದೆ.


ಮಾಜಿ ಸಚಿವ  ಡಿ ಕೆ ಶಿವಕುಮಾರ್ ಅವರ ಹೆಸರು ಶಾಸಕಾಂಗ ಪಕ್ಷದ ನಾಯಕ ಮತ್ತು ವಿಪಕ್ಷ ನಾಯಕನ ಸ್ಥಾನಕ್ಕೆ ಕೇಳಿಬರುತ್ತಿದ್ದರೆ ಈ ಸ್ಥಾನಕ್ಕೆ 90ರ ದಶಕದಲ್ಲಿ ಹುದ್ದೆ ನಿರ್ವಹಿಸಿದ್ದ ಹೆಚ್ ಕೆ ಪಾಟೀಲ್ ಅವರ ಹೆಸರು ಕೂಡ ಕೇಳಿಬರುತ್ತಿದೆ. 


ಇನ್ನು ಕೆಪಿಸಿಸಿ ಅಧ್ಯಕ್ಷರು ಯಾರಾಗುತ್ತಾರೆ ಎಂಬ ಪ್ರಶ್ನೆಗೆ ಕೇಳಿಬರುತ್ತಿರುವ ಹೆಸರುಗಳು ಮಲ್ಲಿಕಾರ್ಜುನ ಖರ್ಗೆ, ಕೆ ಎಚ್ ಮುನಿಯಪ್ಪ ಮತ್ತು ಎಂ ಬಿ ಪಾಟೀಲ್. ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಡಿಕೆ ಶಿವಕುಮಾರ್ ಈಗಾಗಲೇ ಕಾರ್ಯನಿರ್ವಹಿಸಿದ್ದು ಅವರು ಕೂಡ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. 


ಸಿದ್ದರಾಮಯ್ಯನವರು ಮೊನ್ನೆ ರಾಜೀನಾಮೆ ಕೊಟ್ಟ ನಂತರ ಸುಮಾರು 45 ಮಂದಿ ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರು ಅವರ ಮನೆಗೆ ಹೋಗಿ ರಾಜಿನಾಮೆ ವಾಪಸ್ ತೆಗೆದುಕೊಳ್ಳುವಂತೆ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ.


ಆದರೆ ಸಿದ್ದರಾಮಯ್ಯನವರು ತಮ್ಮ ನಿರ್ಧಾರದಲ್ಲಿ ಅಚಲರಾಗಿದ್ದಾರೆಂದು ಕಂಡುಬರುತ್ತಿದೆ. ತಮ್ಮ ಮೇಲೆ ಇಟ್ಟಿರುವ ಪ್ರೀತಿ, ನಂಬಿಕೆಗಳಿಗೆ ಕೃತಜ್ಞತೆ ಹೇಳಿ ಮನೆ ಬಾಗಿಲಿಗೆ ಬಂದ ಶಾಸಕರನ್ನು ವಾಪಸ್ ಕಳುಹಿಸಿದ್ದಾರೆ. ಈ ಮಧ್ಯೆ ಖಾಲಿ ಇರುವ ಹುದ್ದೆಯನ್ನು ಭರ್ತಿ ಮಾಡಲು ಕಾಂಗ್ರೆಸ್ ಹೈಕಮಾಂಡ್ ಸಮಾಲೋಚನೆಯಲ್ಲಿ ನಿರತವಾಗಿದೆ. ಪಕ್ಷದಲ್ಲಿ ಪ್ರಮುಖ ಬದಲಾವಣೆ ತರಲು ಹೊಸ ಮುಖಗಳಿಗೆ ಮಣೆ ಹಾಕುವ ಸಾಧ್ಯತೆಯಿದೆ. 


ಕಾಂಗ್ರೆಸ್ ನಿಂದ ಇತ್ತೀಚೆಗೆ ಮೂರು ಪ್ರಮುಖ ನಾಯಕರು ಹೊರನಡೆದಿದ್ದರು. ಅವರು ಭೈರತಿ ಬಸವರಾಜ್, ಎಸ್ ಟಿ ಸೋಮಶೇಖರ್ ಮತ್ತು ರೋಶನ್ ಬೇಗ್. ಈ ಮೂವರೂ ಕಳೆದ ಬಿಬಿಎಂಪಿ ಚುನಾವಣೆಯಲ್ಲಿ ಬದಲಾವಣೆ ತಂದಿದ್ದರು. ನಿನ್ನೆ ವಿಧಾನಸೌಧದಲ್ಲಿ ಸಭೆ ನಡೆಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಹಿರಿಯ ನಾಯಕರಾದ ಹೆಚ್ ಕೆ ಪಾಟೀಲ್, ಈಶ್ವರ ಖಂಡ್ರೆಯವರು ಇತ್ತೀಚಿನ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚೆ ನಡೆಸಿದರು ಎಂದು ತಿಳಿದುಬಂದಿದೆ.


ಉಪ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಜೆಡಿಎಸ್ ಇನ್ನೂ ಆಘಾತದಿಂದ ಹೊರಬಂದಿಲ್ಲ. ನಿನ್ನೆ ಒಕ್ಕಲಿಗರ ಪ್ರಮುಖ ಮಠಾಧಿಪತಿ ನಿರ್ಮಲಾನಂದ ಸ್ವಾಮೀಜಿಯವರನ್ನು ಭೇಟಿ ಮಾಡಿದ ಮಾಜಿ ಪ್ರಧಾನಿ ದೇವೇಗೌಡರು ಪಕ್ಷದ ಭವಿಷ್ಯದ ಬಗ್ಗೆ ಚರ್ಚೆ ನಡೆಸಿದರು ಎನ್ನಲಾಗಿದೆ. ಜೆಡಿಎಸ್ ಸದ್ಯದಲ್ಲಿಯೇ ಸಭೆ ಸೇರಿ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ಮತ್ತು ಪಕ್ಷದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಸಾಧ್ಯತೆಯಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com