ಕೇಸರಿ ಕೋಟೆಯ ಕಫ್ತಾನನಿಗಾಗಿ ನಡೆದಿದೆ ತೀವ್ರ ಶೋಧ

ಕೇಸರಿ ಕೋಟೆಯ ಭದ್ರ ನೆಲೆಯಾಗಿರುವ ಬಾಗಲಕೋಟೆ ಜಿಲ್ಲೆಯ ಕಮಲ ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸೂಕ್ತ ಮುಖಂಡನಿಗಾಗಿ ಹುಡುಕಾಟ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬಾಗಲಕೋಟೆ: ಕೇಸರಿ ಕೋಟೆಯ ಭದ್ರ ನೆಲೆಯಾಗಿರುವ ಬಾಗಲಕೋಟೆ ಜಿಲ್ಲೆಯ ಕಮಲ ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸೂಕ್ತ ಮುಖಂಡನಿಗಾಗಿ ಹುಡುಕಾಟ ನಡೆದಿದೆ.

ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಈಗಾಗಲೇ ಅನೇಕರು ಪೈಪೋಟಿ ನಡೆಸಿದ್ದಾರೆ. ಶಾಸಕರು, ಸಚಿವರ ಮನವೊಲಿಕೆ ಪ್ರಯತ್ನ ಆಕಾಂಕ್ಷಿಗಳಿಂದ ನಡೆದಿದೆ. ಜತೆಗೆ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಯಾರು ಸೂಕ್ತ ಎನ್ನುವ ಚರ್ಚೆ ಕೂಡ ಕಮಲ ಪಾಳೆಯದಲ್ಲಿ ನಡೆದಿದೆ.

ಈಗಾಗಲೇ ಕಾಂಗ್ರೆಸ್ ನೂತನ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡುವ ಮೂಲಕ ಪಕ್ಷದಲ್ಲಿನ ಹಿರಿಯರಿಗೆ ಮಣೆ ಹಾಕಿದೆ. ಬಿಜೆಪಿಯಲ್ಲೂ ಹಿರಿಯರಿಗೆ ಅಧ್ಯತೆ ಕೊಡಬೇಕೋ, ಯುವಕರಿಗೆ ಆದ್ಯತೆ ಕೊಡಬೇಕೋ ಎನ್ನುವ ಚಿಂತನೆ ಮುಖಂಡರಲ್ಲಿ ನಡೆದಿದೆ.

ಈಗಾಗಲೇ ಪಕ್ಷ ಸಂಘಟನೆಯ ನಾನಾ ಹುದ್ದೆಗಳ ಜವಾಬ್ದಾರಿ ವಹಿಸಿಕೊಂಡಿದ್ದ ಶಶಿಕಾಂತ ವಿಶ್ವಬ್ರಾಹ್ಮಣ, ಮಹಾಂತೇಶ ಮಮದಾಪೂರ, ರಾಜು ರೇವಣಕರ, ಎಸ್.ಟಿ. ಪಾಟೀಲ ಮೊದಲಾದವರು ಅಧ್ಯಕ್ಷ ಸ್ಥಾನಕ್ಕಾಗಿ ಹಿರಿಯರ ಮನವೊಲಿಕೆಗೆ ಮುಂದಾಗಿದ್ದಾರೆ.

ಏತನ್ಮಧ್ಯೆ ಮೇಲ್ಮನೆ ಸದಸ್ಯ ಎಚ್.ಆರ್. ನಿರಾಣಿ ಕೂಡ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿರುವುದು ವಿಶೇಷವಾಗಿದೆ. ಇವರ ಜತೆಗೆ ದಿ. ಮಾಜಿ ಶಾಸಕ ಯಳ್ಳಿಗುತ್ತಿ ಅವರ ಪುತ್ರ ಕುಮಾರ ಯಳ್ಳಿಗುತ್ತಿ, ಮಹಾಬಳೇಶ ಗುಡಗುಂಟಿ ಕೂಡ ತೆರೆಮರೆಯಲ್ಲಿ ಪ್ರಯತ್ನ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಜಿಲ್ಲಾ ಬಿಜೆಪಿಯಲ್ಲಿ ಮೇಲ್ನೋಟಕ್ಕೆ ಎಲ್ಲವೂ ಸರಿಯಿದೆ ಎನ್ನುವಂತೆ ಕಾಣಿಸುತ್ತಿದ್ದರೂ ಅಧಿಕಾರಕ್ಕಾಗಿ ಒಳೊಳಗೆ ಶೀತಲ ಸಮರ ನಡೆದೇ ಇದೆ. ಸಚಿವರು ಹಾಗೂ ಶಾಸಕರು ತಮ್ಮ ಬೆಂಬಲಿರನ್ನೇ ಅಧ್ಯಕ್ಷ ಸ್ಥಾನಕ್ಕೆ ಕೂಡಿಸಬೇಕು ಎನ್ನುವ ಅಪೇಕ್ಷೆ ಹೊಂದಿದ್ದಾರೆ. 

ಮುಂಬರುವ ದಿನಗಳಲ್ಲಿ ಡಿಸಿಸಿ ಬ್ಯಾಂಕ್, ಗ್ರಾಮ ಪಂಚಾಯಿತಿ ಸೇರಿದಂತೆ ಸಾಲು ಸಾಲು ಚುನಾವಣೆಗಳು ಎದುರಾಗಲಿದ್ದು, ಸೂಕ್ತ ವ್ಯಕ್ತಿಯನ್ನು ಅಧ್ಯಕ್ಷ ಸ್ಥಾನಕ್ಕೆ ಕೂಡಿಸಬೇಕು ಎನ್ನುವುದು ಪಕ್ಷದ ಮುಖಂಡರ ವಾದವಾಗಿದ್ದರೂ ಶಾಸಕರುಗಳು ಮಾತ್ರ ತಮ್ಮ ಬೆಂಬಲಿಗರ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ. 

ಜಿಲ್ಲಾಧ್ಯಕ್ಷರ ಆಯ್ಕೆ ವಿಷಯದಲ್ಲಿ ಸಚಿವ ಬಿ. ಶ್ರೀರಾಮುಲು ಕೂಡ ಕೈಯಾಡಿಸುತ್ತಿದ್ದಾರೆ ಎನ್ನುವುದು ಕುತೂಹಲ ಸಂಗತಿಯಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಇವರ ಮಾತಿಗೆ ಎಷ್ಟರ ಮಟ್ಟಿಗೆ ಮಣೆ ಹಾಕಲಿದ್ದಾರೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

ಬಿಜೆಪಿ ಜಿಲ್ಲಾ ಕೋರ್ ಕಮೀಟಿ ಸಭೆ ಭಾನುವಾರ ನಡೆಯಲಿದ್ದು, ಸಭೆಯಲ್ಲಿ ಪ್ರಮುಖವಾಗಿ ಜಿಲ್ಲಾಧ್ಯಕ್ಷರ ಆಯ್ಕೆ, ಜಿಪಂ.ನ ಸ್ಥಾಯಿ ಸಮಿತಿ ಚುನಾವಣೆ ಕುರಿತು ಅನುಸರಿಬೇಕಾದ ತಂತ್ರಗಾರಿಕೆ ಕುರಿತು ಚರ್ಚೆ ನಡೆಯುವ ಸಾಧ್ಯತೆಗಳು ನಿಚ್ಚಳವಾಗಿವೆ.

ಒಂದೊಮ್ಮೆ ಪಕ್ಷದ ಮುಖಂಡರು ಹಾಲಿ ಶಾಸಕರಲ್ಲೇ ಒಬ್ಬರಿಗೆ ಅಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡುವುದು ಸೂಕ್ತ ಎನ್ನುವ ನಿರ್ಧಾರಕ್ಕೆ ಬಂದಲ್ಲಿ ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ ಇಲ್ಲವೆ ಮೇಲ್ಮನೆ ಸದಸ್ಯ ಎಚ್.ಆರ್. ನಿರಾಣಿ ಇವರಿಬ್ಬರಲ್ಲಿ ಒಬ್ಬರ ಹೆಸರು ಅಂತಿಮಗೊಳ್ಳಬಹುದು. 

ಮಾಜಿ ಶಾಸಕರಿಗೆ ಅವಕಾಶ ನೀಡುವ ನಿರ್ಧಾರಕ್ಕೆ ಬಂದಲ್ಲಿ ಮಾಜಿ ಶಾಸಕರಾದ ಶ್ರೀಕಾಂತ ಕುಲಕರ್ಣಿ ಇಲ್ಲವೆ ಪಿ.ಎಚ್. ಪೂಜಾರ ಅವರುಗಳಿಗೆ ಅದೃಷ್ಟ ಒಲಿಯುವ ಸಾಧ್ಯತೆಗಳಿವೆ. ಹಾಲಿ, ಮಾಜಿ ಶಾಸಕರಿಗೆ ಬಿಟ್ಟು ಸಮರ್ಥ ಸಂಘಟನಕಾರರೊಬ್ಬರಿಗೆ ಅವಕಾಶ ಕಲ್ಪಿಸುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲವಾದ್ದರಿಂದ ಜಿಪಂ. ಹಿರಿಯ ಸದಸ್ಯ ಹೂವಪ್ಪ ರಾಠೋಡ ಇಲ್ಲವೆ ಸಂಘ ಪರಿವಾರಕ್ಕೆ ಸೇರಿದವರು ಯಾರಾದರೂ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಗೊಂಡಲ್ಲಿ ಅಚ್ಚರಿ ಪಡಬೇಕಿಲ್ಲ.

-ವಿಠ್ಠಲ ಆರ್. ಬಲಕುಂದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com