ಮೂರು ಸಾಕಾಗಲ್ಲ, ಇನ್ನೂ ಎರಡು ಡಿಸಿಎಂ ಸ್ಥಾನ ನೀಡುವಂತೆ ವರಿಷ್ಠರಿಗೆ ಸಿಎಂ ಮನವಿ ಸಾಧ್ಯತೆ

ಇತ್ತೀಚಿಗೆ ನಡೆದ ಉಪ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಈಗ ಡಿಸಿಎಂ ಹುದ್ದೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಇನ್ನೂ ಇಬ್ಬರಿಗೆ ಉಪ ಮುಖ್ಯಮಂತ್ರಿ ಸ್ಥಾನ....
ಯಡಿಯೂರಪ್ಪ
ಯಡಿಯೂರಪ್ಪ

ಬೆಂಗಳೂರು: ಇತ್ತೀಚಿಗೆ ನಡೆದ ಉಪ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಈಗ ಡಿಸಿಎಂ ಹುದ್ದೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಇನ್ನೂ ಇಬ್ಬರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲು ಅನುಮತಿ ನೀಡುವಂತೆ ವರಿಷ್ಠರಿಗೆ ಮನವಿ ಮಾಡಲು ಮುಂದಾಗಿದ್ದಾರೆ.

ಉಪ ಚುನಾವಣೆಯಲ್ಲಿ ಗೆದ್ದ ಬಿಜೆಪಿಯ 12 ಶಾಸಕರ ಪೈಕಿ 11 ಜನರಿಗೆ ಸಚಿವ ಸ್ಥಾನ ನೀಡುವುದು ಬಹುತೇಕ ಖಚಿತವಾಗಿದೆ. ಈ ಸಂಬಂಧ ಮುಂದಿನ ವಾರ ದೆಹಲಿಗೆ ತೆರಳುತ್ತಿರುವ ಸಿಎಂ ಯಡಿಯೂರಪ್ಪ ಅವರು ಈ 11 ಶಾಸಕರಿಗೆ ಸಚಿವ ಸ್ಥಾನ ಹಾಗೂ ಇನ್ನೂ ಎರಡು ಡಿಸಿಎಂ ಹುದ್ದೆ ಸೃಷ್ಟಿಸಲು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಂದ ಅನುಮತಿ ಪಡೆಯುವ ಸಾಧ್ಯತೆ ಇದೆ.

ಒಂದು ವೇಳೆ ಅಮಿತ್ ಶಾ ಮತ್ತೆ ಇಬ್ಬರಿಗೆ ಡಿಸಿಎಂ ಸ್ಥಾನ ನೀಡಲು ಒಪ್ಪಿಗೆ ಸೂಚಿಸಿದರೆ, ಮೊದಲ ಬಾರಿಗೆ ರಾಜ್ಯ ಐದು ಉಪ ಮುಖ್ಯಮಂತ್ರಿಗಳನ್ನು ಕಾಣಲಿದೆ. 

ಕಳೆದ ಆಗಸ್ಟ್ ನಲ್ಲಿ ಯಡಿಯೂರಪ್ಪ ಅವರೊಂದಿಗೆ ಗೋವಿಂದ್ ಕಾರಜೋಳ, ಅಶ್ವಥ್ ನಾರಾಯಣ್ ಹಾಗೂ ಲಕ್ಷ್ಮಣ್ ಸವದಿ ಅವರು ಉಪ ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಈಗ ಮತ್ತೆ ಇಬ್ಬರಿಗೆ ಡಿಸಿಎಂ ಸ್ಥಾನ ನೀಡಲು ಮುಂದಾಗಿದ್ದು, ಒಂದು ಎಸ್ ಟಿ ಸಮುದಾಯಕ್ಕೆ ಮತ್ತೊಂದು ಕುರುಬ ಸಮುದಾಯಕ್ಕೆ ಎನ್ನಲಾಗಿದೆ. ಈ ಮೂಲಕ ರಾಜ್ಯದ ಐದು ಪ್ರಮುಖ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡಲಾಗುತ್ತಿದೆ.

ಸದ್ಯ ಬಿಜೆಪಿಯಲ್ಲಿ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಬರೋಬ್ಬರಿ ನಾಲ್ಕು ಜನ ಆಕಾಂಕ್ಷಿಗಳು ಲಾಭಿ ನಡೆಸುತ್ತಿದ್ದು, ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಹಾಗೂ ಬಿಜೆಪಿ ಹೈಕಮಾಂಡ್ ತಲೆನೋವಿಗೆ ಕಾರಣವಾಗಿದೆ ಎನ್ನಲಾಗುತ್ತಿದೆ.

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾಗಿದ್ದ ಬೆಳಗಾವಿ ಸಾಹುಕಾರ ರಮೇಶ್ ಜಾರಕಿಹೊಳಿ ಅವರಿಗೆ ಉಡುಗೊರೆಯ ರೂಪದಲ್ಲಿ ಜಲಸಂಪನ್ಮೂಲ ಖಾತೆಯ ಜೊತೆಗೆ ಉಪ ಮುಖ್ಯಮಂತ್ರಿ ಖಾತೆಯನ್ನು ನೀಡಲಾಗುವುದು ಎಂಬ ಮಾತುಗಳು ಈ ಹಿಂದಿನಿಂದಲೂ ಚಾಲ್ತಿಯಲ್ಲಿದ್ದವು. ಈ ಕುರಿತ ಮಾತುಕತೆ ಈಗಲೂ ನಡೆಯುತ್ತಿದೆ. ರಮೇಶ್ ಜಾರಕಿಹೊಳಿ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಪಟ್ಟು ಬಿಡದೆ ಕುಳಿತಿದ್ದಾರೆ ಎನ್ನಲಾಗುತ್ತಿದೆ.

ಆದರೆ, ರಮೇಶ್ ಜಾರಕಿಹೊಳಿ ಅವರಿಗೆ ಡಿಸಿಎಂ ಸ್ಥಾನ ನೀಡಿದರೆ ಬಿಜೆಪಿ ಪಕ್ಷದ ಒಳಗೆ ಕಲಹವೇಳುವುದು ಗ್ಯಾರಂಟಿ ಎನ್ನಲಾಗುತ್ತಿದೆ. ಏಕೆಂದರೆ ಕೆ.ಎಸ್. ಈಶ್ವರಪ್ಪ ಬಿಜೆಪಿ ಪಕ್ಷದ ಹಿರಿಯ ನಾಯಕರು. ಅಲ್ಲದೆ, ಈ ಹಿಂದೆ ಡಿಸಿಎಂ ಆಗಿ ಕೆಲಸ ನಿರ್ವಹಿಸಿದ ಅನುಭವ ಅವರಿಗೆ ಇದೆ. ಇದೇ ಕಾರಣಕ್ಕೆ ಹಿರಿತನದ ಆಧಾರದ ಮೇಲೆ ನನಗೂ ಡಿಸಿಎಂ ಹುದ್ದೆ ನೀಡಿ ಎಂದು ಅವರು ಈಗಾಗಲೇ ಲಾಭಿ ಶುರುಮಾಡಿದ್ದಾರೆ.

ಇದರ ಬೆನ್ನಿಗೆ ಒಕ್ಕಲಿಗ ಸಮುದಾಯದ ನಾಯಕ ಹಾಗೂ ಮಾಜಿ ಡಿಸಿಎಂ ಆರ್. ಅಶೋಕ್ ಸಹ ತನಗೂ ಡಿಸಿಎಂ ಹುದ್ದೆ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇನ್ನೂ ವಾಲ್ಮೀಕಿ ಸಮಾಜದ ಪ್ರಬಲ ನಾಯಕ ಶ್ರೀರಾಮುಲು ಅವರಿಗೆ ಡಿಸಿಎಂ ಸ್ಥಾನ ನೀಡುವ ಬಗ್ಗೆ ಚುನಾವಣಾ ಸಂದರ್ಭದಲ್ಲಿ ಸ್ವತಃ ಯಡಿಯೂರಪ್ಪನವರೇ ಮಾತು ನೀಡಿದ್ದರು. ಹೀಗಾಗಿ ಅವರೂ ಸಹ ಡಿಸಿಎಂ ಹುದ್ದೆಯ ಆಕಾಂಕ್ಷಿಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com