ನಾನು ಮುನಿಸಿಕೊಂಡಿಲ್ಲ, ಡಿಸಿಎಂ ಹುದ್ದೆ ಬೇಕೇಬೇಕು ಎಂಬುದು ಜನರ ಬೇಡಿಕೆ: ಶ್ರೀರಾಮುಲು

ನಾನು ಮುಖ್ಯಮಂತ್ರಿ ಅವರ ಜೊತೆ ಮುನಿಸಿಕೊಂಡಿಲ್ಲ. ಮುನಿಸಿಕೊಂಡಿದ್ದೇನೆ ಎಂಬ ಸುದ್ದಿಗಳು ಸಂಪೂರ್ಣ ಸುಳ್ಳಾಗಿದ್ದು, ನಾನು ಮೂರು ದಿನಗಳ ಕಾಲ ವೈಯಕ್ತಿಕ ಕೆಲಸದಲ್ಲಿ ತೊಡಗಿದ್ದೇನೆ...
ಶ್ರೀರಾಮುಲು
ಶ್ರೀರಾಮುಲು

ಬೆಂಗಳೂರು: ನಾನು ಮುಖ್ಯಮಂತ್ರಿ ಅವರ ಜೊತೆ ಮುನಿಸಿಕೊಂಡಿಲ್ಲ. ಮುನಿಸಿಕೊಂಡಿದ್ದೇನೆ ಎಂಬ ಸುದ್ದಿಗಳು ಸಂಪೂರ್ಣ ಸುಳ್ಳಾಗಿದ್ದು, ನಾನು ಮೂರು ದಿನಗಳ ಕಾಲ ವೈಯಕ್ತಿಕ ಕೆಲಸದಲ್ಲಿ ತೊಡಗಿದ್ದೇನೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಅವರು ಶನಿವಾರ ಸ್ಪಷ್ಟನೆ ನೀಡಿದ್ದಾರೆ.
  
ಬೆಂಗಳೂರಿನ ಸೆವೆನ್ ಮಿನಿಸ್ಟರ್ ಕ್ವಾಟ್ರಸ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಅನುಮತಿ ಪಡೆದುಕೊಂಡೇ ನಾನು ಬೇರೆ ಕೆಲಸಕ್ಕೆ ತೆರಳಿದ್ದೇನೆ. ನನಗೆ ಡಿಸಿಎಂ ಸ್ಥಾನ ಬೇಕೇಬೇಕು ಎಂಬುದು ಸಮುದಾಯದ ಮುಖಂಡರು ಹಾಗೂ ಜನರ ಬೇಡಿಕೆಯಾಗಿದೆ. ಆದರೆ ನಾನು ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಪಟ್ಟು ಹಿಡಿದಿಲ್ಲ. ನಾನು ಮುನಿಸಿಕೊಂಡಿಲ್ಲ, ಅಸಮಧಾನಗೊಂಡಿಲ್ಲ, ನಾನು ಸಿಎಂ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ ಎಂದು ಹೇಳಿದ್ದಾರೆ.
    
ಕಳೆದ ನಾಲ್ಕೈದು ದಿನಗಳಿಂದ ಸಚಿವ ಬಿ.ಶ್ರೀರಾಮುಲು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪಾಲ್ಗೊಳ್ಳುತ್ತಿರುವ ಸಭೆ, ಕಾರ್ಯಕ್ರಮಗಳು, ಸಮಾರಂಭಗಳಿಗೆ ಗೈರಾಗುತ್ತಿದ್ದು, ಉಪ ಮುಖ್ಯಮಂತ್ರಿ ಹುದ್ದೆ ವಿಚಾರವಾಗಿ ಯಡಿಯೂರಪ್ಪ ಅವರ ಜೊತೆ ಮುನಿಸಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಇದಕ್ಕೆ ಇಂದು ಸ್ಪಷ್ಟನೆ ನೀಡಿದ ಅವರು, ಉಪಮುಖ್ಯಮಂತ್ರಿ ಸ್ಥಾನದ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ. ಪ್ರಸಕ್ತ ಸನ್ನಿವೇಶವನ್ನು ನೋಡಿಕೊಂಡು ಪಕ್ಷದ ವರಿಷ್ಠರು ಯಾರಿಗೆ ಏನು ಹುದ್ದೆ ನೀಡಬೇಕೆಂದು ತೀರ್ಮಾನಿಸುತ್ತಾರೆ. ನನಗೆ ಇದೇ ಹುದ್ದೆ ಅಥವಾ ಸ್ಥಾನ ಬೇಕು, ಅದೇ‌ ಬೇಕು ಎಂದುಕೊಂಡು ರಾಜಕಾರಣ ಮಾಡಿ ಬಂದವನಲ್ಲ. ಪಕ್ಷದ ಅಭ್ಯುದಯ, ಹಿತ ನೋಡುವವನು ನಾನು ಎಂದು ತಮ್ಮ ಮೇಲಿರುವ ಆರೋಪಗಳಿಗೆ ಅವರು ಸ್ಪಷ್ಟನೆ ನೀಡಿದರು.
    
ನಾನು ಉಪ ಮುಖ್ಯಮಂತ್ರಿ ಆಗಬೇಕು ಎನ್ನುವುದು ಸಮುದಾಯದ, ಜನರ ಅಪೇಕ್ಷೆ. ನಾನು ಇದರ ಬಗ್ಗೆ ಎಲ್ಲೂ ಚರ್ಚೆ ಮಾಡಿಲ್ಲ. ಡಿಸಿಎಂ ಹುದ್ದೆ ಕೊಟ್ಟರೆ ನಾನು ಬೇಡ ಎನ್ನುವುದಿಲ್ಲ. ಮನುಷ್ಯನಿಗೆ ಆಸೆ ಸಹಜ. ಡಿಸಿಎಂ ಮಾಡಿದರೆ ಅದಕ್ಕೆ ತಕ್ಕ ನ್ಯಾಯ ದೊರಕಿಸಿಕೊಡುವ ಮಟ್ಟದಲ್ಲಿ ಕೆಲಸ ಮಾಡುತ್ತೇನೆ ಎಂದರು.

ನಾನು ಉಪ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಪಕ್ಷಕ್ಕೆ ಮುಜುಗರ ತರುವುದಿಲ್ಲ. ಪಕ್ಷ ಏನು ನಿರ್ಧಾರ ತೆಗೆದುಕೊಳ್ಳಬೇಕು ಎಂದು ತಿಳಿಸಿದೆ. ಹೈಕಮಾಂಡ್ ನಿರ್ಧಾರಕ್ಕೆ ನಾವೆಲ್ಲ ಬದ್ಧರಾಗಿರಬೇಕು. ಯಾರಿಗೆ ಯಾವ ಹುದ್ದೆ ಅಂತ ಪಕ್ಷ ನಿರ್ಧರಿಸುತ್ತದೆ. ರಾಷ್ಟ್ರೀಯ ಪಕ್ಷಗಳಲ್ಲಿ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಡಬೇಕಾಗುತ್ತದೆ ಎಂದರು.
    
ಸಂಪುಟ ವಿಸ್ತರಣೆ ವಿಳಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ವರಿಷ್ಠರು ಈಗ ಬ್ಯುಸಿ ಇದ್ದಾರೆ ಜಾರ್ಖಂಡ್ ಚುನಾವಣೆ ಬಳಿಕ ಸಂಪುಟ ವಿಸ್ತರಣೆ ಆಗಬಹುದು. ಇದು ನಮ್ಮ ಹಂತದಲ್ಲಿ ನಿರ್ಧಾರ ಆಗುವುದಲ್ಲ ಎಂದು ಸ್ಪಷ್ಟಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com