ಶ್ರೀರಾಮುಲು ಡಿಸಿಎಂ ಮಾಡಿ, ಬಳ್ಳಾರಿ ಜಿಲ್ಲಾ ಉಸ್ತುವಾರಿ ವಹಿಸಬೇಕು: ಸೋಮಶೇಖರ್ ರೆಡ್ಡಿ

ಶ್ರೀಮಂತ ಖನಿಜ ಸಂಪನ್ಮೂಲ ಹೊಂದಿರುವ ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ, ಹೊಸಪೇಟೆ ಕೇಂದ್ರವನ್ನಾಗಿಸಿ  ಹೊಸದಾಗಿ ವಿಜಯನಗರ ಜಿಲ್ಲೆಯನ್ನು ಸೃಷ್ಟಿಸಲು ಮುಂದಾಗಿರುವ ರಾಜ್ಯ ಸರ್ಕಾರದ  ಕ್ರಮವನ್ನು ಮತ್ತೊಮ್ಮೆ  ತೀವ್ರವಾಗಿ ವಿರೋಧಿಸಿರುವ...
ಸೋಮಶೇಖರ್ ರೆಡ್ಡಿ (ಸಂಗ್ರಹ ಚಿತ್ರ)
ಸೋಮಶೇಖರ್ ರೆಡ್ಡಿ (ಸಂಗ್ರಹ ಚಿತ್ರ)

ಬಳ್ಳಾರಿ: ಶ್ರೀಮಂತ ಖನಿಜ ಸಂಪನ್ಮೂಲ ಹೊಂದಿರುವ ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ, ಹೊಸಪೇಟೆ ಕೇಂದ್ರವನ್ನಾಗಿಸಿ  ಹೊಸದಾಗಿ ವಿಜಯನಗರ ಜಿಲ್ಲೆಯನ್ನು ಸೃಷ್ಟಿಸಲು ಮುಂದಾಗಿರುವ ರಾಜ್ಯ ಸರ್ಕಾರದ  ಕ್ರಮವನ್ನು ಮತ್ತೊಮ್ಮೆ  ತೀವ್ರವಾಗಿ ವಿರೋಧಿಸಿರುವ ಬಳ್ಳಾರಿ ನಗರ ಬಿಜೆಪಿ ಶಾಸಕ ಜಿ. ಸೋಮಶೇಖರ್ ರೆಡ್ಡಿ, ಸರ್ಕಾರದ ನಿರ್ಧಾರಕ್ಕೆ ಜಿಲ್ಲೆಯ ಬಹುತೇಕ ಶಾಸಕರು  ವಿರುದ್ಧವಾಗಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಇಂದು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಧಾನಸಭಾ ಉಪ ಚುನಾವಣೆಗೆ ಮುನ್ನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕರೆದಿದ್ದ ಸಭೆಯಲ್ಲಿ ಜಿಲ್ಲೆಯ ಶೇ 90ರಷ್ಟು ಶಾಸಕರು ವಿಜಯನಗರ ಪ್ರತ್ಯೇಕ ಜಿಲ್ಲೆ ಸೃಷ್ಟಿಸುವ ಸರ್ಕಾರದ ಕ್ರಮವನ್ನು ವಿರೋಧಿಸಿದ್ದರು. ಕೇವಲ ಆನಂದ್ ಸಿಂಗ್ ಹಾಗೂ ಮತ್ತೊಬ್ಬ ವಿಧಾನಪರಿಷತ್ ಸದಸ್ಯ ಮಾತ್ರ ಬೆಂಬಲಿಸಿದ್ದರು ಎಂದು ರೆಡ್ಡಿ  ಹೇಳಿದರು.

ಅವಿಭಜಿತ ಬಳ್ಳಾರಿ ಜಿಲ್ಲೆಯ ಅಭಿವೃದ್ದಿಗೆ ನೆರವಾಗುವಂತೆ ತಾವು ಆನಂದ್ ಸಿಂಗ್ ಅವರಿಗೆ ಮನವಿ ಮಾಡಿದ್ದಾಗಿ ಬಳ್ಳಾರಿ ಶಾಸಕರು ತಿಳಿಸಿದರು. 

ಸಚಿವ ಶ್ರೀರಾಮುಲು ಅವರನ್ನು ಉಪ ಮುಖ್ಯಮಂತ್ರಿ ಮಾಡಬೇಕು ಹಾಗೂ ಅವರನ್ನು ಬಳ್ಳಾರಿ ಜಿಲ್ಲೆ ಉಸ್ತುವಾರಿ ಸಚಿವರನ್ನಾಗಿ ನೇಮಿಸಬೇಕು ಎಂದು ಮನವಿ ಸಲ್ಲಿಸಲು ಜಿಲ್ಲೆಯ ಎಲ್ಲಾ ಬಿಜೆಪಿ ಶಾಸಕರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಸಧ್ಯದಲ್ಲೇ  ಭೇಟಿ ಮಾಡಲು ಯೋಜಿಸಿದ್ದೇವೆ ಎಂದರು.

ರಾಜ್ಯ ವಿಧಾನಸಭೆ ಚುನಾವಣೆಗೆ ಮುನ್ನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಕೇಂದ್ರ  ಗೃಹ ಸಚಿವ ಅಮಿತ್ ಶಾ,  ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ  ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ನೇಮಿಸಲಾಗುವುದು ಎಂದು ಭರವಸೆ ನೀಡಿದ್ದರೂ. ಆದರೆ ಈ ಭರವಸೆ ಮಾತ್ರ ಈಡೇರಲಿಲ್ಲ,  ಇದರಿಂದ  ನಮಗೆಲ್ಲಾ ತೀವ್ರ ಬೇಸರವಾಗಿದೆ ಎಂದು ಸೋಮಶೇಖರ ರೆಡ್ಡಿ ಅಸಮಧಾನ ವ್ಯಕ್ತಪಡಿಸಿದರು.

ಬಿಜೆಪಿ ವರಿಷ್ಠರು ಜನರ ಭಾವನೆಗಳನ್ನು ಗೌರವಿಸಿ ಶ್ರೀರಾಮುಲು ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲಿದ್ದಾರೆ  ಎಂಬ  ವಿಶ್ವಾಸ ವ್ಯಕ್ತಪಡಿಸಿದ ಅವರು, ತಮ್ಮ ಸಹೋದರ ಗಾಲಿ ಜನಾರ್ಧನರೆಡ್ಡಿ ರಾಜಕೀಯವಾಗಿ ಸಕ್ರಿಯವಾಗಿದಿದ್ದರೆ, ಶ್ರೀರಾಮುಲು ಈಗಾಗಲೇ ಉಪ ಮುಖ್ಯಮಂತ್ರಿಯಾಗಿರುತ್ತಿದ್ದರು ಎಂದು ಹೇಳಿದರು.

2018ರ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ಶ್ರೀರಾಮುಲು ಅವರನ್ನು ಸಂಭವನೀಯ ಉಪಮುಖ್ಯಮಂತ್ರಿ ಎಂದು ಪರಿಗಣಿಸಲಾಗಿತ್ತು.  ಜೆಡಿಎಸ್- ಕಾಂಗ್ರೆಸ್  ಮೈತ್ರಿ ಸರ್ಕಾರ ಪತನಗೊಂಡು ಜುಲೈನಲ್ಲಿ ಬಿಜೆಪಿ  ಅಧಿಕಾರಕ್ಕೆ ಬಂದ ನಂತರ  ಶ್ರೀರಾಮುಲು ಅವರನ್ನು ಡಿಸಿಎಂ ಅನ್ನಾಗಿ ನೋಡಬೇಕೆಂಬ ನಮ್ಮ ಆಸೆಗಳು ಚಿಗುರಿವೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com