ವಾಲ್ಮೀಕಿ ಹೆಸರಿನ ಕ್ಯಾಂಟೀನ್ ಬದಲು ವಿವಿ ಸ್ಥಾಪಿಸಿ, ಮೀಸಲಾತಿ ಹೆಚ್ಚಿಸಿ, ಬಿಜೆಪಿ ಸರ್ಕಾರಕ್ಕೆ ಉಗ್ರಪ್ಪ ಆಗ್ರಹ

ಇಂದಿರಾ ಕ್ಯಾಂಟಿನ್ ಗೆ ಇಂದಿರಾ ಹೆಸರು ತೆಗೆದು ಮಹರ್ಷಿ ವಾಲ್ಮೀಕಿ ಅನ್ನ ಕುಟೀರ ಎಂದು ಮರುನಾಮಕರಣ ಮಾಡಲು ಹೊರಟಿರುವುದು ವಾಲ್ಮೀಕಿ ಮಹರ್ಷಿಗೆ ಮಾಡುವ ಅಪಮಾನ ಎಂದು ಮಾಜಿ ಸಂಸದ ಹಾಗೂ ವಾಲ್ಮೀಕಿ ಸಮುದಾಯದ ನಾಯಕ ವಿ.ಎಸ್.ಉಗ್ರಪ್ಪ ಕಿಡಿಕಾರಿದ್ದಾರೆ. 
ವಿ.ಎಸ್.ಉಗ್ರಪ್ಪ
ವಿ.ಎಸ್.ಉಗ್ರಪ್ಪ

ಬೆಂಗಳೂರು: ಇಂದಿರಾ ಕ್ಯಾಂಟಿನ್ ಗೆ ಇಂದಿರಾ ಹೆಸರು ತೆಗೆದು ಮಹರ್ಷಿ ವಾಲ್ಮೀಕಿ ಅನ್ನ ಕುಟೀರ ಎಂದು ಮರುನಾಮಕರಣ ಮಾಡಲು ಹೊರಟಿರುವುದು ವಾಲ್ಮೀಕಿ ಮಹರ್ಷಿಗೆ ಮಾಡುವ ಅಪಮಾನ ಎಂದು ಮಾಜಿ ಸಂಸದ ಹಾಗೂ ವಾಲ್ಮೀಕಿ ಸಮುದಾಯದ ನಾಯಕ ವಿ.ಎಸ್.ಉಗ್ರಪ್ಪ ಕಿಡಿಕಾರಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಜಂಟಿಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರಕ್ಕೆ ನಿಜಕ್ಕೂ ವಾಲ್ಮೀಕಿ ಸಮುದಾಯದ ಬಗ್ಗೆ ಗೌರವ ಇರುವುದೇ ಆದಲ್ಲಿ ಸಮುದಾಯಕ್ಕೆ ಶೇ 7.5ರಷ್ಟು ಮೀಸಲಾತಿ ದೊರಕಿಸಿಕೊಡಲಿ. ವಾಲ್ಮೀಕಿ ಹೆಸರನ್ನು ಅಜರಾಮರಗೊಳಿಸಬೇಕು ಎನ್ನುವಂತಿದ್ದರೆ ವಾಲ್ಮೀಕಿ ಹೆಸರಿನಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸಿ ಇಲ್ಲವಾದಲ್ಲಿ ರಾಜ್ಯದ ಯಾವುದಾದರೂ ವಿಶ್ವವಿದ್ಯಾಲಕ್ಕೆ ವಾಲ್ಮೀಕಿ ಮಹರ್ಷಿ ಹೆಸರನ್ನು ನಾಮಕರಣ ಮಾಡಲಿ. ಅದನ್ನು ಬಿಟ್ಟು ಕ್ಯಾಂಟೀನ್‌ಗೆ ಇಂದಿರಾ ಹೆಸರನ್ನು ತಗೆದು ವಾಲ್ಮೀಕಿ ಅನ್ನ ಕುಟೀರ ಎಂದು ಮರುನಾಮಕರಣ ಮಾಡುವುದು ಮಹರ್ಷಿಗೆ ಮಾಡುವ ಅಪಮಾನ. ತಾವು ಅದೇ ಸಮುದಾಯಕ್ಕೆ ಸೇರಿದ್ದು, ಇನ್ನೊಂದು ಕಾರ್ಯಕ್ರಮಕ್ಕೆ ವಾಲ್ಮೀಕಿ ಹಸರು ಇಡುವುದನ್ನು ಸಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಡಿಯೂರಪ್ಪ ಅವರು ಉಪಮುಖ್ಯಮಂತ್ರಿ ಹುದ್ದೆ ವಿಚಾರದಲ್ಲಿ ಸಚಿವ ಶ್ರೀರಾಮುಲು ಶಾಸಕ ಮೇಶ್ ಜಾರಕಿಹೊಳಿ ನಡುವೆ ಜಗಳ ತಂದಿಟ್ಟಿದ್ದಾರೆ. ಅಲ್ಲದೇ ಈಗ ವಾಲ್ಮೀಕಿ ಹೆಸರಿನಲ್ಲಿ ಇಬ್ಬರ ನಡುವೆ ಬಿರುಕು ಮೂಡಿಸಿದ್ದಾರೆ. ಯಡಿಯೂರಪ್ಪ ಅವರಿಗೆ ನಿಜಕ್ಕೂ ವಾಲ್ಮೀಕಿ ಸಮುದಾಯದ ಬಗ್ಗೆ ನಿಜಕ್ಕೂ ಗೌರವವಿಲ್ಲ. ಕಾಟಾಚಾರಕ್ಕೆ ಆ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಸಮುದಾಯಕ್ಕೆ ನೋವು ತರಿಸುವ ಕೆಲಸ ಮಾಡಿದ್ದು, ಬಿಜೆಪಿಗೆ ದಲಿತರು, ಹಿಂದುಳಿದವರ ಬಗ್ಗೆ ಕಾಳಜಿಯಿಲ್ಲ ಎಂದರು


ಮಹದಾಯಿ ನಾಲಾ ಯೋಜನೆಗೆ ಕೇಂದ್ರ ಪರಿಸರ ಇಲಾಖೆ ತಡೆ ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸರ್ಕಾರ ಅಧಿಕಾರಕ್ಕೆ ಬಂದ  24, ಗಂಟೆಯೊಳಗೆ ಸಮಸ್ಯೆ ಗೆಹರಿಸುತ್ತೇವೆ ಎಂದು ಬಿಜೆಪಿ ನಾಯಕರು ಮಾತುಕೊಟ್ಟಿದ್ದರು. ಈ ಯೋಜನೆಗೆ  ಕೇಂದ್ರ ಸರ್ಕಾರ ಒಪ್ಪಿಗೆ ನೀಡಿತ್ತು. ಆದರೆ ಈ ಯೋಜನೆಗೆ ಇದೀಗ ಕೇಂದ್ರವೇ ತಡೆ ನೀಡಿದ್ದು, ಯಾಕೆ ಹೀಗಾಯಿತು ಎನ್ನುವುದನ್ನು ರಾಜ್ಯದ ಜನರಿಗೆ ತಿಳಿಸಬೇಕು ಎಂದರು. 

ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಜಾರಿಗೆ ತಂದಿದ್ದು, ರಾಜ್ಯದ ಇತಿಹಾಸದಲ್ಲಿಯೇ ಇಂತಹ ನಿಷೇಧಾಜ್ಞೆ ಇದೇ ಮೊದಲಿಗೆ ಜಾರಿಯಾಗಿದೆ. ರಾಜ್ಯ ಸರ್ಕಾರ ಪ್ರತಿಭಟನಾಕಾರರ ಧ್ವನಿ ಹತ್ತಿಕ್ಕುವ ಪ್ರಯತ್ನ ಮಾಡುವ ಮೂಲಕ ಸಂವಿಧಾನಕ್ಕೆ ವಿರುದ್ಧವಾಗಿ ವರ್ತಿಸಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲಾಗಿದ್ದು, ಸಂವಿಧಾನ ವಿರೋಧಿಯಾಗಿರುವ ಪೌರತ್ವ ಕಾಯಿದೆ ತಿದ್ದುಪಡಿಗೆ ದೇಶಾದ್ಯಂತ ವಿರೋಧ ವ್ಯಕ್ತವಾಗುತ್ತಿದೆ. ಎಲ್ಲರೂ ಒಟ್ಟಾಗಿ ಪ್ರತಿಭಟನೆಗೆ ಧುಮುಕಿದ್ದಾರೆ. ಆದರೆ ಸರ್ಕಾರ ಶಾಂತಿಯುತ ಧರಣಿಗೂ ತಡೆಯೊಡ್ಡಿದ್ದು, ಅಸಂವಿಧಾನಿಕವಾಗಿ ತುರ್ತು ಪರಿಸ್ಥಿತಿ ಜಾರಿ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಇತಿಹಾಸಕಾರ ರಾಮಚಂದ್ರ ಗುಹಾ ನೇತೃತ್ವದ ಪ್ರತಿಭಟನೆಗೆ ಸರ್ಕಾರ ಅಡ್ಡಿಪಡಿಸಿದೆ. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಗುಹಾ ಮತ್ತು ಹೆಣ್ಣುಮಕ್ಕಳನ್ನು ಪೊಲೀಸರು ಎಳೆದಾಡಿ ಹಿಂಸಿಸಿದ್ದಾರೆ. ಯಡಿಯೂರಪ್ಪ ಕಾಂಗ್ರೆಸ್ ನಾಯಕರಿಗೆ ನೇರ ಧಮ್ಕಿ ಹಾಕಿರುವುದು ನೋಡಿದರೆ ಯಡಿಯೂರಪ್ಪನವರ ವರ್ತನೆ ಎಂತಹದು ಎಂಬುದನ್ನು ತೋರಿಸುತ್ತದೆ. ಧಮ್ಕಿ ಹಾಕಿ ಎದುರಿಸುವುದು ಮೂರ್ಖತನ.ಅಧಿಕಾರ ಶಾಶ್ವತವಲ್ಲ ಎಂದು ಯಡಿಯೂರಪ್ಪ ಅವರಿಗೆ ಉಗ್ರಪ್ಪ ಸೂಚ್ಯವಾಗಿ ಎಚ್ಚರಿಸಿದರು. 

ಮಾಜಿ ಸಚಿವ ಹೆಚ್‌.ಎಂ.ರೇವಣ್ಣ ಮಾತನಾಡಿ, ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಮಾಡಲು ಸಚಿವ ಸಿ.ಟಿ.ರವಿ, ಆರ್. ಅಶೋಕ್ ಅವರಿಗೆ ತಲೆ ಕೆಟ್ಟಿರುವಂತಿದೆ. ಅನೇಕ ಜನರಿಗೆ ಊಟ ಹಾಕುವ ಈ ಯೋಜನೆಯನ್ನು ಇನ್ನಷ್ಟು ಬಲಪಡಿಸಬೇಕಾಗಿತ್ತು. ಇಸ್ಕಾನ್ ಸೇರಿ ಹಲವು ಮಠಮಾನ್ಯಗಳು ಊಟ ಹಾಕುತ್ತಿವೆ. ಅಲ್ಲದೇ ಬಿಜೆಪಿ ಮುಖಂಡ ಹಾಗೂ ಕೇಂದ್ರದ ಮಾಜಿ ಸಚಿವ ದಿ‌ ಅನಂತ್ ಕುಮಾರ್ ಪತ್ನಿ ಕೂಡ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುತ್ತಿದ್ದಾರೆ. ಅದೆಲ್ಲ ಬಿಟ್ಟು ಕಾಂಗ್ರೆಸ್ ಸರ್ಕಾರದಲ್ಲಿ ಜಾರಿಯಾಗಿರುವ ಇಂದಿರಾ ಕ್ಯಾಂಟೀನ್ ಯೋಜನೆಯ ಹೆಸರು ಬದಲಿಸುತ್ತೇವೆ ಎನ್ನುವುದು‌ ಸರಿಯಲ್ಲ ಎಂದರು. 

ಜೆಡಿಎಸ್ ಮುಖಂಡ ಟಿ.ಎ. ಶರವಣ ಅಪ್ಪಾಜಿ ಕ್ಯಾಂಟೀನ್ ಮಾಡಿದ್ದಾರೆ. ಅದೇ ರೀತಿ ಬಿಜೆಪಿ ನಾಯಕರು  ಬೇಕಾದರೆ ಬೇರೆ ಹೆಸರಿನಲ್ಲಿ ಕ್ಯಾಂಟೀನ್ ಮಾಡಿ ಜನರಿಗೆ ಕಡಿಮೆ ದರದಲ್ಲಿ ಅನ್ನ ಹಾಕಲಿ. ಅದನ್ನು ಬಿಟ್ಟು ಬೇರೆಯವರು ಊಟ ಹಾಕುವುದನ್ನು ನಿಲ್ಲಿಸುವುದು ನ್ಯಾಯವಲ್ಲ ಎಂದರು.

ನಮ್ಮ ರಾಜ್ಯದಲ್ಲಿ ಪ್ರತಿಭಟನೆ ಮಾಡಬೇಡಿ. ಮಾಡುವುದಿದ್ದರೆ ಬೇರೆ ರಾಜ್ಯಕ್ಕೆ ಹೋಗಿ ಎಂದು ಪೊಲೀಸರು ಪ್ರತಿಭಟನಕಾರರಿಗೆ ಹೇಳಿದ್ದಾರೆ. ಇದೆಲ್ಲ ಎತ್ತ ಸಾಗುತ್ತದೆ ಎನ್ನುವುದನ್ನು ಕಾದು ನೋಡಬೇಕು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com