ಎನ್‌ಆರ್‌ಸಿ ಕೇವಲ ಅಲ್ಪಸಂಖ್ಯಾತರಿಗೆ ಮಾತ್ರವಲ್ಲ ಇಡೀ ದೇಶದ ಮೇಲೆ ಪರಿಣಾಮ ಬೀರುತ್ತದೆ-ಡಿ.ಕೆ.ಶಿವಕುಮಾರ್

ಈ ದೇಶದಲ್ಲಿ ಬ್ರಿಟಿಷರನ್ನು ಓಡಿಸಲು ಸಾವಿರಾರು ಜನ ತ್ಯಾಗ ಮಾಡಿದ್ದಾರೆ.  ಅದೇ ರೀತಿ ಬಿಜೆಪಿಯನ್ನು ಓಡಿಸಲು ಜನರು ಮತ್ತೆ ದಂಗೆ ಏಳಲು ಆರಂಭಿಸಿದ್ದಾರೆ. ಇದು  ಬಿಜೆಪಿಯ ಅಂತ್ಯಕ್ಕೆ ಮುನ್ನುಡಿ ಎಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ  ಡಿ.ಕೆ.ಶಿವಕುಮಾರ್ ಭವಿಷ್ಯ ನುಡಿದಿದ್ದಾರೆ.
ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್

ಬೆಂಗಳೂರು: ಈ ದೇಶದಲ್ಲಿ ಬ್ರಿಟಿಷರನ್ನು ಓಡಿಸಲು ಸಾವಿರಾರು ಜನ ತ್ಯಾಗ ಮಾಡಿದ್ದಾರೆ.  ಅದೇ ರೀತಿ ಬಿಜೆಪಿಯನ್ನು ಓಡಿಸಲು ಜನರು ಮತ್ತೆ ದಂಗೆ ಏಳಲು ಆರಂಭಿಸಿದ್ದಾರೆ. ಇದು  ಬಿಜೆಪಿಯ ಅಂತ್ಯಕ್ಕೆ ಮುನ್ನುಡಿ ಎಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ  ಡಿ.ಕೆ.ಶಿವಕುಮಾರ್ ಭವಿಷ್ಯ ನುಡಿದಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ  ಅನವಶ್ಯಕ ನಿಷೇಧಾಜ್ಞೆಗೆ, ಅಹಿತಕರ ವಾತಾವರಣಕ್ಕೆ ಅವಕಾಶ ನೀಡಿದವರು ಯಾರು  ? ಮುಖ್ಯಮಂತ್ರಿ ಯಡಿಯೂರಪ್ಪರೇ ಅಥವಾ ಗೃಹ ಸಚಿವ ಬಸವರಾಜ ಬೊಮ್ಮಾಯಿಯೇ ? ಎಂದು  ಖಾರವಾಗಿ  ಪ್ರಶ್ನಿಸಿದರು.

ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನಾವೆಲ್ಲರೂ ಸೇರಿ ಕೆಲಸ ಮಾಡಬೇಕಿದೆ. ಯಾವುದೇ ಪಕ್ಷ, ಮಾಧ್ಯಮ ಜನರು ತಮ್ಮದೇ ತತ್ವದಡಿ ಕೆಲಸ ಮಾಡುತ್ತಾರೆ. ಯಾವುದೇ ವ್ಯಕ್ತಿ ಯಾವುದೇ ಧರ್ಮ ಅನುಸರಿಸಲು ಅವಕಾಶವಿದೆ. ಅದೇ ಯಾವುದೇ ಸರ್ಕಾರಕ್ಕೆ ಒತ್ತಾಯ ಮಾಡಲು ಅವಕಾಶವಿಲ್ಲ. ಇಂದು ಮಂಗಳೂರು, ಬೆಂಗಳೂರು, ಕಲಬುರಗಿಯಲ್ಲಿ ಏನೆನು ನಡೆದಿವೆ ಎಂದು ಎಲ್ಲರಿಗೂ ಗೊತ್ತಿದೆ.  ಮಾಧ್ಯಮಗಳ ವರದಿ ನಂಬಬೇಕಾ. ಬಿಜೆಪಿ ವಾದ ನಂಬಬೇಕಾ ಎನ್ನುವುದು ಪ್ರಶ್ನೆಯಾಗಿದೆ ಎಂದರು.

ರಾಜ್ಯದಲ್ಲಿ ಏನಾಗಿದೆ ಎಂದು  144 ನಿಷೇಧಾಜ್ಞೆ  ಹಾಕಿದ್ದೀರಿ. ಯಾರೂ ಮನೆಯಲ್ಲಿ ಮದುವೆ ಮಾಡಬಾರದಾ?  ಜನರು ತಮ್ಮ  ಅಭಿಪ್ರಾಯವನ್ನು ಸಾರ್ವಜನಿಕವಾಗಿ ಹೇಳಬಾರದಾ?  ಜನರ ಅಭಿಪ್ರಾಯ ಹತ್ತಿಕ್ಕುವ ಕೆಲಸ  ಮಾಡುತ್ತಿದ್ದೀರಿ. ಬ್ರಿಟಿಷರಂತೆ, ಬಿಜೆಪಿ ಜನರ ಸ್ವಾತಂತ್ರ್ಯ ಕಿತ್ತುಕೊಳ್ಳುವ  ಪ್ರಯತ್ನ ಮಾಡುತ್ತಿದೆ. ಜನರು ನೇರವಾಗಿ ಸಂಸತ್ತಿನಲ್ಲಿ ಹೋಗಿ ಹೇಳಲು ಆಗುವುದಿಲ್ಲ ಎಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಲು ಅವಕಾಶ ಕಲ್ಪಿಸಲಾಗಿದೆ. ಪ್ರತಿಭಟನಕಾರರು ತಮ್ಮ ಅಭಿಪ್ರಾಯ ಹೇಳಿ ಹೋಗುತ್ತಿದ್ದರು. ಆದರೆ ಸರ್ಕಾರವೇ ಅದಕ್ಕೆ ಅವಕಾಶ ಕಲ್ಪಿಸದೆ ಪರಿಸ್ಥಿತಿಯನ್ನು ಉದ್ವಿಗ್ನಗೊಳ್ಳುವಂತೆ ಮಾಡಿತು ಎಂದು ದೂರಿದರು. 

ಜನರ ಬಳಿ ಮೂಲ ದಾಖಲಾತಿ‌ ಇಲ್ಲದೇ ಇದ್ದರೆ ಅವರನ್ನೆಲ್ಲಾ ಜೈಲಿಗೆ ಹಾಕುತ್ತಾರೆ. ಬಿಜೆಪಿ ನಾಯಕರು ಸಂವಿಧಾನ ಮುಗಿಸಲು ಈ ಮೂಲಕ ಬುನಾದಿ ಹಾಕುತ್ತಿದ್ದಾರೆ. ಮಹಾತ್ಮಾ ಗಾಂಧಿ, ನೆಹರೂ  ನಾಯಕತ್ವದಲ್ಲಿ ಅಂಬೇಡ್ಕರ್ ಸಂವಿಧಾನಕ್ಕೆ ಅಡಿಪಾಯ ಹಾಕಿದ್ದಾರೆ. ಅದನ್ನು ಮುಗಿಸುವ ಕೆಲಸ  ಬಿಜೆಪಿ ಮಾಡುತ್ತಿದೆ. ಈಗ ಜಾರಿಗೆ ತಂದಿರುವ ಕಾಯಿದೆ ಸಂವಿಧಾನ ಬಾಹಿರ,  ಇದು ನಂಬಿಕೆಯ  ವಿರುದ್ಧವಾಗಿದೆ. ಅಂತಾರಾಷ್ಟ್ರೀಯ ಕಾಯಿದೆಯ ವಿರುದ್ಧ ಇದೆ. ಈ ಕಾಯಿದೆ ಆಸ್ಸಾಂ  ಒಪ್ಪಂದದ ವಿರುದ್ಧ ಇದೆ. ಇಡೀ ದೇಶದ ಕಾನೂನಿನ ಮೇಲೆ ಜನರಿಗೆ ಇರುವ ನಂಬಿಕೆಯನ್ನು  ಕಳೆಯುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ಸರ್ಕಾರ ಜನರಿಗೆ ಉದ್ಯೋಗ ಅನ್ನ ನೀಡಬೆಕು,  ಜನರು ಉದ್ಯೋಗ  ಕಳೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಚಿಂತಿಸಬೇಕು, ಇದು ಕೇವಲ ಅಲ್ಪ ಸಂಖ್ಯಾತರಿಗೆ ಪರಿಣಾಮ ಬೀರುವುದಿಲ್ಲ. ಇಡೀ  ದೇಶದ ಮೇಲೆ ಪರಿಣಾಮ ಬೀರುತ್ತಿದೆ. ನಿಮಗೆ ಪ್ರಮಾಣ ಪತ್ರ ನೀಡದಿದ್ದರೆ ಜೈಲಿಗೆ  ಹಾಕುತ್ತೀರಾ ? ಎಷ್ಟು ಜನರನ್ನು ಜೈಲಿಗೆ ಹಾಕುತ್ತೀರಾ ? ಇಡೀ ದೇಶ ಒಗ್ಗಟ್ಟಾಗಿ  ಬದುಕುತ್ತಿದೆ. ವಿಶ್ವ ಭಾರತವನ್ನು ನೋಡುತ್ತಿದೆ. ಇದು ಇಡೀ ದೇಶ ಅವಮಾನ ಪಡುವಂತೆ  ಮಾಡಿದೆ. ಇದಕ್ಕೆ ಪ್ರಧಾನಿ ಅಮಿತ್ ಶಾ ಹೊಣೆಯಾಗಿದ್ದಾರೆ ಎಂದು ದೂರಿದರು.

ಪ್ರಸಕ್ತ ದೇಶದ ಮಕ್ಕಳಿಗೆ ಉದ್ಯೋಗ ಕೊಡಲು ಆಗುತ್ತಿಲ್ಲ. ಹೊರಗಿನವರನ್ನು ತಂದು ಅವರನ್ನು ನಿರಾಶ್ರಿತರನ್ನಾಗಿಸುತ್ತಿದ್ದಾರೆ. ಯಾರೂ  ಯಾವ ಧರ್ಮದಲ್ಲಿ ಹುಟ್ಟಬೇಕೆಂದು ಅರ್ಜಿ ಹಾಕಿಕೊಂಡು ಹುಟ್ಟಿಲ್ಲ. ಬಿಜೆಪಿಯ ಸುಳ್ಳುಗಳು  ದೇಶದ ಯುವಕರ‌ನ್ನು ಕೊಲ್ಲುತ್ತಿವೆ. ಸುಳ್ಳನ್ನು ಸತ್ಯ ಎಂದು ಪ್ರಚುರ ಪಡಿಸುವ ಅವರ  ಸಾಮಾಜಿಕ ಜಾಲತಾಣಗಳನ್ನು ಬಂದು ಮಾಡುವಂತೆ ಶಿವಕುಮಾರ್ ಒತ್ತಾಯಿಸಿದರು‌.

ಮಾಧ್ಯಮದವರನ್ನು  ಬಂಧನ ಮಾಡುವ ಬಿಜೆಪಿ ಸರ್ಕಾರ ತನ್ನ ಕಾರ್ಯಕರ್ತರು ಪ್ರಚೋದನೆ ಮಾಡಿದವರ ವಿರುದ್ಧ ಏಕೆ  ಕ್ರಮ ಕೈಗೊಳ್ಳುತ್ತಿಲ್ಲ. ಕೇಂದ್ರ ಸರ್ಕಾರ ದೇಶದ ಮಾಲಿಕರಲ್ಲ, ಅವರು ಜನರ ಕೇರ್ ಟೇಕರ್  ಮಾತ್ರ. ಮಾಧ್ಯಮಗಳನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ.  ಬೇರೆ  ದೇಶಗಳಲ್ಲಿ ಸಾಕಷ್ಟು ಭಾರತದ ಬಗ್ಗೆ ಕೆಟ್ಟದಾಗಿ ಮಾತನಾಡುವಂತಾಗಿದೆ. ಯಡಿಯೂರಪ್ಪ ಸಹ   ಸ್ವಾತಂತ್ರ್ಯ ಹೋರಾಟಗಾರರಲ್ಲ, ಬೆಂಗಳೂರನ್ನೂ ಅವರು ಕಟ್ಟಿಲ್ಲ. ಜನರು ತಮ್ಮ ಹಕ್ಕಿಗಾಗಿ  ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಅವರ ಜೊತೆಗೆ ಕಾಂಗ್ರೆಸ್ ಇದೆ ಎಂದು  ಸ್ಪಷ್ಟಪಡಿಸಿದರು.

ಪಕ್ಷದ ನಾಯಕ ಯ.ಟಿ.ಖಾದರ್ ಯಾವುದೇ ಪ್ರತಿಭಟನೆಗೆ ಪ್ರಚೋದನಾತ್ಮಕ ಹೇಳಿಕೆ ನೀಡಿಲ್ಲ. ಬಿಜೆಪಿಯ ಎಷ್ಟೋ ನಾಯಕರು ಪ್ರಚೋದನಕಾರಿಯಾಗಿ  ಹೇಳಿಕೆ ನೀಡಿದ್ದಾರೆ. ನಾವು  ಯಾವುದೇ ಪ್ರಚೋದನೆ ಮಾಡಿಲ್ಲ. ಆ ರೀತಿ ಮಾಹಿತಿ ಇದ್ದರೆ ಏನಾದರೂ ಕ್ರಮ ಕೈಗೊಳ್ಳಲಿ.  ನಾವೂ ಸಹ ಬೀದಿಗೆ ಇಳಿಯುವ ಕಾಲ ಬಂದೇ ಬರುತ್ತದೆ. ಪ್ರಜಾಪ್ರಭುತ್ವ ಉಳಿಸಲು ನಾವೂ ಹೋರಾಟ  ಮಾಡುತ್ತೇವೆ. ಕಾಂಗ್ರೆಸ್ ಇನ್ನೂ ಸತ್ತಿಲ್ಲ. ಎನ್ ಆರ್ ಸಿ ಬಗ್ಗೆ ದೇಶದ ಜನರಿಗೆ ಸ್ಪಷ್ಟ ಮಾಹಿತಿ ನೀಡುವ ಜವಾಬ್ದಾರಿ ಕೇಂದ್ರ ಸರ್ಕಾರದ್ದು ಎಂದು ಶಿವಕುಮಾರ್ ಒತ್ತಾಯಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ಮಂಗಳೂರಿನಲ್ಲಿ  ಇಬ್ಬರು ಅಮಾಯಕರು  ಪೊಲೀಸರ ಗುಂಡಿಗೆ ಬಲಿಯಾಗಿದ್ದಾರೆ. ಅನೇಕ ಜನರು ಗಾಯಗೊಂಡಿದ್ದಾರೆ.  ದೇಶ ಹೊತ್ತಿ ಉರಿಯುತ್ತಿದೆ. ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯನ್ನು ಮೋದಿ ಶಾ  ತಂದಿದ್ದಾರೆ. ಮೃತರ  ಕುಟುಂಬಕ್ಕೆ ಸಾಂತ್ವನ ಹೇಳುವಷ್ಟೂ ಮಾನವೀಯತೆ ಈ ಸರ್ಕಾರಕ್ಕೆ  ಇಲ್ಲ. ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಪೌರತ್ವ ನೋಂದಣಿ ಹಾಗೂ ರಾಷ್ಟ್ರೀಯ  ಪೌರತ್ವ ಕಾಯಿದೆ ಜಾರಿ ನೆಪದಲ್ಲಿ ಧರ್ಮ-ಧರ್ಮಗಳ ನಡುವೆ ಭಿನ್ನಾಭಿಪ್ರಾಯ  ಸೃಷ್ಟಿಸಿದೆ.ಅಸಹಾಕತೆ ಹೆಣಗಳ ಮೇಲೆ ಅಧಿಕಾರ ನಡೆಸುವ ಪ್ರಯತ್ನ  ಮಾಡುತ್ತಿದ್ದಾರೆ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಡೆಯುವುದಿಲ್ಲ ಎಂದು  ಎಚ್ಚರಿಸಿದರು.

ಮಂಗಳೂರಿನಲ್ಲಿ ನಡೆದಿರುವುದು ರಾಜ್ಯ ಸರ್ಕಾರವೇ ಪ್ರಾಯೋಜಿಸಿರುವ ಭಯೋತ್ಪಾದನೆಯಾಗಿದೆ. ಇಷ್ಟು ಗುಂಡು ಹಾರಿಸಿದರೂ ಯಾರೂ ಸತ್ತಿಲ್ಲವೇ ಎಂದು ಪೊಲೀಸರೇ ಮಾತನಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ನ್ಯಾಯಾಂಗ  ತನಿಖೆಯಾಗಬೇಕು ಎಂದು ಅವರು ಒತ್ತಾಯಿಸಿದರು.

ಮೋದಿ, ಶಾ ತಮ್ಮ ಮನಸಿಗೆ ಬಂದಂತೆ ಕಾನೂನು ತಿದ್ದುಪಡಿ  ಮಾಡುತ್ತಿದ್ದಾರೆ. ಯಾವ ಕಾರಣಕ್ಕೆ ಈ ಕಾಯಿದೆ ಜಾರಿಗೆ ತರುತ್ತಿದ್ದಾರೆ ಎಂದು ಜನರಿಗೆ  ಸ್ಪಷ್ಟ ಮಾಹಿತಿ ನೀಡದೆ ಒಂದು ಸಮುದಾಯವನ್ನು ಹೊರಗಿಡುವ ಪ್ರಯತ್ನ ಮಾಡುತ್ತಿದ್ದಾರೆ. 
ರಾಷ್ಟ್ರೀಯ  ಪೌರತ್ವ ನೋಂದಣಿಯೇ ಈ ಕಿಚ್ಚು ಹಚ್ಚಲು ಕಾರಣವಾಗಿದೆ.  ನಮ್ಮ ರಾಷ್ಟ್ರೀಯತೆ ಇವರಿಗೆ ಸಾಬೀತು ಮಾಡಬೇಕಿಲ್ಲ. ನಮ್ಮ ಪೂರ್ವಜರು ಈ ದೇಶದ  ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದಾರೆ. ಆಸ್ಸಾಂನಲ್ಲಿ ಹೇಗೆ ನಡೆಯಿತು ಎಂದು  ಎಲ್ಲರಿಗೂ ಗೊತ್ತಿದೆ. ರಾಷ್ಟ್ರೀಯ ಪೌರತ್ವ ನೋಂದಣಿ ಮಾಡಲು ಸಾಧ್ಯವಿಲ್ಲ. ಬಿಜೆಪಿಯವರು  ನಕಲಿ ದೇಶದ ಭಕ್ತರು. ಈಗಲಾದರೂ ಪೌರತ್ವ ಕಾಯ್ದೆ ವಾಪಸ್ ಪಡೆಯಬೇಕು ಎಂದು   ಖಂಡ್ರೆ ಒತ್ತಾಯಿಸಿದರು.

ಪಕ್ಷದ ನಿಯೋಗ ಮಂಗಳೂರಿಗೆ ತೆರಳಿ ವಾಸ್ತವಾಂಶ‌ ಸಂಗ್ರಹಿಸಲಿದೆ. ಎಸ್.  ಆರ್.ಪಾಟೀಲ್, ನಜಿರ್ ಅಹಮದ್, ಎಂ.ಬಿ ಪಾಟೀಲ್, ಬಸವರಾಜ್ ರಾಯರೆಡ್ಡಿ ಮಂಗಳೂರಿಗೆ ಭೇಟಿ  ನೀಡಿ ವರದಿ ಪಡೆಯಲಿದ್ದಾರೆ. ಕಾಲಚಕ್ರ ತಿರುಗುತ್ತದೆ, ಇವರ ಆಡಳಿತ ಬಹಳ ದಿನ ನಡೆಯುವುದಿಲ್ಲ. ಸಾರ್ವಜನಿಕರು ಶಾಂತಿಯುತವಾಗಿ ಪ್ರತಿಭಟನೆ ನಡೆಸಲಿ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com