ಸಂಕ್ರಾಂತಿ ಬಳಿಕ ರಾಜ್ಯ ಕಾಂಗ್ರೆಸ್ ಗೆ ನೂತನ ನಾಯಕರ ನೇಮಕ!

ಉಪಚುನಾವಣೆ ಸೋಲಿನ ನೈತಿಕ ಹೊಣೆ ಹೊತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ತಮ್ಮ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಿದ ಬಳಿಕ ಕಾಂಗ್ರೆಸ್ ಪಕ್ಷ ನಾಯಕರಿಲ್ಲದೆ ಬಣಗುಡುತ್ತಿದ್ದು,. ನೂತನ ನಾಯಕರ ನೇಮಕಾತಿಗಾಗಿ ಪಕ್ಷ ಎದುರು ನೋಡುತ್ತಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಉಪಚುನಾವಣೆ ಸೋಲಿನ ನೈತಿಕ ಹೊಣೆ ಹೊತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ತಮ್ಮ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಿದ ಬಳಿಕ ಕಾಂಗ್ರೆಸ್ ಪಕ್ಷ ನಾಯಕರಿಲ್ಲದೆ ಬಣಗುಡುತ್ತಿದ್ದು,. ನೂತನ ನಾಯಕರ ನೇಮಕಾತಿಗಾಗಿ ಪಕ್ಷ ಎದುರು ನೋಡುತ್ತಿದೆ. 

ಖಾಲಿಯಿರುವ ಹುದ್ದೆಗಳ ನೇಮಕಾತಿಗಾಗಿ ಈಗಾಗಲೇ ಕಸರತ್ತುಗಳು ಮುಂದುವರೆಯುತ್ತಿದ್ದು, ಸಂಕ್ರಾತಿ ಬಳಿಕ ಅಂದರೆ, ಜನವರಿ 15 ಬಳಿಕವಷ್ಟೇ ನೂತನ ನಾಯಕರನ್ನು ನೇಮಕ ಮಾಡಲಾಗುತ್ತದೆ ಎಂದು ವರದಿಗಳು ತಿಳಿಸಿವೆ. 

ಸಂಕ್ರಾಂತಿ ಮುನ್ನಾ ದಿನಗಳನ್ನು ಶೂನ್ಯಮಾಸವೆಂದು ಕರೆಯಲಾಗುತ್ತದೆ. ಹೀಗಾಗಿ ಈ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಹೊಸ ಕಾರ್ಯಗಳನ್ನು ಕೈಗೆತ್ತಿಕೊಳ್ಳುವುದಿಲ್ಲ. ಹೀಗಾಗಿಯೇ ಬಿಜೆಪಿ ಪಕ್ಷ ಕೂಡ ಸಂಪುಟ ವಿಸ್ತರಣೆ ಕಾರ್ಯವನ್ನು ಮುಂದೂಡಿದೆ. 

ಈ ನಡುವೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಭಾರೀ ಪೈಪೋಟಿಗಳು ಎದುರಾಗಿವೆ. ಒಕ್ಕಲಿಗ ಸಮಾಜದ ನಾಯಕ ಡಿಕೆ.ಶಿವಕುಮಾರ್, ದಲಿತ ಸಮುದಾಯ ನಾಯಕ ಕೆ.ಹೆಚ್.ಮುನಿಯಪ್ಪ ಹಾಗೂ ಲಿಂಗಾಯ ನಾಯಕ ಎಂ.ಬಿ.ಪಾಟೀಲ್ ಅವರ ನಡುವೆ ಪೈಪೋಟಿ ಎದುರಾಗಿದ್ದೂ, ಈ ಮೂವರಲ್ಲಿ ಯಾರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಒಲಿದು ಬರಲಿದೆ ಎಂಬುದನ್ನು ಕಾದು ನೋಡಬೇಕಿದೆ. 

ಇನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ರೆಡ್ಡಿ ಲಿಂಗಾಯತ ಸಮುದಾಯದ ನಾಯಕ ಹೆಚ್.ಕೆ.ಪಾಟೀಲ್ ಹಾಗೂ ಬ್ರಾಹ್ಮಣರ ನಾಯಕ ರಮೇಶ್ ಕುಮಾರ್ ನಡುವೆ ಪೈಪೋಟಿ ಮೂಡಿದೆ. 

ರಾಜ್ಯ ರಾಜಕೀಯ ಬೆಳವಣಿಗೆಗಳನ್ನು ಎಐಸಿಸಿ ನಾಯಕರಾದಾ ಮಧುಸೂದನ್ ಮಿಸ್ತಿರಿ ಹಾಗೂ ಭಕ್ತ ಚರಣ್ ದಾಸ್ ಅವರು ಬಹಳ ಹತ್ತಿರದಿಂದ ಗಮನಿಸುತ್ತಿದ್ದು, ನೂತನ ನಾಯಕರ ನೇಮಕಾತಿ ಕುರಿತು 50 ಶಾಸಕರು ಹಾಗೂ ನಾಯಕರ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದಾರೆ. ಈ ಅಭಿಪ್ರಾಯಗಳನ್ನು ಹೈಕಮಾಂಡ್ ಗಮನಕ್ಕೆ ತರಲಿದ್ದಾರೆ. ಅಭಿಪ್ರಾಯಗಳ ಬಳಿಕ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. 

ಇನ್ನು ಸಿದ್ದರಾಮಯ್ಯ ಅವರು ಸಲ್ಲಿಸಿರುವ ರಾಜೀನಾಮೆಯನ್ನು ಕಾಂಗ್ರೆಸ್ ಹೈಕಮಾಂಡ್ ಅಂಗೀಕರಿಸುತ್ತದೆಯೇ ಎಂಬ ಪ್ರಶ್ನೆ ಕೂಡ ಎಲ್ಲರಲ್ಲೂ ಮೂಡತೊಡಗಿದೆ. ಎರಡು ತಿಂಗಳ ಹಿಂದಷ್ಟೇ ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದರು. 

ಮುಂದಿನ ಅಧಿವೇಶನ ಆರಂಭಕ್ಕೂ ಮುನ್ನ ಜನವರಿ 20 ಮುನ್ನ ನಾಯಕರ ನೇಮಕಾತಿಯಾಗುವುದು ಖಚಿತ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

ರಾಷ್ಟ್ರೀಯ ನಾಯಕತ್ವ ಪಕ್ಷದ ಉನ್ನತಿಗಾಗಿ ಬಲಿಷ್ಠ ನಾಯಕರನ್ನು ನೇಮಕ ಮಾಡಲು ನಿರ್ಧರಿಸಿದೆ ಎಂದು ಕಾಂಗ್ರೆಸ್ ಮೂಲಗಳು ಮಾಹಿತಿ ನೀಡಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com