ಕಾಂಗ್ರೆಸ್ ಸೇರಲು ಮುಂದಾಗಿದ್ದ ಎಚ್.ಡಿ ದೇವೇಗೌಡ: ಮಾಜಿ ಪ್ರಧಾನಿ ಬಗ್ಗೆ ಸ್ಫೋಟಕ ಮಾಹಿತಿ!

ಎಂಬತ್ತರ ದಶಕದಲ್ಲಿ ಎಚ್‌.ಡಿ. ದೇವೇಗೌಡ ಹಾಗೂ ಎಸ್.ಆರ್. ಬೊಮ್ಮಾಯಿ ಕಾಂಗ್ರೆಸ್‌ ಸೇರುವ ಬಯಕೆ ವ್ಯಕ್ತಪಡಿಸಿದ್ದರು. ಆಟೋರಿಕ್ಷಾದಲ್ಲಿ ನನ್ನ ಮನೆಗೆ ಬಂದಿದ್ದ ಗೌಡರು, ‘ವಿರೋಧ ಪಕ್ಷದಲ್ಲಿ ಒಗ್ಗಟ್ಟಿಲ್ಲ, ಒಂದು ನೀತಿ ಇಲ್ಲ. ನಾನು ಕಾಂಗ್ರೆಸ್ ಸೇರುವ ಮನಸ್ಸು ಮಾಡಿದ್ದೇನೆ’ ಎಂಬುದಾಗಿ ಹೇಳಿದ್ದರು.
ದೇವೇಗೌಡ
ದೇವೇಗೌಡ

ಬೆಂಗಳೂರು: ಎಂಬತ್ತರ ದಶಕದಲ್ಲಿ ಎಚ್‌.ಡಿ. ದೇವೇಗೌಡ ಹಾಗೂ ಎಸ್.ಆರ್. ಬೊಮ್ಮಾಯಿ ಕಾಂಗ್ರೆಸ್‌ ಸೇರುವ ಬಯಕೆ ವ್ಯಕ್ತಪಡಿಸಿದ್ದರು. ಆಟೋರಿಕ್ಷಾದಲ್ಲಿ ನನ್ನ ಮನೆಗೆ ಬಂದಿದ್ದ ಗೌಡರು, ‘ವಿರೋಧ ಪಕ್ಷದಲ್ಲಿ ಒಗ್ಗಟ್ಟಿಲ್ಲ, ಒಂದು ನೀತಿ ಇಲ್ಲ. ನಾನು ಕಾಂಗ್ರೆಸ್ ಸೇರುವ ಮನಸ್ಸು ಮಾಡಿದ್ದೇನೆ’ ಎಂಬುದಾಗಿ ಹೇಳಿದ್ದರು.

ದೇವೇಗೌಡರ ಸಮಕಾಲೀನರೂ ಆಗಿರುವ ಹಿರಿಯ ಮುತ್ಸದ್ದಿ ಹಾಗೂ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ  ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ತುರ್ತು ಪರಿಸ್ಥಿತಿ ವೇಳೆ ಒಂದು ಬಾರಿ ಹಾಗೂ ಚರಣ್‌ ಸಿಂಗ್‌ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಜನತಾಪಕ್ಷದಲ್ಲಿ ನಡೆದ ಬೆಳವಣಿಗೆ ಹಿನ್ನೆಲೆಯಲ್ಲಿ ಮತ್ತೊಂದು ಬಾರಿ ದೇವೇಗೌಡರು ಕಾಂಗ್ರೆಸ್‌ ಸೇರಲು ಮನಸ್ಸು ಮಾಡಿದ್ದರು ಎಂದು ಕೃಷ್ಣ ಅವರು ತಮ್ಮ ಜೀವನ ಚರಿತ್ರೆಯಲ್ಲಿ ದಾಖಲಿಸಿದ್ದಾರೆ.

ಜನವರಿ 4ರಂದು ಲೋಕಾರ್ಪಣೆಯಾಗಲಿರುವ ತಮ್ಮ ಜೀವನ ಚರಿತ್ರೆ ‘ಸ್ಮೃತಿವಾಹಿನಿ’ಯಲ್ಲಿ ಈವರೆಗೆ ಬೆಳಕಿಗೆ ಬಾರದ ಅಚ್ಚರಿಯ ಹಾಗೂ ಸಂಚಲನ ಮೂಡಿಸಬಲ್ಲ ಹತ್ತು ಹಲವು ರಾಜಕೀಯ ಬೆಳವಣಿಗೆಗಳನ್ನು ಅವರು ಉಲ್ಲೇಖಿಸಿದ್ದಾರೆ. ಅದರ ಮಾಹಿತಿ ಲಭ್ಯವಾಗಿದೆ.

ತುರ್ತು ಪರಿಸ್ಥಿತಿಯಲ್ಲಿ ದೇವೇಗೌಡರು ಜೈಲಿನಲ್ಲಿ ಇದ್ದರು. ಒಮ್ಮೆ ಪೆರೋಲ್‌ ಮೇಲೆ ಹೊರಗಡೆ ಬಂದರು. ಆಗ ನಡೆದ ಒಂದು ಘಟನೆ ಈಗ ಹೇಳಬೇಕಾಗಿದೆ. ಈ ಘಟನೆಗೆ ಸಾಕ್ಷಿಯಾಗಿ ಆಗ ಅಸಿಸ್ಟೆಂಟ್‌ ಕಮಿಷನರ್‌ ಆಗಿದ್ದ ಶಿವರಾಂ ಇದ್ದಾರೆ. ನಾನು ಕೈಗಾರಿಕಾ ಸಚಿವನಾಗಿದ್ದಾಗ ಅವರು ನನ್ನ ಆಪ್ತ ಕಾರ್ಯದರ್ಶಿಯಾಗಿದ್ದರು ಎಂದು ಕೃಷ್ಣ ಪ್ರಸ್ತಾಪಿಸಿದ್ದಾರೆ.

ಶಿವರಾಂ ಅವರಿಗೆ ಒಮ್ಮೆ ದೇವೇಗೌಡರು ಸಿಕ್ಕಿದ್ದರು. ನಾನು ಕೃಷ್ಣ ಅವರನ್ನು ನೋಡಬೇಕು, ಖಾಸಗಿಯಾಗಿ ಮಾತನಾಡಬೇಕು ಎಂದು ಕೇಳಿಕೊಂಡಿದ್ದಾರೆ. ಅದಕ್ಕೆ ಶಿವರಾಂ ‘ಸರ್‌ ತಾವು ಯಾವಾಗ ಬೇಕಾದರೂ ಬನ್ನಿ’ ಎಂದಾಗ ನಾನು ಅವರನ್ನು ತುಂಬಾ ಖಾಸಗಿಯಾಗಿ ಭೇಟಿ ಮಾಡಬೇಕು ಅಂದಿದ್ದಾರೆ. 

ಮಧ್ಯಾಹ್ನ 1.30ರಿಂದ ಸಂಜೆ 4ರವರೆಗೆ ಯಾರೂ ಇರುವುದಿಲ್ಲ. ನೀವು ಆವಾಗ ಬನ್ನಿ ಎಂದರಂತೆ. ‘ನಾನು ಕಾರಲ್ಲಿ ಬರುವುದಿಲ್ಲ, ಆಟೋ ರಿಕ್ಷಾದಲ್ಲಿ ಬರುತ್ತೇನೆ’ ಎಂದು ಪುನಃ ದೇವೇಗೌಡರು ಹೇಳಿದ್ದಾರೆ. ಹಾಗೆ ಅವರು ಹೇಳಿದಂತೆ ಆಟೋ ರಿಕ್ಷಾದಲ್ಲಿ ನಮ್ಮ ಮನೆಗೆ ಬಂದರು.

‘ಕೃಷ್ಣ, ನನಗೆ ತುಂಬಾ ಬೇಜಾರಾಗಿದೆ. ವಿರೋಧ ಪಕ್ಷದಲ್ಲಿ ಒಗ್ಗಟ್ಟಿಲ್ಲ. ಒಂದು ನೀತಿ ಇಲ್ಲ. ನಾನು ಕಾಂಗ್ರೆಸ್‌ ಸೇರುವ ಮನಸ್ಸು ಮಾಡಿದ್ದೇನೆ’ ಎಂದರು. ಆಗ ನಾನು ‘ಗೌಡರೇ, ಈಗ ತಾನೆ ಮುಖ್ಯಮಂತ್ರಿ ದೇವರಾಜು ಅರಸು ಮೇಲೆ ಹದಿನೆಂಟು ಗುರುತರವಾದ ಆಪಾದನೆ ಮಾಡಿ ಇವುಗಳನ್ನು ನಾನು ರುಜುವಾತು ಮಾಡದೆ ಹೋದರೆ ರಾಜಕೀಯ ಸನ್ಯಾಸ ತೆಗೆದುಕೊಳ್ಳುತ್ತೇನೆ ಅಂತ ಹೇಳಿದ್ದೀರಿ. ಈಗ ನೀವು ಕಾಂಗ್ರೆಸ್‌ಗೆ ಬಂದರೆ ಜನರ ಮುಂದೆ ನಿಮ್ಮ ಘನತೆ ಏನಾಗುತ್ತದೆ? 

ದೇವರಾಜ ಅರಸು ಅವರನ್ನು ತೆಗೆದುಹಾಕಿ, ಆಗ ನಾವು ನಿಮ್ಮ ಜೊತೆಗೆ ಬರುತ್ತೇವೆ ಅಂತ ನೀವು ಕಂಡೀಶನ್‌ ಹಾಕಿದರೆ ಅದಕ್ಕೊಂದು ಅರ್ಥವಿದೆ. ಆಗ ನೀವು ಕಾಂಗ್ರೆಸ್‌ ಸೇರಿದರೆ ನಿಮಗೊಂದು ಘನತೆ ಬರುತ್ತದೆಯಲ್ಲವೇ’ ಎಂದೆ. ಆಗವರು ಸ್ವಲ್ಪಹೊತ್ತು ಮೌನಿಗಳಾದರು. ನಂತರ, ‘ಕೃಷ್ಣ, ನೀನು ಹೇಳುವುದರಲ್ಲಿಯೂ ಸತ್ಯ ಇದೆ, ನಾನು ಏಕಾಏಕಿ ದುಡುಕುವುದಿಲ್ಲ’ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com