ಕನಕಪುರದಲ್ಲಿ ಯೇಸು ಪುತ್ಥಳಿ ನಿರ್ಮಾಣ: ತಮ್ಮ ವಿರುದ್ಧ ತಿರುಗಿಬಿದ್ದ ಬಿಜೆಪಿಗರಿಗೆ ಡಿಕೆಶಿ ಟಾಂಗ್

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಡಿ‌‌.ಕೆ.ಶಿವಕುಮಾರ್ ಹೆಸರುಅಂತಿಮಗೊಳ್ಳುವ ಸಾಧ್ಯತೆ ದಟ್ಟವಾಗುತ್ತಿದ್ದಂತೆಯೇ ಬಿಜೆಪಿ ಪಾಳಯ ಶಿವಕುಮಾರ್ ವಿರುದ್ಧ ಮುಗಿಬೀಳಲು ಆರಂಭಿಸಿದೆ.ಕನಕಪುರದಲ್ಲಿ ಯೇಸು ಪುತ್ಥಳಿ ನಿರ್ಮಾಣ: ತಮ್ಮ ವಿರುದ್ಧ ತಿರುಗಿಬಿದ್ದ ಬಿಜೆಪಿಗರಿಗೆ ಡಿಕೆಶಿ ಟಾಂಗ್ ಕೊಟ್ಟಿದ್ದಾರೆ.
ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್

ಬೆಂಗಳೂರು: ಏಸು ಕ್ರಿಸ್ತನ ಪ್ರತಿಮೆ ನಿರ್ಮಾಣ ವಿಚಾರದಲ್ಲಿ ತಮ್ಮ ವಿರುದ್ಧ ಟೀಕಾ ಪ್ರಹಾರ ನಡೆಸಿರುವ ಕೇಂದ್ರದ ಮಾಜಿ ಸಚಿವ ಹಾಗೂ ಸಂಸದ ಅನಂತಕುಮಾರ್ ಹೆಗಡೆಗೆ ಅವರಿಗೆ ಕೆಲಸ ಇಲ್ಲ. ಹೀಗಾಗಿ ತಮ್ಮನ್ನು ಗುರಿಮಾಡಿಕೊಂಡಿದ್ದಾರೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ. 

ಸುದ್ದಿಗಾರರ ಜತೆ ಮಾತನಾಡಿದ ಅವರು, ಅನಂತಕುಮಾರ ಹೆಗಡೆ ಈಗ ಕೆಲಸ ಇಲ್ಲದೇ ಸುಮ್ಮನೆ ಕುಳಿತಿದ್ದಾರೆ. ಅವರು ನನಗೆ ಆತ್ಮೀಯರು. ಅವರಿಗೆ ಈಗ ಕೆಲಸ ಬೇಕಾಗಿದೆ. ದೇಶದಲ್ಲಿ ಬದಲಾವಣೆ ಮಾಡಬೇಕು ಅಂದರೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುಸ್ತಕ ಸುಡಬೇಕು ಎಂದು ಕಾಯುತ್ತಿದ್ದಾರೆ. ಅದಕ್ಕಾಗಿ ಪ್ರಯತ್ನಿಸುತ್ತಿದ್ದಾರೆ. ಹೀಗಾಗಿಯೆ ನನ್ನನ್ನು ನೆನೆಸಿಕೊಳ್ಳುತ್ತಿದ್ದಾರೆ. ಅವರಿಗೆ ಅಭಿನಂದಿಸುತ್ತೇನೆ, ಒಳ್ಳೆಯದಾಗಲಿ ಎಂದು ವ್ಯಂಗ್ಯವಾಡಿದರು. 

ಯೇಸುವಿನ ಪ್ರತಿಮೆ ವಿಚಾರವಾಗಿ ಎರಡು ವರ್ಷಗಳ ಹಿಂದೆ ನನ್ನ ಕ್ಷೇತ್ರದ ಕ್ರೈಸ್ತ ಸಮುದಾಯದವರಿಗೆ ಮಾತು ಕೊಟ್ಟಿದ್ದೆ. ಈಗ ಅದು ಸಾಕಾರಗೊಳ್ಳುತ್ತಿದೆ. ಪ್ರತಿಮೆ ಸ್ಥಾಪನೆಗೆ ಯಾವುದೇ ಸಮಸ್ಯೆ ಇಲ್ಲ. ಕನಕಪುರ ತಾಲೂಕಿನ ಹಾರೋಬೆಲೆ ಗ್ರಾಮದ ಕಪಾಲಿಬೆಟ್ಟದಲ್ಲಿ ಯೇಸುವಿನ ಕಲ್ಲಿನ ಪ್ರತಿಮೆ ನಿರ್ಮಿಸಲು ಇತ್ತೀಚೆಗೆ ಭೂಮಿ ಪೂಜೆ ನಡೆದಿದೆ. ಇದನ್ನೇ ಬಿಜೆಪಿ ನಾಯಕರು ಟೀಕಿಸುತ್ತಿದ್ದಾರೆ ಎಂದರು. 

ನನ್ನ ಕ್ಷೇತ್ರದಲ್ಲಿ ಎಲ್ಲ ಧರ್ಮ ಹಾಗೂ ಸಮಾಜದ ಜನರಿದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನದಿಂದ ವಿಧಾನಸಭೆವರೆಗೂ ನನ್ನನ್ನು ಬೆಳೆಸಿದ್ದಾರೆ. ನಾನು ಕಷ್ಟ ಕಾಲದಲ್ಲಿದ್ದಾಗ ಹಗಲು ರಾತ್ರಿ ಪ್ರಾರ್ಥನೆ ಮಾಡಿ, ಮೌನ ಪ್ರತಿಭಟನೆ ಮಾಡಿ ನನ್ನ ಬೆನ್ನಿಗೆ ನಿಂತಿದ್ದಾರೆ. ಎರಡು ವರ್ಷಗಳ ಹಿಂದೆ ಪ್ರತಿಮೆ ಮಾಡಲು ಮುಂದಾಗಿದ್ದರು. ಆಗ ನಾನೇ ತಡೆದು ಸರ್ಕಾರಿ ಜಾಗದಲ್ಲಿ ಪ್ರತಿಮೆ ಮಾಡಿದರೆ ಭವಿಷ್ಯದಲ್ಲಿ ತೊಂದರೆ ಎದುರಾಗಬಹುದು ಎಂಬ ಕಾರಣದಿಂದ ನಾನೇ ತಡೆದಿದ್ದೇ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ 10 ಎಕರೆ ಜಮೀನು ಮಂಜೂರು ಮಾಡಿಸಿದ್ದಾಗಿ ತಿಳಿಸಿದರು.

ಈ ಜಾಗಕ್ಕೆ ನಾನೇ ಸರ್ಕಾರಕ್ಕೆ ದುಡ್ಡು ಕಟ್ಟಿ ಮಂಜೂರು ಮಾಡಿಸಿದ್ದು, ಮೊನ್ನೆ ಕ್ರಿಸ್ ಮಸ್ ಹಬ್ಬದ ಸಂದರ್ಭದಲ್ಲಿ ಅವರಿಗೆ ಹಕ್ಕು ಪತ್ರ ನೀಡಲಾಗಿದೆ. ನೂರಾರು ಎಕರೆ ಬೆಟ್ಟ ಪ್ರದೇಶದಲ್ಲಿ ಸರ್ಕಾರದಿಂದಲೇ ಭೂ ಮಂಜೂರಾಗಿರುವ ಹಿನ್ನೆಲೆಯಲ್ಲಿ ಯಾವ ಸಮಸ್ಯೆಯೂ ಇಲ್ಲ ಎಂದರು. ಕೇವಲ ಇದೊಂದೇ ಅಲ್ಲ. ನನ್ನ ಕನಕಪುರ ಕ್ಷೇತ್ರದಲ್ಲಿ ಸರ್ಕಾರಿ ವಿದ್ಯಾಸಂಸ್ಥೆಗೆ ನನ್ನದೇ ಸ್ವಂತ ಜಾಗ  ನೀಡಿದ್ದೇವೆ. ನೂರಾರು ದೇವಸ್ಥಾನ ಕಟ್ಟಿಸಿಕೊಟ್ಟಿದ್ದೇವೆ. ಯಶವಂತಪುರದಲ್ಲೂ ರಾಮನ ದೇವಾಲಯ, ಮಂಗಳಕರಿ ಮಾರಮ್ಮ ದೇವಾಲಯ ಸೇರಿದಂತೆ ಅನೇಕ ದೇವಾಲಯಗಳಿವೆ. ಎಸ್.ಎಂ ಕೃಷ್ಣ ಅವರು ಮುಖ್ಯಮಂತ್ರಿ ಆದರೆ ಈ ದೇವಸ್ಥಾನಕ್ಕೆ ಜಾಗ ಕೊಡಿಸುವುದಾಗಿ ಹರಕೆ ಹೊತ್ತಿದ್ದೆ.  ಮೈಸೂರಿನಲ್ಲಿ ಚಾಮುಂಡಿ ವಿಹಾರ ಕ್ರೀಡಾಂಗಣದ ದಾಖಲೆ ತೆಗೆಸಿ ನೋಡಿ, ಮಹಾರಾಣಿ ಅವರ ಬಳಿ ಖರೀದಿ ಮಾಡಿ ಗಿಫ್ಟ್ ಆಗಿ ಕೊಟ್ಟಿದ್ದೇನೆ. ಬೇಕಿದ್ದರೆ ದಾನ ಪತ್ರದ ದಾಖಲೆ ತೆಗೆಸಿ ನೋಡಿ ಎಂದರು. 

ನನಗೆ ಯಾವುದೇ ಪ್ರಚಾರ ಮಾಡುವ ಉದ್ದೇಶ ಇಲ್ಲ. ಯಾವುದೋ ಸಂದರ್ಭದಲ್ಲಿ ಜನರಿಗೆ ಮಾತು ಕೊಟ್ಟಿರುತ್ತೇವೆ. ಸೇವೆ ಮಾಡುವುದು ನಮ್ಮ ಕರ್ತವ್ಯ ಅದನ್ನು ಮಾಡಿದ್ದೇನೆ. ಹಾರೋಬೆಲೆಯಲ್ಲಿ ಕನ್ನಡಕ್ಕಾಗಿ ರಾಜ್ಯಕ್ಕಾಗಿ ಶ್ರಮಿಸಿದ 36 ಪಾದ್ರಿಗಳಿದ್ದಾರೆ. ಅದೊಂದೇ ಗ್ರಾಮದಿಂದ ನೂರಾರು ಜನ ಸಿಸ್ಟರ್ ಗಳನ್ನು ಸಮಾಜಕ್ಕೆ ನೀಡಿಲಾಗಿದೆ. ಅನೇಕ ಸಂದರ್ಭಗಳಲ್ಲಿ ಅವರೊಂದಿಗೆ ಕೂಡಿ ಹೋರಾಟ ಮಾಡಿದ್ದೇನೆ. ಈ ಪವಿತ್ರ ಸ್ಥಳದಲ್ಲೇ ನಾನು ಸೂರ್ಯ ರೈತ ಕಾರ್ಯಕ್ರಮ ಆರಂಭಿಸಿದ್ದು, ಇದು ಯಶಸ್ವಿಯಾದ ಕಾರಣ ರಾಷ್ಟ್ರಮಟ್ಟದಲ್ಲಿ ಈ ಕಾರ್ಯಕ್ರಮ ಜಾರಿ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದರು. 

ಜೈಲಲ್ಲಿ ಇದ್ದ ಕಾರಣ ಈ ಹಿಂದೆ ನಾನು ಸರ್ಕಾರಕ್ಕೆ ಹಣ ಕಟ್ಟಿರಲಿಲ್ಲ. ಬೇರೆಯವರ ಕೈಯಲ್ಲಿ ಹಣ ಕಟ್ಟಿಸಲು ಇಷ್ಟ ಇರಲಿಲ್ಲ. ಈಗ ನಾನು ಹಣ ಕಟ್ಟಿ ಹಕ್ಕುಪತ್ರ ಪಡೆದು ವಿತರಿಸಿದ್ದೇನೆ. ಅನೇಕ ಭಕ್ತಾದಿಗಳು ಒಂದೊಂದು ಕಲ್ಲಿಗೆ ಇಷ್ಟು ಅಂತಾ ದಾನ ಮಾಡುತ್ತಿದ್ದಾರೆ. ಈಗ ಅನೇಕ ಮೂರ್ತಿಗಳಿವೆ. ಆದರೆ ಕಲ್ಲಿನ ಪ್ರತಿಮೆ ಇಲ್ಲ. ಈ ಜಾಗದ ವಿಚಾರದಲ್ಲಿ ಯಾವ ಗೊಂದಲ ಇಲ್ಲ. ಗೊಂದಲ ಆಗಬಾರದು ಅಂತಾನೆ ಎರಡು ವರ್ಷಗಳ ಹಿಂದೆ ಮುಂದಾಗಿದನ್ನು ತಡೆದು, ಎಲ್ಲ ದಾಖಲೆ ಸರಿ ಆದಮೇಲೆ ಶಂಕುಸ್ಥಾಪನೆ ಮಾಡಲಾಗಿದೆ. ಬೆಂಗಳೂರಲ್ಲಿ ಅವರು ಶಿಕ್ಷಣ ಸಂಸ್ಥೆ, ವಾಣಿಜ್ಯ ಕಟ್ಟಡಗಳಿಗೆ ಜಮೀನು ನೀಡಿರುವುದು ಪಟ್ಟಿ ಕೊಡಲೇ?

ಸಂಸದ ಅನಂತಕುಮಾರ್ ಹೆಗಡೆ​, ಮಹನೀಯರೊಬ್ಬರು ಯಾವುದೋ ಹುದ್ದೆಯ ಆಸೆಗಾಗಿ ತಮ್ಮ ಇಟಲಿಯ ಅಮ್ಮನನ್ನು ಪ್ರಸನ್ನಗೊಳಿಸಲು ಯತ್ನಿಸುತ್ತಿದ್ದಾರೆ. ತಮ್ಮ ಕ್ಷೇತ್ರದಲ್ಲಿ ಅತಿ ದೊಡ್ಡ ಯೇಸುವಿನ ಪ್ರತಿಮೆ ಸ್ಥಾಪಿಸಿ ತಮ್ಮ ಪೌರುಷ ಪ್ರದರ್ಶಿಸಲು ಸಜ್ಜಾಗಿದ್ದಾರೆ. ಓಲೈಕೆ ರಾಜಕೀಯಕ್ಕೆ ಶಿವಕುಮಾರ್‌ಗೆ  ಪೈಪೋಟಿ ನೀಡಲು ಇನ್ನು ಹೆಚ್ಚಿನ ಕಾಂಗ್ರೆಸ್ ಗುಲಾಮರು ಅಖಾಡಕ್ಕೆ ಇಳಿಯುವುದರಲ್ಲಿ ಅಚ್ಚರಿಯೇನಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ನಮ್ಮ ಪವಿತ್ರ ದೇಶದಲ್ಲೇ ಹುಟ್ಟಿದ ಪ್ರಭು ಶ್ರೀ ರಾಮನ ಭವ್ಯ ಮಂದಿರ ನಿರ್ಮಾಣಕ್ಕೆ ಕಾಂಗ್ರೆಸಿಗರು ವಿರೋಧಿಸಿದ್ದರು‌. ಈಗ  ತಮ್ಮ ನಾಯಕಿಯನ್ನು ಮೆಚ್ಚಿಸಲು ತಮ್ಮದೇ ಹಣದಲ್ಲಿ ವ್ಯಾಟಿಕನ್ ನಲ್ಲಿ ಹುಟ್ಟಿದ ಯೇಸುವಿನ ಪ್ರತಿಮೆ ನಿರ್ಮಿಸಲು ಹೊರಟಿದ್ದಾರೆ. ಇನ್ನು ಇವರು ಕೆಪಿಸಿಸಿ ಅಧ್ಯಕ್ಷರಾಗುವುದನ್ನು ತಪ್ಪಿಸಲು ಸ್ವತಃ ಸಿದ್ದರಾಮಯ್ಯ ಅವರಿಗೂ ಆಗುವುದಿಲ್ಲ ಎಂದು ಶಿವಕುಮಾರ್ ವಿರುದ್ಧ ಹರಿಹಾಯ್ದಿದ್ದಾರೆ.

ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಸಹ ಯೇಸು ಪ್ರತಿಮೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಎರಡು ಸ್ಥಾನ ಗೆಲ್ಲಿಸಿಕೊಂಡು ಬರಲಾಗದ ಈ ವ್ಯಕ್ತಿ ಕೆಪಿಸಿಸಿ ಸ್ಥಾನಕ್ಕಾಗಿ ತನ್ನ ಕ್ಷೇತ್ರದಲ್ಲಿ ಯೇಸುಕ್ರಿಸ್ತನ ಪ್ರತಿಮೆ ಸ್ಥಾಪಿಸಲು ಹೊರಟಿದ್ದಾನೆ. ಇಟಾಲಿಯನ್ ಮೂಲದ ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ಅವರನ್ನು ಮೆಚ್ಚಿಸಲು ಯತ್ನಿಸುತ್ತಿರುವ ಕಾಂಗಿಗಳ ಹೆಸರನ್ನು ಪುಸ್ತಕದಲ್ಲಿ ಬರೆದಿಡಬೇಕು ಎಂದು ಕೊಂಕು ನುಡಿದಿದ್ದಾರೆ.

ಬಿಜೆಪಿಗರ ಟ್ವೀಟ್ ಟೀಕೆಗೆ ಡಿಕೆ ಶಿವಕುಮಾರ್ ಸಹ ಟ್ವೀಟ್ ಮೂಲಕವೇ ಪ್ರತಿಕ್ರಿಯಿಸಿದ್ದು, ತಾವು ಪ್ರಜಾತಂತ್ರ ವ್ಯವಸ್ಥೆಯ ಭದ್ರಬುನಾದಿಯಾದ ಸಮಾನತೆ ಮತ್ತು ಸರ್ವಧರ್ಮ ಸಹಿಷ್ಣುತೆಯಲ್ಲಿ ನಂಬಿಕೆ ಇಟ್ಟಿರುವ ವ್ಯಕ್ತಿ.  ಕನಕಪುರ ಮತ ಕ್ಷೇತ್ರದಲ್ಲಿ ಎಲ್ಲ ಜಾತಿ ಧರ್ಮದ ಜನರೂ ಇದ್ದಾರೆ. ಅವರ ಭಾವನೆ ಗೌರವಿಸುವುದು ತಮ್ಮ ಧರ್ಮ. ಡಾ. ಅಂಬೇಡ್ಕರ್ ಸಾಹೇಬರ ಸಂವಿಧಾನ ಸುಡಲು ಮುಂದಾದ ಅಲ್ಪರಿಂದ ಪಾಠ ಹೇಳಿಸಿಕೊಳ್ಳುವ ಜರೂರತ್ತು ತಮಗಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com