ಮಹಾರಾಷ್ಟ್ರ ಗಡಿ ಖ್ಯಾತೆ: ಶಿವಸೇನೆ, ಮಹಾ ಸರ್ಕಾರ ವಿರುದ್ಧ ಬಿಜೆಪಿ ಸಚಿವರ ವಾಗ್ದಾಳಿ

ಮಹಾರಾಷ್ಟ್ರದ ಕ್ಯಾತೆ ಹೊಸದೇನಲ್ಲ. ಹೊಸ ಸರ್ಕಾರ ಬಂದಾಗ ಕ್ಯಾತೆ ತೆಗೆಯೋದು ರೂಢಿ ಮಾಡಿಕೊಂಡಿದ್ದಾರೆ. ಮಹಾರಾಷ್ಟ್ರದ ಗೊಡ್ಡು ಬೆದರಿಕೆಗೆ ನಾವು ಹೆದರುವುದಿಲ್ಲ ಎಂದು ತಿಳಿಸಿದರು.
ಗೂಗಲ್ ಮ್ಯಾಪ್
ಗೂಗಲ್ ಮ್ಯಾಪ್

ಬೆಂಗಳೂರು: ಮಹಾರಾಷ್ಟ್ರ ಗಡಿ ಖ್ಯಾತೆ ಸಂಬಂಧ ಬಿಜೆಪಿ ಸಚಿವರು ಮಹಾರಾಷ್ಟ್ರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ಸಚಿವ ಆರ್.ಅಶೋಕ್, ಮಹಾರಾಷ್ಟ್ರದ ಕ್ಯಾತೆ ಹೊಸದೇನಲ್ಲ. ಹೊಸ ಸರ್ಕಾರ ಬಂದಾಗ ಕ್ಯಾತೆ ತೆಗೆಯೋದು ರೂಢಿ ಮಾಡಿಕೊಂಡಿದ್ದಾರೆ. ಮಹಾರಾಷ್ಟ್ರದ ಗೊಡ್ಡು ಬೆದರಿಕೆಗೆ ನಾವು ಹೆದರುವುದಿಲ್ಲ ಎಂದು ತಿಳಿಸಿದರು.

ಗಡಿ ವಿಚಾರವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದನ್ನು ಮಹಾರಾಷ್ಟ್ರ ಸರ್ಕಾರ ಮಾಡಿಕೊಂಡು ಬರುತ್ತಿದೆ. 

ಯಾವುದೇ ಕಾರಣಕ್ಕೂ ಗಡಿ ವಿಚಾರದಲ್ಲಿ ರಾಜ್ಯ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸಚಿವ ಜಗದೀಶ್ ಶೆಟ್ಟರ್ ಕಿಡಿ:
ಉದ್ಧವ್ ಮುಖ್ಯಮಂತ್ರಿಯಾದ ನಂತರ ಗಡಿ ಗಲಾಟೆ ಪ್ರಾರಂಭವಾಗಿದ್ದು, ಗಡಿಯಲ್ಲಿ ಒಂದು ರೀತಿಯ ಅಶಾಂತಿ ವಾತಾವರಣ ನಿರ್ಮಾಣವಾಗಿದೆ. ರಾಜಕೀಯ ಲಾಭ ಪಡೆದುಕೊಳ್ಳಲು ಶಿವಸೇನೆ ಹೊರಟಿದೆ ಎಂದು ಸಚಿವ ಶೆಟ್ಟರ್ ಕಿಡಿ ಕಾರಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಈಗಾಗಲೇ ಮಹಾಜನ್ ವರದಿ ಅಂತಿಮವಾಗಿದೆ. ಈ ರೀತಿ ಪ್ರಚೋದನೆ ಮಾಡುವುದು ಸರಿಯಲ್ಲ. ಕೊಲ್ಲಾಪುರದಲ್ಲಿ ನಮ್ಮ ಮುಖ್ಯಮಂತ್ರಿ ಪ್ರತಿಕೃತಿ ದಹಿಸಿರುವುದು ಸರಿಯಲ್ಲ. ಕಾನೂನು ಹೋರಾಟ ಬೇಕಾದರೆ ಮಾಡಲಿ. ನಾವು ಕಾನೂನು ಹೋರಾಟ ಮುಂದುವರಿಸುತ್ತೇವೆ ಎಂದು ತಿಳಿಸಿದರು.

ರಾಜ್ಯ ನಾಯಕರು ಮೈತ್ರಿ ಪಕ್ಷದ ಬಗ್ಗೆ ತಮ್ಮ ನಿಲುವು ಸ್ಪಡಿಸಬೇಕು. ಗಡಿ ವಿಚಾರ ಸಂಬಂಧ ಪ್ರಚೋದನೆಗೆ ಬೆಂಬಲ ನೀಡಿದ್ದು ಯಾಕೆ? ಈ ಪುಂಡಾಟಿಕೆ ನೀವು ನಿಲ್ಲಿಸಬೇಕು. ಬೆಳಗಾವಿ ಕರ್ನಾಟಕದ ಭಾಗ. ಮರಾಠಿ, ಕನ್ನಡಿಗರು ಸಹೋದರತ್ವದಿಂದ ಇದ್ದಾರೆ ಎಂದು ತಿಳಿಸಿದರು.

ಫಡ್ನವೀಸ್ ಹೇಳಿಕೆಗೆ ಸಿ.ಟಿ.ರವಿ ಆಕ್ಷೇಪ:

ಬೆಳಗಾವಿ, ಕಾರವಾರ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಿದ್ದು, ಕರ್ನಾಟಕ ಅದನ್ನು ಅತಿಕ್ರಮಿಸಿದೆ ಎಂದು ಹೇಳಿಕೆ ನೀಡಿರುವ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿಕೆಗೆ ಸಚಿವ ಸಿ.ಟಿ.ರವಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಆ ರೀತಿ ಹೇಳಿಕೆ ನೀಡುವುದು ಬಾಲಿಷ ಎನಿಸುತ್ತದೆ. ಅಕ್ಕಲಕೋಟೆ, ಸಾಂಗ್ಲಿ, ಕೊಲ್ಲಾಪುರ ಮೊದಲಾದ ಕಡೆಗಳಲ್ಲಿ ಕನ್ನಡಿಗರ ಸಂಖ್ಯೆ ಹೆಚ್ಚಾಗಿದೆ‌‌. ಹಾಗೆಂದು ಆ ಪ್ರದೇಶಗಳನ್ನು ಮಹಾರಾಷ್ಟ್ರ ವಶಪಡಿಸಿಕೊಂಡಿದೆ ಎಂದರೆ ಮೂರ್ಖತನವಾಗುತ್ತದೆ ಎಂದು ಕಿಡಿ ಕಾರಿದರು.

ಪಾಕ್ ಆಕ್ರಮಿತ ಕಾಶ್ಮೀರವನ್ನು ವಾಪಸ್ ಪಡೆದು ಅಖಂಡ ಭಾರತ ನಿರ್ಮಾಣ ಮಾಡಬೇಕೆಂದು ಪ್ರಧಾನಿ ಮೋದಿ ಪ್ರಯತ್ನಿಸುತ್ತಿರುವಾಗ ನಮ್ಮ ನೆರೆ ರಾಜ್ಯಗಳು ಭಾಷೆ ಆಧಾರದ ಮೇಲೆ ಭಾರತ ವಿಭಜನೆಗೆ ಪ್ರಯತ್ನಿಸುತ್ತಿರುವುದು ಸರಿಯಲ್ಲ. ಕರ್ನಾಟಕದ ನೆಲ, ಜಲ ಭಾಷೆ ವಿಷಯದಲ್ಲಿ ನಾವು ಎಂದೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com