ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಜಾತಿ ವಿಷ ಬೀಜ ಬಿತ್ತುತ್ತಿರುವ ಪ್ರತಿಪಕ್ಷಗಳು- ಬಿ. ಎಸ್ .ಯಡಿಯೂರಪ್ಪ ಟೀಕೆ

ಪೌರತ್ವ ತಿದ್ದುಪಡಿ ಕಾಯ್ದೆ ವಿಷಯ ಕುರಿತು ಪ್ರತಿಪಕ್ಷಗಳು ಜಾತಿ ವಿಷ ಬೀಜ ಬಿತ್ತುತ್ತಿವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟೀಕಿಸಿದ್ದಾರೆ
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತಿತರರು
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತಿತರರು

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿಷಯ ಕುರಿತು ಪ್ರತಿಪಕ್ಷಗಳು ಜಾತಿ ವಿಷ ಬೀಜ ಬಿತ್ತುತ್ತಿವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟೀಕಿಸಿದ್ದಾರೆ

ಬೆಂಗಳೂರಿನ ಬಿಜೆಪಿ ಕೇಂದ್ರ ಕಾರ್ಯಾಲಯದಲ್ಲಿ ಇಂದು ಆಯೋಜಿಸಲಾಗಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತ ವಿಶೇಷ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆಯಿಂದ ದೇಶದ 130 ಕೋಟಿ ಜನರಿಗೆ ಯಾವುದೇ ತೊಂದರೆಯಿಲ್ಲ. ಇದೊಂದು ಮಾನವೀಯತೆಯ ಕಾಯ್ದೆಯಾಗಿದೆ. ಆದರೆ, ಕಾಂಗ್ರೆಸ್ ಮತ್ತು ಕೆಲ ಪ್ರತಿಪಕ್ಷಗಳು ಇದನ್ನು ಸಮಸ್ಯೆಯನ್ನಾಗಿ ಮಾಡಿ ಜನರಲ್ಲಿ ಗೊಂದಲ ಸೃಷ್ಟಿಸುತ್ತಿವೆ. ಈ ಮೂಲಕ ಜಾತಿ ವಿಷ ಬೀಜ ಬಿತ್ತುತ್ತಿವೆ ಎಂದು ಆರೋಪಿಸಿದರು. 

ಪೌರತ್ವ ತಿದ್ದುಪಡಿ ಕಾಯ್ದೆಗೆ ನಾಲ್ಕು ಬಾರಿ ತಿದ್ದುಪಡಿಯಾಗಿದೆ. ಆದರೆ, ಸಂಸತ್ ನಲ್ಲಿ ಈ ಕುರಿತು ಯಾವುದೇ ಚರ್ಚೆಯಾಗಿಲ್ಲ. ನೆರೆಯ ದೇಶಗಳಲ್ಲಿ ತೀವ್ರ ಕಿರುಕುಳ ಮತ್ತು ದೌರ್ಜನ್ಯಗಳಿಗೆ ಹೆದರಿ ಅಲ್ಲಿಂದ ಓಡಿ ಬಂದ ನಮ್ಮವರೇ ಆದ ಅಲ್ಲಿನ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವ ಕಾಯ್ದೆಯನ್ನು ವಿರೋಧ ವ್ಯಕ್ತ ಪಡಿಸುವುದು ಅತ್ಯಂತ ಅಮಾನವೀಯ. ನಮ್ಮ ಕರ್ನಾಟಕದಲ್ಲೇ ಬಾಂಗ್ಲಾದೇಶದಿಂದ ಬಂದ ಸಾವಿರಾರು ಜನರಿದ್ದಾರೆ. ಅವರಿಗೆ ಇದುವರೆಗೆ ಯಾವುದೇ ಸರ್ಕಾರದ ಯಾವುದೇ ಸೌಲಭ್ಯಗಳು ದೊರೆತಿಲ್ಲ. ಯಾರೊಬ್ಬರಿಗೂ ಪೌರತ್ವ ನಿರಾಕರಿಸುವ ಅಂಶ ಕಾಯ್ದೆಯಲ್ಲಿಲ್ಲ. ಈ ಕುರಿತು ಮುಸ್ಲೀಮರಲ್ಲಿ ಭಯ ಹುಟ್ಟಿಸುತ್ತಿರುವುದು ಖಂಡನೀಯ ಎಂದು ಹೇಳಿದರು

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ರಾಮ್ ಮಾಧವ್ ಮಾತನಾಡಿ, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಪೌರತ್ವ ನೀಡುವುದಕ್ಕೆ ಜಾರಿಗೆ ತರಲಾಗಿದೆ. ಆದರೆ, ಕಸಿದುಕೊಳ್ಳುವುದಕ್ಕಲ್ಲ. ಇದು ಕಾಯ್ದೆಯಲ್ಲಿ ಸ್ಪಷ್ಟವಾಗಿದ್ದರೂ, ಕೆಲವರು ಅಮಾಯಕ ಜನರನ್ನು ಹಿಂಸೆಗೆ ಪ್ರಚೋದಿಸುತ್ತಿದ್ದಾರೆ. ಕಾಯ್ದೆ ಕುರಿತು ವಿವಾದ ಸೃಷ್ಟಿಸಲಾಗುತ್ತಿದೆ. ಅಜ್ಞಾನ ಮತ್ತು ಸತ್ಯಸಂಗತಿಗಳನ್ನು ತಿರುಚಿರುವುದರಿಂದ ಇಡೀ ವಿವಾದ ಸೃಷ್ಟಿಯಾಗಿದೆ. ಇದರ ಹಿಂದೆ ವ್ಯವಸ್ಥಿತ ಪಿತೂರಿ, ಷಡ್ಯಂತೆ ಇದೆ ಎಂದು ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಪೌರತ್ವ ತಿದ್ದುಪಡಿ ಕಾಯ್ದೆಯಿಂದ ದೇಶದಲ್ಲಿನ ಯಾವುದೇ ಮುಸ್ಲೀಮರಿಗೆ ತೊಂದರೆಯಾಗುವುದಿಲ್ಲ. ಪಾಕಿಸ್ತಾನ, ಆಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಹಿಂಸೆ, ದೌರ್ಜನ್ಯ ಎದುರಿಸಿ ಭಾರತಕ್ಕೆ ಬಂದಿರುವ ಅಲ್ಲಿನ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವುದು ಕಾಯ್ದೆಯ ಉದ್ದೇಶವಾಗಿದೆ. ಆದರೆ, ಕೆಲ ಶಕ್ತಿಗಳು ಈ ವಿಷಯವಾಗಿ ಗೊಂದಲ,  ಗಲಭೆಗಳನ್ನು ಸೃಷ್ಟಿಸುತ್ತಿವೆ ಎಂದು ಆರೋಪಿಸಿದರು. 

 ಈ ನಿಟ್ಟಿನಲ್ಲಿ ಬಿಜೆಪಿಯಿಂದ ದೊಡ್ಡ ಮಟ್ಟದ ಪ್ರಚಾರ, ಸಮಾರಂಭಗಳನ್ನು ನಡೆಸಬೇಕಿದೆ.  ತಾಲ್ಲೂಕು ಮಟ್ಟದಲ್ಲಿ ಶಾಸಕರು, ಜಿಲ್ಲಾ ಮಟ್ಟದಲ್ಲಿ ಸಂಸದರು ಇದರ ಜವಾಬ್ದಾರಿಯನ್ನು ವಹಿಸಬೇಕು. ಮಂಗಳೂರಿನಲ್ಲಿ ನಡೆಯುವ ಜಾಗೃತಿ ಸಮಾರಂಭದಲ್ಲಿ ಐದು ಲಕ್ಷ ಜನ ಸೇರುವಂತೆ ಎಲ್ಲ ಶಾಸಕರು ಕೆಲಸ ಮಾಡಬೇಕು. ಒಟ್ಟಾರೆ, ಪ್ರತಿಪಕ್ಷಗಳು ಮತ್ತು ಕೆಲ ಶಕ್ತಿಗಳ ಪಿತೂರಿ ಮತ್ತು ಷಡ್ಯಂತ್ರದ ವಿರುದ್ಧ ಕರ್ನಾಟಕದಲ್ಲಿ ನಡೆಯುವ ಬಿಜೆಪಿಯ ದೊಡ್ಡ ಮಟ್ಟದ ಹೋರಾಟ ಇಡೀ ದೇಶಕ್ಕೆ ಮಾದರಿಯಾಗಬೇಕು ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com