ಹಿನ್ನೋಟ 2019: ಮೋದಿ 2.0, 1 ವರ್ಷದಲ್ಲಿ 5 ರಾಜ್ಯಗಳನ್ನು "ಕೈ"ಗೆ ಧಾರೆ ಎರೆದ  ಬಿಜೆಪಿ...!

2019 ರಾಷ್ಟ್ರ ರಾಜಕಾರಣದಲ್ಲಿ ಅನೇಕ ಬೆಳವಣಿಗೆಗಳಿಗೆ ಕಾರಣವಾದ ವರ್ಷ. ಈ ವರ್ಷದ ರಾಜಕೀಯ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಜನರ ನಡುವೆ ಚರ್ಚೆ, ವಾಗ್ವಾದ, ಭಿನ್ನಾಭಿಪ್ರಾಯಗಳನ್ನು ಹುಟ್ಟುಹಾಕಿತ್ತು....
ಪ್ರಧಾನಿ ಮೋದಿ - ರಾಹುಲ್ ಗಾಂಧಿ
ಪ್ರಧಾನಿ ಮೋದಿ - ರಾಹುಲ್ ಗಾಂಧಿ

2019 ರಾಷ್ಟ್ರ ರಾಜಕಾರಣದಲ್ಲಿ ಅನೇಕ ಬೆಳವಣಿಗೆಗಳಿಗೆ ಕಾರಣವಾದ ವರ್ಷ. ಈ ವರ್ಷದ ರಾಜಕೀಯ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಜನರ ನಡುವೆ ಚರ್ಚೆ, ವಾಗ್ವಾದ, ಭಿನ್ನಾಭಿಪ್ರಾಯಗಳನ್ನು ಹುಟ್ಟುಹಾಕಿತ್ತು. ಉತ್ತಮ, ಕೆಟ್ಟ ಎರಡೂ ರೀತಿಯ ರಾಜಕೀಯಕ್ಕೆ 2019 ಸಾಕ್ಷಿಯಾಗಿದೆ.

ಏಪ್ರಿಲ್‌ನಿಂದ ಮೇವರೆಗೆ ಸುಮಾರು ಒಂದು ತಿಂಗಳ ಕಾಲ ಏಳು ಹಂತಗಳಲ್ಲಿ ನಡೆದ ಸಾರ್ವತ್ರಿಕ ಚುನಾವಣೆ ಇಡೀ ಜಗತ್ತಿನ ಗಮನ ಸೆಳೆದಿತ್ತು. ಲೋಕಸಭೆಯ 543 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಮೈತ್ರಿಕೂಟ 355 ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದಿತು.

ಬಿಜೆಪಿ ಭಾರಿ ಬಹುಮತದೊಂದಿಗೆ ಕೇಂದ್ರದಲ್ಲಿ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದರೂ ನಂತರ ನಡೆದ ಮಧ್ಯಪ್ರದೇಶ, ರಾಜಸ್ಥಾನ, ಚತ್ತೀಸ್ ಗಢ, ಮಹಾರಾಷ್ಟ್ರ, ಜಾರ್ಖಂಡ್ ಹಾಗೂ ಹರಿಯಾಣ ಸೇರಿದಂತೆ ಹಲವು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸುವ ಮೂಲಕ ಒಂದು ವರ್ಷದಲ್ಲಿ ಐದು ರಾಜ್ಯಗಳನ್ನು ಕಳೆದುಕೊಂಡಿದೆ.

ಮುಂದಿನ ಐದು ವರ್ಷಗಳಲ್ಲಿ ಕಾಂಗ್ರೆಸ್ ಮುಕ್ತ ಭಾರತ ಮಾಡುವುದಾಗಿ ಹೇಳಿಕೊಂಡು ಓಡಾಡುತ್ತಿದ್ದ ಬಿಜೆಪಿ ನಾಯಕರು, ಕೇವಲ ಒಂದು ವರ್ಷದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ್ತು ಅದರ ಮೈತ್ರಿಕೂಟಕ್ಕೆ ಐದು ರಾಜ್ಯಗಳನ್ನು ಧಾರೆ ಎರೆದಿದ್ದಾರೆ.

ಮಧ್ಯಪ್ರದೇಶ, ರಾಜಸ್ಥಾನ, ಚತ್ತೀಸ್ ಗಢ ಹಾಗೂ ಮಹಾರಾಷ್ಟ್ರದಲ್ಲಿ ಅಧಿಕಾರ ಕಳೆದುಕೊಂಡಿದ್ದ ಬಿಜೆಪಿ, ಇತ್ತೀಚಿಗೆ ನಡೆದ ಜಾರ್ಖಂಡ್‌ ವಿಧಾನಸಭೆ ಚುನಾವಣೆಯಲ್ಲೂ ಹೀನಾಯ ಸೋಲು ಅನುಭವಿಸುವ ಮೂಲಕ ಅಧಿಕಾರ ಕಳೆದುಕೊಂಡಿದೆ.

ಆಂಧ್ರದಲ್ಲಿ ಜಗನ್ ಜಯಭೇರಿ


ಲೋಕಸಭೆ ಚುನಾವಣೆಯೊಂದಿಗೆ ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಸಿಕ್ಕಿಂ ಹಾಗೂ ಒಡಿಶಾ ರಾಜ್ಯಗಳ ವಿಧಾನಸಭೆಗೂ ಚುನಾವಣೆ ನಡೆದಿತ್ತು. ಆಂಧ್ರದಲ್ಲಿ 175 ಕ್ಷೇತ್ರಗಳ ಪೈಕಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ 151 ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಅಧಿಕಾರಕ್ಕೆ ಬಂದಿತು. ಆಡಳಿತರೂಢ ಟಿಡಿಪಿ ಕೇವಲ 23 ಸ್ಥಾನಗಳಲ್ಲಿ ಜಯ ಗಳಿಸಿತು.

ಒಡಿಶಾದಲ್ಲಿ ಮತ್ತೆ ಪಟ್ನಾಯಕ್ ದರ್ಬಾರು

ಒಡಿಶಾದಲ್ಲಿ ನವೀನ್ ಪಟ್ನಾಯಕ್ ನೇತೃತ್ವದ ಬಿಜೆಡಿ 147 ಸ್ಥಾನಗಳ ಪೈಕಿ 113 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಸತತ ಮೂರನೇ ಬಾರಿಗೆ ಅಧಿಕಾರಕ್ಕೇರಿತು.

ರಾಹುಲ್ ಗಾಂಧಿ ರಾಜೀನಾಮೆ

ಲೋಕಸಭೆ ಚುನಾವಣೆಯಲ್ಲಿ ಪಕ್ಷ ಹೀನಾಯ ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿ ಅವರು ಸೋಲಿನ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ರಾಹುಲ್ ರಾಜೀನಾಮೆ ನಂತರ ನೆಹರೂ - ಗಾಂಧಿ ಕುಟುಂಬದವರಲ್ಲದ ವ್ಯಕ್ತಿಯನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಬೇಕು ಎಂಬ ಒತ್ತಾಯ ಸಹ ಕೇಳಿ ಬಂತು. ಆದರೆ ಅಂತಿಮವಾಗಿ ಸೋನಿಯಾ ಗಾಂಧಿ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.

ಕರ್ನಾಟಕದಲ್ಲಿ ದೋಸ್ತಿ ಸರ್ಕಾರ ಪತನ


2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷ ಸ್ಪಷ್ಟ ಬಹುಮತ ಪಡೆಯದೇ ಅತಂತ್ರ ಸ್ಥಿತಿ ನಿರ್ಮಾಣವಾಗಿತ್ತು. ಬಿಜೆಪಿ 104 ಸ್ಥಾನ ಗೆದ್ದು ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದರೆ, ಆಡಳಿತಾರೂಢ ಕಾಂಗ್ರೆಸ್ ಗೆ 78 ಸ್ಥಾನ ಹಾಗೂ ಜೆಡಿಎಸ್ 37 ಸ್ಥಾನಗಳನ್ನು ಗೆಲುವು ಸಾಧಿಸುತ್ತದೆ. ನಂತರ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕು ಎಂಬ ಉದ್ದೇಶದಿಂದ ಕಾಂಗ್ರೆಸ್, ಜೆಡಿಎಸ್ ಗೆ ಮಂಡಿಯೂರಿ ಸರ್ಕಾರ ರಚಿಸುತ್ತದೆ. ಆದರೆ 2019ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ - ಜೆಡಿಎಸ್ ಮೈತ್ರಿಕೂಟ ಹೀನಾಯ ಸೋಲು ಅನುಭವಿಸಿದ ನಂತರ ಮೈತ್ರಿ ಸರ್ಕಾರದಲ್ಲಿ ಅಸಮಾಧಾನ ಭುಗಿಲೆದ್ದಿತು. ಪರಿಣಾಮ ಕಾಂಗ್ರೆಸ್ ಹಾಗೂ ಜೆಡಿಎಸ್ ನ 17 ಶಾಸಕರು ರಾಜೀನಾಮೆ ನೀಡಿದರು. ಅವರಿಂದ ತೆರವಾದ ಸ್ಥಾನಗಳಿಗೆ ಡಿಸೆಂಬರ್ 15ರಂದು ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ 12 ಸ್ಥಾನಗಳನ್ನು ಗೆಲ್ಲುವ ಮೂಲಕ ಸರ್ಕಾರವನ್ನು ಭದ್ರಪಡಿಸಿಕೊಂಡಿದೆ.

ಮಹಾರಾಷ್ಟ್ರದಲ್ಲಿ ಅಚ್ಚರಿಯ ಬೆಳವಣಿಗೆ


ಅಕ್ಟೋಬರ್‌ನಲ್ಲಿ ನಡೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ-ಶಿವಸೇನಾ ಮೈತ್ರಿಕೂಟ ಸ್ಪಷ್ಟ ಬಹುಮತ ಪಡೆದರೂ ಅಧಿಕಾರ ಹಂಚಿಕೆ ವಿಚಾರದಲ್ಲಿ ಉಂಟಾದ ಭಿನ್ನಾಭಿಪ್ರಾಯ ಭಾರಿ ರಾಜಕೀಯ ಬದಲಾವಣೆಗೆ ಕಾರಣವಾಯಿತು. 
ಬಿಜೆಪಿ ಜತೆಗಿನ 30 ವರ್ಷಗಳ ಮೈತ್ರಿಗೆ ಗುಡ್ ಬೈ ಹೇಳಿದ ಶಿವಸೇನೆ, ಎನ್ ಸಿಪಿ ಹಾಗೂ ಕಾಂಗ್ರೆಸ್ ಜತೆಗೂಡಿ ಮೈತ್ರಿ ಸರ್ಕಾರ ರಚಿಸಿದೆ.

ಇನ್ನೂ ಗೋವಾದಲ್ಲಿ ನಡೆದ ದಿಢೀರ್‌ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್‌ನ 15 ಶಾಸಕರಲ್ಲಿ 10 ಮಂದಿ  ಬಿಜೆಪಿ ಸೇರಿದರು. ವಿರೋಧ ಪಕ್ಷದ ನಾಯಕ ಚಂದ್ರಕಾಂತ್‌ ಕವಲೇಕರ್‌ ನೇತೃತ್ವದಲ್ಲೇ ಈ ಶಾಸಕರು ಕಾಂಗ್ರೆಸ್‌ ತೊರೆದಿದ್ದಾರೆ. ಶಾಸಕಾಂಗ ಪಕ್ಷದ ಮೂರನೇ ಎರಡರಷ್ಟು ಸದಸ್ಯರ ಸೇರ್ಪಡೆಯಿಂದಾಗಿ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯಿಸುವುದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com