ಬೆಳೆ ಸಾಲ ಮನ್ನಾಕ್ಕಾಗಿ 1611 ಕೋಟಿ ರೂ. ಬಿಡುಗಡೆ: ಬಜೆಟ್ ಅಧಿವೇಶನ ಭಾಷಣದಲ್ಲಿ ರಾಜ್ಯಪಾಲ

ರಾಜ್ಯದ 3.28 ಲಕ್ಷ ರೈತರ ಬೆಳೆ ಸಾಲ ಮನ್ನಾಕ್ಕಾಗಿ ಈ ವರ್ಷದ ಜನವರಿಗೆ ಅಂತ್ಯದವರೆಗೆ 1611 ಕೋಟಿ ರೂ ಹಣವನ್ನು ಸರ್ಕಾರ ಬಿಡುಗಡೆ ಮಾಡಿದೆ ಎಂದು ...

Published: 06th February 2019 12:00 PM  |   Last Updated: 06th February 2019 03:24 AM   |  A+A-


Representational image

ಸಾಂದರ್ಭಿಕ ಚಿತ್ರ

Posted By : SD SD
Source : UNI
ಬೆಂಗಳೂರು: ರಾಜ್ಯದ 3.28 ಲಕ್ಷ ರೈತರ ಬೆಳೆ ಸಾಲ ಮನ್ನಾಕ್ಕಾಗಿ ಈ ವರ್ಷದ ಜನವರಿಗೆ ಅಂತ್ಯದವರೆಗೆ 1611 ಕೋಟಿ  ರೂ ಹಣವನ್ನು ಸರ್ಕಾರ ಬಿಡುಗಡೆ ಮಾಡಿದೆ ಎಂದು ರಾಜ್ಯಪಾಲ ವಜೂಭಾಯಿ ವಾಲಾ ಹೇಳಿದ್ದಾರೆ. 

ಜಂಟಿ ಅಧಿವೇಶನದ ತಮ್ಮ ಭಾಷಣದಲ್ಲಿ ಅವರು, ರಾಜ್ಯದ 156 ತಾಲೂಕುಗಳಲ್ಲಿ ತೀವ್ರ ಬರ ಪರಿಸ್ಥಿತಿ ಇದ್ದು, ಜನರಿಗೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ಉದ್ಯೋಗ ಸೃಷ್ಟಿಗೆ ಸರ್ಕಾರ ಹೆಚ್ಚಿನ ಒತ್ತು ನೀಡಿದೆ. ಹಸಿರು ಮೇವು ಬೆಳೆಸಲು ರೈತರಿಗೆ 8.11  ಲಕ್ಷ ಮೇವು ಕಿಟ್ ಗಳನ್ನು ಉಚಿತವಾಗಿ ವಿತರಣೆ ಮಾಡಲಿದ್ದಾರೆ ಎಂದು ಹೇಳಿದ್ದಾರೆ.

ಮಹತ್ಮಾಗಾಂಧಿ  ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಮೂಲಕ ಜನವರಿ ಅಂತ್ಯದವರೆಗೆ 18.56 ಲಕ್ಷ ಕುಟುಂಬಗಳಿಗೆ ಉದ್ಯೋಗ ಕಲ್ಪಿಸಲಾಗಿದೆ. ಬರಪೀಡಿತ ತಾಲೂಕುಗಳಲ್ಲಿ 150 ದಿನಗಳವರೆಗೆ  ಉದ್ಯೋಗ ನೀಡಲಾಗುತ್ತಿದೆ. ಕೃಷಿ ಪದ್ಧತಿಯಲ್ಲಿ ಹೊಸ ಕ್ರಮಗಳನ್ನು ಅಳವಡಿಸಿಕೊಳ್ಳಲು ಮುಂದಾಗಿದ್ದು, ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ಮತ್ತು ಇಸ್ರೇಲ್ ಮಾದರಿ ಅಳವಡಿಕೆ ಮೂಲಕ ಹೊಸ ಬದಲಾವಣೆ ಮತ್ತು ಸುಧಾರಣೆ ತರಲಾಗುತ್ತಿದೆ. ಇದಕ್ಕಾಗಿ ಇಸ್ರೇಲ್ ತಂತ್ರಜ್ಞಾನ ಆಧಾರಿತ ಕೃಷಿ ಜಾರಿಗೆ ತರಲು ವಿಶೇಷ ಅಭಿಯಾನ ನಿರ್ದೇಶನಾಲಯವನ್ನು ಸ್ಥಾಪಿಸಲಾಗಿದೆ ಎಂದು ರಾಜ್ಯಪಾಲರು ವಿವರಿಸಿದ್ದಾರೆ. 

ಹಸಿರು ವಲಯ ಹೆಚ್ಚಿಸಲು ಹಸಿರು ಕರ್ನಾಟಕ  ಎಂಬ ಆಂದೋಲನ ಪ್ರಾರಂಭಿಸಲಾಗಿದೆ. ಕೃಷಿ ಮಾರುಕಟ್ಟೆಗಳನ್ನು ಆನ್‌ಲೈನ್‌ ವ್ಯವಸ್ಥೆಗೆ  ಒಳಪಡಿಸಿದ್ದು ಇದರ ಪರಿಣಾಮ ರೈತರ ಆದಾಯ ಹೆಚ್ಚಳವಾಗಿದೆ.ಅವರಿಗೆ ಆಗುತ್ತಿದ್ದ  ಮೋಸ  ತಡೆಗೆ ನೆರವಾಗಿದೆ. ಮೀನು ಕೆಡೆದಂತೆ ಸಂರಕ್ಷಿಸಿಡಲು ಅನುಕೂಲವಾಗುವಂತೆ ‘ಮತ್ಸ್ಯ  ಜೋಪಾಸನೆ’ ಎಂಬ ಯೋಜನೆಯಡಿ ಶೀತಲೀಕರಣ ಘಟಕಗಳನ್ನು ಸ್ಥಾಪಿಸಲಾಗಿದೆ. ರಾಜ್ಯದಲ್ಲಿ  ತೋಟಗಾರಿಕಾ ಬೆಳೆಯನ್ನು ವಿಸ್ತರಿಸಲು ಅರ್ಹ ರೈತರಿಗೆ ನೆರವನ್ನು ಒದಗಿಸಲಾಗಿದೆ. 51.49  ಲಕ್ಷ ಸಸಿಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದ್ದಾರೆ. 

ಕಬ್ಬು ಬೆಳೆಗಾರರಿಗೆ ಅನುಕೂಲವಾಗುವಂತೆ ಕಬ್ಬಿನ ಎಫ್ ಆರ್ ಪಿ (ಫೇರ್ ಅಂಡ್ ರೆಮ್ಯುನರೇಟಿವ್  ಫ್ರೈಸ್ ) ಒಂದೇ ಕಂತಿನಲ್ಲಿ  ಸಂದಾಯ ಮಾಡಲು ಸಕ್ಕರೆ ಕಾರ್ಖಾನೆಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ. ಬೆಂಗಳೂರಿನ ಕುಡಿಯುವ ನೀರಿನ ಅಗತ್ಯ ಪೂರೈಸಲು ಮೇಕೆದಾಟು ಯೋಜನೆಯನ್ನು ಜಾರಿಗೆ ತರಲು ಸರ್ಕಾರ  ಕಟಿಬದ್ಧವಾಗಿದ್ದು, ಇದಕ್ಕೆ ಸಂಬಂಧಿಸಿದ  ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ಕೇಂದ್ರ ಜಲ ಆಯೋಗ ಅನುಮತಿ ನೀಡಿದೆ ಎಂದು ಹೇಳಲು  ಸಂತೋಷವಾಗಿದೆ ಎಂದು ರಾಜ್ಯಪಾಲರು ಹೇಳಿದ್ದಾರೆ.
Stay up to date on all the latest ರಾಜಕೀಯ news
Poll
Rohit Sharma

ಮುಂಬರುವ ಆಸ್ಟ್ರೇಲಿಯಾ ಪ್ರವಾಸದಲ್ಲಿ ರೋಹಿತ್ ಶರ್ಮಾ ಅವರ ಅನುಪಸ್ಥಿತಿಯು ಟೀಮ್ ಇಂಡಿಯಾದ ಸಾಧನೆಯ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp