ರಾಜ್ಯದ ವಿತ್ತೀಯ ಕೊರತೆ ಶೇ.3ಕ್ಕಿಂತ ಕಡಿಮೆ; ಆಂಗ್ಲ ಮಾಧ್ಯಮ ಪ್ರಾರಂಭಿಸಲು ಸರ್ಕಾರ ಬದ್ಧ: ವಜೂಭಾಯಿ ವಾಲಾ

ಸಮಾಜದ ಬಡ ವರ್ಗದ ಮಕ್ಕಳು ಇಂಗ್ಲಿಷ್‌ ಜ್ಞಾನದ ಕೊರತೆಯಿಂದಾಗಿ ಹಿಂದುಳಿಯಬಾರದು ಎಂಬ ಉದ್ದೇಶದಿಂದ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಪ್ರಾರಂಭಿಸಲು ಸರ್ಕಾರ ಬದ್ಧವಾಗಿದೆ.
ವಜುಭಾಯ್ ವಾಲಾ
ವಜುಭಾಯ್ ವಾಲಾ
ಬೆಂಗಳೂರು: ಸಮಾಜದ ಬಡ ವರ್ಗದ ಮಕ್ಕಳು ಇಂಗ್ಲಿಷ್‌ ಜ್ಞಾನದ ಕೊರತೆಯಿಂದಾಗಿ ಹಿಂದುಳಿಯಬಾರದು ಎಂಬ ಉದ್ದೇಶದಿಂದ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಪ್ರಾರಂಭಿಸಲು ಸರ್ಕಾರ ಬದ್ಧವಾಗಿದೆ ಎಂದು ರಾಜ್ಯಪಾಲ ವಜೂಭಾಯಿ ವಾಲಾ ತಿಳಿಸಿದ್ದಾರೆ.
ವಿಧಾನಮಂಡಲದ  ಜಂಟಿ ಅಧಿವೇಶನದಲ್ಲಿ ಭಾಷಣ ಮಾಡಿದ ವಜೂಭಾಯ್ ವಾಲಾ ಅವರು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಉತ್ತಮ  ಕೌಶಲ್ಯದೊಂದಿಗೆ ಜಾಗತಿಕ ಮಟ್ಟದಲ್ಲಿ ಸ್ಫರ್ಧಿಸಲು ಅನುವಾಗುವಂತೆ ಅವರನ್ನು  ಸಜ್ಜುಗೊಳಿಸುವುದು ಅನಿವಾರ್ಯವಾಗಿದೆ. ಇದಕ್ಕೆ ಇಂಗ್ಲೀಷ್ ಭಾಷಾ ಜ್ಞಾನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳುತ್ತಿದೆ ಎಂದು ಹೇಳಿದರು.
ಆಂಗ್ಲ  ಮಾಧ್ಯಮಕ್ಕೆ ಒತ್ತುಕೊಡುವ ಭರದಲ್ಲಿ ಕನ್ನಡಕ್ಕೆ ಪ್ರಾಮುಖ್ಯತೆ ನೀಡುವ ವಿಷಯದಲ್ಲಿ  ಯಾವುದೇ ರಾಜಿಯಾಗುವುದಿಲ್ಲ. ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯಗಳನ್ನು  ಮೇಲ್ದರ್ಜೆಗೇರಿಸಲು 450 ಕೋಟಿ ರೂ. ಯೋಜನೆಯನ್ನು ಮಂಜೂರು ಮಾಡಲಾಗಿದೆ ಎಂದು  ತಿಳಿಸಿದರು. 
ಉನ್ನತ ಶಿಕ್ಷಣ ಪಡೆಯುವ ಮೂರು ಲಕ್ಷ ವಿದ್ಯಾರ್ಥಿನಿಯರಿಗೆ ಶುಲ್ಕ  ವಿನಾಯಿತಿ ನೀಡಲು ಸರ್ಕಾರ 95 ಕೋಟಿ ರೂ. ಭರಿಸಿದೆ. ಜತೆಗೆ, ಸರ್ಕಾರಿ ಪ್ರಥಮ ದರ್ಜೆ  ಕಾಲೇಜು ಹಾಗೂ ಇಂಜಿನಿಯರಿಂಗ್ ಕಾಲೇಜುಗಳ ಮೂಲ ಸೌಕರ್ಯಕ್ಕಾಗಿ ಸುಮಾರು 750 ಕೋಟಿ ರೂ  ಬಿಡುಗಡೆ ಮಾಡಿದೆ ಎಂದು ಹೇಳಿದರು.  
'ಅರಿವು' ಯೋಜನೆಯಡಿ ವೃತ್ತಿ ಪರ ಕೋರ್ಸ್‌ಗಳನ್ನು ವ್ಯಾಸಂಗ ಮಾಡಲಿಚ್ಚಿಸುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಕರ್ನಾಟಕ  ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಕಳೆದ ವರ್ಷ 70 ಕೋಟಿ ರೂ ಮಂಜೂರು ಮಾಡಿದೆ. ಜತೆಗೆ,  ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ 14.55 ಲಕ್ಷ ವಿದ್ಯಾರ್ಥಿಗಳಿಗೆ ವಿವಿಧ ವಿದ್ಯಾರ್ಥಿ  ವೇತನ ಯೋಜನೆಗಳಡಿ 290 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ರಾಜ್ಯಪಾಲ ವಜುಭಾಯಿ ವಾಲಾ  ತಿಳಿಸಿದ್ದಾರೆ.
ರಾಜ್ಯದ ವಿತ್ತೀಯ ಕೊರತೆ ಶೇ.3ಕ್ಕಿಂತ ಕಡಿಮೆ: ರಾಜ್ಯಪಾಲ
ಕರ್ನಾಟಕ ರಾಜ್ಯದ ವಿತ್ತೀಯ ಕೊರತೆ, ರಾಜ್ಯದ ಒಟ್ಟು ದೇಶೀಯ ಉತ್ಪನ್ನದ (ಜಿಎಸ್‌ಡಿಪಿ) ಶೇ.3ಕ್ಕಿಂತ ಕಡಿಮೆಯಿದ್ದು, ಈ ವರ್ಷವೂ ಉತ್ತಮ ಆರ್ಥಿಕ ಪ್ರಗತಿ ನಿರೀಕ್ಷೆಯಂತೆ ಇರಲಿದೆ ಎಂದು ರಾಜ್ಯಪಾಲ ವಜೂಬಾಯಿವಾಲಾ ಹೇಳಿದ್ದಾರೆ.
ವಿಧಾನಮಂಡಲದ ಜಂಟಿ ಅಧಿವೇಶನದ ತಮ್ಮ ಭಾಷಣದಲ್ಲಿ ಈ ವಿಷಯ ಉಲ್ಲೇಖಿಸಿರುವ ಅವರು, ರಾಜ್ಯ ಸರ್ಕಾರ ಕಳೆದ ಹಲವು ವರ್ಷಗಳಿಂದ ಹೆಚ್ಚವರಿ ನಿಧಿ ಸಂಗ್ರಹ ಮಾಡುವ ಮೂಲಕ ವಿತ್ತೀಯ ಕೊರತೆಯನ್ನು ನಿಯಂತ್ರಣದಲ್ಲಿಟ್ಟುಕೊಂಡಿದೆ. ಪ್ರಸ್ತಕ ಆರ್ಥಿಕ ವರ್ಷದ ರಾಜ್ಯದ ಒಟ್ಟು ಆರ್ಥಿಕ ಬೆಳವಣಿಗೆ ಕೂಡ ಶೇ.25ರೊಳಗಿದೆ ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರ ವಿತ್ತೀಯ ಅಧಿನಿಯಮದ ಎಲ್ಲ ಅಗತ್ಯತೆಗಳನ್ನು ಪಾಲಿಸುತ್ತಿದೆ. ಈ ವರ್ಷವೂ ಆಯ್ಯವ್ಯಯ ಗುರಿಗಳ ಅನುಸಾರ ಪ್ರಧಾನ ತೆರಿಗೆ ಸಂಗ್ರಹಗಳಲ್ಲಿ ಪ್ರಗತಿ ಸಾಧಿಸಿದೆ ಎಂದು ಅವರು ತಮ್ಮ ಭಾಷಣದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com